ಶುಕ್ರವಾರ, ಜೂನ್ 18, 2021
23 °C

ನಡುಪದವು: ಈಡೇರಿದ ಪುಟ್ಟ ವಿದ್ಯಾರ್ಥಿಗಳ ಕನಸು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಡಿಪು:  ಹಲವು ವರ್ಷಗಳಿಂದ ಸ್ವಂತ ಕಟ್ಟಡವಿಲ್ಲದೇ, ಪದೆ ಪದೇ ಬೇರೆ  ಕಟ್ಟಡಗಳಿಗೆ ಸ್ಥಳಾಂತರಗೊಳ್ಳುತ್ತಿದ್ದ ನಡುಪದವಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಪುಟ್ಟ ವಿದ್ಯಾರ್ಥಿಗಳಿಗೆ ಗುರುವಾರ ಊರಿನವರ ಸಹಕಾರದಿಂದ ಸ್ವಂತ ಕಟ್ಟಡದಲ್ಲಿ ಕುಳಿತುಕೊಂಡು ಪಾಠ ಕೇಳುವ ಅವಕಾಶ ದೊರೆಯಿತು. ಆದರೆ ಶಾಲೆ ಕಟ್ಟಡದ ಕೆಲಸ ಇನ್ನೂ ಪೂರ್ಣವಾಗಿಲ್ಲ. ಬಂಟ್ವಾಳ ತಾಲ್ಲೂಕಿನ ಕೈರಂಗಳ ಗ್ರಾಮದ ನಡುಪದವಿನಲ್ಲಿ 4-5 ವರ್ಷ ಹಿಂದೆಯೇ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮಂಜೂರುಗೊಂಡಿತ್ತು. ಕಟ್ಟಡ ನಿರ್ಮಾಣಕ್ಕೆ ಸರ್ವಶಿಕ್ಷಣ ಅಭಿಯಾನದಿಂದ ಎಂಟು ಲಕ್ಷ ಅನುದಾನವೂ ದೊರಕಿತ್ತು.ಅಷ್ಟರಲ್ಲಿ ಕಟ್ಟಡ ನಿರ್ಮಾಣವಾಗುತ್ತಿದ್ದ ಜಾಗದಲ್ಲಿ ಖಾಸಗಿ ವ್ಯಕ್ತಿಯೊಬ್ಬರು ತಕರಾರು ನಡೆಸಿ ಕಟ್ಟಡ ನಿರ್ಮಾಣಕ್ಕೆ ಅಡ್ಡಿಪಡಿಸಿದ್ದರು. ಇದರಿಂದಾಗಿ ವಿದ್ಯಾರ್ಥಿಗಳಿಗೆ ಕುಳಿತುಕೊಳ್ಳಲು ಶಾಲೆಯಿಲ್ಲದೆ, ಕೆಲಕಾಲ ನಡುಪದವಿನ ಮದ್ರಸ ಕಟ್ಟಡ ಹಾಗೂ ಇತರ ಕಟ್ಟಡಗಳಲ್ಲಿ ತರಗತಿಗಳನ್ನು ನಡೆಸಲಾಗುತ್ತಿತ್ತು. ಮಕ್ಕಳ ಕಷ್ಟ ಕೇಳುವವರಿರಲಿಲ್ಲ.ಕೊನೆಗೂ ಊರ ಮುಖಂಡರು, ಶಾಲಾಭಿವೃದ್ಧಿ ಸಮಿತಿ ಸದಸ್ಯರು ಸೇರಿಕೊಂಡು ಅರ್ಧದಲ್ಲಿ ನಿಂತಿದ್ದ ಶಾಲಾ ಕಟ್ಟಡವನ್ನು ಹೇಗಾದರೂ ಪೂರ್ಣಗೊಳಿಸಿ ಮಕ್ಕಳಿಗೆ ಒದಗಿಸಿಕೊಡಬೇಕು ಎನ್ನುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿದ್ದರು. ಬುಧವಾರ ಜಿಲ್ಲಾಧಿಕಾರಿ, ಶಾಲೆಗೆ 40 ಸೆಂಟ್ಸ್ ಜಾಗ ಮಂಜೂರು ಮಾಡಿದರಲ್ಲದೇ, ಅರ್ಧದಲ್ಲಿ ನಿಂತಿದ್ದ ಕಟ್ಟಡ ಕಾಮಗಾರಿ ಮುಂದುವರಿಸಲು ಆದೇಶ ನೀಡಿದರು. ಇದರಿಂದ ನಡುಪದವು ನಾಗರಿಕರ `ಶಾಲಾ ಹೋರಾಟ~ಕ್ಕೆ ಕೊನೆಗೂ ಜಯ ಸಿಕ್ಕಂತಾಗಿದೆ.ಇದೀಗ ಈ ಶಾಲೆಯಲ್ಲಿ 40 ಪುಟ್ಟ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು ಗುರುವಾರ ಖಾಗಿ ಕಟ್ಟಡದಲ್ಲಿದ್ದ ವಿದ್ಯಾರ್ಥಿಗಳನ್ನು ಸ್ವಂತ ಕಟ್ಟಡಕ್ಕೆ ಸ್ಥಳಾಂತರಗೊಳಿಸುವ ಕಾರ್ಯಕ್ರಮವನ್ನು ಊರವರು ಇಟ್ಟುಕೊಂಡಿದ್ದರು.ಆದರೆ ನೂತನ ಕಟ್ಟಡದ ಕಾಮಗಾರಿ ಅರ್ಧದಲ್ಲೇ ನಿಂತಿದ್ದರಿಂದ ನೂತನ ಕಟ್ಟಡದಲ್ಲಿ ಮಕ್ಕಳಿಗೆ ಮೂಲ ಸೌಲಭ್ಯ ಇರಲಿಲ್ಲ. ಮಾತ್ರವಲ್ಲ, ಶಾಲೆಗೆ ಟೆರೇಸ್ ಕೂಡ ಆಗಿರಲಿಲ್ಲ. ಊರಿನವರು ಬುಧವಾರ ರಾತ್ರಿಯೇ ಶಾಲೆಯ ಮಾಡಿಗೆ ಚಪ್ಪರ ಹಾಗೂ ಪ್ಲಾಸ್ಟಿಕ್ ಹೊದಿಕೆ ನಿರ್ಮಿಸಿಕೊಟ್ಟು ವಿದ್ಯಾರ್ಥಿಗಳಿಗೆ ಪಾಠ ಕೇಳಲು ಅನುವು ಮಾಡಿಕೊಟ್ಟಿದ್ದರು. ಗುರುವಾರ ಮುಂಜಾನೆಯೇ ವಿದ್ಯಾರ್ಥಿಗಳು ಹೊಸ ಕಟ್ಟಡದಲ್ಲಿ ಕುಳಿತುಕೊಳ್ಳುವ ಸಂಭ್ರಮ ಹಾಗೂ ತವಕದಲ್ಲಿದ್ದರು.ಗುರುವಾರ ಉದ್ಘಾಟನೆ ಸಮಾರಂಭದ ಅಧ್ಯಕ್ಷತೆಯನ್ನು ಶಾಲಾ ಎಸ್‌ಎಡಿಎಂಸಿ ಅಧ್ಯಕ್ಷರಾದ ಮಹಮ್ಮದ್ ಅವರು ವಹಿಸಿದ್ದರು. ಅತಿಥಿಯಾಗಿದ್ದ ಬಾಳೆಪುಣಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಚಂದ್ರಹಾಸ್ ಆಳ್ವ ಮಾತನಾಡಿ `ವಿದ್ಯಾರ್ಥಿಗಳ ಶೈಕ್ಷಣಿಕ ದಾಹಕ್ಕೆ ಪೂರಕವಾಗಿ ನಡುಪದವು ನಾಗರಿಕರ ಸಹಕಾರದಿಂದ ಈ ಊರಿನ ಶೈಕ್ಷಣಿಕ ಕನಸು ಈಡೇರಿದಂತಾಗಿದೆ. ಕನ್ನಡ ಮಾಧ್ಯಮ ಶಾಲೆಗೆ ಊರವರಿಂದ ಇಂತಹ ಪ್ರೋತ್ಸಾಹ ದೊರೆತರೆ ಶಾಲೆಗಳನ್ನು ಮುಚ್ಚುವ ಪ್ರಸಂಗ ಬರುವುದಿಲ್ಲ~ ಎಂದು ಹೇಳಿದರು.ಊರಿನ ಮುಖಂಡ ಇಬ್ರಾಹಿಂ ಹಾಜಿ ಮಾತನಾಡಿ ಊರಿನಲ್ಲಿ ಒಂದು ಶಾಲೆ ನಿರ್ಮಾಣವಾದರೆ ಅದರಷ್ಟು ಪುಣ್ಯ ಬೇರೆ ಏನಿಲ್ಲ. ಯಾವುದೇ ಅಡೆ ತಡೆ ಇದ್ದರೂ ಇಂದು ನಮ್ಮ ಕನಸು ಈಡೇರಿದೆ ಎಂದು ಹರ್ಷ ವ್ಯಕ್ತ ಪಡಿಸಿದರು.ಸಮಾರಂಭದಲ್ಲಿ ತಾ.ಪಂ. ಸದಸ್ಯರಾದ ಫಾತಿಮಾ ಹೈದರ್, ಕೊಣಾಜೆ ಗ್ರಾ.ಪಂ.ಸದಸ್ಯ ನಝರ್ ಷಾ, ನಾಸೀರ್ ಎನ್.ಎಸ್, ಹೈದರ್, ನರಿಂಗಾನ ಗ್ರಾಮ ಪಂಚಾಯಿತಿಯ ಜಲೀಲ್, ಶರೀಫ್, ಬಾಳೆಪುಣಿ ಗ್ರಾಪಂ.ನ ಮಾಜಿ ಅಧ್ಯಕ್ಷ ಜನಾರ್ದನ್, ಪುತ್ತು ಹಾಜಿ, ಅದ್ರಾಮ,ಶಾಲಾ ಮುಖ್ಯೋಪಾಧ್ಯಾಯರಾದ ಮಂಜೇಶ್, ಶಿಕ್ಷಕಿ ಪ್ರೇಮ ಇನ್ನಿತರರು ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.