ನಡೆದ ಚುನಾವಣಾ ಪ್ರಕ್ರಿಯೆ

7
ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ ಆದೇಶದ ಅವಗಣನೆ

ನಡೆದ ಚುನಾವಣಾ ಪ್ರಕ್ರಿಯೆ

Published:
Updated:

ನವದೆಹಲಿ (ಪಿಟಿಐ): ಭಾರತ ಒಲಿಂಪಿಕ್ ಸಂಸ್ಥೆಯನ್ನು (ಐಒಎ) ಅಂತರರಾಷ್ಟ್ರೀಯ ಒಲಿಂಪಿಕ್ ಸಂಸ್ಥೆ ಅಮಾನತು ಮಾಡಿರುವ ಕ್ರಮವನ್ನೂ ಗಣನೆಗೆ ತೆಗೆದುಕೊಳ್ಳದ ಐಒಎ ಬುಧವಾರ ವಾರ್ಷಿಕ ಸಾಮಾನ್ಯ ಸಭೆ ಮತ್ತು ಚುನಾವಣೆ ನಡೆಸಿತು.ಅಭಯಸಿಂಗ್ ಚೌತಾಲಾ ಅಧ್ಯಕ್ಷ ಸ್ಥಾನದ ಹುದ್ದೆಗೆ ಮೊದಲೇ ಅವಿರೋಧವಾಗಿ ಆಯ್ಕೆಯಾಗಿದ್ದರು. ಲಲಿತ್ ಭಾನೊಟ್ ಕೂಡ ನೂತನ ಪ್ರಧಾನ ಕಾರ್ಯದರ್ಶಿಯಾಗಿ ನೇಮಕವಾಗಿದ್ದಾರೆ.`ಚುನಾವಣೆ ನಡೆಸುವ ಕುರಿತು ಮೊದಲೇ ದಿನಾಂಕ ನಿಗದಿಪಡಿಸಲಾಗಿತ್ತು. ಈ ಕುರಿತು ಅಂತರರಾಷ್ಟ್ರೀಯ ಒಲಿಂಪಿಕ್ ಸಂಸ್ಥೆಯನ್ನು ಮುಂಚಿತವೇ ಸಂಪರ್ಕ ಮಾಡಿದ್ದೆವು. ಆದ್ದರಿಂದ ನಿಗದಿ ಮಾಡಿದ ದಿನಾಂಕಕ್ಕೆ ಚುನಾವಣೆ ನಡೆಸಿದ್ದೇವೆ. ದೆಹಲಿ ಹೈಕೋರ್ಟ್‌ನ ತೀರ್ಮಾನದಂತೆ ಈ ರೀತಿ ಮಾಡಿದ್ದೇವೆ' ಎಂದು ಸಭೆಯ ಬಳಿಕ ಐಒಎ ಹಂಗಾಮಿ ಅಧ್ಯಕ್ಷ ವಿಜಯ ಕುಮಾರ್ ಮಲ್ಹೋತ್ರಾ ಸುದ್ದಿಗಾರರಿಗೆ ತಿಳಿಸಿದರು.`ಸಭೆಯಲ್ಲಿ ಶೇ. 85ರಷ್ಟು ಕ್ರೀಡಾ ಫೆಡರೇಷನ್‌ಗಳು, ರಾಜ್ಯ ಒಲಿಂಪಿಕ್ಸ್ ಸಮಿತಿಗಳು ಪಾಲ್ಗೊಂಡಿದ್ದವು. ಐಒಸಿಯು ತೆಗೆದುಕೊಂಡಿರುವ ಅಮಾನತು ನಿರ್ಧಾರಕ್ಕೆ ಸಂಬಂಧಿಸಿದಂತೆ ಮುಂದೆ ಏನು ಮಾಡಬೇಕು ಎಂಬ ಬಗ್ಗೆ ಸದ್ಯದಲ್ಲೇ ಸರಿಯಾದ ತೀರ್ಮಾನ ಕೈಗೊಳ್ಳಲಿದ್ದೇವೆ' ಎಂದೂ ಅವರು ಹೇಳಿದರು.ಕ್ರೀಡಾ ಸಚಿವರ ಆಸಕ್ತಿ: ಭಾರತ ಒಲಿಂಪಿಕ್ ಸಂಸ್ಥೆಯನ್ನು ಅಮಾನತು ಮಾಡಿರುವ ವಿಷಯಕ್ಕೆ ಸಂಬಂಧಿಸಿದಂತೆ ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿಯ ಜೊತೆ ಮಾತುಕತೆ ನಡೆಸಲು ಚಿಂತಿಸುತ್ತಿದ್ದೇನೆ ಎಂದು ಕೇಂದ್ರ ಕ್ರೀಡಾ ಸಚಿವ ಜಿತೇಂದ್ರ ಸಿಂಗ್ ತಿಳಿಸಿದ್ದಾರೆ. ಇದು ತಮಗೆ ಸಂಬಂಧಿಸಿದ್ದಲ್ಲವಾದರೂ ಕ್ರೀಡಾರಂಗದ ಹಿತದೃಷ್ಟಿಯಿಂದ ತಾವು ಈ ರೀತಿ ಯೋಚಿಸಿರುವುದಾಗಿ ಅವರು ಹೇಳಿದರು.

`ಇಂತಹ ಸಮಸ್ಯೆಗಳು ಮುಂದಿನ ದಿನಗಳಲ್ಲಿ ಎದುರಾಗಬಾರದು ಎಂದರೆ ಕ್ರೀಡಾಮಸೂದೆ ಜಾರಿಗೆ ಬರಬೇಕು. ಆಗ ಯಾವ ಸಮಸ್ಯೆಗಳು ಉಂಟಾಗುವುದಿಲ್ಲ' ಎಂದೂ ಅವರು ಹೇಳಿದ್ದಾರೆ.`ಕೆಲ ದಿನಗಳಲ್ಲಿ  ಪ್ರಮುಖ ಕ್ರೀಡಾಪಟುಗಳ ಜೊತೆಗೂ ವಿಚಾರ ವಿನಿಮಯ ನಡೆಸಲಾಗುವುದು' ಎಂದು ಜಿತೇಂದ್ರ ಭರವಸೆ ನೀಡಿದ್ದಾರೆ.ಪತ್ರ ರವಾನಿಸಿದ ಐಒಸಿ: ಐಒಎಯನ್ನು ಅಮಾನತಿನಲ್ಲಿರಿಸಿದ ಕುರಿತು ಅಧಿಕೃತ ಪತ್ರ ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿಯಿಂದ ಬುಧವಾರ ಭಾರತದ ಕೈ ಸೇರಿದೆ.ಸರ್ಕಾರದ ಮಾರ್ಗದರ್ಶಿ ಸೂತ್ರಗಳಿಗೆ ಬದ್ಧವಾಗಿ ನಡೆದುಕೊಳ್ಳುವುದಾಗಿ ಐಒಎ ಹೇಳಿದ ಕಾರಣ ಐಒಸಿ ಮಂಗಳವಾರ ಭಾರತ ಒಲಿಂಪಿಕ್ಸ್ ಸಂಸ್ಥೆಯನ್ನು ಅಮಾನತು ಮಾಡುವ ನಿರ್ಧಾರ ಕೈಗೊಂಡಿತ್ತು.ಐಒಸಿಯ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಐಒಎ ಅನ್ನು ಅಮಾನತಿನಲ್ಲಿರಿಸುವ ಕುರಿತು ನಿರ್ಧಾರ ತೆಗೆದುಕೊಳ್ಳಲಾಗಿತ್ತು. ಭಾರತ ಸರ್ಕಾರದ ಮಾರ್ಗದರ್ಶಿ ಸೂತ್ರಕ್ಕೆ ಐಒಎ ಬದ್ದವಾಗಿದ್ದು ಐಒಸಿಯ ನಿಯಮಗಳನ್ನು ಗಾಳಿಗೆ ತೂರುತ್ತಿದೆ ಎಂದು ತೀರ್ಮಾನಿಸಿದ ಐಒಸಿ ಈ ಕಠಿಣ ಕ್ರಮಕ್ಕೆ ಮುಂದಾಗಿತ್ತು.`ಐಒಸಿಯ ನೀತಿ ನಿಯಮಗಳಿಗೆ ಅನುಸಾರವಾಗಿ ಭಾರತ ಒಲಿಂಪಿಕ್ಸ್ ಸಂಸ್ಥೆ ನಡೆದುಕೊಳ್ಳಬೇಕು. ಸರ್ಕಾರದ ಹಸ್ತಕ್ಷೇಪ ಇರಬಾರದು. ಐಒಎ ಸ್ವತಂತ್ರವಾಗಿ ಕಾರ್ಯನಿರ್ವಹಿಸಬೇಕು. ನಿತ್ಯದ ಆಡಳಿತದಲ್ಲಿ ಐಒಸಿ ಮೂಲ ನಿಯಮಗಳಿಗೆ ಅಡ್ಡಿಯಾಗಬಾರದು' ಎಂದು ಐಒಸಿ ಅಧ್ಯಕ್ಷ ಜಾಕ್ ರಾಗ್ ಪತ್ರದಲ್ಲಿ ಸ್ಪಷ್ಟವಾಗಿ ತಿಳಿಸಿದ್ದಾರೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry