ನಟನ ಮಾಡಿದಳ್ ತರುಣಿ...!

7

ನಟನ ಮಾಡಿದಳ್ ತರುಣಿ...!

Published:
Updated:
ನಟನ ಮಾಡಿದಳ್ ತರುಣಿ...!

ಭಾರತೀಯ ಸಂಬಂಧಗಳ ಸಾಂಸ್ಕೃತಿಕ ಪರಿಷತ್ `ಹೊರೈಸಾನ್~ ಸರಣಿಯಲ್ಲಿ ಶಿಲ್ಪಾ ನಂಜಪ್ಪ ಅವರಿಂದ ಮನಮೋಹಕ ನೃತ್ಯ ಕಾರ್ಯಕ್ರಮ ಏರ್ಪಾಡಾಗಿತ್ತು. ಸ್ತ್ರೀಶಕ್ತಿ, ಪ್ರಗತಿ, ಸ್ಥಿತ್ಯಂತರಗಳನ್ನು ಕುರಿತ ನೃತ್ಯರೂಪಕಗಳ ಸಾಲಿಗೆ ಶಿಲ್ಪಾ ನಂಜಪ್ಪ ಸಹ ಸೇರ್ಪಡೆಯಾದರು. ವಿಶ್ವದ ಶಕ್ತಿಯಾದ ಮಹಿಳೆ ವಿವಿಧ ಹಂತಗಳಲ್ಲಿ ಬೆಳೆದು, ತನ್ನ ಪ್ರಭಾವ ಬೀರುವುದನ್ನು ಆಧಾರವಾಗಿ ಉಳ್ಳ `ಮಾನಿನಿ~ಯನ್ನು ಭಾರತೀಯ ವಿದ್ಯಾಭವನದ ಖಿಂಚಾ ಸಭಾಂಗಣದಲ್ಲಿ ಸಾದರಪಡಿಸಿದರು.`ಮಾನಿನಿ~ಯ ಮೊದಲ ಅಂಕದಲ್ಲಿ ತ್ರಿಮೂರ್ತಿಗಳು; ಕೇಂದ್ರ ಬಿಂದುವಾಗಿ ದೇವಿ, ಸೃಷ್ಟಿಯ ಕೇಂದ್ರವಾಗಿ ಹಾಗೂ ಜ್ಞಾನದ ಕೇಂದ್ರಬಿಂದುವಾಗಿ ಬೆಳಗುತ್ತಾಳೆ. ಕಾಲ ಕಳೆದಂತೆ ಪಂಚಭೂತಗಳ ಸೃಷ್ಟಿ. ವೃಕ್ಷ, ಪ್ರಾಣಿ, ಪಕ್ಷಿಗಳ ಸೃಷ್ಟಿ. ಮನುಷ್ಯನ ಹುಟ್ಟು, ಅವನಿಗೊಬ್ಬ ಮಾನಿನಿ - ಮುಂದುವರೆದ ಸೃಷ್ಟಿಕಾರ್ಯವನ್ನು ಪ್ರಸ್ತುತ ಪಡಿಸಿದರು.ಎರಡನೆಯ ದೃಶ್ಯದಲ್ಲಿ ಯುವ ತಾಯಿಯ ಹೃದಯದಲ್ಲಿ ಮಗುವಿನ ಜೋಗುಳ ಅನುರಣನವಾಗುತ್ತದೆ. ಶಿಶುವಿನ ತೆವಳಾಟ, ನಡಿಗೆ, ಮಾತು, ಓಟ ಮುಂತಾದವುಗಳನ್ನು ಭಾರತೀಯರ  ಚೆನ್ನಂಜಿರು ಕಿಳಿಯೆ ಗೀತೆಯ ಮೂಲಕ ತೋರಲಾಯಿತು. ಪುಟ್ಟ ಮಗಳನ್ನು ಸಂಗೀತ, ನೃತ್ಯಕ್ಕೆ ಹಚ್ಚಿ, ಶಾಲೆಗೆ ಕಳುಹಿಸುವ ದಿನ ಹತ್ತಿರವಾಗುತ್ತದೆ.ಮೂರನೆಯ ಅಂಕದಲ್ಲಿ ಬೆಳೆಯುತ್ತಿರುವ ಮಗಳಲ್ಲಿ ಆಗುತ್ತಿರುವ ಬದಲಾವಣೆಯನ್ನು ತಾಯಿ ಗಮನಿಸುತ್ತಾ ವಿಸ್ಮಯಗೊಳ್ಳುತ್ತಾಳೆ. ಆ ಸಂದರ್ಭಕ್ಕೆ ಹೊಂದುವಂತೆ, ಡಿ.ವಿ.ಜಿ. ಅವರ `ನಟನ ಮಾಡಿದಳ್ ತರುಣಿ~ ಆಯ್ದುದು ಉಚಿತವಾಗಿತ್ತು. ತನ್ನ ಮಗಳು ನಾಟ್ಯ ರಾಣಿ ಶಾಂತಲೆಯಂತೆ ಕಲಾರಾಧಕಿ ಅಗಬೇಕೆಂಬ ತಾಯಿಯ ಹಂಬಲ!ನಾಲ್ಕನೆಯ ದೃಶ್ಯದಲ್ಲಿ ಮಗಳು ತನ್ನ ಗೆಳತಿಯರೊಡಗೂಡಿ ನಲಿದಾಡುತ್ತಾ ಹೋಗುತ್ತಿರುವಾಗ ಎದುರಾದ ಆಗುಂತಕರ ವಿಘ್ನದಿಂದ ಕಂಗಾಲಾಗಿ, ಭಯಭೀತಳಾಗುತ್ತಾಳೆ. ಆಗ ತಾಯಿ ಮಗಳಿಗೆ ಧೈರ್ಯ ಹೇಳಿ, ಕಿತ್ತೂರು ರಾಣಿ ಚೆನ್ನಮ್ಮಳಂತೆ ಧೈರ್ಯದಿಂದ ಎದುರಿಸಬೇಕು!  ಶಕ್ತಿಯು ಹೆಣ್ಣಿಗೆ ದೇವರ ವರವು. ಸಾಧಿಸಲು ಲೋಕವನ್ನು ಎದುರಿಸಬೇಕು ಎಂದು ಕಿವಿಮಾತು ಹೇಳುತ್ತಾಳೆ.ದೇವಾಲಯದಲ್ಲಿ ತರುಣಿ ತರುಣನಿಂದ ಆಕರ್ಷಿತಳಾಗುತ್ತಾಳೆ. ಆಗ `ದರು ಮಾತೆ ಮಲಯಧ್ವಜ ಪಾಂಡ್ಯ ಸಂಜಾತೆ~ ಆಯ್ದುದು ಸಂದರ್ಭಕ್ಕೆ ಒಪ್ಪಿತು. ಅದನ್ನು ನರ್ತಿಸುವಾಗಲೂ ಪ್ರಿಯಕರನ ಮನ ಗೆಲ್ಲುವತ್ತಲೇ ತರುಣಿಯ ಮನಸ್ಸು ಹೊಯ್ದೊಡುತ್ತಿರುತ್ತದೆ.ಮುಂದಿನ ಅಂಕದಲ್ಲಿ ತರುಣಿಗೆ ಪ್ರೇಮ-ಪ್ರೀತಿಯ ಆಕರ್ಷಣೆಯಿಂದ ಅನುರಕ್ತಳಾದ ಭಾವನೆಗಳು ಉದ್ದೀಪನವಾಗುವ ರಸ ಸನ್ನಿವೇಶ. ಮಗಳಿಗೆ ಕಂಕಣ ಭಾಗ್ಯ ಒದಗಿದಾಗ ತಾಯಿಯನ್ನು ಬಿಟ್ಟು ಹೋಗಲು ಮಗಳು ಹಿಂದೇಟು ಹೊಡೆಯುತ್ತಾಳೆ.ತಾಯಿ ಮಗಳಿಗೆ ಧೈರ್ಯ ತುಂಬುತ್ತಾ ಎಲ್ಲ ಹೆಣ್ಣು ಮಕ್ಕಳೂ ಎದುರಿಸಬೇಕಾದ ಈ ಅನಿವಾರ್ಯವನ್ನು ತಿಳಿ ಹೇಳಿ, ಸೃಷ್ಟಿ ಕಾರ್ಯ ಮುಂದುವರೆಯಬೇಕು ಎಂದು ತಿಳಿಸಿ ಬುದ್ಧಿ ಹೇಳುತ್ತಾಳೆ. ಕುಟುಂಬದ ಹೊಣೆಗಾರಿಕೆಯನ್ನು ನಿಸ್ವಾರ್ಥವಾಗಿ ಮಾನಿನಿ  ಮುಂದುವರೆಸುತ್ತಾಳೆ.ಕೊನೆಯ ದೃಶ್ಯದಲ್ಲಿ ಮಾನಿನಿಯು ಸೃಷ್ಟಿ, ಸಂಹಾರ ಹಾಗೂ ರಕ್ಷಿಸುವ ಪ್ರತೀಕವಾಗಿರುವ ಹೆಣ್ಣಾಗಿ ಕಾಣುತ್ತಾಳೆ. ಪ್ರಕೃತಿಯ ರೂಪ ಈ ಹೆಣ್ಣು. ಸೃಷ್ಟಿಗೆ ಕಾರಣ ಈ ಹೆಣ್ಣು. ಹಡೆಯುವ, ಸಲಹುವ, ಸಹನೆಯ ಕಡಲು ಭೂಮಿ ತೂಕದ ಈ ಹೆಣ್ಣು ಎಂದು ಹೇಳಿ ದುರ್ಗಾ ರಾಗದ ತಿಲ್ಲಾನವನ್ನು ನರ್ತಿಸಿದರು.ಹೆಣ್ಣಿನ ವಿವಿಧ ಹಂತ- ಬೆಳವಣಿಗೆಗಳನ್ನು ದೃಶ್ಯೀಕರಿಸುವ ಪ್ರಯತ್ನವೇ ಮಾನಿನಿ. ತಾಯಿಯ ಭಿನ್ನ ಹಂಬಲಗಳು; ಹೆಣ್ಣಿನ ಬೆಳವಣಿಗೆ, ಭಾವನೆ, ಅಭಿವ್ಯಕ್ತಿಗಳನ್ನು ಸೆರೆ ಹಿಡಿಯುವ ಪ್ರಯತ್ನವನ್ನು ಶಿಲ್ಪಾ ಮಾಡಿದ್ದಾರೆ. ಪ್ರಾರಂಭದಲ್ಲಿ ನವಿಲು ಮುಂತಾದ ಪ್ರಾಣಿಗಳ ಚಲನವಲನವನ್ನು ಆಕರ್ಷಕವಾಗಿ ತೋರಿದ ಶಿಲ್ಪಾ ಅಭಿನಯದಲ್ಲಿ ತೋರಿದ ಪ್ರೌಢತೆ ಪರಿಣಾಮಕಾರಿ. ಕೆಲವು ಕಡೆ ಮೊಟಕುಗೊಳಿಸಿ, ಬಿಗಿ ಮಾಡುವ ಅಗತ್ಯವಿದ್ದರೂ  ಮಾನಿನಿ ಒಂದು ಉತ್ತಮ ಪ್ರಯತ್ನ.ಗುರು ಪದ್ಮಿನಿ ರಾಮಚಂದ್ರನ್ ಅವರ ನೃತ್ಯ ಸಂಯೋಜನೆ ಸುಂದರ ಹಾಗೂ ನಟುವಾಂಗ ಸ್ಪೂರ್ತಿದಾಯಕ. ಬಾಲಸುಬ್ರಹ್ಮಣ್ಯ ಶರ್ಮರ ಗಾಯನ ಮಧುರ. ಮೃದಂಗದಲ್ಲಿ ಜನಾರ್ದನರಾವ್, ಪಿಟೀಲಿನಲ್ಲಿ ಹೇಮಂತ್ ಹಾಗೂ ಕೊಳಲಿನಲ್ಲಿ ಸರ್ವೋತ್ತಮ ಬೆಂಬಲಿಸಿದರು. ಸುಗ್ಗನಹಳ್ಳಿ ಷಡಾಕ್ಷರಿ ಅವರ ಗೀತೆಯೂ ಸಂದರ್ಭೋಚಿತವಾಗಿತ್ತು.ಶಿಲ್ಪಾ ನಾಟ್ಯಪ್ರಿಯ ಶಾಲೆಯ ವಿದ್ಯಾರ್ಥಿನಿಯಾಗಿ ಶಿಲ್ಪಾ ನಂಜಪ್ಪ, ಅನೇಕ ನೃತ್ಯರೂಪಕಗಳಲ್ಲಿ ಭಾಗವಹಿಸಿದ್ದಾರೆ. 1998ರಲ್ಲಿ ರಂಗಪ್ರವೇಶ ಮಾಡಿರುವ ಶಿಲ್ಪಾ ರಾಜ್ಯದ ಒಳ-ಹೊರಗೆ ಅನೇಕ ಕಾರ್ಯಕ್ರಮಗಳನ್ನು ನೀಡಿದ್ದಾರೆ. ರಾಜ್ಯ ಸರ್ಕಾರದ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ, ಡಾ.ಎಂ.ಜಿ.ಆರ್. ಪ್ರಶಸ್ತಿ (ಮ್ಯೂಸಿಕ್ ಅಕಾಡೆಮಿ), ಸಿಂಗಾರ ಮಣಿ (ಸುರ್ ಸಿಂಗಾರ್ ಸಂಸದ್), ರಾಜ್ಯ ಪ್ರಶಸ್ತಿ (ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ, ಕಾಸರಗೋಡು) ಮುಂತಾದ ಪ್ರಶಸ್ತಿಗಳೂ ಸಂದಿವೆ.ಮಧುರ ಗಾಯನ

ಕರ್ನಾಟಕ ಸಂಗೀತದ ಗಾಯಕರಾದ ಸಂಪಗೋಡು ವಿಘ್ನರಾಜ ಮೂಲತಃ ಶೃಂಗೇರಿಯವರು. ತಂದೆ ಸೂರ್ಯನಾರಾಯಣ ಭಟ್ ವಿದ್ವಾಂಸರು. ಗಾಯಕ, ಬೋಧಕ ಹಾಗೂ ವಾಗ್ಗೇಯಕಾರರು. ಅವರಿಂದ ಸಂಗೀತ ಶಿಕ್ಷಣ ಪಡೆದು, ಗಾಯನವಲ್ಲದೆ ಕೊಳಲು ವಾದನದಲ್ಲೂ ಸಾಧಕರು. ಕೆಲಕಾಲ ಸುಬ್ರಹ್ಮಣ್ಯ ಭಟ್ ಅವರಿಂದಲೂ ಮಾರ್ಗದರ್ಶನ ಪಡೆದಿದ್ದಾರೆ. ಅಲ್ಲದೆ ಮಲೇಷಿಯ, ಸಿಂಗಪೂರ್, ಆಸ್ಟ್ರೇಲಿಯ, ನ್ಯೂಜಿಲೆಂಡ್ ದೇಶಗಳಲ್ಲೂ ಹಾಡಿ-ನುಡಿಸಿದ್ದಾರೆ.  ಉತ್ತಮ ಗಾಯಕರಿಗೆ ನೀಡುವ ಬಿ.ಒ.ಎಚ್. ಕೊಮರೊನಿಯನ್ ಅವಾರ್ಡ್  ಸಹ ಗಳಿಸಿದ್ದಾರೆ. ಕೆಲ ಕಾಲದಿಂದ ಮಲೇಷ್ಯಾದ ಟೆಂಪಲ್ ಆಫ್ ಫೈನ್ ಆರ್ಟ್ಸ್ ನಲ್ಲಿ ವಾದ್ಯ ವಿಭಾಗದ ಮುಖ್ಯಸ್ಥರಾಗಿ, ಕ್ವಾಲಾಲಂಪೂರ್‌ನಲ್ಲಿ ಕೊಳಲು ಹಾಗೂ ಗಾಯನ ಬೋಧನೆ ಮಾಡುತ್ತಿದ್ದಾರೆ.ಹಾಲಿ ಕಾರ್ಯಕ್ರಮವನ್ನು ಸಂಪಗೋಡು ವಿಘ್ನರಾಜ ಅನನ್ಯ ಸಭಾಂಗಣದಲ್ಲಿ  ಸಂಗತಿ  ಸರಣಿಯಲ್ಲಿ ಶುಕ್ರವಾರ ಮಾಡಿದರು. ಪ್ರಾರಂಭದ ರಚನೆಯೇ ಕೇಳುಗರಲ್ಲಿ ಕುತೂಹಲ ಮೂಡಿಸಿತು. ವರ್ಣವನ್ನು (ಏರಾನಾಪೈ) ಆರು ಕಾಲಗಳಲ್ಲಿ ಹಾಡಿ, ತಮ್ಮ ಸಾಧನೆಯನ್ನು ಮೆರೆದರು. ಭೇಗಡೆ ರಾಗದಲ್ಲಿ ಹಾಡಿದ  `ಶ್ರಿ ಶಕ್ತಿಗಣಪತಿಂ~  ಕರ್ತೃ ಸೂರ್ಯನಾರಾಯಣ ಭಟ್ಟರು. ಪುರಂದರ ದಾಸರ ಸುಪರಿಚಿತ ದೇವರನಾಮ  `ರಾಮ ರಾಮ ರಾಮ ಎನ್ನಿರೊ~ ವನ್ನು ರಾಗ, ನೆರವಲ್, ಸ್ವರಗಳಿಂದ ಅಲಂಕರಿಸಿದರು.ಆದರೆ  `ನೆನರುಂಚಿನಾನು~  ಕೃತಿಯನ್ನು ಅಷ್ಟು ಓಟದಲ್ಲಿ ಹಾಡಬೇಕಿತ್ತೇ?  `ಜನನೀ ನಿನುವಿನಾ~ ಒಂದು ಉತ್ತಮ ಆಯ್ಕೆ. ತ್ಯಾಗರಾಜರ ಜನಪ್ರಿಯ ಕೃತಿಗಳಲ್ಲಿ ಒಂದಾದ `ಎಂದುಕು ನಿರ್ದಯ~  ವಿಸ್ತಾರಕ್ಕೆ ಆಯ್ದರು. ದೈನ್ಯೋಕ್ತಿಯಿಂದ ಕೂಡಿದ ಕೃತಿ. ಅಳಿಲಿನ ಭಕ್ತಿಯ ವಿಚಾರ ಪ್ರಸ್ತಾಪವಿರುವ ನಿಂದಾಸ್ತುತಿಯ ಪ್ರಕಾರಕ್ಕೆ ಸೇರುವ ಕೀರ್ತನೆ. ತಮ್ಮ ಒಳ್ಳೆಯ ಕಂಠ, ಉತ್ತಮ ನಿರೂಪಣೆಗಳಿಂದ ವಿಘ್ನರಾಜ ಮೆಚ್ಚುಗೆ ಗಳಿಸಿದರು.ಪಿಟೀಲಿನಲ್ಲಿ ಎಚ್.ಎಂ. ಸ್ಮಿತಾ, ಮೃದಂಗದಲ್ಲಿ ಎಸ್. ಅಶೋಕ್ ಹಾಗೂ ಮೋರ್ಚಿಂಗ್‌ನಲ್ಲಿ ಅಮೃತ್ ಕುಮಾರ್ ಉತ್ತಮ ಸಹಕಾರ ನೀಡಿದರು. 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry