ಶುಕ್ರವಾರ, ಆಗಸ್ಟ್ 23, 2019
21 °C

ನದಿಯಲ್ಲಿ ಕೊಚ್ಚಿ ಹೋದ ಗೂಳಿಗಳು

Published:
Updated:

ಶ್ರೀರಂಗಪಟ್ಟಣ: ಕಾವೇರಿ ನದಿಯಲ್ಲಿ 80 ಸಾವಿರ ಕ್ಯೂಸೆಕ್‌ಗೂ ಹೆಚ್ಚು ನೀರು ಹರಿಯುತ್ತಿರುವುದರಿಂದ ಕೆಆರ್‌ಎಸ್ ಜಲಾಶಯದ ತಗ್ಗಿನಲ್ಲಿರುವ ಗೂಳಿತಿಟ್ಟಿನ ನಡುಗಡ್ಡೆಯಲ್ಲಿರುವ ಕಾಡು ದನಗಳಿಗೆ ಅಪಾಯ ಎದುರಾಗಿದೆ.ಸುಮಾರು 3 ವರ್ಷ ಪ್ರಾಯದ ಕಪ್ಪು ಗೂಳಿಯೊಂದು ಗುರುವಾರ ರಾತ್ರಿ ಪ್ರವಾಹಕ್ಕೆ ಕೊಚ್ಚಿಕೊಂಡು ಬಂದು ದಡ ಸೇರಿದೆ. ಇಲ್ಲಿನ   ಒಬೆಲಿಸ್ಕ್ ಸ್ಮಾರಕದ ಬಳಿ ದಡಕ್ಕೆ ಬಂದಿದ್ದ ಗೂಳಿಯನ್ನು ಸ್ಥಳೀಯರು ಹಗ್ಗದಿಂದ ಬಂಧಿಸಿದ್ದಾರೆ. ಕೋಟೆ, ಕಂದಕ ಹಾದು ಒಳಕ್ಕೆ ನುಸುಳಿದ್ದ ಈ ಗೂಳಿ ಜನರನ್ನು ಕಂಡರೆ ಬುಸ್‌ಗುಡುತ್ತಿತ್ತು ಎಂಬ ಕಾರಣಕ್ಕೆ ಸ್ಥಳೀಯರು ಹಗ್ಗದಿಂದ ಬಂಧಿಸಿದ್ದಾರೆ. ಸುಮಾರು 3 ವರ್ಷ ಪ್ರಾಯದ ಕಡುಗಪ್ಪು ಬಣ್ಣದ ಗೂಳಿಯನ್ನು ರೈಲ್ವೆ ನಿಲ್ದಾಣದ ಸಮೀಪ ತೋಟವೊಂದರಲ್ಲಿ ಗೂಳಿಯನ್ನು ಕಟ್ಟಿ ಹಾಕಲಾಗಿದೆ. ನದಿಯಲ್ಲಿ ಪ್ರವಾಹ ಇಳಿದ ನಂತರ ಇದನ್ನು ಸ್ವಸ್ಥಾನ ಸೇರಿಸುತ್ತೇವೆ ಎಂದು ಯೋಗೇಶ್ ತಿಳಿಸಿದ್ದಾರೆ. ಶುಕ್ರವಾರ ಬೆಳಿಗ್ಗೆ ಎರಡು ಗೂಳಿಗಳು ನದಿಯಲ್ಲಿ ಕೊಚ್ಚಿಕೊಂಡು ಹೋದವು ಎಂದು ಸಾಯಿ ಗಣೇಶ್ ತಿಳಿಸಿದ್ದಾರೆ.1992ರ ನಂತರ ಪಟ್ಟಣದ ಕೆಲವು ಕಂದಕಗಳಲ್ಲಿ ನೀರು ಹರಿದಿದೆ. ತಾಲ್ಲೂಕಿನ ರಾಂಪುರ, ದೊಡ್ಡಪಾಳ್ಯ, ಮರಳಾಗಾಲ, ಗಂಜಾಂ, ಚಂದಗಾಲು ಇತರೆಡೆ ನದಿ ದಂಡೆಯಲ್ಲಿನ ಕಬ್ಬು ಹಾಗೂ ತೆಂಗಿನ ತೋಟಗಳಿಗೆ ನೀರು ನುಗ್ಗಿದೆ. ರಾಂಪುರ ಗ್ರಾಮದ ಜಯರಾಂ, ಸದಾನಂದ, ನರಸಿಂಹಮೂರ್ತಿ, ಮಲ್ಲಿಕಾರ್ಜುನ, ಕೃಷ್ಣಪ್ಪ, ದೊಡ್ಡಪಾಳ್ಯ ನರೇಂದ್ರ ಇತರರ ಕಬ್ಬಿನ ಬೆಳೆ ನೀರಿನಿಂದ ಆವೃತವಾಗಿದೆ.ಬತ್ತದ ನಾಟಿಗೆ ಹಸನು ಮಾಡಿದ್ದ ಜಮೀನುಗಳಲ್ಲಿ ಕೊರೆತ ಉಂಟಾಗಿದೆ. ತಾಲ್ಲೂಕಿನ ದೊಡ್ಡಪಾಳ್ಯ ಸಮೀಪ ನಿರ್ಮಾಣ ಹಂತದಲ್ಲಿರುವ ಕಿರು ಜಲವಿದ್ಯುತ್ ಘಟಕಕ್ಕೆ ನೀರು ತುಂಬಿದ್ದು, ಭಾಗಶಃ ಹಾನಿಯಾಗಿದೆ. ಪಶ್ಚಿಮ ವಾಹಿನಿ ಬಳಿ 5ಕ್ಕೂ ಹೆಚ್ಚು ದೇಗುಲಗಳು ಜಲಾವೃತವಾಗಿವೆ. ಪುರಾತನ ದೇಗುಲ, ತೆಂಗಿನ ತೋಟ ಹಾಗೂ ಕಾವೇರಿಪುರ ಆಶ್ರಮಕ್ಕೆ ನೀರು ಹರಿದಿದೆ.ತಾಲ್ಲೂಕಿನ ಮಂಡ್ಯಕೊಪ್ಪಲು ಸಮೀಪದ ಎ.ಎಸ್. ಬಂಡಿಸಿದ್ದೇಗೌಡ ಪಕ್ಷಿಧಾಮದ 4 ನಡುಗಡ್ಡೆಗಳಲ್ಲಿರುವ ಕಾರ್ಮೊರೆಂಟ್, ವಾಟರ್ ಡಕ್ ಹಾಗೂ ಸ್ನೇಕ್‌ಬರ್ಡ್ ಪಕ್ಷಿಗಳು ಸುರಕ್ಷಿತವಾಗಿವೆ ಎಂದು ಅರಣ್ಯ ಇಲಾಖೆ ಸಿಬ್ಬಂದಿ ತಿಳಿಸಿದ್ದಾರೆ. ಆದರೆ ಇಲ್ಲಿ ಪ್ರವಾಸಿಗರಿಗಾಗಿ ನಿರ್ಮಿಸಿರುವ ಬಟ್ಟೆ ಬದಲಿಸುವ ಮನೆ ಹಾಗೂ ಮಂಟಪಕ್ಕೆ ನೀರು ತುಂಬಿದೆ.

Post Comments (+)