ಬುಧವಾರ, ಮಾರ್ಚ್ 29, 2023
30 °C

ನಡುಗುತ್ತಿದೆ ಕೃಷ್ಣಾ ನದಿ ಸೇತುವೆ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಡುಗುತ್ತಿದೆ ಕೃಷ್ಣಾ ನದಿ ಸೇತುವೆ!

ವಿಜಾಪುರ:  ಆಲಮಟ್ಟಿ ಎಡದಂಡೆ ಕಾಲುವೆ(ನಾಲೆ)ಯಲ್ಲಿ ಬಸ್ ಉರುಳಿ ಬಿದ್ದು 58 ಜನ ಬಲಿಯಾಗಿದ್ದು, ಸನಿಹದಲ್ಲೇ ಇರುವ ಸೇತುವೆಯಿಂದ ಟೆಂಪೊ ಕೃಷ್ಣಾ ನದಿಗೆ ಬಿದ್ದು 29 ಜನ ಪ್ರಾಣ ಬಿಟ್ಟಿದ್ದು ಈ ಜಿಲ್ಲೆಯ ಘೋರ ದುರಂತಗಳು. ರಾಜ್ಯದಲ್ಲಿ ಎಲ್ಲಿಯೇ ಅಪಘಾತ ಸಂಭವಿಸಿದರೂ ಈ ಕರಾಳ ಘಟನೆಗಳನ್ನು ನೆನಪಿಸಿಕೊಂಡು ಇಲ್ಲಿಯ ಜನ ಇನ್ನೂ ಬೆಚ್ಚಿಬೀಳುತ್ತಾರೆ.



ನಾಲೆಗೆ ಬಸ್ ಉರುಳಿ 58 ಜನ ಮೃತಪಟ್ಟಿದ್ದು ಈ ರಾಜ್ಯದ ಇತಿಹಾಸದಲ್ಲಿಯೇ ಕಂಡರಿಯದ ಘೋರ ದುರಂತ.

ಅಪಘಾತ ಸ್ಥಳಕ್ಕೆ ಆಗಿನ ಮುಖ್ಯಮಂತ್ರಿಯೇ ಧಾವಿಸಿ ಬಂದಿದ್ದರು. ನಾಲೆಯ ಪಕ್ಕ ಅಗತ್ಯ ಸುರಕ್ಷಾ ಕ್ರಮ ಕೈಗೊಳ್ಳುವ ಭರವಸೆಯನ್ನೂ ನೀಡಿದ್ದರು. ಆದಾದ ಕೆಲ ತಿಂಗಳಲ್ಲಿಯೇ ರಾಷ್ಟ್ರೀಯ ಹೆದ್ದಾರಿ-13ರಲ್ಲಿ ಸೇತುವೆಯಿಂದ ಕೃಷ್ಣಾ ನದಿಗೆ ಟೆಂಪೊ ಬಿದ್ದು 29 ಜನರು ಜಲಸಮಾಧಿಯಾಗಿದ್ದರು.



ಇವೆರಡೂ ಘಟನೆ ಸಂಭವಿಸಿ ಈಗ ಆರು ವರ್ಷಗಳೇ ಗತಿಸಿವೆ. ಆದರೆ, ಈ ಸ್ಥಳಗಳು ಮಾತ್ರ ಇನ್ನಷ್ಟು ಜನರನ್ನು ಬಲಿ ಪಡೆಯಲು ಕಾಯ್ದು ಕುಳಿತಂತಿವೆ.

ಹುಬ್ಬಳ್ಳಿಯಿಂದ ಚಿತ್ತಾಪೂರಕ್ಕೆ 65 ಜನ ಪ್ರಯಾಣಿಕರನ್ನು ಹೊತ್ತು ಹೊರಟಿದ್ದ ಬಸ್, 2005ರ ಜನವರಿ 10ರಂದು ಎಳ್ಳ ಅಮಾವಾಸ್ಯೆಯ ರಾತ್ರಿ ಆಲಮಟ್ಟಿ ಎಡದಂಡೆ ನಾಲೆಗೆ ನುಗ್ಗಿತ್ತು. ಚಾಲಕನ ನಿರ್ಲಕ್ಷ್ಯ, ರಸ್ತೆಯ ಅವೈಜ್ಞಾನಿಕ ನಿರ್ಮಾಣ, ಕಾಲುವೆಯ ಪಕ್ಕದಲ್ಲಿ ತಡೆಗೋಡೆ, ಸೂಚನಾ ಫಲಕ, ವೇಗ ನಿಯಂತ್ರಕ ಇಲ್ಲದೆ ಇರುವ ಕಾರಣದಿಂದಾಗಿ 58 ಜನ ಅಮಾಯಕರು ಪ್ರಾಣ ಕಳೆದುಕೊಂಡಿದ್ದರು. ಸರ್ಕಾರ ಪರಿಹಾರ ಕೊಟ್ಟರೂ, ಸಾಂತ್ವನದ ಮಹಾಪೂರ ಹರಿದರೂ ಅವರ ಪ್ರಾಣ ಮರಳಿ ಬರಲಿಲ್ಲ; ಸಂಬಂಧಿಕರ ಕಣ್ಣೀರ ಕೋಡಿ ನಿಲ್ಲಲಿಲ್ಲ.



ಈ ದುರ್ಘಟನೆಯ ನಂತರ ಎಚ್ಚೆತ್ತುಕೊಂಡ ಸರ್ಕಾರ ಕಾಟಾಚಾರಕ್ಕೆ ಎಂಬಂತೆ ಅಲ್ಲಿ ಸ್ವಲ್ಪ ಬದಲಿ ರಸ್ತೆ ಹಾಗೂ ಆ ಕಾಲುವೆಗೆ ತಡೆಗೋಡೆ ನಿರ್ಮಿಸಿತು. ‘ಈ ತಡೆಗೋಡೆಗೆ ಯಾವುದೇ ವಾಹನ ತಡೆಯುವ ಸಾಮರ್ಥ್ಯವಿಲ್ಲ. ನಿರ್ಮಿಸಿದ ರಸ್ತೆಯೂ ಹದಗೆಟ್ಟಿದೆ. ಕಾಟಾಚಾರಕ್ಕೆ ಎಂಬಂತೆ ನಿರ್ಮಿಸಿರುವ ಪಕ್ಕದ ರಸ್ತೆಯ ತಿರುವಿನಲ್ಲಿ ಯಾವುದೇ ಸೂಚನಾ ಫಲಕ, ವೇಗ ನಿಯಂತ್ರಕ ಇಲ್ಲ. ಎಷ್ಟು ಬಾರಿ ಗಮನ ಸೆಳೆದರೂ ಅಧಿಕಾರಿಗಳು ಕ್ಯಾರೆ ಎನ್ನುತ್ತಿಲ್ಲ’ ಎಂದು ಅಲ್ಲಿಯ ಜನ ದೂರುತ್ತಿದ್ದಾರೆ.



ರಾಷ್ಟ್ರೀಯ ಹೆದ್ದಾರಿ-13ಕ್ಕೆ ಆಲಮಟ್ಟಿ ಜಲಾಶಯ ಮುಂಭಾಗದಲ್ಲಿ ಕೃಷ್ಣಾ ನದಿಗೆ 1980 ರಲ್ಲಿ ನಿರ್ಮಿಸಿರುವ ಸೇತುವೆ ಸಂಪೂರ್ಣ ಶಿಥಿಲಗೊಂಡಿದೆ. ಸೇತುವೆಯ ಕಾಂಕ್ರಿಟ್ ಅಲ್ಲಲ್ಲಿ ಕಿತ್ತುಹೋಗಿದ್ದು, ಸ್ಟೀಲ್ ರಾಡ್‌ಗಳು ಅಸ್ಥಿಪಂಜರದಂತೆ ಗೋಚರಿಸುತ್ತಿವೆ. ಸುರಕ್ಷಾ ಗೋಡೆ ಸಂಪೂರ್ಣ ನಿಶ್ಯಕ್ತಗೊಂಡಿದ್ದು, ಅಲ್ಲಲ್ಲಿ ಬಿದ್ದು ಹೋಗಿದೆ. ಭಾರಿ ತೂಕದ ವಾಹನ ಹಾಯ್ದು ಹೋದರೆ ಸೇತುವೆ ನಡುಗಿ ‘ತೂಗು ಸೇತುವೆ’ಯ ಅನುಭವ ನೀಡುತ್ತದೆ.



ಹಲವಾರು ಬಾರಿ ಲಾರಿ, ಚಕ್ಕಡಿ, ಟ್ರ್ಯಾಕ್ಟರ್, ಸೈಕಲ್-ಬೈಕ್ ಸವಾರರು ಸೇತುವೆಯಿಂದ ಕೆಳಗೆ ಬಿದ್ದು ಅಮೂಲ್ಯ ಜೀವಗಳು ‘ಶಿವನ ಪಾದ’ ಸೇರಿವೆ.

ಟೆಂಪೊ ಉರುಳಿ ಕೊಪ್ಪಳ ಜಿಲ್ಲೆಯ ಬಹಾದ್ದೂರಬಂಡಿ ಗ್ರಾಮದ 29 ಜನರು ‘ಕೃಷ್ಣಾರ್ಪಣೆ’ಗೊಂಡಿದ್ದು ಇದೇ ಸೇತುವೆಯಲ್ಲಿ. 2006ರ ಆಗಸ್ಟ್ 29ರಂದು ಸಂಭವಿಸಿದ್ದ ಈ ದುರ್ಘಟನೆಯಲ್ಲಿ ಮದುವೆಯ ನಂತರ ಬಾಸಿಂಗ ಬಿಡಲು ಬಂದಿದ್ದ ನವ ದಂಪತಿ ಸೇರಿದಂತೆ ಎಲ್ಲರೂ ಮೃತಪಟ್ಟಿದ್ದರು.



‘ಶಿಥಿಲಗೊಂಡ ಸೇತುವೆಯೇ ಈ ದುರಂತಕ್ಕೆ ಕಾರಣವಾಗಿತ್ತು. ಸೇತುವೆಯಲ್ಲಿ ಸಿಮೆಂಟ್ ಕಿತ್ತುಹೋಗಿದ್ದರಿಂದ ತಗ್ಗು ಬಿದ್ದಿವೆ. ಸ್ಟೀಲ್ ರಾಡ್‌ಗಳು ತೆರೆದುಕೊಂಡಿವೆ. ಸೇತುವೆ ಪ್ರವೇಶಿಸುವಾಗ ವೇಗ ನಿಯಂತ್ರಕಗಳೇ ಇಲ್ಲ. ಸೇತುವೆಯಲ್ಲಿರುವ ತಗ್ಗು-ತೆರೆದುಕೊಂಡ ರಾಡ್‌ಗಳನ್ನು ತಪ್ಪಿಸಲು ಚಾಲಕರು ವಾಹನ ಬದಿಗೆ ಸರಿಸಿದಾಗ, ನಿಷ್ಕ್ರಿಯಗೊಂಡ ರಕ್ಷಣಾ ಗೋಡೆ, ರಕ್ಷಣೆ ನೀಡದಿದ್ದಾಗ ವಾಹನಗಳು ನದಿಗೆ ಉರುಳುತ್ತಿವೆ. ಅಮೂಲ್ಯ ಜೀವಗಳು ಬಲಿಯಾಗುತ್ತಿವೆ. ಇದು ಅವ್ಯಾಹತವಾಗಿ ನಡೆದಿದ್ದರೂ ಆಡಳಿತ ವ್ಯವಸ್ಥೆ ಎಚ್ಚೆತ್ತುಕೊಳ್ಳುತ್ತಿಲ್ಲ’ ಎಂದು ಜನ ಹಿಡಿಶಾಪ ಹಾಕುತ್ತಿದ್ದಾರೆ.

ಈ ಹೆದ್ದಾರಿಯಲ್ಲಿ ಮಹಾರಾಷ್ಟ್ರದ ಗಡಿಯಲ್ಲಿರುವ ಧೂಳಖೇಡ ಹತ್ತಿರದ ಭೀಮಾ ನದಿ ಸೇತುವೆಯ ಸ್ಥಿತಿಯೂ ಇದೇ ಆಗಿದೆ.

ಆಲಮಟ್ಟಿ ಎಡದಂಡೆ ನಾಲೆಯಲ್ಲಿ ಪಕ್ಕದ ರಸ್ತೆಗಳಿಂದ ಆಯತಪ್ಪಿ ಬಿದ್ದು ಸಾಯುತ್ತಿರುವವರ ಸಂಖ್ಯೆಯೂ ಅಧಿಕ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.