ಭಾನುವಾರ, ಡಿಸೆಂಬರ್ 8, 2019
25 °C

ನಡುಗಡ್ಡೆಯಲ್ಲಿ ರಾಜಗೊಂಡರು

Published:
Updated:
ನಡುಗಡ್ಡೆಯಲ್ಲಿ ರಾಜಗೊಂಡರು

ರಾಜಗೊಂಡರು ಎನ್ನುವ ಸಮುದಾಯವೊಂದರ ಹೆಸರು ಕೇಳಿದ್ದೀರಾ? ಇವರ ಕೀರ್ತಿ ಸಣ್ಣದೇನೂ ಅಲ್ಲ. ರಾಜ ಮಹಾರಾಜರುಗಳ ಕಾಲದಲ್ಲಿ, ಅವರುಗಳ ನಾಡಿ ಹಿಡಿದು ಚಿಕಿತ್ಸೆ ನೀಡುತ್ತಿದ್ದ ಖ್ಯಾತಿ ಇವರದು. ಆದರೆ, ಕಾಲಚಕ್ರದ ಉರುಳಿನಲ್ಲಿ ಇವರ ನಾಡಿಮಿಡಿತವೇ ಲೆಕ್ಕತಪ್ಪಿದಂತಿದೆ. ಈ ನಾಟಿವೈದ್ಯರ ಬದುಕೀಗ ದಿಕ್ಕುತಪ್ಪಿದ ಹಡಗು.ರಾಜಗೊಂಡರದು ಮೂಲತಃ ಅಲೆಮಾರಿ ಸಮುದಾಯ. ಈ ಅಲೆಮಾರಿ ಸಮುದಾಯ ಇಂದಿಗೂ ಜೀವನೋಪಾಯಕ್ಕಾಗಿ ಅಲೆದಾಡುತ್ತಲೇ ಇದೆ. ಅವರದೇ ಆದ ಭೂಮಿ, ಊರು ಎಂಬುದಿಲ್ಲ. ಭಾರತದ ಬುಡಕಟ್ಟುಗಳಲ್ಲಿ ಅತ್ಯಧಿಕ ಸಂಖ್ಯೆಯಲ್ಲಿರುವವರು ಈ ಗೊಂಡರೇ. ವಿಂಧ್ಯ ಪರ್ವತ ಶ್ರೇಣಿಯಿಂದ ಗೋದಾವರಿ ಜಲಾನಯನ ಭೂಪ್ರದೇಶದವರೆಗೆ, ಉತ್ತರ ಪ್ರದೇಶ ಮತ್ತು ಬಿಹಾರದಿಂದ ಆಂಧ್ರಪ್ರದೇಶ, ಕರ್ನಾಟಕದವರೆಗೂ ಮತ್ತು ಮಹಾರಾಷ್ಟ್ರದಿಂದ ಓಡಿಶಾದವರೆಗೂ ಈ ಗೊಂಡರು ಹರಡಿಕೊಂಡಿದ್ದಾರೆ. ದ್ರಾವಿಡ ಮೂಲದ ‘ಗೊಂಡಿ’ ಇವರ ಮಾತೃಭಾಷೆ. ಈ ಗೊಂಡ ಸಮುದಾಯಕ್ಕೆ ಸೇರಿದ, ಈ ಬಳಗದ ಅತ್ಯಂತ ಅಲ್ಪಸಂಖ್ಯಾತರು ರಾಜಗೊಂಡರು. ಕರ್ನಾಟಕದಲ್ಲಿ 326 ರಾಜಗೊಂಡ ಕುಟುಂಬಗಳಿದ್ದು, ಒಟ್ಟು 1269 ಜನರಿದ್ದಾರೆ (ಮಾಹಿತಿ: ಅಲೆಮಾರಿ ಸಮುದಾಯಗಳ ಅಧ್ಯಯನ ಮಾಲೆ – ರಾಜಗೊಂಡ ; - ಡಾ. ಕೆ.ಎಂ ಮೇತ್ರಿ, ಸುದರ್ಶನ ಸೆಡ್ಮಾಕಿ).ಅಲೆಮಾರಿಗಳಾಗಿ ವಲಸೆ ಬಂದವರಲ್ಲಿ ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನ ಬೆಳ್ಳೋಡಿಯಲ್ಲಿ ರಾಜಗೊಂಡರ 112 ಕುಟುಂಬಗಳಿಗೆ ಶಾಶ್ವತ ನೆಲೆ ಕಲ್ಪಿಸಲಾಗಿದೆ. 1999ರಲ್ಲಿ ಸರ್ಕಾರ ಆಶ್ರಯ ಮನೆ ನಿರ್ಮಿಸಿಕೊಟ್ಟಿದ್ದು, ಈ ಪ್ರದೇಶ ರಾಜಗೊಂಡರ ಕಾಲೊನಿಯಾಗಿ ರೂಪ ತಾಳಿದೆ. ಅಂಗನವಾಡಿ ಕೇಂದ್ರ, ಸರ್ಕಾರಿ ಪ್ರಾಥಮಿಕ ಶಾಲೆ, ಸಮುದಾಯ ಭವನ, ಕಿರು ನೀರು ಸರಬರಾಜು, ಬೀದಿ ದೀಪ ಸೌಕರ್ಯ ಒದಗಿಸಲಾಗಿದೆ. ಇಲ್ಲಿನ ಪ್ರತಿಯೊಬ್ಬರಿಗೂ ಆಯುರ್ವೇದದ ಜ್ಞಾನವಿದ್ದು, ಅವರು ವನಸ್ಪತಿಗಳ ಮಾರಾಟದಿಂದ ಜೀವನ ಸಾಗಿಸುತ್ತಿದ್ದಾರೆ.ಘೈನಿ ಎನ್ನುವ ನಂದಾದೀಪ

ಎರಡು ವರ್ಷಗಳ ಹಿಂದೆ ಕೊನೆಯುಸಿರೆಳೆದ ಘೈನಿ ಲಾಲ್ ಸಿಂಗ್ ಜಾಮಕರ್ ಬೆಳ್ಳೋಡಿ ರಾಜಗೊಂಡ ಅಲೆಮಾರಿ ಸಮುದಾಯದ ದಿವ್ಯ ಚೇತನ. ಮಕ್ಕಳು, ಮೊಮ್ಮಕ್ಕಳು, ಮರಿಮಕ್ಕಳು, ಕೊಮ್ಮಕ್ಕಳನ್ನು ಕಂಡು 126 ವರ್ಷ ಬದುಕಿದ್ದ ಘೈನಿ ಲಾಲ್ ಸಿಂಗ್, ಯಾರ ನೆರವು ಇಲ್ಲದೆಯೂ ತಮ್ಮ ದಿನನಿತ್ಯದ ಕೆಲಸ ಕಾರ್ಯಗಳನ್ನು ಮಾಡಿಕೊಳ್ಳುತ್ತಿದ್ದರು. ನಾಟಿ ಔಷಧಿ ಬಗ್ಗೆ ತನ್ನ ಸಮುದಾಯದ ವೃತಿನಿರತರಿಗೆ ಮಾರ್ಗದರ್ಶಿಯಾಗಿದ್ದರು.

ಘೈನಿ ಮಹಾರಾಷ್ಟ್ರದ ನಾಸಿಕ್ ಕಡೆಯಿಂದ ಕರ್ನಾಟಕಕ್ಕೆ ವಲಸೆ ಬಂದು ಗುಲ್ಬರ್ಗ, ರಾಯಚೂರು, ಹಂಪಿ ಮುಂತಾದ ಕಡೆ ವ್ಯಾಪಾರ ನಡೆಸುತ್ತಿದ್ದರು. 35 ವರ್ಷಗಳ ಹಿಂದೆ ಅವರು ಹರಿಹರಕ್ಕೆ ಬಂದು ನೆಲೆಸಿದರು. ಮಹಾರಾಷ್ಟ್ರ, ಮಧ್ಯಪ್ರದೇಶ, ಆಂಧ್ರಪ್ರದೇಶ, ತಮಿಳುನಾಡು, ಕರ್ನಾಟಕ ಮತ್ತು ಗೋವಾ ರಾಜ್ಯಗಳಲ್ಲಿಯ ಗುಡ್ಡಗಾಡು ಪ್ರದೇಶಗಳಲ್ಲಿ ಸುತ್ತಾಡಿ ಅಮೂಲ್ಯವಾದ ವನಸ್ಪತಿಗಳನ್ನು ಸಂಗ್ರಹಿಸಿ ಅವರು ಚಿಕಿತ್ಸೆ ನೀಡುತ್ತಿದ್ದರು. ಅವರು ಒಮ್ಮೆಯೂ ಕಾಯಿಲೆಯಿಂದ ಬಳಲಿದವರೇ ಅಲ್ಲ ಎನ್ನುವುದು ವಿಶೇಷ.‘ದಾವಣಗೆರೆ, ಶಿವಮೊಗ್ಗ ಸುತ್ತಲಿನ ಜನರ ಪ್ರೀತಿಯ ‘ಘೈನಿ ಅಜ್ಜಿ’ ಆಗಿದ್ದ ಅವರು ವೈದ್ಯಲೋಕಕ್ಕೆ ಸವಾಲು ಆಗಿದ್ದ ಅನೇಕ ಕಾಯಿಲೆಗಳನ್ನು ನಾಟಿ ಔಷಧಿ ಮೂಲಕ ಗುಣಪಡಿಸುತ್ತಿದ್ದರು. ನಾಡಿಮಿಡಿತದಿಂದಲೇ ಕಾಯಿಲೆಯ ಸ್ವರೂಪ ಹೇಳುತ್ತಿದ್ದ ಅವರು ಬದುಕಿದ್ದಾಗಲೇ ದಂತೆಕಥೆಯಾಗಿದ್ದರು’ ಎನ್ನುತ್ತಾರೆ, ಅವರ ಮೊಮ್ಮಗ ವಸಂತ್ ಜಾಮಕರ್. ಅಂದಹಾಗೆ, ನಾಟಿ ವೈದ್ಯದ ಈ ಮಹಾನ್ ಚೇತನಕ್ಕೆ ಕರ್ನಾಟಕ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿ (2007) ನೀಡಿ ಗೌರವಿಸಿದೆ. ಘೈನಿ ಅವರ ಮಗಳಾದ ಮಲಾನ್ ಕೂಡ ಶತಮಾನ ಕಂಡ ಮಹಿಳೆ. ಇಂದಿಗೂ ಯಾರ ಸಹಾಯವಿಲ್ಲದೆಯೇ ತಮ್ಮ ದಿನನಿತ್ಯದ ಕೆಲಸ ಕಾರ್ಯಗಳಲ್ಲಿ ಅವರು ಸಕ್ರಿಯರು.ಬೆಳ್ಳೋಡಿ ಕಾಲೊನಿಯ 89 ವರ್ಷದ ದಶರಥ್ ಇಂದಿಗೂ ದೂರದ ಆಂಧ್ರಪ್ರದೇಶದ ಶ್ರೀಶೈಲಂ, ರಾಜ್ಯದ ಚಿಕ್ಕಮಗಳೂರು, ದಾಂಡೇಲಿ, ಶಿರಸಿ, ಕಾಡುಗಳಲ್ಲಿ ಸುತ್ತಾಡಿ ವನಸ್ಪತಿಗಳನ್ನು ಸಂಗ್ರಹಿಸಿ ಬರುತ್ತಾರೆ. ಸಂತಾನಹೀನತೆ, ನರದೌರ್ಬಲ್ಯಕ್ಕೆ ವಿಶೇಷ ಚಿಕಿತ್ಸೆ ನೀಡುವ ಅವರು ಈ ಸಮುದಾಯದ ಮತ್ತೊಬ್ಬ ಅಪರೂಪದ ವ್ಯಕ್ತಿ.ಸ್ಥಿತ್ಯಂತರಗಳ ಬದುಕು

‘ಜಡಿಬೂಟಿ’ ( ಔಷಧಿ ಗಿಡಗಳ ನಾರುಬೇರು) ಮಾರಾಟ ಮಾಡುವುದಿಲ್ಲವೇ? ಎಂದು ಯುವಕನೊಬ್ಬನನ್ನು ಕೇಳಿದಾಗ ಆತ, ‘ಹೊಟ್ಟೆಪಾಡಿಗಾಗಿ ಸುಮ್ಮನೆ ಇರೋದಕ್ಕೆ ಆಗೋದಿಲ್ಲ. ನಾಟಿ ವೈದ್ಯಕ್ಕೆ ಈಗ ಬೇಡಿಕೆಯಿಲ್ಲ. ತಕ್ಷಣವೇ ಆರೋಗ್ಯದಲ್ಲಿ ಚೇತರಿಕೆ ಬಯಸುವ ಇಂದಿನ ತಲೆಮಾರಿನ ಜನರಿಗೆ ವನಸ್ಪತಿ ಬಳಕೆ ಬಗ್ಗೆ ನಂಬಿಕೆಯಿಲ್ಲ. ಹಾಗಾಗಿ ಬೇರೆ ಕಸುಬು ಮಾಡಿಕೊಂಡು ಹೊಟ್ಟೆ ಹೊರೆಯುತ್ತಿದ್ದೇನೆ’ ಎಂದು ಹೇಳಿದ. ‘ನನ್ನ ಕೇತಿ ಕಾಂ ಕಿಂತೋನ್’ (ನಾನು ವ್ಯವಸಾಯ ಮಾಡುತ್ತೇನೆ, ಭೂಮಿ ಕೊಡಿಸುವಿರಾ) ಎಂದೂ ಪ್ರಶ್ನಿಸಿದ.ಕಾಲೊನಿಯ ಕೆಲ ಯುವಕರು ನಾಲ್ಕಾರು ವರ್ಷದಿಂದ ಕಿವಿ ಸ್ವಚ್ಛಗೊಳಿಸುವ ಕಾರ್ಯ ಮಾಡುತ್ತಿದ್ದಾರೆ. ಆದರೆ, ಪ್ರತಿದಿನ ಗಿರಾಕಿಗಳು ಸಿಗುವರೆಂಬ ನಂಬಿಕೆ ಅವರಿಗಿಲ್ಲ. ‘ದೇಹ ದಂಡನೆ ಕೆಲಸ ಗೊತ್ತಿಲ್ಲ. ಬೇರೆಯವರ ಹತ್ತಿರ ನೌಕರಿ ಅಥವಾ ಕೂಲಿಯಾಳಾಗಿ ಕೆಲಸ ಮಾಡಲು ನಮ್ಮ ಜನರಿಗೆ ಇಷ್ಟ ಇಲ್ಲ’ ಎಂದು ಯುವಕನೊಬ್ಬ ಹೇಳಿದ.ರಾಜಗೊಂಡ ಸಮುದಾಯದ ಹಲವು ಸ್ತ್ರೀಯರು, ಗಿಡಮೂಲಿಕೆಗಳೊಂದಿಗೆ ಸಾಂಬಾರ ದಿನಸಿಗಳನ್ನು ರಸ್ತೆ ಬದಿಗಳಲ್ಲಿ ಅಥವಾ ತಲೆ ಮೇಲೆ ಹೊತ್ತುಕೊಂಡು ಹೋಗಿ ಮಾರಾಟ ಮಾಡುತ್ತಿದ್ದಾರೆ. ಇತ್ತೀಚೆಗೆ ಕೆಲ ಯುವತಿಯರು ನಗರದಲ್ಲಿ ಗಾರೆ ಕೆಲಸಕ್ಕೆ ಅನಿವಾರ್ಯವಾಗಿ ಸೇರಿಕೊಂಡಿದ್ದಾರೆ.

ರಾಜಗೊಂಡ ಸಮುದಾಯ ಯುವಕರು ಆಧುನಿಕತೆಗೆ ಹೊಂದಿಕೊಳ್ಳುವ ಉದ್ದೇಶದಿಂದ ತಮ್ಮ ಮೂಲ ಕಸುಬಿನಿಂದ ದೂರವಾಗುತ್ತಿದ್ದಾರೆ. ಮನೆ ಮತ್ತು ವಾಹನಗಳಿಗೆ ಬಳಸುವ ಆಲಂಕಾರಿಕ ವಸ್ತುಗಳ ತಯಾರಿ ಮತ್ತು ಮಾರಾಟದತ್ತ ಅವರು ಆಸಕ್ತಿ ವಹಿಸುತ್ತಿದ್ದಾರೆ. ಬೀದರ್ ಮತ್ತು ಬೆಂಗಳೂರಿನ ಮಾರುತಿ ಸೇವಾನಗರದಲ್ಲಿ ವಾಸವಾಗಿರುವ ರಾಜಗೊಂಡರ ಪರಿಸ್ಥಿತಿಯೂ ಭಿನ್ನವಾಗಿಲ್ಲ. ಸಾಮಾಜಿಕ ವ್ಯವಸ್ಥೆಯಲ್ಲಿ ಸ್ಥಾನ ಸಿಗದಿದ್ದಾಗ ಒಂದು ಸಮುದಾಯವೇ ಗೊಂದಲ ಮತ್ತು ಅಸಹಾಯಕತೆಗೆ ಒಳಗಾಗುತ್ತದೆ. ಇಂಥ ಸ್ಥಿತಿ ರಾಜಗೊಂಡರದ್ದು ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯ ಬುಡಕಟ್ಟು ಅಧ್ಯಯನ ವಿಭಾಗದ ಪ್ರಾಧ್ಯಾಪಕ ಡಾ. ಮೇತ್ರಿ ವಿಶ್ಲೇಷಿಸುತ್ತಾರೆ.ಅಕ್ಷರ ಕಲಿಕೆಗಾಗಿ ಹೋರಾಟ

ಕರ್ನಾಟಕದ ರಾಜಗೊಂಡರಲ್ಲಿ ಕೇವಲ 12.5ರಷ್ಟು ಸಾಕ್ಷರತೆ ಪ್ರಮಾಣ ಇದೆ. ಅವರು ಓದುವ ಶಾಲೆಗಳಲ್ಲಿ ಗೊಂಡಿ ಭಾಷೆಯ ಅರಿವಿರುವ ಶಿಕ್ಷಕರ ಕೊರತೆಯಿದೆ. ಮಾತೃಭಾಷೆ ಗೊಂಡಿ ಇರುವುದರಿಂದ ಮಕ್ಕಳಿಗೆ ಕನ್ನಡ ಭಾಷೆ ಸರಿಯಾಗಿ ಅರ್ಥವಾಗದು. ಅನ್ಯ ಸಮುದಾಯಗಳಿಂದ ಬರುವ ಶಿಕ್ಷಕರ ಸಾಂಸ್ಕೃತಿಕ ಹಿನ್ನೆಲೆ ಭಿನ್ನವಾಗಿರುವುದರಿಂದ ಸಾರ್ವಜನಿಕ ಶಾಲೆಗಳಿಗೆ ಇಲ್ಲಿಯ ಮಕ್ಕಳು ಒಗ್ಗುತ್ತಿಲ್ಲ. ಅವರ ಕೇಂದ್ರಿತ ಶಿಕ್ಷಣ ನೀಡಿದಾಗ ಮಾತ್ರ ಸಾಕ್ಷರತೆಯಲ್ಲಿ ಅಭಿವೃದ್ಧಿ ಸಾಧಿಸಲು ಸಾಧ್ಯ ಎನ್ನುತ್ತಾರೆ ಡಾ. ಕೆ.ಎಂ. ಮೇತ್ರಿ. ಈ ಸಮುದಾಯದ ಬಗ್ಗೆ ಸಮಗ್ರವಾಗಿ ಸಂಶೋಧನೆ ನಡೆಸಿರುವ ಅವರು, ರಾಜಗೊಂಡರ ನಡುವೆ ಸಾಂಸ್ಕೃತಿಕ ಸಂಘರ್ಷ ಹೆಚ್ಚುತ್ತಿದ್ದು ಈ ಇಡೀ ಸಮುದಾಯ ಆತಂಕದಲ್ಲಿ ಇದೆ ಎನ್ನುತ್ತಾರೆ.ಸರ್ಕಾರ ನಿರ್ದಿಷ್ಟ ಪ್ರದೇಶಗಳನ್ನು ಆಯುರ್ವೇದ ವಲಯ ಎಂದು ಘೋಷಿಸಿ ವನಸ್ಪತಿಗಳನ್ನು ಬೆಳೆಯಲು ಅವಕಾಶ ಮಾಡಿಕೊಡಬೇಕು. ಆಯುರ್ವೇದ ಔಷಧಿ ಮಾರಾಟ ಮಾಡಲು ಸ್ಥಳೀಯವಾಗಿ ಮಾರುಕಟ್ಟೆ ನಿರ್ಮಾಣ ಮಾಡಿಕೊಡಬೇಕು. ಈ ಸಮುದಾಯದ ಆಯುರ್ವೇದ ಜ್ಞಾನಿಗಳ ಮಾರ್ಗದರ್ಶನ ಪಡೆಯಬೇಕು. ಅರಣ್ಯ ರಕ್ಷಣೆಗೆ ಈ ಸಮುದಾಯವನ್ನು ಬಳಸಿಕೊಳ್ಳಬೇಕು– ಇವುಗಳೆಲ್ಲ ಸಾಧ್ಯವಾದಲ್ಲಿ ರಾಜಗೊಂಡರು ಸ್ವಲ್ಪವಾದರೂ ಮುಖ್ಯವಾಹಿನಿಗೆ ಬರಲು ಸಾಧ್ಯ ಎನ್ನುತ್ತಾರೆ ಮೇತ್ರಿ.

ಪ್ರತಿಕ್ರಿಯಿಸಿ (+)