ಶುಕ್ರವಾರ, ನವೆಂಬರ್ 22, 2019
27 °C

ನದಿ ಬತ್ತಿದರೂ ಕೃಷಿ ನಿಲ್ಲಲಿಲ್ಲ!

Published:
Updated:

`ಆನೆ ಸತ್ತರೂ ಸಾವಿರ, ಇದ್ದರೂ ಸಾವಿರ'- ಇದು ಗಾದೆ ಮಾತು. ಕೂಡಲಸಂಗಮದ ಸಮೀಪದಲ್ಲಿ ಈಗೊಂದು ಹೊಸ ಗಾದೆ ಹುಟ್ಟಿಕೊಂಡಿದೆ. ಅದು- `ನದಿಗಳು ಇದ್ದರೂ ಲಾಭ, ಬತ್ತಿದರೂ ಲಾಭ' ಎಂದು. ಈ ಗಾದೆಯ ಸತ್ಯಾಸತ್ಯತೆಯನ್ನು ಪರೀಕ್ಷಿಸಬೇಕಾದರೆ ಕೂಡಲಸಂಗಮ ಸುತ್ತಮುತ್ತಲಿನ ಗ್ರಾಮಗಳಿಗೆ ಬರಬೇಕು. ಇಲ್ಲಿಯ ನೂರಕ್ಕೂ ಅಧಿಕ ರೈತರು ನದಿ ಬತ್ತಿದಾಗಲು ಲಾಭ ಪಡೆಯುತ್ತಾರೆ. ವಿಚಿತ್ರ ಎನಿಸಿದರೂ ಸತ್ಯ, ಕೃಷ್ಣೆ, ಮಲ್ಲಪ್ರಭಾ ನದಿಯ ದಡವನ್ನು ನೋಡಿದರೆ ನದಿ ಬತ್ತಿದಾಗಲೂ ರೈತರ ಜೇಬು ತುಂಬುತ್ತದೆ!ಕೂಡಲಸಂಗಮ ಬಳಿ ಸಮ್ಮಿಲನವಾದ ಕೃಷ್ಣೆ, ಮಲ್ಲಪ್ರಭೆ ನದಿಯ ದಡದ ಕೂಡಲಸಂಗಮ, ಕಮದತ್ತ,ಅಡವಿಹಾಳ,ಎಮ್ಮೆಟ್ಟಿ  ಗ್ರಾಮಗಳ ರೈತರು ಕೃಷ್ಣಾನದಿಯ ದಡದ ಫಲವತ್ತಾದ ಮೆಕ್ಕಲು ಮಣ್ಣಿನಲ್ಲಿ ಸವತೆ, ಚವಳೆ, ಬೆಂಡೆ, ಹಿರೇಕಾಯಿ ಮುಂತಾದ ಬೆಳೆಯನ್ನು ಬೆಳೆದು ಲಾಭ ಪಡೆಯುತ್ತಿದ್ದಾರೆ.ನದಿಗಳ ಸುತ್ತಮುತ್ತಲಿನ ಹೊಲಗಳಲ್ಲಿ ಹಸಿರು ಕಂಗೊಳಿಸುತ್ತಿದೆ. ನದಿ ನೀರು ಕಡಿಮೆ ಆಗುತ್ತಿದ್ದಂತೆ ಬೀಜಗಳನ್ನು ನದಿಯ ದಡದ 100ಕ್ಕೂ ಹೆಚ್ಚು ಎಕರೆ ಭೂಮಿಯಲ್ಲಿ ಬೀಜ ಹಾಕಿದ್ದಾರೆ. ನದಿ ನೀರು ಸಂಪೂರ್ಣ ಖಾಲಿಯಾದಾಗ ಸವತೆ ಕಾಯಿ ಫಸಲು ಬೆಳದು ಬೆಳೆ ನೀಡಲು ಆರಂಭಿಸಿದೆ.ಮೊದಲೇ ಬಿರು ಬಿಸಿಲು ನೆತ್ತಿಯನ್ನು ಸುಡುತ್ತಿದೆ. ಕೂಡಲಸಂಗಮಕ್ಕೆ ಬಂದ ಪ್ರವಾಸಿಗರ ದೇಹ ತಣಿಸಲು ಈ ಸವತೆಕಾಯಿ ಸಹಾಯಕವಾಗಿದೆ. ಕೆ.ಜಿ.ಗೆ 15 ರೂಪಾಯಿಯಂತೆ ಕೂಡಲಸಂಗಮಕ್ಕೆ ಬರುವ ಪ್ರವಾಸಿಗರಿಗೆ ರೈತರು ಮಾರಾಟ ಮಾಡುತ್ತಾರೆ.ಜೊತೆಗೆ ಹುನಗುಂದ ಮುದ್ದೇಬಿಹಾಳಕ್ಕೂ ಸವತೆ ಕಾಯಿಯನ್ನು ಕಳಿಸಿಕೊಡುತ್ತಾರೆ. ಸವತೆ ಕಾಯಿ ಜೊತೆಗೆ ಜೊತೆಗೆ ಬೆಂಡಿ, ಹಿರೇಕಾಯಿಯನ್ನು ನದಿ ತಟದಲ್ಲಿ ಬೆಳೆದಿದ್ದಾರೆ.  ಕೆ.ಜಿ.ಗೆ 20 ರೂಪಾಯಿಯಂತೆ ಇವುಗಳನ್ನು ಮಾರಾಟ ಮಾಡುತ್ತಾರೆ. ಕಾಯಿಗಳ ಜೊತೆಗೆ ಸೊಪ್ಪನ್ನೂ ಮಾರಾಟ ಮಾಡುತ್ತಾರೆ. 5 ರೂಪಾಯಿ ದರದಲ್ಲಿ ಒಂದು ಪುಂಡಿ ಕಟ್ಟನ್ನು ಮಾರಾಟ ಮಾಡುತ್ತಾರೆ.ಬೇಸಿಗೆ ಬಂದು ಬಂದು ನದಿಯಲ್ಲಿ ನೀರು ಕಡಿಮೆಯಾಗುತ್ತಿದ್ದಂತೆ ರೈತರು ದಡದಲ್ಲಿ ಬೆಳೆ ಬೆಳೆಯಲು ತಯಾರಾಗುತ್ತಾರೆ. ಮತ್ತೆ ಮಳೆ ಬಂದು ನದಿ ತುಂಬುವಷ್ಟರಲ್ಲಿ ಜೇಬು ತುಂಬಿಸಿಕೊಂಡಿರುತ್ತಾರೆ. ನದಿ ದಡದ 100ಕ್ಕೂ ಅಧಿಕ ಕುಟುಂಬಗಳು ಮಾರ್ಚ್ ಅಂತ್ಯದ ವೇಳೆಯಿಂದ ಕೃಷಿ ಮಾಡಲು ಪ್ರಾರಂಭ ಮಾಡುತ್ತಾರೆ.  ಜುಲೈ ಮೊದಲ ವಾರದವರಗೆ ಬೆಳೆ ಬೆಳೆಯುತ್ತಾರೆ. ನಂತರ ನದಿ ದಡದ ಕೃಷಿಯನ್ನು ನಿಲ್ಲಿಸುತ್ತಾರೆ.`ಈ  ಕೃಷಿಗೆ 3 ತಿಂಗಳಲ್ಲಿ 2 ರಿಂದ 3 ಲಕ್ಷ ರೂಪಾಯಿ ಆದಾಯ ಬರುತ್ತದೆ. ಮೂರು ತಿಂಗಳಿಗೆ 10 ರಿಂದ 20 ಸಾವಿರ ರೂಪಾಯಿ  ಖರ್ಚು ಬರುತ್ತದೆ' ರೈತ ಬಸವರಾಜ ಗುಗ್ಗರಿ ಹೇಳಿದರು.`ಇಂದು ರಾಜ್ಯದ ಎಲ್ಲ ಭಾಗದಲ್ಲಿ ಇರುವ ನದಿಯ ದಡದ ರೈತರು ಇಂತಹ ವ್ಯವಸಾಯ ಮಾಡಿಕೊಳ್ಳಬೇಕು. ನದಿ ಬತ್ತಿದಾಗ ನೀರು ಇಲ್ಲ ಎಂದು ಕುಳಿತು ಕೊಳ್ಳದೇ ಬತ್ತಿದ ನದಿಯಲ್ಲೆೀ ಇಂತಹ ಬೆಳೆಯನ್ನು ಹಾಕುವುದರ ಮೂಲಕ ಬೆಳೆ ತೆಗೆಯಬೇಕು. ಇದರಿಂದ ರೈತರ ಆದಾಯ ಅಧಿಕವಾಗುತ್ತದೆ. ಮಳೆ ಬಂದು ನದಿ ಬಂದ ನಂತರ ಮತ್ತೆ ಕೃಷಿ ಭೂಮಿಯಲ್ಲಿ ವ್ಯವಸಾಯದಲ್ಲಿ ತೊಡಗಿಕೊಳ್ಳಬಹುದು' ಎಂದು  ಸಂಗಮೇಶ  ಎಮ್ಮಿ  ಹೇಳಿದರು.

 

ಪ್ರತಿಕ್ರಿಯಿಸಿ (+)