ಗುರುವಾರ , ನವೆಂಬರ್ 21, 2019
24 °C
ಮರುಕಳಿಸುತ್ತಿರುವ ಬಾಂಬ್ ಸ್ಫೋಟಗಳು = ಸ್ಥಾಪನೆಯಾಗದ ಎನ್‌ಎಸ್‌ಜಿ ಘಟಕ = ನಿರೀಕ್ಷಿತ ಫಲ ನೀಡದ `ಇ-ಬೀಟ್' ವ್ಯವಸ್ಥೆ

ನನಸಾಗದ `ಅಪರಾಧ ಮುಕ್ತ' ನಗರದ ಕನಸು

Published:
Updated:

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅಧಿಕಾರದ ಗದ್ದುಗೆ ಹಿಡಿದ ಬಿಜೆಪಿ ಬೆಂಗಳೂರು ನಗರಕ್ಕಾಗಿಯೇ ಪ್ರತ್ಯೇಕ ಭರವಸೆಯ ಪ್ರಣಾಳಿಕೆ ನೀಡಿತ್ತು. ಬಿಬಿಎಂಪಿ ಚುನಾವಣೆಯಲ್ಲೂ ಜನ ಇದೇ ಪಕ್ಷಕ್ಕೆ ಆಶೀರ್ವಾದ ನೀಡಿದ್ದರು. ಲೋಕಸಭೆ ಚುನಾವಣೆಯಲ್ಲಿ ನಗರದ 3 ಸಂಸತ್ ಸ್ಥಾನಗಳು ಇದೇ ಪಕ್ಷದ ಪಾಲಾಯಿತು. ಆಯಾ ಚುನಾವಣೆಯಲ್ಲಿ ನೀಡಿದ ಆಶ್ವಾಸನೆ ಈಡೇರಿತೇ? ಅನುಷ್ಠಾನ ಯಾವ ಸ್ಥಿತಿಯಲ್ಲಿದೆ ಎನ್ನುವ ಬಗ್ಗೆ `ಪ್ರಜಾವಾಣಿ' ಸರಣಿ ಲೇಖನಗಳ ಮೂಲಕ ಬೆಳಕು ಚೆಲ್ಲಲಿದೆ.ಬೆಂಗಳೂರು:
ರಾಜಧಾನಿ ಬೆಂಗಳೂರನ್ನು `ಅಪರಾಧ ಮುಕ್ತ ನಗರವನ್ನಾಗಿ ಮಾಡುತ್ತೇವೆ' ಎಂಬ ಘೋಷಣೆಯೊಂದಿಗೆ ರಾಜ್ಯ ಹಾಗೂ ಬಿಬಿಎಂಪಿಯಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದ ಬಿಜೆಪಿ, ಆ ದಿಸೆಯಲ್ಲಿ ತೋರಿದ ಸಾಧನೆಯನ್ನು ಅವಲೋಕಿಸಿದರೆ ನಿರಾಸೆಯಾಗುತ್ತದೆ.ಸುಮಾರು 800 ಚದರ ಕಿ.ಮೀ ವಿಸ್ತಾರವಿರುವ ನಗರವು ಜಗತ್ತಿನ ಎಲ್ಲ ಸಂಸ್ಕೃತಿ, ಭಾಷೆ, ಧರ್ಮಗಳ ಪ್ರತೀಕವಾಗಿದೆ. ಕಮಿಷನರೇಟ್ ಹೊಂದಿರುವ ಬೆಂಗಳೂರಿನಲ್ಲಿ 103 ಕಾನೂನು ಮತ್ತು ಸುವ್ಯವಸ್ಥೆ ಪೊಲೀಸ್ ಠಾಣೆಗಳು, 41 ಸಂಚಾರ ಠಾಣೆಗಳು ಹಾಗೂ ಒಂಬತ್ತು ಉಪ ಠಾಣೆಗಳಿವೆ. ಸುಮಾರು 18 ಸಾವಿರ ಪೊಲೀಸರು ನಗರದ ರಕ್ಷಣೆಯ ಹೊಣೆ ಹೊತ್ತಿದ್ದಾರೆ.ಜಾಗತಿಕ ಮನ್ನಣೆ ಪಡೆದಿರುವ ಬೆಂಗಳೂರಿನಲ್ಲಿ ಭಯೋತ್ಪಾದನಾ ದಾಳಿಗಳು ನಡೆದರೆ ಅಂತಹ ಸಂದರ್ಭದಲ್ಲಿ ರಕ್ಷಣಾ ಕಾರ್ಯಾಚರಣೆಗೆ ಅನುಕೂಲವಾಗುವಂತೆ ನಗರದಲ್ಲೇ ರಾಷ್ಟ್ರೀಯ ಭದ್ರತಾ ಪಡೆ (ಎನ್‌ಎಸ್‌ಜಿ) ಘಟಕ ಸ್ಥಾಪಿಸುವುದಾಗಿ ಬಿಜೆಪಿಯು 2009ರ ಲೋಕಸಭಾ ಚುನಾವಣೆ ವೇಳೆ ಘೋಷಿಸಿತ್ತು. ಆದರೆ, ಆ ಭರವಸೆ ಈವರೆಗೂ ಈಡೇರಿಲ್ಲ. ಈಡೇರಿಕೆಯ ಪ್ರಯತ್ನವೂ ನಡೆದಿಲ್ಲ.ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ 2008ರ ಮೇ ತಿಂಗಳಿನಿಂದ ಈವರೆಗೆ ನಗರದಲ್ಲಿ ಮೂರು ಬಾರಿ ಬಾಂಬ್ ಸ್ಫೋಟ ಸಂಭವಿಸಿದೆ. ಪ್ರತಿ ಬಾರಿ ಸ್ಫೋಟ ಸಂಭವಿಸಿದಾಗಲೂ `ಮುಂದಿನ ದಿನಗಳಲ್ಲಿ ಈ ರೀತಿಯ ಘಟನೆಗಳು ನಡೆಯದಂತೆ ಎಚ್ಚರ ವಹಿಸಲಾಗುತ್ತದೆ' ಎಂದು ಸರ್ಕಾರ ಹೇಳುತ್ತಲೇ ಬಂದಿದೆ. ಆದರೆ, ಮೇಲಿಂದ ಮೇಲೆ ಬಾಂಬ್ ಸ್ಫೋಟಗಳು ಸಂಭವಿಸುತ್ತಲೇ ಇವೆ.2008ರ ಜು.25ರಂದು ನಗರದ ಎಂಟು ಕಡೆ ಸರಣಿ ಬಾಂಬ್ ಸ್ಫೋಟ ಸಂಭವಿಸಿ ಮಹಿಳೆಯೊಬ್ಬರು ಮೃತಪಟ್ಟಿದ್ದರು. ಆ ಸ್ಫೋಟದ ನೆನಪು ಮಾಸುವ ಮುನ್ನವೇ 2010ರ ಏ.17ರಂದು ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಎರಡು ಕಡೆ ಬಾಂಬ್ ಸ್ಫೋಟ ಸಂಭವಿಸಿತ್ತು.ಆಗ ಪೊಲೀಸ್ ಸಿಬ್ಬಂದಿ ಸೇರಿದಂತೆ 17 ಜನರು ಗಾಯಗೊಂಡಿದ್ದರು. ಕಾಕತಾಳೀಯ ಎಂಬಂತೆ ಕ್ರೀಡಾಂಗಣದ ಬಳಿ ಸ್ಫೋಟ ಸಂಭವಿಸಿ ಮೂರು ವರ್ಷಗಳ ಬಳಿಕ ಆಡಳಿತಾರೂಢ ಬಿಜೆಪಿ ಕಚೇರಿಯಿಂದ ಕೂಗಳತೆ ದೂರದಲ್ಲೇ ಮಲ್ಲೇಶ್ವರದಲ್ಲಿ ಏ.17ರಂದೇ ಬಾಂಬ್ ಸ್ಫೋಟ ಸಂಭವಿಸಿದೆ. ಈ ಸ್ಫೋಟದಲ್ಲಿ 13 ಮಂದಿ ಪೊಲೀಸರು ಮತ್ತು ಆರು ಮಂದಿ ಸಾರ್ವಜನಿಕರು ಗಾಯಗೊಂಡಿದ್ದಾರೆ.ಭಯೋತ್ಪಾದನಾ ಕೃತ್ಯಗಳನ್ನು ಪರಿಣಾಮಕಾರಿಯಾಗಿ ಹತ್ತಿಕ್ಕಲು ಹಾಗೂ ಹೆಚ್ಚಿನ ಭದ್ರತೆಗಾಗಿ ಅತ್ಯಾಧುನಿಕ ಶಸ್ತ್ರಾಸ್ತ್ರಗಳ ತರಬೇತಿ ಪಡೆದ ವಿಶೇಷ ಪಡೆ ರಚಿಸುವುದಾಗಿ ಬಿಜೆಪಿ ಆಶ್ವಾಸನೆ ಕೊಟ್ಟಿತ್ತು. ಈ ನಿಟ್ಟಿನಲ್ಲಿ ಸರ್ಕಾರ 2009ರ ನವೆಂಬರ್‌ನಲ್ಲಿ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಆಂತರಿಕ ಭದ್ರತಾ ವಿಭಾಗ (ಐಎಸ್‌ಡಿ) ಆರಂಭಿಸಿತು. ಜತೆಗೆ ಎನ್‌ಎಸ್‌ಜಿ ಮಾದರಿಯ ಗರುಡ ಕಮಾಂಡೊ ಪಡೆಯನ್ನು ರಚಿಸಿತು. ಆದರೂ ನಗರದಲ್ಲಿ ಉಗ್ರರ ಕೃತ್ಯಗಳು ಅಂತ್ಯ ಕಂಡಿಲ್ಲ.ಅಭದ್ರತೆಯಲ್ಲಿ ಅಲ್ಪಸಂಖ್ಯಾತರು

`ನಗರದಲ್ಲಿ ಶಾಂತಿ ಸೌಹಾರ್ದ ಮತ್ತು ಸಾಮರಸ್ಯ ಕಾಪಾಡುವುದು ಪಕ್ಷದ ಆದ್ಯ ಕರ್ತವ್ಯ' ಎಂದು ಬಿಜೆಪಿಯು ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿತ್ತು. ಆದರೆ, ಪಕ್ಷವು ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಕೆಲವೇ ತಿಂಗಳಲ್ಲಿ 2008ರ ಸೆ.21ರಂದು ರಾಜರಾಜೇಶ್ವರಿನಗರ, ಮರಿಯಣ್ಣನಪಾಳ್ಯ ಸೇರಿದಂತೆ ನಗರದ ಹಲವೆಡೆ ಚರ್ಚ್‌ಗಳ ಮೇಲೆ ದಾಳಿ ನಡೆದಿತ್ತು.ಆಗ ದಾಳಿ ಸಂಬಂಧ ಕೆಲವರನ್ನು ಬಂಧಿಸಿ ಮತ್ತು ಘಟನೆ ನಡೆದ ಪೊಲೀಸ್ ಠಾಣೆ ವ್ಯಾಪ್ತಿಯ ಸಿಬ್ಬಂದಿಯನ್ನು ಸೇವೆಯಿಂದ ಅಮಾನತು ಮಾಡಿದ್ದ ಸರ್ಕಾರ, ಪ್ರಕರಣದ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಲಿಲ್ಲ.ಆ ನಂತರ 2009ರ ಸೆಪ್ಟೆಂಬರ್‌ನಲ್ಲಿ ಹೆಬ್ಬಗೋಡಿಯ ಸೇಂಟ್ ಫ್ರಾನ್ಸಿಸ್ ಡಿ ಸೆಲ್ಸ್ ಚರ್ಚ್‌ನ ಮೇಲೆ ದಾಳಿಯಾಗಿತ್ತು. ಬಳಿಕ 2011ರ ಫೆ.16ರಂದು ಕಾಚರಕನಹಳ್ಳಿಯಲ್ಲಿ ಚರ್ಚ್ ಒಂದರ ಮೇಲೆ ದಾಳಿ ನಡೆದಿತ್ತು. ಇಂತಹ ಘಟನೆಗಳು ಕ್ರೈಸ್ತ ಸಮುದಾಯದಲ್ಲಿ ಅಭದ್ರತೆಯ ಭಾವ ಮೂಡಲು ಕಾರಣವಾಗಿದೆ.ಹದಗೆಟ್ಟ ಕಾನೂನು ಸುವ್ಯವಸ್ಥೆ

ನಗರದಲ್ಲಿ ಕಾನೂನು ಸುವ್ಯವಸ್ಥೆ ಬಲಪಡಿಸಲು ಮತ್ತು ಅಪರಾಧ ಪ್ರಮಾಣ ತಗ್ಗಿಸಲು ಕ್ರಮ ಕೈಗೊಳ್ಳುವುದಾಗಿ ಬಿಜೆಪಿ 2008ರ ವಿಧಾನಸಭಾ ಚುನಾವಣಾ ಪ್ರಣಾಳಿಕೆಯಲ್ಲಿ ಹೇಳಿಕೊಂಡಿತ್ತು. ಆದರೆ, ಆ ನಿಟ್ಟಿನಲ್ಲಿ ನಡೆದ ಪ್ರಯತ್ನಗಳು ಬೆರಳೆಣಿಕೆಯಷ್ಟು.2012ರ ಮಾ.2ರಂದು ಸಿಟಿ ಸಿವಿಲ್ ನ್ಯಾಯಾಲಯದ ಆವರಣದಲ್ಲಿ ವಕೀಲರು, ಮಾಧ್ಯಮ ಪ್ರತಿನಿಧಿಗಳು ಹಾಗೂ ಕಾಲೇಜು ವಿದ್ಯಾರ್ಥಿಗಳ ನಡುವೆ ನಡೆದ ಘರ್ಷಣೆಯು ಕಾನೂನು ಸುವ್ಯವಸ್ಥೆ ಪಾಲನೆಯಲ್ಲಿ ಸರ್ಕಾರದ ವೈಫಲ್ಯವನ್ನು ಎತ್ತಿ ತೋರುತ್ತದೆ.ಆ ಘಟನೆಯಲ್ಲಿ ವಕೀಲರು, ಪೊಲೀಸರು, ಮಾಧ್ಯಮ ಪ್ರತಿನಿಧಿಗಳು ಮತ್ತು ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ನೂರಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಸುಮಾರು 60 ವಾಹನಗಳು ಜಖಂಗೊಂಡಿದ್ದವು. ಆ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಸಂಪೂರ್ಣ ವಿಫಲವಾಗಿದ್ದ ಸರ್ಕಾರ ಸಾರ್ವಜನಿಕವಾಗಿ ಸಾಕಷ್ಟು ಟೀಕೆಗೆ ಗುರಿಯಾಗಿತ್ತು.ಅಪರಾಧ ಚಟುವಟಿಕೆಗಳ ನಿಯಂತ್ರಣಕ್ಕಾಗಿ ಜಾರಿಗೊಳಿಸಿದ `ಇ-ಬೀಟ್' ವ್ಯವಸ್ಥೆಯು ನಿರೀಕ್ಷಿತ ಫಲ ಕೊಟ್ಟಿಲ್ಲ. ಆ ಹೊಸ ಗಸ್ತು ವ್ಯವಸ್ಥೆ ಜಾರಿಯಾದ ನಂತರವೂ ನಗರದೆಲ್ಲೆಡೆ ಅಪರಾಧ ಚಟುವಟಿಕೆಗಳು ನಿರಾತಂಕವಾಗಿ ನಡೆಯುತ್ತಲೇ ಇವೆ.ಯಾರಬ್‌ನಗರದಲ್ಲಿ 2011ರ ಜ.16ರಂದು ದುಷ್ಕರ್ಮಿಗಳು ಬಿಬಿಎಂಪಿ ಸದಸ್ಯ ದಿವಾನ್ ಆಲಿ ಅವರನ್ನು ಕೊಲೆ ಮಾಡಿದ್ದರು. ಪಾಲಿಕೆಯ ಮತ್ತೊಬ್ಬ ಸದಸ್ಯ ನಟರಾಜ್ ಅವರನ್ನು ದುಷ್ಕರ್ಮಿಗಳು 2011ರ ಅ.1ರಂದು ಮಲ್ಲೇಶ್ವರದಲ್ಲಿ ಹಾಡಹಗಲೇ ಕೊಲೆ ಮಾಡಿದ್ದರು.2012ರ ಮೇ ತಿಂಗಳಿನಲ್ಲಿ ಸಹಕಾರ ಸಂಘಗಳ ಲೆಕ್ಕ ಪರಿಶೋಧನಾ ಇಲಾಖೆ ಉಪನಿರ್ದೇಶಕ ಎಸ್.ಪಿ.ಮಹಾಂತೇಶ್ ಅವರ ಕೊಲೆಯಾಗಿತ್ತು. ಹೀಗೆ ಜನಸಾಮಾನ್ಯರು, ಅಧಿಕಾರಿಗಳು, ಉದ್ಯಮಿಗಳು ಸೇರಿದಂತೆ ಸಮಾಜದ ಎಲ್ಲಾ ವರ್ಗದ ಜನರು ಸಮಾಜಘಾತುಕ ಶಕ್ತಿಗಳ ಕ್ರೌರ್ಯಕ್ಕೆ ಬಲಿಯಾಗುತ್ತಿದ್ದಾರೆ.ಮಹಿಳೆಯರಿಗಿಲ್ಲ ಸುರಕ್ಷತೆ

ಉದ್ಯೋಗಸ್ಥ ಮಹಿಳೆಯರು ಮತ್ತು ವೃದ್ಧರ ರಕ್ಷಣೆಗೆ ವಿಶೇಷ ಯೋಜನೆ ರೂಪಿಸುವುದಾಗಿ ಬಿಜೆಪಿಯು ಬಿಬಿಎಂಪಿ ಚುನಾವಣೆ ಸಂದರ್ಭದಲ್ಲಿ ಘೋಷಣೆ ಮಾಡಿತ್ತು. ಮಹಿಳೆಯರ ರಕ್ಷಣೆಗೆ ಕಟಿಬದ್ಧ ಎಂದು ಹೇಳಿಕೊಂಡಿದ್ದ ಬಿಜೆಪಿಯ ಆಡಳಿತಾವಧಿಯಲ್ಲಿ ನಗರದಲ್ಲಿ ನಡೆದ ಸಾಲು ಸಾಲು ಅತ್ಯಾಚಾರ ಪ್ರಕರಣಗಳು ಮತ್ತು ಮಹಿಳೆಯರ ಕೊಲೆ ಪ್ರಕರಣಗಳು `ಬೆಂಗಳೂರು ಮಹಿಳೆಯರಿಗೆ ಸುರಕ್ಷಿತವಲ್ಲ' ಎಂಬ ಭಾವನೆಯನ್ನು ಸಾರ್ವಜನಿಕರಲ್ಲಿ ಹುಟ್ಟು ಹಾಕಿವೆ.ಜ್ಞಾನಭಾರತಿ ಬಳಿ 2012ರ ಅ.13ರಂದು ನೇಪಾಳ ಮೂಲದ ಕಾನೂನು ವಿದ್ಯಾರ್ಥಿನಿ ಮೇಲೆ ಏಳು ಮಂದಿ ದುಷ್ಕರ್ಮಿಗಳು ಸಾಮೂಹಿಕ ಅತ್ಯಾಚಾರ ಎಸಗಿದ್ದರು. ಅದೇ ರೀತಿ ಮಹಿಳೆಯರು, ಯುವತಿಯರು, ಬಾಲಕಿಯರು ಸೇರಿದಂತೆ ಎಲ್ಲಾ ವಯೋಮಾನದವರ ಮೇಲೂ ಅತ್ಯಾಚಾರ ಪ್ರಕರಣಗಳು ಅವ್ಯಾಹತವಾಗಿ ನಡೆಯುತ್ತಲೇ ಇವೆ.ಈ ನಿಟ್ಟಿನಲ್ಲಿ ಮಹಿಳೆಯರಲ್ಲಿ ಧೈರ್ಯ ತುಂಬಲು ಹಾಗೂ ಅತ್ಯಾಚಾರ ಪ್ರಕರಣಗಳನ್ನು ತಡೆಯುವ ಉದ್ದೇಶಕ್ಕಾಗಿ ಸರ್ಕಾರ `ಅಭಯ' ಎಂಬ ವಿಶೇಷ ಗಸ್ತು ವ್ಯವಸ್ಥೆಯನ್ನು ಆರಂಭಿಸಿತು. ಅಲ್ಲದೇ, ನಗರ ವ್ಯಾಪ್ತಿಯಲ್ಲಿ ಮತ್ತು ಸುತ್ತಮುತ್ತಲ ಪ್ರದೇಶದಲ್ಲಿ ನಡೆಯುವ ಅತ್ಯಾಚಾರ ಹಾಗೂ ಲೈಂಗಿಕ ದೌರ್ಜನ್ಯ ಪ್ರಕರಣಗಳ ಸಂಬಂಧ ದೂರು ನೀಡಲು ಮಹಿಳಾ ಸಹಾಯವಾಣಿಗೆ ಚಾಲನೆ ನೀಡಿತು.ಪೊಲೀಸ್ ಇಲಾಖೆಗೆ ಪೂರಕವಾಗಿ ಕಾರ್ಯ ನಿರ್ವಹಿಸಲು ಬೆಸ್ಕಾಂ ಸಹ ಈ ವರ್ಷದ ಆರಂಭದಲ್ಲಿ ಪ್ರತ್ಯೇಕವಾಗಿ ಮಹಿಳಾ ಸಹಾಯವಾಣಿಯನ್ನು ಆರಂಭಿಸಿತು. ಸರ್ಕಾರ ಮಹಿಳೆಯರ ರಕ್ಷಣೆಗಾಗಿ ಇಷ್ಟೆಲ್ಲಾ ಕ್ರಮ ಕೈಗೊಂಡಿದ್ದರೂ ಅತ್ಯಾಚಾರ ಪ್ರಕರಣಗಳಿಗೆ ಕಡಿವಾಣ ಬಿದ್ದಿಲ್ಲ.

ಪ್ರತಿಕ್ರಿಯಿಸಿ (+)