ನಟ ವಿನೋದ್ ಕೊಲೆ: ಆರೋಪಿಗಳ ಖುಲಾಸೆ

7

ನಟ ವಿನೋದ್ ಕೊಲೆ: ಆರೋಪಿಗಳ ಖುಲಾಸೆ

Published:
Updated:

ಬೆಂಗಳೂರು: ರಿಯಲ್ ಎಸ್ಟೇಟ್ ಉದ್ಯಮಿ ಮತ್ತು ನಟ ವಿನೋದ್ ಕುಮಾರ್ ಕೊಲೆ ಪ್ರಕರಣದ ಪ್ರಮುಖ ಆರೋಪಿ ನಿರ್ಮಾಪಕ ಗೋವರ್ಧನ ಮೂರ್ತಿ ಸೇರಿದಂತೆ ಏಳು ಮಂದಿ ಆರೋಪಿಗಳನ್ನು ನಗರದ ಸೆಷನ್ಸ್ ನ್ಯಾಯಾಲಯ ಖುಲಾಸೆಗೊಳಿಸಿ ಬುಧವಾರ ಆದೇಶ ನೀಡಿದೆ.ಗೋವರ್ಧನ ಮೂರ್ತಿ ಒಡೆತನದ, ಬಾಗಲಗುಂಟೆ ಬಳಿಯ `ಎಲ್.ಜಿ. ರೋಸ್ ಹೆರಿಟೇಜ್' ಫಾರ್ಮ್ ಹೌಸ್‌ನಲ್ಲಿ 2008ರ ಅಕ್ಟೋಬರ್ 7ರ ರಾತ್ರಿ ವಿನೋದ್ ಕುಮಾರ್ ಕೊಲೆ ನಡೆದಿತ್ತು. ಜಮೀನು ವಿವಾದದ ಕಾರಣದಿಂದ ಗೋವರ್ಧನ ಮೂರ್ತಿ ಅವರು ರಿವಾಲ್ವರ್‌ನಿಂದ ಗುಂಡು ಹಾರಿಸಿ ವಿನೋದ್ ಅವರನ್ನು ಕೊಲೆ ಮಾಡಿದ್ದಾರೆ ಎಂದು ಸಂಪಿಗೆಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.ಪ್ರಕರಣ ಸಂಬಂಧ ಗೋವರ್ಧನ ಮೂರ್ತಿ ಮತ್ತು ಆತನ ಸಹಚರ ಲಂಗ್ಡಾ ಬಾಬು ಎಂಬಾತನನ್ನು ಪೊಲೀಸರು ಕೇರಳದ ಕೊಚ್ಚಿನ್‌ನಲ್ಲಿ 2008ರ ಅಕ್ಟೋಬರ್ 25ರಂದು ಬಂಧಿಸಿದ್ದರು. ಅಲ್ಲದೇ ಇತರೆ ಆರೋಪಿಗಳಾದ ದಿನೇಶ್, ಗಣಪತಿ, ಶ್ರೀನಿವಾಸಮೂರ್ತಿ, ಪ್ರಭಾಕರ್ ಎಂಬುವರನ್ನು ನಗರದಲ್ಲಿ ಬಂಧಿಸಿದ್ದರು. ಮತ್ತೊಬ್ಬ ಆರೋಪಿ ತ್ರಿಪಾಠಿ ಎಂಬಾತ ತಲೆಮರೆಸಿಕೊಂಡಿದ್ದಾನೆ. ಘಟನೆ ವೇಳೆ ವಿನೋದ್ ಕುಮಾರ್ ಮತ್ತು ಆರೋಪಿಗಳೆಲ್ಲರೂ ಪಾನಮತ್ತರಾಗಿದ್ದರು ಎಂಬ ಅಂಶ ಪೊಲೀಸ್ ತನಿಖೆಯಿಂದ ತಿಳಿದುಬಂದಿತ್ತು.`ಸಾಕ್ಷ್ಯಾಧಾರಗಳ ಕೊರತೆಯ ಕಾರಣದಿಂದ ಆರೋಪಿಗಳನ್ನು ನ್ಯಾಯಾಲಯವು ಖುಲಾಸೆಗೊಳಿಸಿದೆ. ಪೊಲೀಸರು ಆರೋಪಪಟ್ಟಿಯ ಜತೆ ನ್ಯಾಯಾಲಯಕ್ಕೆ ಸಲ್ಲಿಸಿದ್ದ ಆಧಾರಗಳು ಮತ್ತು ಸಾಕ್ಷ್ಯಗಳ ಹೇಳಿಕೆಗಳು ಆರೋಪಕ್ಕೆ ಪೂರಕವಾಗಿಲ್ಲ. ವಿನೋದ್ ಕುಮಾರ್ ಅವರ ಮರಣಪೂರ್ವ ಹೇಳಿಕೆ ಸತ್ಯಕ್ಕೆ ದೂರವಾಗಿದೆ. ಗುಂಡು ತಗುಲಿದ ನಂತರ ವಿನೋದ್ ಅವರ ದೇಹದಿಂದ ಸುಮಾರು ಎರಡು ಲೀಟರ್ ರಕ್ತಸ್ರಾವವಾಗಿದೆ. ಅಂತಹ ಸ್ಥಿತಿಯಲ್ಲಿ ಅವರು ಹೇಳಿಕೆ ನೀಡಿರಲು ಸಾಧ್ಯವಿಲ್ಲ ಎಂದು ವಾದ ಮಂಡಿಸಲಾಯಿತು' ಎಂದು ಗೋವರ್ಧನ್ ಮೂರ್ತಿ ಪರ ವಕೀಲ ಎಚ್.ಸಿ.ಹನುಮಂತರಾಯ ಹೇಳಿದರು.`ಆರೋಪಪಟ್ಟಿಯಲ್ಲಿ 32 ಮಂದಿ ಸಾಕ್ಷಿಗಳ ಹೆಸರು ಸಲ್ಲಿಸಿದ್ದ ಪೊಲೀಸರು ಕೇವಲ ಇಬ್ಬರು ಸಾಕ್ಷಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಆ ಇಬ್ಬರಲ್ಲಿ ಒಬ್ಬರು ವಿನೋದ್ ಅವರ ಸಂಬಂಧಿ, ಮತ್ತೊಬ್ಬರು ಅವರ ಸ್ನೇಹಿತ. ಉಳಿದ ಹತ್ತು ಮಂದಿ ಸಾಕ್ಷಿಗಳು ನ್ಯಾಯಾಲಯಕ್ಕೆ ಹಾಜರಾಗಿಯೇ ಇರಲಿಲ್ಲ. ವಿಧಿವಿಜ್ಞಾನ ಪ್ರಯೋಗಾಲಯ ತಜ್ಞರು ನೀಡಿದ್ದ ವರದಿಯ ಪ್ರಕಾರ ವಿನೋದ್ ದೇಹದಲ್ಲಿ ಪತ್ತೆಯಾಗಿದ್ದ ಗುಂಡಿಗೂ ಮತ್ತು ಗೋವರ್ಧನ ಮೂರ್ತಿ ಅವರ ರಿವಾಲ್ವರ್‌ನಲ್ಲಿನ ಗುಂಡುಗಳಿಗೂ ಹೋಲಿಕೆ ಕಂಡುಬಂದಿರಲಿಲ್ಲ. ಈ ಎಲ್ಲ ಕಾರಣಗಳಿಂದ ನ್ಯಾಯಾಲಯ ಆರೋಪಿಗಳನ್ನು ಖುಲಾಸೆ ಮಾಡಿದೆ' ಎಂದು ತಿಳಿಸಿದರು.ಪ್ರಕರಣ ಸಂಬಂಧ ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದ ಗೋವರ್ಧನ ಮೂರ್ತಿ ಅವರ ಜಾಮೀನು ಅರ್ಜಿಗಳನ್ನು ನ್ಯಾಯಾಲಯಗಳು ವಜಾಗೊಳಿಸಿದ್ದವು.ನಗರದ ಕಮ್ಮನಹಳ್ಳಿ ಬಳಿಯ ರಾಮಸ್ವಾಮಿಪಾಳ್ಯ ನಿವಾಸಿ ನಾರಾಯಣಪ್ಪ ಅವರ ಮಗನಾದ ವಿನೋದ್ 10ನೇ ತರಗತಿವರೆಗೆ ಓದಿದ್ದರು. ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದ ಅವರು `ಗುಲಾಮ' ಚಿತ್ರಕ್ಕೆ ನಟನಾಗಿ ಆಯ್ಕೆಯಾಗಿದ್ದರು. ಗೋವರ್ಧನ ಮೂರ್ತಿ, ಕನ್ನಡದಲ್ಲಿ `ಮಾದೇಶ' ಚಿತ್ರ ನಿರ್ಮಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry