ಶುಕ್ರವಾರ, ಮೇ 14, 2021
31 °C

ನಡುರಾತ್ರಿಯ ಉಪಕಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇದು 40 ವರ್ಷಗಳ ಹಿಂದಿನ ಘಟನೆ. ನಾವು ಜಯನಗರದಲ್ಲಿದ್ದೆವು. ನನ್ನ ಸೋದರತ್ತೆ ಮಗಳ ಮದುವೆ ಎನ್.ಆರ್. ಕಾಲೋನಿ ರಾಮಮಂದಿರದಲ್ಲಿ ನಡೆದಿತ್ತು. ಸಂಜೆಯ ಆರತಕ್ಷತೆ ಊಟ ಮುಗಿಸಿಕೊಂಡು ನಾನು, ನನ್ನ ತಂದೆ, ತಮ್ಮ ಹಾಗೂ ಕುಟುಂಬದವರು ಮನೆಗೆ ಹೊರೆಟೆವು.ನಮ್ಮ ತಂದೆ ತಾವು ತಂದಿದ್ದ `ವೆಸ್ಪಾ~ ಸ್ಕೂಟರ್‌ನಲ್ಲಿ ಮನೆಗೆ ಬರುವುದಾಗಿ ಹೇಳಿದರು. ಸರಿ, ನಾವು ಅವರೊಬ್ಬರನ್ನೇ ಬಿಟ್ಟು ಮನೆಗೆ ಹೊರೆಟೆವು. ಮನೆಗೆ ಬಂದು ರಾತ್ರಿ 11.30 ಆದರೂ ನಮ್ಮ ತಂದೆ ಪತ್ತೆ ಇಲ್ಲ. ಭಯವಾಯಿತು.

 

ಇದೇನು ರಾತ್ರಿ 10 ಗಂಟೆಗೆ ಹೊರಟವರು ಇನ್ನೂ ಮನೆಗೆ ಬಂದಿಲ್ಲವೆಂಬ ಆತಂಕ ನಮ್ಮೆಲ್ಲರಲ್ಲಿ. ರಸ್ತೆಯೆಲ್ಲಾ ನೀರವ ಮೌನ. ಅದೇ ಸಮಯಕ್ಕೆ ಆಟೊ ಒಂದು ನಮ್ಮ ಮನೆಯ ರಸ್ತೆಯಲ್ಲಿ ಎರಡು ಮೂರು ಸಲ ಓಡಾಡಿತು.

 

ಯಾರೋ ವಿಳಾಸ ಕೇಳಲು ಇರಬಹುದು ಅಂತ ಅಂದುಕೊಂಡೆವು. ಆದರೆ ಆ ಆಟೊ ಡ್ರೈವರ್ ನಮ್ಮ ಮನೆ ಬಳಿ ಆಟೊ ನಿಲ್ಲಿಸಿ, `ಸಾರ್, ಈ ಆಟೊದಲ್ಲಿರುವವರು ನಿಮ್ಮವರಿರಬಹುದೇ, ನೋಡಿ~ ಅಂದ. ನಾವು ಹೊರಗೆ ಬಂದು ನೋಡಿದರೆ ಅಚ್ಚರಿ.ಆಟೊದಲ್ಲಿದ್ದವರು ನಮ್ಮ ತಂದೆಯೇ ಆಗಿದ್ದರು. ಸ್ಕೂಟರ್‌ನಲ್ಲಿ ಹೋದವರು ಆಟೊದಲ್ಲಿ ಯಾಕೆ ಬಂದಿದ್ದಾರೆ ಅಂತ ಯೋಚಿಸುತ್ತಿದ್ದಾಗಲೇ ಆಟೊ ಡ್ರೈವರ್, `ಇವರು ಓಡಿಸುತ್ತಿದ್ದ ಸ್ಕೂಟರ್‌ನಿಂದ ಕೆಳಕ್ಕೆ ಬಿದ್ದರು. ಗಾಬರಿಯಿಂದ ಏನೂ ಮಾತಾಡಲಿಲ್ಲ. ನಾನೇ ವಿಚಾರಿಸಿದಾಗ ಅರ್ಧ ಗಂಟೆ ನಂತರ ತಾವು ಇರುವ ಜಾಗವನ್ನು (ಮನೆ) ತಿಳಿಸಿದರು~ ಅಂದ.

 

ನಾನು `ಶಾಂತಿ~ ಹತ್ತಿರ ಹೋಗಿ (ಚಿತ್ರಮಂದಿರ) ಅಲ್ಲೇ ರಸ್ತೆ ಬದಿ ನಿಲ್ಲಿಸಿದ ನಮ್ಮ ಸ್ಕೂಟರ್ ತೆಗೆದುಕೊಂಡು ಮನೆಗೆ ಬಂದೆ. ಅಲ್ಲಿವರೆಗೆ ಆಟೊ ಡ್ರೈವರ್ ನಮ್ಮಂದಿಗೇ ಇದ್ದರು.ಎದುರು ಮನೆಯವರ ಸಹಾಯ ಪಡೆದು ಸಮೀಪವೇ ಇದ್ದ ನಮ್ಮ `ಫ್ಯಾಮಿಲಿ ಡಾಕ್ಟರ್~ ಬಳಿ ನಮ್ಮ ತಂದೆಯ ಮೈಕೈಗೆ ಆಗಿದ್ದ ಗಾಯಕ್ಕೆ ಔಷಧಿ ಕೊಡಿಸಿ ಮನೆಗೆ ಅದೇ ಆಟೊದಲ್ಲಿ ವಾಪಸ್ಸು ಬಂದೆವು. ಆಗ ಸಮಯ ರಾತ್ರಿ 12.30. ಅಷ್ಟು ಹೊತ್ತಿಗೆ ನಮ್ಮ ತಂದೆಗೆ ಪ್ರಜ್ಞೆ ಬಂದಿತ್ತು.ಅಲ್ಲಿಯವರೆಗೆ ನಮ್ಮಂದಿಗೇ ಇದ್ದು, ತಮ್ಮ ಆಟೊದಲ್ಲೇ ಎಲ್ಲೆಡೆ ಕರೆದೊಯ್ದು ಮನೆ ತಲುಪಿಸಿದ ಆ ಆಟೊಡ್ರೈವರ್ `ಬರ‌್ತೀನಿ ಸಾರ್, ನಿಮ್ಮ ತಂದೆಯವರನ್ನು ಚೆನ್ನಾಗಿ ನೋಡಿಕೊಳ್ಳಿ~ ಅಂತ ಹೇಳಿ ಹೊರಟೇಬಿಟ್ಟರು.

 

ನಾವು ಕೊನೇಪಕ್ಷ `ಥ್ಯಾಂಕ್ಸ್~ ಹೇಳೋಣ ಅಂತ ಮನೆಯಿಂದ ಹೊರಗೆ ಬರುವಷ್ಟರಲ್ಲಿ ಆಟೊ ಕತ್ತಲಲ್ಲಿ ದೂರ ಸಾಗಿತ್ತು. ಆ ಪುಣ್ಯಾತ್ಮ ಆಟೊ ಡ್ರೈವರ್ ಈಗ ಎಲ್ಲಿದ್ದಾರೋ? ಎಲ್ಲಿದ್ದರೂ ಚೆನ್ನಾಗಿರಲಿ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.