ಬುಧವಾರ, ಆಗಸ್ಟ್ 21, 2019
24 °C
ಬಿಸಿಸಿಐ ಸಭೆಯೇ ರದ್ದು; ಅಧಿಕಾರ ವಹಿಸಿಕೊಳ್ಳುವ ಯತ್ನಕ್ಕೆ ಹಿನ್ನಡೆ

ನಡೆಯದ ಶ್ರೀನಿವಾಸನ್ ಆಟ...

Published:
Updated:

ನವದೆಹಲಿ (ಪಿಟಿಐ/ಐಎಎನ್‌ಎಸ್): ಮತ್ತೆ ಬಿಸಿಸಿಐ ಚುಕ್ಕಾಣಿ ಹಿಡಿಯುವ ಎನ್.ಶ್ರೀನಿವಾಸನ್ ಅವರ ಯತ್ನ ಸದ್ಯಕ್ಕೆ ವಿಫಲಗೊಂಡಿದೆ. ಬಾಂಬೆ ಹೈಕೋರ್ಟ್ ತೀರ್ಪಿಗೆ ಬೆದರಿದ ಮಂಡಳಿಯು ಶುಕ್ರವಾರ ಇಲ್ಲಿ ನಡೆಯಬೇಕಿದ್ದ ಕಾರ್ಯಕಾರಿ ಸಮಿತಿ ಸಭೆಯನ್ನು ರದ್ದುಗೊಳಿಸಿದ್ದು, ಶ್ರೀನಿವಾಸನ್ ಅವರಿಗೆ ಮತ್ತೆ ಹಿನ್ನಡೆಯಾಗಿದೆ.ಆದರೆ ಆಂತರಿಕ ತನಿಖಾ ಆಯೋಗ ರಚನೆ ಕಾನೂನುಬಾಹಿರ ಹಾಗೂ ಅಸಾಂವಿಧಾನಿಕ ಎಂದು ತೀರ್ಪಿ ನೀಡಿರುವ ಹೈಕೋರ್ಟ್ ತೀರ್ಪನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲು ಬಿಸಿಸಿಐ ತೀರ್ಮಾನಿಸಿದೆ. ಅಷ್ಟು ಮಾತ್ರವಲ್ಲದೇ, ಹಂಗಾಮಿ ಅಧ್ಯಕ್ಷರಾಗಿ ಜಗಮೋಹನ್ ದಾಲ್ಮಿಯ ಅವರೇ ಮುಂದುವರಿಯಲಿದ್ದಾರೆ.`ನಾವು ಬಾಂಬೆ ಹೈಕೋರ್ಟ್ ತೀರ್ಪನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲಿದ್ದೇವೆ' ಎಂದು ಬಿಸಿಸಿಐ ಉಪಾಧ್ಯಕ್ಷ ಚಿತ್ರಕ್ ಮಿತ್ರ ಹೇಳಿದರು.

ಕಾರ್ಯಕಾರಿ ಸಮಿತಿ ಸಭೆ ಆಯೋಜಿಸುವ ಬಗ್ಗೆ ಬಿಸಿಸಿಐ ಪ್ರಮುಖ ಅಧಿಕಾರಿಗಳು ಬೆಳಿಗ್ಗೆ ಸಮಾಲೋಚನೆ ನಡೆಸಿದರು. ಆದರೆ ಕಾನೂನು ಸಮಸ್ಯೆ ಸೃಷ್ಟಿಯಾಗಬಹುದು ಹಾಗೂ ಶ್ರೀನಿವಾಸನ್ ವಿರುದ್ಧ ಬಹಿರಂಗ ಬಂಡಾಯ ನಿರ್ಮಾಣವಾಗುವ ಆತಂಕದ ಕಾರಣ ಸಭೆಯನ್ನು ನಡೆಸದಿರಲು ನಿರ್ಧರಿಸಿದರು. ಸಭೆಯ ಸಾರಥ್ಯವನ್ನು ಶ್ರೀನಿವಾಸನ್ ವಹಿಸಿದರೆ ರಾಜೀನಾಮೆ ನೀಡುವುದಾಗಿ ಮಂಡಳಿಯ ಕೆಲ ಉಪಾಧ್ಯಕ್ಷರು ಹಾಗೂ ಹಿರಿಯ ಅಧಿಕಾರಿಗಳು ಬೆದರಿಕೆ ಹಾಕಿದರು.ಈ ಕಾರಣ ಮತ್ತೆ ಮಂಡಳಿಯ ಚುಕ್ಕಾಣಿ ಹಿಡಿಯುವ ತಮ್ಮ ನಿರ್ಧಾರದಿಂದ ಹಿಂದೆ ಸರಿಯುವಂತೆ ಶ್ರೀನಿವಾಸನ್ ಅವರ ಮನವೊಲಿಸಲು ಬಿಸಿಸಿಐ ಉಪಾಧ್ಯಕ್ಷ ಅರುಣ್ ಜೇಟ್ಲಿ, ಹಂಗಾಮಿ ಅಧ್ಯಕ್ಷ ದಾಲ್ಮಿಯ ಹಾಗೂ ಐಪಿಎಲ್ ಮುಖ್ಯಸ್ಥ ರಾಜೀವ್ ಶುಕ್ಲಾ ಯತ್ನಿಸಿದರು ಎಂದು ಮೂಲಗಳು ತಿಳಿಸಿವೆ.ಈ ಬೆಳವಣಿಗೆಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಶ್ರೀನಿವಾಸನ್, ಬಳಿಕ ತಮ್ಮ ಕಾನೂನು ಸಲಹೆಗಾರ ಮಾತಿಗೆ ಕಿವಿಕೊಟ್ಟು ಸಭೆಯನ್ನು ರದ್ದು ಮಾಡಲು ಒಪ್ಪಿಗೆ ಸೂಚಿಸಿದರು ಎಂಬುದು ತಿಳಿದುಬಂದಿದೆ.  ಐಪಿಎಲ್ ಸಭೆಯಿಂದಲೂ ಹಿಂದೆ ಸರಿಯಲು ಅವರು ನಿರ್ಧರಿಸಿದರು.ತಾಂತ್ರಿಕ ಸಮಸ್ಯೆ: ಸಭೆ ಆಯೋಜಿಸಲು ತಾಂತ್ರಿಕ ಸಮಸ್ಯೆಯೂ ಅಡ್ಡಿಯಾಗಿದೆ. ಕಾರ್ಯಕಾರಿ ಸಮಿತಿ ಸಭೆ ಕರೆದಾಗ ಅದರ ಮುಂದೆ `ತುರ್ತು' ಎಂದು ನಮೂದಿಸಬೇಕಿತ್ತು. ಈ ಸಭೆ ಕರೆದವರು ಅದನ್ನು ನಮೂದಿಸಲು ಮರೆತಿದ್ದಾರೆ.`ಈ ಸಭೆ ತಾಂತ್ರಿಕವಾಗಿ ಕಾನೂನುಬಾಹಿರ. ಏಕೆಂದರೆ ಒಂದು ಕಾರ್ಯಕಾರಿ ಸಮಿತಿ ಸಭೆ ಮುಗಿದ 72 ಗಂಟೆಯೊಳಗೆ ಮತ್ತೊಂದು ಸಭೆ ಕರೆದರೆ ಅದರ ಮುಂದೆ ತುರ್ತು ಎಂದು ನಮೂದಿಸುವುದು ಕಡ್ಡಾಯ' ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ.ಅಷ್ಟು ಮಾತ್ರವಲ್ಲದೇ, ಸಭೆ ನಡೆಸಿದರೆ ನ್ಯಾಯಾಂಗ ನಿಂದನೆ ಆಗಬಹುದು ಎಂಬ ಭಯದ ಕಾರಣ ರದ್ದುಮಾಡಲಾಗಿದೆ. ಸುಪ್ರೀಂ ಕೋರ್ಟ್ ತೀರ್ಪು ನೀಡಿದ ಮೇಲೆ ಕಾರ್ಯಕಾರಿ ಸಮಿತಿ ಸಭೆ ನಡೆಸುವ ಬಗ್ಗೆ ದಿನಾಂಕ ನಿಗದಿಪಡಿಸಲಾಗುವುದು ಎಂದು ಮಂಡಳಿಯ ಮೂಲಗಳು ತಿಳಿಸಿವೆ.ಸೂಕ್ತ ತನಿಖೆ ನಡೆಸಿ: ಕಿರ್ಮಾನಿ

ಬೆಂಗಳೂರು (ಪಿಟಿಐ): ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಬಗ್ಗೆ ಸೂಕ್ತ ತನಿಖೆ ನಡೆಸುವ ಅವಶ್ಯವಿದ್ದು, ಹ್ಯಾನ್ಸಿ ಕ್ರೋನಿಯೆ ಅವರನ್ನು ವಿಚಾರಣೆಗೆ ಒಳಪಡಿಸಿದ ಮಾದರಿಯ ತನಿಖೆ ಅಗತ್ಯ ಎಂದು ಭಾರತ ಕ್ರಿಕೆಟ್ ತಂಡದ ಮಾಜಿ ವಿಕೆಟ್ ಕೀಪರ್ ಸೈಯದ್ ಕಿರ್ಮಾನಿ ಅಭಿಪ್ರಾಯಪಟ್ಟಿದ್ದಾರೆ.

`ಕ್ಯಾಮೆರಾ ಎದುರು ಹ್ಯಾನ್ಸಿ ಅವರನ್ನು ತನಿಖೆಗೆ ಒಳಪಡಿಸಲಾಗಿತ್ತು. ಮೋಸದಾಟ ನಡೆಸಲು ಹಣ ತೆಗೆದುಕೊಂಡಿದ್ದೀರಾ ಅಥವಾ ಇಲ್ಲವೇ ಎಂದು ಕೇಳಲಾಗಿತ್ತು. ಹಣ ತೆಗೆದುಕೊಂಡಿದ್ದನ್ನು ಅವರು ಒಪ್ಪಿಕೊಂಡಿದ್ದರು. ಈ ರೀತಿ ತನಿಖೆ ನಡೆಸಿದರೆ ತಪ್ಪು ಏನು ಎಂಬುದು ಸಾರ್ವಜನಿಕರಿಗೂ ಗೊತ್ತಾಗಲಿದೆ' ಎಂದು ಅವರು ಹೇಳಿದ್ದಾರೆ.`ಐಪಿಎಲ್ ಪ್ರಕರಣದ ತನಿಖೆಯಲ್ಲಿ ಪಾರದರ್ಶಕತೆ ಇಲ್ಲ. ಕ್ಯಾಮೆರಾದ ಮುಂದೆ ಯಾರನ್ನೂ ವಿಚಾರಣೆಗೆ ಒಳಪಡಿಸಿಲ್ಲ' ಎಂದು 1983ರಲ್ಲಿ ಏಕದಿನ ವಿಶ್ವಕಪ್ ತಂಡದ ಸದಸ್ಯ ಕಿರ್ಮಾನಿ ನುಡಿದಿದ್ದಾರೆ.

Post Comments (+)