ಬುಧವಾರ, ನವೆಂಬರ್ 13, 2019
22 °C

ನದಿಯಲ್ಲಿ ಮುಳುಗಿ ಇಬ್ಬರ ಸಾವು

Published:
Updated:

ಶ್ರೀರಂಗಪಟ್ಟಣ: ವಿಹಾರಕ್ಕೆ ಬಂದಿದ್ದ ಮೈಸೂರಿನ ಖಾಸಗಿ ಶಿಕ್ಷಣ ಸಂಸ್ಥೆಯ ಇಬ್ಬರು ಉದ್ಯೋಗಿಗಳು ಕಾವೇರಿ ನದಿಯಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ತಾಲ್ಲೂಕಿನ ಮಹದೇವಪುರ ಬಳಿ ಗುರುವಾರ ಸಂಜೆ ನಡೆದಿದೆ.ಮೈಸೂರಿನ ಸೇಂಟ್ ಜೋಸೆಫ್ ಶಾಲೆಯ ವಾಹನ ಚಾಲಕ ರವಿ (38) ಹಾಗೂ ಅದೇ ಶಾಲೆಯ ಸಹಾಯಕಿ ಭಾಗ್ಯ(18) ಮೃತಪಟ್ಟವರು. ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ 8 ಜನರ ತಂಡ ಇಲ್ಲಿಗೆ ವಿಹಾರಕ್ಕೆ ಬಂದಿದ್ದ ವೇಳೆ ರಾಜಪರಮೇಶ್ವರಿ ನಾಲೆ ಅಣೆಕಟ್ಟೆ ಬಳಿ ಈ ಘಟನೆ ನಡೆದಿದೆ. ನದಿಯಲ್ಲಿ ಈಜಾಡುತ್ತಿದ್ದ ಇತರರ ಫೋಟೋ ತೆಗೆಯುತ್ತಿದ್ದ ಭಾಗ್ಯ ಮೊದಲು ನೀರಿನಲ್ಲಿ ಮುಳುಗಿದ್ದಾರೆ. ಅವರನ್ನು ರಕ್ಷಿಸಲು ಹೋದ ಚಾಲಕ ರವಿ ಕೂಡ ನೀರಿನಲ್ಲಿ ಮುಳುಗಿದರು ಎಂದು ಜತೆಯಲ್ಲಿ ಬಂದಿದ್ದ ಶಾರ್ವರಿ ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಶುಕ್ರವಾರ ಸಂಜೆ ಮೃತ ದೇಹಗಳನ್ನು ಹೊರ ತೆಗೆದಿದ್ದು, ಪಂಚನಾಮೆ ನಡೆಸಿ ವಾರಸುದಾರರಿಗೆ ಒಪ್ಪಿಸಲಾಗಿದೆ ಎಂದು ಅರಕೆರೆ ಪೊಲೀಸ್ ಠಾಣೆ ಸಬ್‌ಇನ್ಸ್‌ಪೆಕ್ಟರ್ ಪೂಣಚ್ಚ ತಿಳಿಸಿದ್ದಾರೆ.ಮಂಗಳೂರು ನಗರದ ಕೆ.ಭಾಸ್ಕರರಾವ್ ಅವರ ಪುತ್ರಿ ಭಾಗ್ಯ ಮೈಸೂರಿನ ತಮ್ಮ ಬಂಧುಗಳ ಮನೆಯಲ್ಲಿದ್ದು ಸೇಂಟ್ ಜೋಸೆಫ್ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದರು. ಮೃತ ರವಿ ಮೈಸೂರು ತಾಲ್ಲೂಕಿನ ದಾಸಪ್ಪನಕೊಪ್ಪಲು ಗ್ರಾಮದ ಕಾಳನಿಂಗಯ್ಯ ಅವರ ಪುತ್ರ ಎಂದು ತಿಳಿದು ಬಂದಿದೆ. ಮರಳುಗಾರಿಕೆಯಿಂದಾಗಿ ನದಿಯಲ್ಲಿ ಅಲ್ಲಲ್ಲಿ ಗುಂಡಿಗಳು ನಿರ್ಮಾಣವಾಗಿದ್ದವು. ಅದರ ಅರಿವಿಲ್ಲದೆ ನದಿಗೆ ಇಳಿದವರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಪೊಲೀಸರು ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)