ಭಾನುವಾರ, ಮಾರ್ಚ್ 7, 2021
18 °C
ಸುರಿಯುವ ಮಳೆಯಲ್ಲೂ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ, ಸಂಚಾರ ಅಸ್ತವ್ಯಸ್ತ

`ನದಿ ಸೇತುವೆ ಮೇಲೆ ದೀಪ ಅಳವಡಿಸಿ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

`ನದಿ ಸೇತುವೆ ಮೇಲೆ ದೀಪ ಅಳವಡಿಸಿ'

ಕಾರವಾರ:  ಕಾಳಿ ಸೇತುವೆ ಮೇಲೆ ಬೀದಿ ದೀಪ ಅಳವಡಿಸಬೇಕು ಎಂದು ಆಗ್ರಹಿಸಿ ಪಕ್ಷಾತೀತ ಜನಪರ ವೇದಿಕೆ ಕಾರ್ಯಕರ್ತರು ಶುಕ್ರವಾರ ತಾಲ್ಲೂಕಿನ ಸದಾಶಿವಗಡದ ಕಾಳಿ ಸೇತುವೆ ಬಳಿ ರಾಷ್ಟ್ರೀಯ ಹೆದ್ದಾರಿ-17 ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು.ಕಾಳಿ ಸೇತುವೆಯ ಸದಾಶಿವಗಡ ಭಾಗದಲ್ಲಿ ಸೇರಿದ ವೇದಿಕೆ ಕಾರ್ಯಕರ್ತರು, ಸುರಿಯುತ್ತಿರುವ ಮಳೆಯ ನಡುವೆಯೂ ಕೊಡೆ ಹಿಡಿದು ರಸ್ತೆ ತಡೆ ನಡೆಸಿದರು. ನಗರಸಭೆ ಹಾಗೂ ಹೆದ್ದಾರಿ ಪ್ರಾಧಿಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.ಕಾಳಿ ಸೇತುವೆ ನಿರ್ಮಾಣವಾಗಿ 20 ವರ್ಷ ಕಳೆದರೂ ಸೇತುವೆ ಮೇಲೆ ಸರಿಯಾದ ಬೀದಿ ದೀಪದ ವ್ಯವಸ್ಥೆ ಮಾಡಿಲ್ಲ. ಸೇತುವೆ ಉದ್ದಕ್ಕೂ ವಿದ್ಯುತ್ ದೀಪದ ಕಂಬಗಳು ಇರುವುದು ಬಿಟ್ಟರೆ ಯಾವ ಕಂಬಕ್ಕೂ ದೀಪ ಇಲ್ಲ. ಈ ಬಗ್ಗೆ ಹಲವು ಬಾರಿ ಜಿಲ್ಲಾಡಳಿತದ ಗಮನಕ್ಕೆ ತಂದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿದರು.ಕೆಲವೊಮ್ಮೆ ಸೇತುವೆ ಮೇಲೆ ದೀಪ ಅಳವಡಿಸಿದ್ದರೂ ಅದು ಕೆಲವೇ ದಿನಕ್ಕೆ ಹಾಳಾಗುತ್ತದೆ. ಇದರಿಂದ ಇಲ್ಲಿ ಅಕ್ರಮ ಮದ್ಯ ಸಾಗಣೆ, ದರೋಡೆ, ಕಳ್ಳತನ, ಆತ್ಮಹತ್ಯೆಯಂತಹ ಪ್ರಕರಣಗಳು ಹೆಚ್ಚಾಗಿ ನಡೆಯುತ್ತಿದೆ. ಇದಕ್ಕೆಲ್ಲ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ದೂರಿದರು.

ಇಲ್ಲಿ ಪ್ರತಿನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತಿರುತ್ತದೆ.

ಆದರೆ, ಮಳೆಗಾಲದಲ್ಲಿ ಸೇತುವೆಗೆ ಹೊಂದಿಕೊಂಡಿರುವ ಗುಡ್ಡದಿಂದ ಕಲ್ಲುಗಳು ರಸ್ತೆ ಮೇಲೆ ಬೀಳುತ್ತಿರುವುದರಿಂದ ಪಾದಚಾರಿಗಳು, ವಾಹನ ಸವಾರರು ರಾತ್ರಿ ವೇಳೆ ಆತಂಕದಲ್ಲಿಯೇ ಸೇತುವೆ ದಾಟಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ ಗಜೇಂದ್ರ ನಾಯ್ಕ ಮಾತನಾಡಿ, ಕಾರವಾರದ ಪ್ರೇಕ್ಷಣೀಯ ಸ್ಥಳಗಳಲ್ಲಿ ಕಾಳಿ ಸೇತುವೆಯೂ ಒಂದು. ಹೀಗಾಗಿ ಇಲ್ಲಿ ವಿಹರಿಸಲು ಪ್ರತಿ ದಿನ ಪ್ರವಾಸಿಗರು ಹಾಗೂ ಸ್ಥಳೀಯರು ಬರುತ್ತಾರೆ. ಹೀಗಾಗಿ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಬೀದಿದೀಪ ಅಳವಡಿಸಬೇಕು ಎಂದು ಆಗ್ರಹಿಸಿದರು.ರಸ್ತೆ ತಡೆಯಿಂದ ಕೆಲ ಸಂಚಾರ ಅಸ್ತವ್ಯಸ್ತಗೊಂಡಿತ್ತು. ನೂರ್ ಮಹಮ್ಮದ್, ರಾಮಾ ನಾಯ್ಕ, ಬಾಬು ಶೇಖ, ಮಂಜುನಾಥ ನಾಯ್ಕ, ಸಾಯಿನಾಥ ಮೇತ್ರಿ, ಮಾಧವ ಅಸ್ನೋಟಿಕರ, ಗಂಗಾಧರ ಭಟ್, ಸಾಯಿನಾಥ ಹರಿಕಾಂತ, ಆರ್.ಎಸ್. ನಾಯ್ಕ ಮತ್ತಿತರರು ಹಾಜರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.