ಭಾನುವಾರ, ಜನವರಿ 19, 2020
29 °C

ನಟ ಶ್ರೀಮುರಳಿ ನಿವಾಸದ ಎದುರು ಆತ್ಮಹತ್ಯೆಗೆ ಯತ್ನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಾಗವಾರ ಸಮೀಪದ ಮಾನ್ಯತಾ ಲೇಔಟ್‌ನಲ್ಲಿರುವ ಚಲನ­ಚಿತ್ರ ನಟ ಶ್ರೀಮುರಳಿ ಅವರ ನಿವಾಸದ ಎದುರು ಸಾಫ್ಟ್‌ವೇರ್‌ ಕಂಪೆನಿಯ ಮಹಿಳಾ ಉದ್ಯೋಗಿ ಪವಿತ್ರಾ (28) ಎಂಬುವರು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಗುರುವಾರ ನಡೆದಿದೆ.ಸುಂಕದಕಟ್ಟೆ ನಿವಾಸಿ ಪವಿತ್ರಾ, ಮಾನ್ಯತಾ ಟೆಕ್ ಪಾರ್ಕ್‌ನಲ್ಲಿರುವ ಐಬಿಎಂ ಸಾಫ್ಟ್‌ವೇರ್‌ ಕಂಪೆನಿಯ ಉದ್ಯೋಗಿಯಾಗಿದ್ದಾರೆ.ಕಚೇರಿಯಲ್ಲಿ ನಿದ್ರೆ ಮಾತ್ರೆ ಸೇವಿಸಿದ್ದ ಅವರು ಶ್ರೀಮುರಳಿ ಅವರ ಮನೆಯ ಎದುರು ಬಂದು ತಾನು ಶ್ರೀಮುರಳಿ ಅವರನ್ನು ಪ್ರೀತಿಸುತ್ತಿರುವುದಾಗಿ ಕೂಗಾಡಿ, ನಂತರ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ ಎಂದು ಪೊಲೀಸರು ತಿಳಿಸಿದರು.ಕೂಡಲೇ ಸ್ಥಳೀಯರು ಅವರನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಿ­ದ್ದಾರೆ. ಚಿಕಿತ್ಸೆ ಪಡೆದು ಅವರು ಮನೆಗೆ ಮರಳಿದ್ದಾರೆ. ಆತ್ಮಹತ್ಯೆ ಯತ್ನಕ್ಕೆ ಕಾರಣವೇನು ಎಂಬ ಬಗ್ಗೆ ಅವರು ಯಾವುದೇ ಹೇಳಿಕೆ ನೀಡಿಲ್ಲ ಎಂದು  ಸಂಪಿಗೆಹಳ್ಳಿ ಪೊಲೀಸರು ಹೇಳಿದರು.ಈ ಬಗ್ಗೆ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಶ್ರೀಮುರಳಿ, ‘ಆಕೆ ಯಾರು ಎಂಬುದು ನನಗೆ ಗೊತ್ತಿಲ್ಲ. ಪರಿಚಯವೂ ನನಗಿಲ್ಲ. ತಾನು ಆತ್ಮ­ಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಬುಧ­ವಾರದಿಂದ ಎಸ್‌ಎಂಎಸ್‌ ಕಳಿಸುತ್ತಿ­ದ್ದರು. ಆದರೆ, ನಾನು ಇದನ್ನು ಗಂಭೀರ­ವಾಗಿ ಪರಿಗಣಿಸಿರಲಿಲ್ಲ. ಇಲ್ಲಿಗೆ ಬಂದು ಆತ್ಮಹತ್ಯೆಗೆ ಯತ್ನಿಸಬಹುದು ಎಂಬ ನಿರೀಕ್ಷೆಯೂ ಇರಲಿಲ್ಲ’ ಎಂದರು.

ಪ್ರತಿಕ್ರಿಯಿಸಿ (+)