ನದಿಗೆ ಉರುಳಿದ ಬಸ್: ಮಕ್ಕಳು ಸೇರಿ 8 ಮಂದಿ ನೀರುಪಾಲು

7

ನದಿಗೆ ಉರುಳಿದ ಬಸ್: ಮಕ್ಕಳು ಸೇರಿ 8 ಮಂದಿ ನೀರುಪಾಲು

Published:
Updated:

ಪಣಜಿ (ಪಿಟಿಐ): ಸ್ಥಳೀಯ ಬಸ್ ನದಿಗೆ ಉರುಳಿ ಆರು ಮಕ್ಕಳು, ಅವರ ಸಹಾಯಕಿ ಸೇರಿದಂತೆ 8 ಮಂದಿ ಜಲಸಮಾಧಿಯಾಗಿರುವ ದುರ್ಘಟನೆ ಶನಿವಾರ ಇಲ್ಲಿಗೆ ಸಮೀಪದ ಕಲ್ವಿ ನದಿಯಲ್ಲಿ ನಡೆದಿದೆ. ಇನ್ನೂ ಐದು ಮಕ್ಕಳು ಕಾಣೆಯಾಗಿದ್ದಾರೆ.ಬಸ್‌ನಲ್ಲಿ ಶನಿವಾರ ಮಧ್ಯಾಹ್ನ ಶಾಲೆ ಮುಗಿಸಿ ಹಿಂದಿರುಗುತ್ತಿದ್ದ 8- 10 ವರ್ಷದೊಳಗಿನ ಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿದ್ದರು. ಬ್ರೇಕ್ ವೈಫಲ್ಯ ಘಟನೆಗೆ ಕಾರಣ ಎನ್ನಲಾಗಿದೆ. ಬಸ್ ನದಿಗೆ ಉರುಳುತ್ತಿದ್ದಂತೆಯೇ ಚಾಲಕ ಮತ್ತು ನಿರ್ವಾಹಕ ಜಿಗಿದು ಪರಾರಿಯಾಗಿದ್ದಾರೆ.ಸ್ಥಳೀಯರು ಹಾಗೂ ಪೊಲೀಸರ ಸಹಕಾರದೊಂದಿಗೆ ನೌಕಾ ಪಡೆ ಮತ್ತು ಕರಾವಳಿ ಪಡೆಗಳ ಈಜುಗಾರರು ಎರಡು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ 7 ಮಕ್ಕಳನ್ನು ರಕ್ಷಿಸಲು ಯಶಸ್ವಿಯಾದರು. ಮೂರು ಚೇತಕ್ ಹೆಲಿಕಾಪ್ಟರ್‌ಗಳನ್ನೂ ಬಳಸಿಕೊಳ್ಳಲಾಯಿತು.ಘಟನೆಯ ಹಿನ್ನೆಲೆಯಲ್ಲಿ, ಕೆಲವೇ ಗಂಟೆಗಳಲ್ಲಿ ರಾಜ್ಯದಲ್ಲಿ ಆರಂಭವಾಗಲಿದ್ದ ವಾರ್ಷಿಕ ಉತ್ಸವವನ್ನು ಸರ್ಕಾರ ರದ್ದುಪಡಿಸಿತು.ಉತ್ಸವದ ಪ್ರಯುಕ್ತ ರಾಜ್ಯದ ವಿವಿಧ ನಗರಗಳಲ್ಲಿ ನಡೆಯಲಿದ್ದ ಮೆರವಣಿಗೆಗಳನ್ನು ವೀಕ್ಷಿಸಲು ಅದಾಗಲೇ ಸಾವಿರಾರು ಜನ ರಸ್ತೆಯಲ್ಲಿ ನೆರೆದಿದ್ದರು.ಮುಖ್ಯಮಂತ್ರಿ ದಿಗಂಬರ ಕಾಮತ್ ಮೃತರ ಕುಟುಂಬಕ್ಕೆ ತಲಾ ಎರಡು ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ. ತಾಯಿಯೊಬ್ಬಳು ತನ್ನ ಮಕ್ಕಳಿಗಾಗಿ ಹುಡುಕುತ್ತಾ ನದಿಯ ದಂಡೆಯಲ್ಲಿ ಅಲೆಯುತ್ತಿದ್ದ ದೃಶ್ಯ ಕರುಳುಹಿಂಡುವಂತಿತ್ತು. ಬಳಿಕ ಆಕೆಯ 11 ಹಾಗೂ 8 ವರ್ಷದ ಇಬ್ಬರೂ ಹೆಣ್ಣು ಮಕ್ಕಳು ಸತ್ತವರಲ್ಲಿ ಸೇರಿದ್ದುದು ತಿಳಿದುಬಂತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry