ನಟಿ ಮರಿಯಾ, ಜೆರೋಮ್ ತಪ್ಪಿತಸ್ಥರು

7

ನಟಿ ಮರಿಯಾ, ಜೆರೋಮ್ ತಪ್ಪಿತಸ್ಥರು

Published:
Updated:
ನಟಿ ಮರಿಯಾ, ಜೆರೋಮ್ ತಪ್ಪಿತಸ್ಥರು

ಮುಂಬೈ (ಪಿಟಿಐ): ಟಿ.ವಿ ವಾಹಿನಿಯೊಂದರ ಕಾರ್ಯ ನಿರ್ವಾಹಕ ಅಧಿಕಾರಿಯಾಗಿದ್ದ ನೀರಜ್ ಗ್ರೋವರ್ ಹತ್ಯೆಗೆ ಸಂಬಂಧಿಸಿದಂತೆ ನೌಕಾದಳದ ಮಾಜಿ ಅಧಿಕಾರಿ ಎಮಿಲೆ ಜೆರೋಮ್ ಮತ್ತು ಕನ್ನಡ ನಟಿ ಮರಿಯಾ ಸೂಸೈರಾಜ್ ಅವರಿಗೆ ಸ್ಥಳೀಯ ನ್ಯಾಯಾಲಯ ಶಿಕ್ಷೆ ವಿಧಿಸಿದೆ. ಶಿಕ್ಷೆಯ ಪ್ರಮಾಣ ಶುಕ್ರವಾರ ಪ್ರಕಟವಾಗಲಿದೆ.ಆದರೆ ಈ ಇಬ್ಬರೂ ಗ್ರೋವರ್ ಅವರನ್ನು ಕೊಲೆ ಮಾಡುವ ಉದ್ದೇಶ ಹೊಂದಿರಲಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಸಾಕ್ಷಿಗಳನ್ನು ನಾಶಪಡಿಸಿದ ಕಾರಣಕ್ಕಾಗಿ ಮರಿಯಾಗೆ ಶಿಕ್ಷೆಯಾಗಿದ್ದರೆ, ಗ್ರೋವರ್ ಸಾವಿಗೆ ಕಾರಣ ಎಂಬ ಅಪರಾಧಕ್ಕಾಗಿ ಜೆರೋಮ್ ಅವರಿಗೆ ಶಿಕ್ಷೆ ನೀಡಲಾಗಿದೆ.ಗ್ರೋವರ್ ಅವರನ್ನು ಕೊಲೆ ಮಾಡಬೇಕು ಎಂದು ಜೆರೋಮ್ ಮೊದಲೇ ಸಂಚು ನಡೆಸಿರಲಿಲ್ಲ. ಸಂದರ್ಭದ ಭಾವಾವೇಶಕ್ಕೆ ಒಳಗಾಗಿ ಹತ್ಯೆ ಮಾಡಿದ್ದಾರೆ ಎಂದು ತೀರ್ಪು ತಿಳಿಸಿದೆ.2008ರ ಮೇ 7ರಂದು ಜೆರೋಮ್ ಅವರು ಮಲಾಡ್‌ನಲ್ಲಿರುವ ಮರಿಯಾ ನಿವಾಸಕ್ಕೆ ತೆರಳಿದ್ದರು.  ಆಗ ಗ್ರೋವರ್ ಮತ್ತು ಜೆರೋಮ್ ಮಧ್ಯೆ ಜಗಳ ನಡೆದಿತ್ತು. ಸಿಟ್ಟಿನ ಭರದಲ್ಲಿ ಜೆರೋಮ್ ಚಾಕುವಿನಿಂದ ಇರಿದಿದ್ದರಿಂದ ಗ್ರೋವರ್ ಸತ್ತಿದ್ದರು. ನಂತರ ಮರಿಯಾ ಮತ್ತು ಜೆರೋಮ್ ಸೇರಿಕೊಂಡು ಗ್ರೋವರ್ ಮೃತದೇಹವನ್ನು ಅನೇಕ ತುಂಡುಗಳನ್ನಾಗಿ ಮಾಡಿ ಥಾಣೆ ಜಿಲ್ಲೆಯ ಕಾಡಿನಲ್ಲಿ ಬಿಸಾಡಿದ್ದರು. ಇಬ್ಬರ ವಿರುದ್ಧವೂ ಕೊಲೆ, ಕ್ರಿಮಿನಲ್ ಸಂಚು, ಸಮಾನ ಉದ್ದೇಶ ಮತ್ತು ಸಾಕ್ಷಿ ನಾಶದ ಆಪಾದನೆ ಹೊರಿಸಲಾಗಿತ್ತು.ಅಪರಾಧಿಗಳ ಶಿಕ್ಷೆ ಪ್ರಮಾಣವನ್ನು ಶುಕ್ರವಾರ ಪ್ರಕಟಿಸುವಂತೆ ಸರ್ಕಾರಿ ವಕೀಲರಾದ ಆರ್.ವಿ.ಕಿಣಿ ಮನವಿ ಮಾಡಿದರು. ಈ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿದ ಮರಿಯಾ ಪರ ವಕೀಲ ಶರೀಫ್ ಶೇಖ್, ತಮ್ಮ ಕಕ್ಷಿದಾರರು ಐಪಿಸಿ 201ರ ಪ್ರಕಾರ ತಪ್ಪಿತಸ್ಥೆ ಎಂದು ತೀರ್ಮಾನವಾಗಿದ್ದು, ಈ ಅಪರಾಧಕ್ಕೆ ಗರಿಷ್ಠ ಮೂರು ವರ್ಷ ಜೈಲು ಶಿಕ್ಷೆ ವಿಧಿಸಬಹುದಾಗಿದೆ. ಈ ಅವಧಿಯನ್ನು ಅವರು ಈಗಾಗಲೇ ಜೈಲಿನಲ್ಲಿ ಕಳೆದಿರುವುದರಿಂದ ಜಾಮೀನಿನ ಮೇಲೆ ಬಿಡುಗಡೆ ಮಾಡಬೇಕು ಎಂದು ಕೋರಿದರು. ಶುಕ್ರವಾರ ವಾದ, ಪ್ರತಿವಾದ ಆಲಸಿ ಶಿಕ್ಷೆಯ ಪ್ರಮಾಣ ಪ್ರಕಟಿಸುವುದಾಗಿ ನ್ಯಾಯಾಧೀಶರು ತಿಳಿಸಿದರು.ಹೆತ್ತವರ ಅತೃಪ್ತಿ: ಜೆರೋಮ್‌ನನ್ನು ಮನೆಗೆ ಕರೆಸಿಕೊಂಡಿದ್ದರಿಂದಲೇ ತಮ್ಮ ಮಗನ ಕೊಲೆ ಆಗಿರುವುದರಿಂದ ಮರಿಯಾಳನ್ನು ಕೊಲೆ ಆಪಾದನೆಯಿಂದ ಮುಕ್ತಗೊಳಿಸಿರುವುದು ತಮಗೆ ಸಮಾಧಾನ ತಂದಿಲ್ಲ ಎಂದು ಗ್ರೋವರ್ ತಾಯಿ ನೀಲಂ ಹಾಗೂ ತಂದೆ ಅಮರನಾಥ್ ನ್ಯಾಯಾಲಯದ ಹೊರಗೆ ಸುದ್ದಿಗಾರರಿಗೆ ತಿಳಿಸಿದರು.ಟಿ.ವಿಯಲ್ಲಿ ನಟಿಸಲು ಅವಕಾಶ ಹುಡುಕಿಕೊಂಡು ಮರಿಯಾ ಬೆಂಗಳೂರಿನಿಂದ ಮುಂಬೈಗೆ ಬಂದಿದ್ದರು. ಆಗ ಅವರಿಗೆ ಗ್ರೋವರ್ ಸಂಪರ್ಕ ಆಗಿತ್ತು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry