ಸೋಮವಾರ, ಜೂಲೈ 6, 2020
24 °C

ನಟೀಮಣಿಯರ ದೋಷಾರೋಪ ಪ್ರಸಂಗವು...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಟೀಮಣಿಯರ ದೋಷಾರೋಪ ಪ್ರಸಂಗವು...

ಒಂದೇ ಸೋಫಾ. ಅದರ ಒಂದು ಕೊನೆಯಲ್ಲಿ ಶಾಹಿದ್ ಕಪೂರ್. ಇನ್ನೊಂದು ಕೊನೆಯಲ್ಲಿ ಪ್ರಿಯಾಂಕಾ ಚೋಪ್ರಾ. ಇಬ್ಬರೂ ಹಾಗೆ ಒಂದೇ ‘ಶೋ’ನಲ್ಲಿ ಒಂದೇ ಸೋಫಾದ ಮೇಲೆ ಕೂರುತ್ತಾರೆಂದು ಬಾಲಿವುಡ್‌ನ ಮಂದಿಯೇ ಎಣಿಸಿರಲಿಕ್ಕಿಲ್ಲ. ಯಾಕೆಂದರೆ, ಇಬ್ಬರ ವಿಷಯದಲ್ಲೂ ಸಾಕಷ್ಟು ಸುದ್ದಿ ಚೆಲ್ಲಾಡಿಯಾಗಿತ್ತು.ಇಬ್ಬರೂ ಒಬ್ಬರನ್ನೊಬ್ಬರು ಇಷ್ಟಪಟ್ಟರು, ಪ್ರೀತಿಸಿದರು, ಹೋಟೆಲುಗಳಲ್ಲಿ ಓಡಾಡಿದರು, ಜಗಳವಾಡಿದರು, ಒಡೆದುಹೋದರು... ಎಂದು ಕಂತುಕಂತಿನಲ್ಲಿ ಸುದ್ದಿ ವರದಿಯಾಗಿದ್ದವು. ಆದರೆ, ಅವು ಸುದ್ದಿಯೇ ಅಲ್ಲ, ವದಂತಿ ಅಂತಾರೆ ಪ್ರಿಯಾಂಕಾ.ಇಷ್ಟಕ್ಕೂ ಆ ಶೋನಲ್ಲಿ ಭಾಗವಹಿಸಲು ಮೊದಲು ಪ್ರಿಯಾಂಕಾ ಒಪ್ಪಲಿಲ್ಲವಂತೆ; ಅದೂ ಶಾಹಿದ್ ಕೂಡ ಬರುತ್ತಾರೆಂಬ ವಿಷಯ ಗೊತ್ತಾದ ಮೇಲೆ. ಆದರೆ, ಕರಣ್ ಜೋಹರ್ ಹಟತೊಟ್ಟು ಇಬ್ಬರನ್ನೂ ಒಂದೇ ಸೋಫಾ ಮೇಲೆ ತಂದು ಕೂರಿಸಿಯೇಬಿಟ್ಟರು. ‘ಕಾಫಿ ವಿತ್ ಕರಣ್’ ನೋಡಿದವರಿಗೆಲ್ಲಾ ಅಲ್ಲಿ ಇಬ್ಬರೂ ಮೆಲ್ಲಮೆಲ್ಲಗೆ ಹೇಗೆಲ್ಲಾ ಮಾತಾಡಿದರೆಂಬುದು ಗೊತ್ತೇ ಇದೆ.

 

ಆ ಕಾರ್ಯಕ್ರಮ ಮುಗಿದ ನಂತರ ಪ್ರಿಯಾಂಕಾಗೆ ಮಾಧ್ಯಮಮಿತ್ರರ ಫೋನ್ ಕರೆಗಳು ಹೆಚ್ಚಾಗಿವೆಯಂತೆ. ‘ಮತ್ತೆ ನೀವು, ಶಾಹಿದ್ ಒಂದಾಗಿಬಿಟ್ಟಿರಾ’ ಎಂದು ಕೇಳುವವರೇ ಜಾಸ್ತಿ. ‘ಬೇರೆಯಾಗಿದ್ದರಲ್ಲವೇ ಒಂದಾಗೋದು, ಒಂದಾಗಿದ್ದರಲ್ಲವೇ ಬೇರೆಯಾಗೋದು’ ಎಂಬುದು ಪ್ರಿಯಾಂಕಾ ಕೊಡುವ ಜಾಣ ಉತ್ತರ. ಅದೇ ಶೋನಲ್ಲಿ ದೀಪಿಕಾ ಪಡುಕೋಣೆ, ಸೋನಂ ಕಪೂರ್ ಇಬ್ಬರೂ ರಣಬೀರ್ ಸಿಂಗ್ ವಿರುದ್ಧ ಏರಿದ ದನಿಯಲ್ಲಿ ಮಾತಾಡಿದ್ದರು. ಅದರ ಅರಿವೂ ಪ್ರಿಯಾಂಕಾಗೆ ಇದೆ. ಆದರೆ, ಅವರು ಮಾತ್ರ ಅಪ್ಪಿತಪ್ಪಿಯೂ ಹಾಗೆ ವರ್ತಿಸಲಿಲ್ಲ.ಶಾಹಿದ್ ವಿಷಯ ದೊಡ್ಡದೇನೂ ಅಲ್ಲ. ಕರೀನಾ ಕಪೂರ್ ಮಾಡಿರುವ ಲೇವಡಿ ಅದಕ್ಕಿಂತ ದೊಡ್ಡದು. ತಮ್ಮ ಪ್ರತಿಸ್ಪರ್ಧಿ ನಟಿ ಯಾರು ಎಂಬ ಪ್ರಶ್ನೆಗೆ, ‘ರಾಣಿ ಮುಖರ್ಜಿ’ ಎಂದು ಒಮ್ಮೆ ಕರೀನಾ ಉತ್ತರಿಸಿದರು. ಹಾಗಿದ್ದರೆ ಪ್ರಿಯಾಂಕಾ ಚೋಪ್ರಾ, ಕತ್ರಿನಾ ಕೈಫ್ ಸ್ಪರ್ಧಿಗಳಲ್ಲವೇ ಎಂಬ ಮರುಪ್ರಶ್ನೆ ಎದುರಾಗಿತ್ತು. ‘ನಾನು ನಟಿಯರ ಬಗ್ಗೆ ಮಾತ್ರ ಕೇಳುತ್ತಿದ್ದಿರಿ ಎಂದುಕೊಂಡಿದ್ದೆ’ ಎಂದು ಕರೀನಾ ವ್ಯಂಗ್ಯವಾಡಿದ್ದರು. ಈ ಸಂಗತಿ ಗೊತ್ತಾದ ನಂತರ ಪ್ರಿಯಾಂಕಾ ತುಂಬಾ ನೊಂದುಕೊಂಡಿದ್ದಾರೆ.

 

‘ತನ್ನ ಹುಡುಗಿಯೇ ನಾಯಕಿಯಾಗಬೇಕು ಎಂದು ನಾಯಕನೊಬ್ಬ ಹಟ ಹಿಡಿದ. ನನಗೆ ಕೊಟ್ಟಿದ್ದ ಅವಕಾಶ ಕಿತ್ತುಕೊಂಡು ಅವಳ ಕೈಗಿಟ್ಟರು. ಕಾಲ್‌ಷೀಟ್ ಕೇಳಿ ತನ್ನ ಮನೆಗೇ ಕರೆದು, ನೀವು ತುಂಬಾ ಕಪ್ಪಗಿದ್ದೀರಿ; ಈ ರೋಲ್‌ಗೆ ಸೂಟ್ ಆಗೋಲ್ಲ ಎಂದು ಇನ್ನೊಬ್ಬ ನಿರ್ದೇಶಕ ಅವಮಾನ ಮಾಡಿದ. ಅಷ್ಟೇ ಏಕೆ, ನನ್ನ ಅಣ್ಣ ಒಂದು ದಿನ ಬೆಳಗ್ಗೆ ಎದ್ದವನೇ ನಿನ್ನ ದನಿ ಗಂಡಸಿನ ಹಾಗಿದೆ ಎಂದುಬಿಟ್ಟ. ನಾನು ಏನೆಂಬುದು ನನಗಷ್ಟೇ ಗೊತ್ತು.

 

ಅಭಿನಯದ ಬಗ್ಗೆ ನಾನು ಎಷ್ಟು ಗಂಭೀರವಾಗಿದ್ದೇನೆ ಎಂಬುದನ್ನು ಬೇರೆಯವರು ಅಂದಾಜು ಮಾಡಲಿ ಎಂಬ ಬಯಕೆಯೂ ಈಗ ಬತ್ತಿದೆ. ಆದರೂ ಕರೀನಾ ತನ್ನ ಓರಗೆಯ ನಟಿಯರ ವಿಷಯದಲ್ಲಿ ಅಷ್ಟು ಹಗುರವಾಗಿ ಮಾತನಾಡಬಾರದಿತ್ತು. ನಾನು ಅವಳಂತೆ ಎಂದೂ ಮಾತನಾಡಿಲ್ಲ, ಮಾತನಾಡುವುದೂ ಇಲ್ಲ...’ ಹೀಗೆ ಲಹರಿ ತೇಲಿಬಿಡುವ ಪ್ರಿಯಾಂಕಾ ಚೋಪ್ರಾ, ಸದ್ಯಕ್ಕೆ ತನಗೆ ಯಾರೂ ಬಾಯ್‌ಫ್ರೆಂಡ್ ಇಲ್ಲ ಎಂದು ಸ್ಪಷ್ಟಪಡಿಸಿಯೇ ಮಾತಿಗೆ ಪೂರ್ಣವಿರಾಮ ಹಾಕುವುದು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.