ನದಿಗಳ ಉಳಿವಿಗೆ ಅರಣ್ಯ ರಕ್ಷಣೆ ಅಗತ್ಯ

ಮಂಗಳವಾರ, ಜೂಲೈ 23, 2019
25 °C

ನದಿಗಳ ಉಳಿವಿಗೆ ಅರಣ್ಯ ರಕ್ಷಣೆ ಅಗತ್ಯ

Published:
Updated:

ಬೆಂಗಳೂರು: `ಅರಣ್ಯ ನಾಶವಾದರೆ ನದಿಗಳು ಬತ್ತಿ ಹೋಗಲಿವೆ. ನೀರಿನ ಮೂಲಗಳನ್ನು ಸಂರಕ್ಷಿಸಬೇಕೆಂದರೆ ಅರಣ್ಯ ಉಳಿಸಬೇಕು. ಕಾವೇರಿ ನದಿಯನ್ನು ರಕ್ಷಿಸಲು ಕೊಡಗು ಅರಣ್ಯ ಪ್ರದೇಶವನ್ನು ಸಂರಕ್ಷಿಸಬೇಕು~ ಎಂದು ರಾಜ್ಯಪಾಲ ಎಚ್.ಆರ್.ಭಾರದ್ವಾಜ್ ಕರೆ ನೀಡಿದರು.ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣೆಯಲ್ಲಿ ಗಣನೀಯ ಸೇವೆ ಸಲ್ಲಿಸಿದ ಅರಣ್ಯ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.`ಕಾವೇರಿ ನದಿ ಸಂರಕ್ಷಿಸಲು ಅರಣ್ಯ ಅಧಿಕಾರಿಗಳು ಮತ್ತು ಸಿಬ್ಬಂದಿ ಶ್ರಮಿಸಬೇಕು. ಅರಣ್ಯ ರಕ್ಷಣೆ ಮೂಲಕ ನಾಡು ಮತ್ತು ಜನರಿಗೆ ಮಹತ್ತರ ಸೇವೆ ಸಲ್ಲಿಸುವ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಸಹಾಯ ಮಾಡಲು ನಾನು ಸದಾ ಸಿದ್ಧನಿದ್ದೇನೆ~ ಎಂದು ಅವರು ಭರವಸೆ ನೀಡಿದರು. `ಸ್ವಿಟ್ಜರ್‌ಲ್ಯಾಂಡ್, ಜರ್ಮನಿ ಸೇರಿದಂತೆ ಯೂರೋಪ್‌ನಲ್ಲಿ ಅನಿವಾರ್ಯವಾಗಿ ಒಂದು ಮರ ಕಡಿದರೆ ಆರು ಮರ ಬೆಳೆಸುವುದನ್ನು ವ್ರತದಂತೆ ಪಾಲಿಸಲಾಗುತ್ತಿದೆ. ಅದೇ ಮಾದರಿಯಲ್ಲಿ ಕರ್ನಾಟಕ ಸಾಗಬೇಕಿದೆ~ ಎಂದರು.`ರಾಜ್ಯದ ಅರಣ್ಯಗಳು ನಕ್ಸಲರ ಅಡಗುತಾಣಗಳಾಗುವುದು ಬೇಡ. ಪ್ರವಾಸಿಗರು ಭೇಟಿ ನೀಡುವ ಪರಿಸರ ತಾಣಗಳಾಗಿ ಅಭಿವೃದ್ಧಿ ಹೊಂದಲಿ. ಅರಣ್ಯಕ್ಕೆ ಹೊಂದಿಕೊಂಡ ಹೆದ್ದಾರಿಗಳ ಬದಿಯಲ್ಲಿ ಪ್ರವಾಸಿಗರಿಗೆ ಅಗತ್ಯ ಸೌಕರ್ಯಗಳನ್ನು ಕಲ್ಪಿಸಬೇಕು~ ಎಂದು ಅವರು ತಿಳಿಸಿದರು.ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ.ಕೆ.ನಾರಾಯಣಗೌಡ, ಅರಣ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಶ್ರೀಧರನ್, ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಎ.ಕೆ.ವರ್ಮ, ಬಿ.ಮಾರಪ್ಪ ಸ್ಮಾರಕ ಟ್ರಸ್ಟ್‌ನ ಅಧ್ಯಕ್ಷ ಜಿ.ಆರ್.ಮಾವಿನ್ ಕುರ್ವೆ, ರಾಜ್ಯ ವನ್ಯಜೀವಿ ಮಂಡಲಿ  ಉಪಾಧ್ಯಕ್ಷ ಅನಿಲ್ ಕುಂಬ್ಳೆ ಮೊದಲಾದವರು ಉಪಸ್ಥಿತರಿದ್ದರು.

`ಯುನೆಸ್ಕೊ ನಿರ್ಧಾರ ಒಪ್ಪಿಕೊಳ್ಳಿ~

ಬೆಂಗಳೂರು: `ಪಶ್ಚಿಮ ಘಟ್ಟಗಳನ್ನು ವಿಶ್ವ ನೈಸರ್ಗಿಕ ಪಾರಂಪರಿಕ ತಾಣಗಳ ಪಟ್ಟಿಗೆ ಯುನೆಸ್ಕೊ ಸೇರಿಸಿರುವುದನ್ನು ರಾಜ್ಯ ಸರ್ಕಾರ ಒಪ್ಪಿಕೊಳ್ಳಬೇಕು. ಯುನೆಸ್ಕೊದ ಮಾನ್ಯತೆಯು ಜಾಗತಿಕ ಗೌರವವಾಗಿದೆ~ ಎಂದು ರಾಜ್ಯಪಾಲ ಎಚ್.ಆರ್.ಭಾರದ್ವಾಜ್ ಹೇಳಿದರು.ಅರಣ್ಯ ಇಲಾಖೆ ಆಶ್ರಯದಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದ ಬಳಿಕ ವರದಿಗಾರರೊಂದಿಗೆ ಅವರು ಮಾತನಾಡಿದರು.`ಯುನೆಸ್ಕೊ ಮಾನ್ಯತೆಯನ್ನು ರಾಜ್ಯ ಸರ್ಕಾರ ವಿರೋಧಿಸುತ್ತಿರುವುದು ಏಕೆ ಎಂಬುದು ನನಗೆ ಗೊತ್ತಿಲ್ಲ. ಈ ಬಗ್ಗೆ ಸಂಪೂರ್ಣ ಮಾಹಿತಿ ನೀಡುವಂತೆ ಪಶ್ಚಿಮ ಘಟ್ಟ ಸಂರಕ್ಷಣಾ ಕಾರ್ಯಪಡೆ ಅಧ್ಯಕ್ಷ ಅನಂತ ಹೆಗಡೆ ಆಶೀಸರ ಅವರಿಗೆ ಸೂಚಿಸಿದ್ದೇನೆ.ಅವರು ನೀಡುವ ಮಾಹಿತಿ ಪರಿಶೀಲಿಸಿದ ಮೇಲೆ ಅಗತ್ಯ ಬಿದ್ದರೆ ಅರಣ್ಯ ಸಚಿವರು ಅಥವಾ ಹಿರಿಯ ಅಧಿಕಾರಿಗಳನ್ನು ಕರೆದು ಚರ್ಚಿಸುತ್ತೇನೆ~ ಎಂದು ಅವರು ತಿಳಿಸಿದರು.

ಅಸ್ಥಿರತೆಗೆ ವಿಷಾದ: `ಸುಸಂಸ್ಕೃತ ಮತ್ತು ಸುಶಿಕ್ಷಿತ ಜನರು ಹೆಚ್ಚಾಗಿರುವ ಕರ್ನಾಟಕದಲ್ಲಿ ರಾಜಕೀಯ ಅಸ್ಥಿರತೆ ಉಂಟಾಗಿರುವುದು ಅಚ್ಚರಿ ತಂದಿದೆ. ಇದೊಂದು ವಿಷಾದಕರ ಬೆಳವಣಿಗೆ~ ಎಂದು ಅವರು ಅಭಿಪ್ರಾಯಪಟ್ಟರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry