ನಟರಾಜ್ ಕೊಲೆ ಪ್ರಕರಣ: 7 ಜನರ ಬಂಧನ

7

ನಟರಾಜ್ ಕೊಲೆ ಪ್ರಕರಣ: 7 ಜನರ ಬಂಧನ

Published:
Updated:

ಬೆಂಗಳೂರು: ನಗರವನ್ನು ತಲ್ಲಣಗೊಳಿಸಿದ್ದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಗಾಂಧಿನಗರ ವಾರ್ಡ್ ಸದಸ್ಯ ಎಸ್.ನಟರಾಜ್ (45) ಅವರ ಕೊಲೆ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿರುವ ಪೊಲೀಸರು ಏಳು ಆರೋಪಿಗಳನ್ನು ಬಂಧಿಸಿದ್ದಾರೆ.`ಪ್ರಕರಣಕ್ಕೆ ಸಂಬಂಧಿಸಿದಂತೆ ಏಳು ಮಂದಿಯನ್ನು ಬಂಧಿಸಲಾಗಿದೆ~ ಎಂದು ಉನ್ನತ ಪೊಲೀಸ್ ಮೂಲಗಳು `ಪ್ರಜಾವಾಣಿ~ಗೆ ತಿಳಿಸಿವೆ.`ರಾಜೇಂದ್ರ, ಮಹೇಶ, ಸೀನ, ವಿಜಯ್‌ಕುಮಾರ್ ಎಂಬುವರು ಈ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ. ಅಲ್ಲದೇ ಮಹಿಳೆಯೊಬ್ಬರು ಪ್ರಕರಣದಲ್ಲಿ ಭಾಗಿಯಾಗಿರುವುದು ತನಿಖೆಯಿಂದ ಗೊತ್ತಾಗಿದೆ. ನಟರಾಜ್ ಅವರ ಜತೆಯೇ ಕೆಲಸ ಮಾಡಿಕೊಂಡಿದ್ದ ರಾಜೇಂದ್ರ ಇಡೀ ಪ್ರಕರಣದ ಸಂಚು ರೂಪಿಸಿದ್ದ~ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.`ರಾಜಕೀಯವಾಗಿ ಸಾಕಷ್ಟು ಹೆಸರು ಮಾಡಿದ್ದ ನಟರಾಜ್ ಅವರ ಏಳಿಗೆಯನ್ನು ಸಹಿಸದೆ ಅವರನ್ನು ಕೊಲೆ ಮಾಡಿದ್ದಾಗಿ ಆರೋಪಿಗಳು ವಿಚಾರಣೆ ವೇಳೆ ಹೇಳಿಕೆ ಕೊಟ್ಟಿದ್ದಾರೆ. ಅಲ್ಲದೇ ಮಹೇಶ ಮತ್ತು ನಟರಾಜ್ ಅವರ ನಡುವೆ ಹಣಕಾಸು ವಿಷಯವಾಗಿ ಕೆಲ ದಿನಗಳ ಹಿಂದೆ ಜಗಳವಾಗಿ ಭಿನ್ನಾಭಿಪ್ರಾಯ ಉಂಟಾಗಿತ್ತು. ಈ ಕಾರಣಕ್ಕಾಗಿ ಆರೋಪಿಗಳು ಅವರನ್ನು ಕೊಲೆ ಮಾಡಿರುವ ಸಾಧ್ಯತೆಯೂ ಇದೆ~ ಎಂದು ಅವರು ತಿಳಿಸಿದ್ದಾರೆ.`ಪ್ರಕರಣದಲ್ಲಿ ಪಾಲಿಕೆಯ ಮಾಜಿ ಸದಸ್ಯರೊಬ್ಬರ ಕೈವಾಡವಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಈ ಸಂಬಂಧ ತನಿಖೆ ಮುಂದುವರೆದಿದೆ. ಆರೋಪಿಗಳು ಬಿಟ್ಟು ಹೋಗಿದ್ದ ಕಾರಿನಲ್ಲಿ ಪತ್ತೆಯಾಗಿರುವ ಮೊಬೈಲ್ ಫೋನ್‌ನಿಂದ ಹೊರ ಹೋಗಿರುವ ಕರೆಗಳ ಬಗ್ಗೆ ಹೆಚ್ಚಿನ ಮಾಹಿತಿ ಕಲೆ ಹಾಕಲಾಗುತ್ತಿದೆ. ಕೊಲೆ ಘಟನೆ ನಡೆಯುವುದಕ್ಕೂ ಮುನ್ನ ಆರೋಪಿಗಳು ಆ ಮೊಬೈಲ್‌ನಿಂದ ಒಂದು ತಾಸಿನ ಅಂತರದಲ್ಲಿ ನೂರಕ್ಕೂ ಹೆಚ್ಚು ಕರೆಗಳನ್ನು ಮಾಡಿದ್ದರು~ ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ.ಕೆಲಸದ ನಿಮಿತ್ತ ಅ.1ರಂದು ದ್ವಿಚಕ್ರ ವಾಹನದಲ್ಲಿ ಮಲ್ಲೇಶ್ವರ ಮಾರುಕಟ್ಟೆ ಕಡೆಗೆ ಹೋಗುತ್ತಿದ್ದ ನಟರಾಜ್ ಅವರನ್ನು ಆರೋಪಿಗಳು ರಸ್ತೆ ಮಧ್ಯೆ ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry