ನಟ ಪ್ರಶಾಂತ್ ವಿರುದ್ಧ ಪತ್ನಿ ದೂರು

7

ನಟ ಪ್ರಶಾಂತ್ ವಿರುದ್ಧ ಪತ್ನಿ ದೂರು

Published:
Updated:

ಬೆಂಗಳೂರು: ಚಿತ್ರ ನಟನಾಗಿರುವ ಪತಿ ಪ್ರಶಾಂತ್ ಬೇರೊಬ್ಬ ಯುವತಿಯೊಂದಿಗೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಾರೆ ಎಂದು ಪ್ರಶಾಂತ್ ಅವರ ಪತ್ನಿ ಶಶಿರೇಖಾ ದೂರಿದ್ದಾರೆ.`ಈ ಹಿನ್ನೆಲೆಯಲ್ಲಿಯೇ ಅವರು ವಿಚ್ಛೇದನ ನೀಡಬೇಕೆಂದು ಪದೇ ಪದೇ ಒತ್ತಾಯಿಸುತ್ತಿದ್ದರು. ಇದರಿಂದ ಬೇಸತ್ತು ಹಲಸೂರುಗೇಟ್ ಮಹಿಳಾ ಪೊಲೀಸ್ ಠಾಣೆಗೆ ಅ.19ರಂದು ದೂರು ನೀಡಿದ್ದೆ. ಈ ಸಂಬಂಧ ನ್ಯಾಯಾಲಯದಲ್ಲಿ ವಿಚಾರಣೆ ಮುಂದುವರೆದಿದೆ.

 

ದೂರು ನೀಡಿದ ದಿನದಿಂದಲೂ ತಲೆಮರೆಸಿಕೊಂಡಿದ್ದ ಪತಿ, ಸೋಮವಾರ ಯುವತಿಯೊಬ್ಬಳ ಜತೆ ಸಂಜಯನಗರ ಅಪಾರ್ಟ್‌ಮೆಂಟ್ ಒಂದರಲ್ಲಿ ಇದ್ದುದನ್ನು ಪತ್ತೆ ಹಚ್ಚಿ ಪೊಲೀಸರಿಗೆ ಮಾಹಿತಿ ನೀಡಿದೆ. ಬಳಿಕ ಪತಿ ಮತ್ತು ಯುವತಿಯನ್ನು ಠಾಣೆಗೆ ಕರೆದೊಯ್ದ ಪೊಲೀಸರು ಕೆಲ ಹೊತ್ತಿನಲ್ಲೇ ಪ್ರಶಾಂತ್ ಅವರನ್ನು ಬಿಟ್ಟು ಕಳುಹಿಸಿದರು~ ಎಂದು ಶಶಿರೇಖಾ `ಪ್ರಜಾವಾಣಿ~ಗೆ ತಿಳಿಸಿದರು.`ನನ್ನ ವಿಚಾರಣೆ ನಡೆಸಿದ ನಂತರ ಪೊಲೀಸರು ಪತಿಯನ್ನು ಒಳಕ್ಕೆ ಕರೆದೊಯ್ದು ಪ್ರತ್ಯೇಕವಾಗಿ ವಿಚಾರಣೆ ನಡೆಸಿದರು. ನಂತರ ಪ್ರಶಾಂತ್ ಠಾಣೆಯಿಂದ ಹೊರಟು ಹೋದರು. ಹಲಸೂರುಗೇಟ್ ಮಹಿಳಾ ಠಾಣೆ ಪೊಲೀಸರು ಸ್ಥಳಕ್ಕೆ ಬರುವವರೆಗಾದರೂ ಸಂಜಯನಗರ ಪೊಲೀಸರು ಪತಿಯನ್ನು ಠಾಣೆಯಲ್ಲಿ ಇರಿಸಿಕೊಳ್ಳಲಿಲ್ಲ. ಪೊಲೀಸರೇ ಪತಿಗೆ ನೆರವು ನೀಡುತ್ತಿದ್ದಾರೆ. ಹೀಗಾದಾಗ ನನಗೆ ನ್ಯಾಯ ಎಲ್ಲಿ ಸಿಗುತ್ತದೆ ಹೇಳಿ~ ಎಂದು ಅವರು ಅಳಲು ತೋಡಿಕೊಂಡರು.ಆದರೆ ಶಶಿರೇಖಾ ಅವರ ಆರೋಪವನ್ನು ನಿರಾಕರಿಸಿರುವ ಸಂಜಯನಗರ ಪೊಲೀಸರು, ಪ್ರಶಾಂತ್ ಠಾಣೆಗೆ ಬಂದೇ ಇಲ್ಲ. ಶಶಿರೇಖಾ ಪತಿಯ ವಿರುದ್ಧ ದೂರು ಸಹ ನೀಡಿಲ್ಲ. ಅಲ್ಲದೇ ಅವರ ಮನೆ ಇರುವ ಸ್ಥಳ ಠಾಣೆಯ ವ್ಯಾಪ್ತಿಗೆ ಬರುವುದಿಲ್ಲ. ಪರಿಸ್ಥಿತಿ ಹೀಗಿರುವಾಗ ಪ್ರಶಾಂತ್ ಅವರನ್ನು ಬಂಧಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದರು.ಆದರ್ಶ ಫಿಲ್ಮ್ ಇನ್‌ಸ್ಟಿಟ್ಯೂಟ್‌ನ ವಿದ್ಯಾರ್ಥಿಗಳಾಗಿದ್ದ ಪ್ರಶಾಂತ್ ಮತ್ತು ಶಶಿರೇಖಾ ಪರಸ್ಪರ ಪ್ರೀತಿಸಿ ಎಂಟು ವರ್ಷಗಳ ಹಿಂದೆ ವಿವಾಹವಾಗಿದ್ದರು. ಆದರೆ ಕೆಲ ತಿಂಗಳುಗಳಿಂದ ಪ್ರಶಾಂತ್ ವಿಚ್ಛೇದನ ಪತ್ರಕ್ಕೆ ಸಹಿ ಹಾಕುವಂತೆ ಪತ್ನಿಗೆ ಪೀಡಿಸುತ್ತಿದ್ದರು. ಈ ಸಂಬಂಧ ದಂಪತಿ ನಡುವೆ ಭಿನ್ನಾಭಿಪ್ರಾಯ ಉಂಟಾಗಿ ಆಗಾಗ್ಗೆ ಜಗಳವಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಶಾಂತ್ `ಒರಟ ಐ ಲವ್ ಯು~ ಸೇರಿದಂತೆ ಹಲವು ಕನ್ನಡ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry