ನಟ ದರ್ಶನ್‌ಗೆ ಜಾಮೀನು

7

ನಟ ದರ್ಶನ್‌ಗೆ ಜಾಮೀನು

Published:
Updated:

ಬೆಂಗಳೂರು: ಪತ್ನಿಯ ಮೇಲೆ ತೀವ್ರವಾಗಿ ಹಲ್ಲೆ ನಡೆಸಿದ ಆರೋಪದ ಮೇಲೆ 28 ದಿನಗಳಿಂದ ನ್ಯಾಯಾಂಗ ಬಂಧನದಲ್ಲಿದ್ದ ಚಿತ್ರನಟ ದರ್ಶನ್ ಅವರಿಗೆ ಹೈಕೋರ್ಟ್ ಶುಕ್ರವಾರ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದ್ದು, ಸಂಜೆಯೇ ಅವರು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ ಬಿಡುಗಡೆ ಹೊಂದಿದ್ದಾರೆ.ಹೈಕೋರ್ಟ್‌ನ ರಜಾಕಾಲದ ವಿಶೇಷ ಪೀಠ, ದರ್ಶನ್ ಜಾಮೀನು ಅರ್ಜಿ ವಿಚಾರಣೆ ನಡೆಸಿತು. ಚಿತ್ರನಟನಿಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಿದ ನ್ಯಾಯಮೂರ್ತಿ ಬಿ.ವಿ.ಪಿಂಟೋ, ಇದೇ 13ರಂದು ಮಧ್ಯಾಹ್ನ ತಮ್ಮ ಕಚೇರಿಗೆ ಖುದ್ದು ಹಾಜರಾಗುವಂತೆ ದರ್ಶನ್ ದಂಪತಿಗೆ ಆದೇಶಿಸಿದ್ದಾರೆ. ದಂಪತಿ ನಡುವೆ ಸೌಹಾರ್ದ ಸಂಬಂಧ ಸೃಷ್ಟಿಸುವ ಪ್ರಯತ್ನದ ಸೂಚನೆಯೂ ಆದೇಶದಲ್ಲಿದೆ.ಪತ್ನಿ ವಿಜಯಲಕ್ಷ್ಮಿ ನೀಡಿದ್ದ ದೂರಿನ ಆಧಾರದ ಮೇಲೆ ದರ್ಶನ್ ಅವರನ್ನು ವಿಜಯನಗರ ಪೊಲೀಸರು ಸೆಪ್ಟೆಂಬರ್ 9ರಂದು ಬಂಧಿಸಿದ್ದರು. ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಮತ್ತು ಸೆಷನ್ಸ್ ನ್ಯಾಯಾಲಯಗಳು ದರ್ಶನ್ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ್ದವು. ಬಳಿಕ ಜಾಮೀನು ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.25 ಸಾವಿರ ರೂಪಾಯಿ ಬಾಂಡ್, ಒಬ್ಬ ವ್ಯಕ್ತಿಯ ಭದ್ರತೆ ಒದಗಿಸಬೇಕೆಂಬ ಷರತ್ತು ಕೂಡ ದರ್ಶನ್‌ಗೆ  ಜಾಮೀನು ಮಂಜೂರು ಮಾಡಿರುವ ಆದೇಶದಲ್ಲಿದೆ. ಅಗತ್ಯವಿದ್ದಲ್ಲಿ ಅ. 13ರ ನೇರ ವಿಚಾರಣೆಯ ವೇಳೆ ಮತ್ತಷ್ಟು ಷರತ್ತುಗಳನ್ನೂ ವಿಧಿಸಲಾಗುವುದು ಎಂದು ನ್ಯಾ. ಪಿಂಟೋ ಆದೇಶದಲ್ಲಿ ಉಲ್ಲೇಖಿಸಿದ್ದಾರೆ.`ಆರೋಪಿ ಈಗಾಗಲೇ ಸುಮಾರು ಒಂದು ತಿಂಗಳ ಕಾಲ ನ್ಯಾಯಾಂಗ ಬಂಧನದಲ್ಲಿದ್ದಾನೆ. ಆತನ ವಿರುದ್ಧ ವಿಜಯಲಕ್ಷ್ಮಿ ಸಲ್ಲಿಸಿರುವ ದೂರಿನಲ್ಲಿ ಜೀವಾವಧಿ ಜೈಲು ಶಿಕ್ಷೆ ಅಥವಾ ಮರಣದಂಡನೆ ವಿಧಿಸಲು ಅವಕಾಶವಿರುವಂತಹ ಆರೋಪಗಳಿಲ್ಲ. ಆದ್ದರಿಂದ ಆರೋಪಿಗೆ ಜಾಮೀನು ಮಂಜೂರು ಮಾಡಲಾಗಿದೆ~ ಎಂದು ನ್ಯಾಯಮೂರ್ತಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.ಶುಕ್ರವಾರ ವಿಚಾರಣೆ ಆರಂಭವಾಗುತ್ತಿದ್ದಂತೆ ಆಕ್ಷೇಪಣೆ ಸಲ್ಲಿಸಿದ ರಾಜ್ಯ ಸರ್ಕಾರದ ಪಬ್ಲಿಕ್ ಪ್ರಾಸಿಕ್ಯೂಟರ್ ಎಚ್.ಎಸ್.ಚಂದ್ರಮೌಳಿ, ಆರೋಪಿ ಚಿತ್ರನಟ ಆಗಿರುವುದರಿಂದ ಪ್ರಭಾವ ಬಳಸಿ ಪತ್ನಿಗೆ ಬೆದರಿಕೆ ಹಾಕುವ ಸಂಭವವಿದೆ. ಹಿಂದೆ ಹಲವು ಬಾರಿ ಪತ್ನಿಯ ಮೇಲೆ ಹಲ್ಲೆ ನಡೆಸಿರುವ ಬಗ್ಗೆ ದೂರಿನಲ್ಲಿ ಮಾಹಿತಿ ಇದೆ. ಈ ಎಲ್ಲ ಅಂಶಗಳನ್ನೂ ಪರಿಗಣಿಸಿ ಜಾಮೀನು ಮಂಜೂರು ಮಾಡಬಾರದು. ಒಂದು ವೇಳೆ ನ್ಯಾಯಾಲಯ ಜಾಮೀನು ನೀಡುವುದೇ ಆದಲ್ಲಿ ಗಂಭೀರ ಸ್ವರೂಪದ ಷರತ್ತುಗಳನ್ನು ವಿಧಿಸಬೇಕು ಎಂದು ವಾದಿಸಿದರು.ದರ್ಶನ್ ಪರ ವಕೀಲ ವೆಂಕಟ ರೆಡ್ಡಿ, ತಮ್ಮ  ಕಕ್ಷಿದಾರರ ವಿರುದ್ಧ ಮಾಡಲಾಗಿರುವ ಆರೋಪಗಳು ಗಂಭೀರ ಸ್ವರೂಪದ್ದಲ್ಲ. ಪ್ರಕರಣದಲ್ಲಿ ಯಾವುದೇ ಪ್ರಾಣಹಾನಿಯೂ ಸಂಭವಿಸಿಲ್ಲ. ಮರಣ ದಂಡನೆ ಅಥವಾ ಜೀವಾವಧಿ ಶಿಕ್ಷೆ ವಿಧಿಸುವಂತಹ ಆರೋಪಗಳು ಅವರ ವಿರುದ್ಧ ಇಲ್ಲ. ಆದ್ದರಿಂದ ದರ್ಶನ್ ಜಾಮೀನು ಪಡೆಯಲು ಅರ್ಹರು ಎಂದು ನ್ಯಾಯಾಲಯಕ್ಕೆ ಕೋರಿದರು.ಕಚೇರಿಗೆ ಹಾಜರಾಗಲು ಸೂಚನೆ: ದರ್ಶನ್ ದಂಪತಿ ನಡುವೆ ಸೌಹಾರ್ದ ಸಂಬಂಧ ಸೃಷ್ಟಿಸುವ ದಿಸೆಯಲ್ಲಿ ಪ್ರಯತ್ನ ನಡೆಯಬೇಕು ಎಂಬ ಇಂಗಿತ ನ್ಯಾಯಾಲಯದಿಂದ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ದರ್ಶನ್ ಮತ್ತು ವಿಜಯಲಕ್ಷ್ಮಿ ಇಬ್ಬರಿಗೂ ಅ. 13ರ ಮಧ್ಯಾಹ್ನ 2.30ಕ್ಕೆ ವಕೀಲರೊಂದಿಗೆ ತಮ್ಮ ಕಚೇರಿಗೆ ಹಾಜರಾಗುವಂತೆ ನ್ಯಾ.ಪಿಂಟೋ ಆದೇಶಿಸಿದ್ದಾರೆ.ದಂಪತಿಯ ಹಾಜರಿ ವೇಳೆ ಉಪಸ್ಥಿತರಿರುವಂತೆ ರಾಜ್ಯ ಪಬ್ಲಿಕ್ ಪ್ರಾಸಿಕ್ಯೂಟರ್ ಚಂದ್ರಮೌಳಿ ಮತ್ತು ದರ್ಶನ್ ಪರ ವಕೀಲ ವೆಂಕಟ ರೆಡ್ಡಿ ಅವರಿಗೂ ನ್ಯಾಯಾಲಯ ಸೂಚಿಸಿದೆ. ನಿಗದಿತ ಸಮಯಕ್ಕೆ ಸರಿಯಾಗಿ ದರ್ಶನ್ ಹಾಜರಾಗುವಂತೆ ಎಚ್ಚರ ವಹಿಸುವಂತೆ ರಾಜ್ಯ ಸರ್ಕಾರಕ್ಕೂ ಆದೇಶಿಸಲಾಗಿದೆ.ಪ್ರಕರಣದ ವಿಚಾರಣೆ ಸಂದರ್ಭದಲ್ಲಿ ದರ್ಶನ ಸಹೋದರ ದಿನಕರ್ ತೂಗುದೀಪ ಸೇರಿದಂತೆ ಹಲವರು ನ್ಯಾಯಾಲಯದಲ್ಲಿ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry