ನಟನಾಗಿ ಸೋಲರಿಯದ ಚೆನ್ನಿಗ

7
ಥಲುಕು ಬಳುಕ

ನಟನಾಗಿ ಸೋಲರಿಯದ ಚೆನ್ನಿಗ

Published:
Updated:
ನಟನಾಗಿ ಸೋಲರಿಯದ ಚೆನ್ನಿಗ

ತೆಲುಗಿನ ಮುಂಚೂಣಿ ಯುವನಟ ಮಹೇಶ್‌ಬಾಬು ವರ್ಚಸ್ಸಿನ `ಹೊರೆ' ಇಳಿಸಿಕೊಳ್ಳುವ ಪ್ರಯತ್ನದಲ್ಲಿ ಗೆಲುವಿನ ಕೇಕೆ ಹಾಕಿದ್ದಾರೆ. ಈ ಪ್ರಯತ್ನದ ಭಾಗವಾಗಿ ಅವರು ಅಭಿನಯಿಸಿದ ಚಿತ್ರವೊಂದು, ನೆಲೆ-ಬೆಲೆ ಕಳೆದುಕೊಂಡಿರುವ ಕುಟುಂಬ ಕಥಾ ಚಿತ್ರಗಳ ದಾರಿಗೆ ಹೊಸ ಬೆಳಕು ಬೀರಿದೆ. ಅದುವೇ, `ಸೀತಮ್ಮ ವಾಕಿಟ್ಲೋ ಸಿರಿಮಲ್ಲೆ ಚೆಟ್ಟು' (ಸೀತೆಯ ಹೊಸಿಲಲ್ಲಿ ಸಿರಿಮಲ್ಲಿಗೆಯ ಗಿಡ).ಸುಡು ಬಿಸಿಲಲ್ಲಿ ದಣಿದವನಿಗೆ ಹೊಂಗೆ ಮರದ ತಂಪು ನೆರಳು ದೊರೆತಂತೆ, ಗೌಜು-ಗದ್ದಲದ ಚಿತ್ರಗಳಿಂದ ಬೇಸತ್ತ ಪ್ರೇಕ್ಷಕರಿಗೆ `ಸಿರಿಮಲ್ಲಿಗೆ ಗಿಡ' ಆಹ್ಲಾದ ಅನುಭೂತಿ ನೀಡುತ್ತದೆ.ತಾರಾ ವರ್ಚಸ್ಸು ಮತ್ತು ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿರುವ ತೆಲುಗಿನ ಇಬ್ಬರು ಪ್ರಮುಖ ನಟರು (ಮತ್ತೊಬ್ಬರು ವೆಂಕಟೇಶ್) ತಾರಾಗಣದಲ್ಲಿದ್ದಾರೆ. ಅವರ ಸಂಭಾವನೆಯೇ ಆಸುಪಾಸು ರೂ 20 ಕೋಟಿ. ಜೊತೆಗೆ ಪ್ರಕಾಶ್ ರೈ, ಜಯಸುಧಾ, ರೋಹಿಣಿ ಹಟ್ಟಂಗಡಿ, ಸಮಂತ, ಅಂಜಲಿ...ಇಂತಹ ತಾರಾಬಳಗವನ್ನು ಇಟ್ಟುಕೊಂಡು, ಪ್ರತಿಕೂಲ ಕಾಲಘಟ್ಟದಲ್ಲಿ ಕುಟುಂಬ ಕಥಾಚಿತ್ರ ನಿರ್ಮಿಸಿದ `ದಿಲ್' ರಾಜು ಧೈರ್ಯವನ್ನು ಮೆಚ್ಚಲೇಬೇಕು. ವ್ಯಾಪಾರೀ ಸಿನಿಮಾದ ಹಂಗು-ಆರ್ಭಟಗಳನ್ನು ಚಿತ್ರದ ಸನಿಹಕ್ಕೂ ಬಿಟ್ಟುಕೊಳ್ಳದೆ ಚಿತ್ರ ರೂಪಿಸಿದ್ದಾರೆ ನಿರ್ದೇಶಕ ಶ್ರೀಕಾಂತ್ ಅಡ್ಡಾಲ. ನೋಡುಗರ ಮನಗೆಲ್ಲುವ ಅವರ ವಿಶ್ವಾಸಕ್ಕೆ ಅನುಮೋದನೆಯ ಮುದ್ರೆ ಒತ್ತಿದ ಪ್ರೇಕ್ಷಕರ ಅಭಿರುಚಿಗೆ ಮೊದಲ ವಂದನೆ ಸಲ್ಲಬೇಕು.ಸಿನಿಮಾದ ಸೋಲು ನಾಯಕನಟನಲ್ಲಿ ಗೆಲುವಿಗೆ ತಹತಹಿಸುವ ಕೆಚ್ಚು ತುಂಬಿದರೆ, ಒಂದು ದೊಡ್ಡ ಗೆಲುವು ಅನೇಕ ಬಗೆಯ ಗೊಂದಲಗಳನ್ನು ಸೃಷ್ಟಿಸುತ್ತದೆ. ಯಶಸ್ಸಿನ ಮಾದರಿಗಳು ನಟನ ಸುತ್ತ ಗೆರೆ ಕೊರೆಯುತ್ತವೆ. ಈ ಮಾತು ಮಹೇಶ್ ವಿಷಯದಲ್ಲಿ ನೂರಕ್ಕೆ ನೂರು ಸತ್ಯ. ಗಳಿಕೆಯಲ್ಲಿ ಮೈಲುಗಲ್ಲು ನೆಟ್ಟ `ಪೋಕಿರಿ' (2006) ಚಿತ್ರ ಮಹೇಶ್ ಸುತ್ತ ಅಂತಹದೊಂದು ಗೆರೆ ಎಳೆದಿತ್ತು. ಆ ಗೊಂದಲಗಳಿಂದ ಹೊರಬರಲಾಗದೆ ಎರಡು ವರ್ಷ ಒದ್ದಾಡಿದ್ದಾಗಿ ಅವರೇ ಹೇಳಿಕೊಂಡಿದ್ದಾರೆ.ಪೋಕಿರಿ ಯಶಸ್ಸಿನ ಬಳಿಕ `ಮುಂದೇನು?' ಎಂಬ ಗೊಂದಲಕ್ಕೆ ಒಳಗಾದ ಅವರು, ಸ್ಕ್ರಿಪ್ಟ್ ಹಿಡಿದು ಬಂದವರ ಬಳಿ ಕಥಾವಸ್ತು, ಪಾತ್ರದ ರೂಪಕಲ್ಪನೆ ಬಗ್ಗೆ ಕೇಳುವ ಮೊದಲೇ ಫಲಿತಾಂಶ ಕುರಿತು ಪ್ರಸ್ತಾಪಿಸುತ್ತಿದ್ದರಂತೆ. ಈ ಗೊಂದಲದಿಂದ ತಲೆ ಚಿಟ್ಟುಹಿಡಿದು ಸ್ವಲ್ಪದಿನ ಬಿಡುವು ಕೂಡ ಪಡೆದಿದ್ದರು. ಆ ಚಿತ್ರದ ಬಳಿಕ ನಟಿಸಿದ ಎರಡು ಚಿತ್ರಗಳು ನೆಲಕಚ್ಚಿ ಅವರಲ್ಲಿ ಚಿಂತೆ ಹೆಚ್ಚಿಸಿದ್ದೂ ಇದೆ. ನೋಡುಗರಿಗೆ ಬೇಡವಾದ `ಅತಿಥಿ' ಬಳಿಕ ಅವರ ಮತ್ತೊಂದು ಚಿತ್ರ ನೋಡಲು ಪ್ರೇಕ್ಷಕರು ಮೂರು ವರ್ಷ ಕಾಯಬೇಕಾಯಿತು. ದೀರ್ಘ ವಿರಾಮದ ನಂತರ 2010ರಲ್ಲಿ `ಖಲೇಜಾ' ತೆರೆಕಂಡಿತಾದರೂ ನಿರೀಕ್ಷೆಗಳ ಭಾರಕ್ಕೆ ಅದು ಕೂಡ ಕುಸಿಯಿತು.ಗೆಲುವು ಎಂಬುದು ಮಹೇಶ್‌ಗೆ ಐದು ವರ್ಷಗಳ ಮಟ್ಟಿಗೆ ಮರೀಚಿಕೆ ಆಗಿತ್ತು. ಅಂತಹ ಕಷ್ಟಕಾಲದಲ್ಲಿ ಶ್ರೀನು ವೈಟ್ಲ ನಿರ್ದೇಶನದ `ದೂಕುಡು' (2011) ಕೈಹಿಡಿಯಿತು. ಈ ಚಿತ್ರ ತೆಲುಗು ಚಿತ್ರರಂಗದ ಗಳಿಕೆಯ ದಾಖಲೆಗಳನ್ನು ಅಳಿಸಿಹಾಕಿತು. ಅದರ ಬೆನ್ನಿಗೇ ತೆರೆಕಂಡ ಪೂರಿ ಜಗನ್ನಾಥ್‌ರ `ಬಿಜಿನೆಸ್‌ಮನ್' ಚಿತ್ರವೂ ಗೆಲುವಿನ ನಗೆ ಬೀರಿತು. ಈ ಸಂಕ್ರಾಂತಿಗೆ ತೆರೆಕಂಡ `ಸೀತಮ್ಮ...' ಯಶಸ್ಸು ಹ್ಯಾಟ್ರಿಕ್ ಗರಿ ಮೂಡಿಸಿದೆ.ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯಲ್ಲಿ ರೇಲಂಗಿ ಎಂಬ ಹಳ್ಳಿ. ಆ ಹಳ್ಳಿಯಲ್ಲಿ ಒಬ್ಬ ಹೃದಯವಂತ ಮನುಷ್ಯ (ಪ್ರಕಾಶ್ ರೈ). ನೆಂಟರಿಷ್ಟರು, ಅವರನ್ನು ರೇಲಂಗಿ ಮಾವಯ್ಯ ಅಂತ ಕರೆಯುತ್ತಾರೆ. ಆತನಿಗೆ ಒಬ್ಬ ಪುತ್ರಿ (ಅಭಿನಯಾ), ಇಬ್ಬರು ಪುತ್ರರು- ಪೆದ್ದೋಡು (ಹಿರಿಮಗ-ವೆಂಕಟೇಶ್), ಚಿನ್ನೋಡು (ಕಿರಿಮಗ-ಮಹೇಶ್). ದೊಡ್ಡವನು ನಿಷ್ಠುರ ಸ್ವಭಾವದವನು. ಮುಂಗೋಪಿ. ಚಿಕ್ಕವನು ಮಾತುಗಾರ. ದೊಡ್ಡವನು `ಏಯ್' ಎಂದಕೂಡಲೇ ಚಿಗರೆ ಮರಿಯಂತೆ ಜಿಗಿಯುವ ನಾದಿನಿ ಸೀತೆಯೂ (ಅಂಜಲಿ) ಅದೇ ಮನೆಯಲ್ಲಿ ಇರುತ್ತಾಳೆ.ಇವರ ಬಂಧುಗಳ ಕುಟುಂಬವೊಂದು ವಿಜಯವಾಡದಲ್ಲಿ ನೆಲೆಸಿರುತ್ತದೆ. ಅವರು ಆಸ್ತಿವಂತರು. ಅವರಿಗೂ ರೇಲಂಗಿ ಕುಟುಂಬಕ್ಕೂ ಆಗಿಬರುವುದಿಲ್ಲ. ಆ ಮನೆಯ ಗೀತಾ (ಸಮಂತ), ರೇಲಂಗಿಯ ಕಿರಿಮಗನನ್ನು ಇಷ್ಟಪಡುತ್ತಾಳೆ. ಇದರಿಂದ ಹಿರಿಮಗನಿಗೆ ಕಸಿವಿಸಿ. ಆ ಕಸಿವಿಸಿ ಜೊತೆಗೆ ಮತ್ತೊಂದು ಘಟನೆಯೂ ಸೇರಿಕೊಳ್ಳುತ್ತದೆ. ರೇಲಂಗಿ ಮಗಳಿಗೆ ಗೀತಾಳ ಅಕ್ಕ ಮದುವೆ ಸಂಬಂಧ ತರುತ್ತಾಳೆ. ಅದು ಇಷ್ಟವಾಗಿ ವಿವಾಹವೂ ನೆರವೇರುತ್ತದೆ. ಆ ವೇಳೆ ಜರುಗುವ ಕಿರಿಕಿರಿಯೊಂದು ಅಣ್ಣ-ತಮ್ಮನ ಮಧ್ಯೆ ಮನಸ್ತಾಪಕ್ಕೆ ಕಾರಣವಾಗುತ್ತದೆ. ಸಮಾಜ, ಕುಟುಂಬ, ವ್ಯಕ್ತಿಗಳ ಸಂಬಂಧಗಳ ನಡುವೆ ಉಂಟಾಗುವ ಬಿರುಕುಗಳು ಪುನಃ ಹೇಗೆ ಕೂಡಿಕೊಳ್ಳುತ್ತವೆ ಎಂಬುದು ಹೃದ್ಯವಾಗಿ ತೆರೆಯ ಮೇಲೆ ತೆರೆದುಕೊಳ್ಳುತ್ತದೆ.ಕಥೆ ಹೊಚ್ಚ ಹೊಸತು ಅಂತ ಅನ್ನಿಸುವುದಿಲ್ಲ. ಬೆಚ್ಚಿಬೀಳಿಸುವ ತಿರುವುಗಳೂ ಇಲ್ಲ. ಆದರೆ, ಹಿತಾನುಭವ ನೀಡುತ್ತದೆ. ಅದಕ್ಕೆ ಕಾರಣ ಮಣ್ಣಿನ ಘಮಲು. ಚಿನ್ನೋಡು ಪಾತ್ರದಲ್ಲಿ ಮಹೇಶ್ ಪುಟಿಯುತ್ತಾರೆ. ನಗೆ ಉಕ್ಕಿಸುತ್ತಾರೆ. ಭಾವೋದ್ವೇಗಗಳನ್ನೂ ಅಷ್ಟೇ ಪರಿಣಾಮಕಾರಿಯಾಗಿ ಅಭಿವ್ಯಕ್ತಿಸಿದ್ದಾರೆ. ಗೋದಾವರಿ ಜಿಲ್ಲೆಯ ಆಡುಮಾತಿನ ಸೊಗಡಲ್ಲಿ ಸಂಭಾಷಣೆ ಒಪ್ಪಿಸುವ ಪರಿ ಮುದಗೊಳಿಸುತ್ತದೆ. ಸೀತೆಯಾಗಿ ಅಂಜಲಿ ಅವರ ಸಹಜ ಅಭಿನಯ ಚಿತ್ರದ ಅಂದ ಹೆಚ್ಚಿಸಿದೆ. ವೆಂಕಟೇಶ್, ಪ್ರಕಾಶ್ ರೈ ಅವರದು ಹದವರಿತ ನಟನೆ. ಗುಣಾತ್ಮಕ ಅಂಶಗಳು, ಚಿತ್ರದ ಮಿತಿಗಳನ್ನು ಮರೆಯಾಗಿಸುತ್ತವೆ. ಮೇಲಾಗಿ ಶಬ್ದ`ಮಾಲಿನ್ಯ', ದೃಶ್ಯ`ಮಾಲಿನ್ಯ'ಗಳು ಇಲ್ಲ ಎಂಬುದು ಮತ್ತೊಂದು ಅಗ್ಗಳಿಕೆ.ಈ `ಸೀತಮ್ಮ...' ದಶಕದ ಹಿಂದೆ ಮಹೇಶ್ ನಟಿಸಿದ `ಮುರಾರಿ' ಚಿತ್ರವನ್ನು ನೆನಪಿಸುತ್ತದೆ. ಪ್ರತಿ ಫ್ರೇಮಿನಲ್ಲೂ ತೆಲುಗುತನದ ಸೊಗಡು ಎದ್ದುಕಾಣುವಂತೆ ಕೃಷ್ಣವಂಶಿ ಆ ಚಿತ್ರವನ್ನು ರೂಪಿಸಿದ್ದರು. ಮಹೇಶ್ ಯಶಸ್ವೀ ಚಿತ್ರಗಳ ಯಾದಿಯಲ್ಲಿ ಅದಕ್ಕೆ ಪ್ರತ್ಯೇಕ ಸ್ಥಾನ ಇದೆ. ಒಕ್ಕಡು, ಪೋಕಿರಿ, ದೂಕುಡು... ಇವುಗಳೆಲ್ಲ `ಸ್ಟೈಲಿಷ್' ಆಗಿ ರೂಪುಗೊಂಡ ತುರುಸಿನ ಚಿತ್ರಗಳು.ಮಹೇಶ್ ಸಿನಿಮಾ ಕುಟುಂಬದ ಹಿನ್ನೆಲೆಯಿಂದಲೇ ಬಂದವರು. 340ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಕೃಷ್ಣ ಮತ್ತು ಇಂದಿರಾ ದೇವಿ ದಂಪತಿ ಮಗ. ಬಾಲನಟನಾಗಿ ಒಂಬತ್ತು ಚಿತ್ರಗಳಲ್ಲಿ ನಟಿಸಿದ ಅನುಭವ ಬೆನ್ನಿಗಿದೆ. ಚೆನ್ನೈನ ಲೋಯೊಲಾ ಕಾಲೇಜಿನಲ್ಲಿ ಬಿ.ಕಾಂ ಪೂರೈಸಿದ್ದಾರೆ. ನಟಿ ನಮ್ರತಾ ಶಿರೋಡ್ಕರ್ ಅವರನ್ನು 2005ರಲ್ಲಿ ವಿವಾಹ ಆಗಿದ್ದಾರೆ. ಈ ದಂಪತಿಗೆ ಇಬ್ಬರು ಮಕ್ಕಳು. ಮಹೇಶ್ ನಟಿಸಿದ `ವಂಶಿ' ಚಿತ್ರದಲ್ಲಿ ನಮ್ರತಾ ನಾಯಕಿಯಾಗಿ ನಟಿಸಿದ್ದಾರೆ.ಮಹೇಶ್ ನಾಯಕನಟನಾಗಿ ತೆರೆಗೆ ಪರಿಚಯವಾಗಿ (`ರಾಜಕುಮಾರುಡು', 1999) 14 ವಸಂತಗಳು ಉರುಳಿವೆ. 18 ಚಿತ್ರಗಳಲ್ಲಿ ನಟಿಸಿದ್ದಾರೆ. ಅವರ ಅಭಿನಯದ ಚಿತ್ರಗಳು ದೊಡ್ಡ ಮಟ್ಟದಲ್ಲಿ ವಿಜಯ ಪತಾಕೆ ಹಾರಿಸಿವೆ. ಗೋತಾ ಕೂಡ ಹೊಡೆದಿವೆ. ಆದರೆ, ಆತ ನಟನಾಗಿ ಸೋತಿದ್ದೇ ಇಲ್ಲ. ಚೆಲುವಾಂತ ಚೆನ್ನಿಗ. ಅಭಿನಯದಲ್ಲೂ ಸೈ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry