ನನಸಾಗದ ಬಡವರ ನಮ್ಮ ಮನೆ ಕನಸು

7

ನನಸಾಗದ ಬಡವರ ನಮ್ಮ ಮನೆ ಕನಸು

Published:
Updated:
ನನಸಾಗದ ಬಡವರ ನಮ್ಮ ಮನೆ ಕನಸು

ಹುಬ್ಬಳ್ಳಿ: ಕೇಂದ್ರ ಸರ್ಕಾರದ `ನಮ್ಮ ಮನೆ~ ಯೋಜನೆಯಡಿ ಬಡವರಿಗೆ ಮನೆ ನಿರ್ಮಿಸಿಕೊಡಲು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗೆ ಮಂಜೂರಾಗಿದ್ದ 2.87 ಕೋಟಿ ರೂಪಾಯಿ ಬಳಕೆಯಾಗದೆ ವಾಪಸಾಗಿದೆ.ಧಾರವಾಡದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತ ಆನಂದ ಅದವಾನಿ ಎಂಬುವವರು ಮಾಹಿತಿ ಹಕ್ಕು ಕಾಯ್ದೆಯಡಿ (ಆರ್‌ಟಿಐ) ಮಹಾನಗರ ಪಾಲಿಕೆಯಿಂದ ಪಡೆದಿರುವ ಮಾಹಿತಿಯಲ್ಲಿ ಈ ಅಂಶ ಬೆಳಕಿಗೆ ಬಂದಿದೆ.ರಾಜ್ಯದ ನಗರ ಪ್ರದೇಶದಲ್ಲಿ ಎರಡು ಲಕ್ಷ ಬಡವರಿಗೆ ಮನೆ ಕಟ್ಟಿಕೊಡುವ `ನಮ್ಮ ಮನೆ ಯೋಜನೆ~ 2009ರಲ್ಲಿ ಅನುಷ್ಠಾನಗೊಂಡಿತ್ತು. ರಾಜೀವ್‌ಗಾಂಧಿ ವಸತಿ ಯೋಜನೆಯಡಿ 1.30 ಲಕ್ಷ ರೂಪಾಯಿ ವೆಚ್ಚದಲ್ಲಿ ಮನೆ ಕಟ್ಟಿಕೊಡುವ ಯೋಜನೆ ರೂಪಿಸಲಾಗಿತ್ತು.ನಗರ ಪ್ರದೇಶದಲ್ಲಿ ಸ್ವಂತ ನಿವೇಶನ ಇರುವವರನ್ನು   ಫಲಾನುಭವಿಯಾಗಿ ಆಯ್ಕೆ ಮಾಡಿ, ರೂ 50 ಸಾವಿರ ಸಹಾಯಧನ, ಸರ್ಕಾರದ ಖಾತರಿಯಡಿ ರೂ 50 ಸಾವಿರ ಬ್ಯಾಂಕ್ ಸಾಲ ಸೌಲಭ್ಯ ಒದಗಿಸಲಾಗುತ್ತಿತ್ತು. ಉಳಿದ 30 ಸಾವಿರ ರೂಪಾಯಿಯನ್ನು ಫಲಾನುಭವಿಯೇ ಭರಿಸಬೇಕಾಗಿತ್ತು. ಐದು ಸಾವಿರ ಅರ್ಜಿ: ಈ ಯೋಜನೆಯಡಿ ಪಾಲಿಕೆ ವ್ಯಾಪ್ತಿಯಲ್ಲಿ ಮನೆ ನಿರ್ಮಿಸಿಕೊಡುವಂತೆ 5,000 ಅರ್ಜಿಗಳು ಬಂದಿದ್ದವು. ಫೆಬ್ರುವರಿ 4, 2011ರಲ್ಲಿ ಆಯಾ ಶಾಸಕರ ಅಧ್ಯಕ್ಷತೆಯಲ್ಲಿ ಆಶ್ರಯ ಸಮಿತಿ ಸಭೆ ನಡೆಸಿ ಮೊದಲ ಹಂತದಲ್ಲಿ 575 ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿತ್ತು. ಆರಂಭದಲ್ಲಿ 50 ಸಾವಿರ ರೂಪಾಯಿ ಇದ್ದ ಸಹಾಯಧನವನ್ನು ನಿರ್ಮಾಣ ವೆಚ್ಚ ಅಧಿಕಗೊಂಡಿದ್ದರಿಂದ ರೂ 75 ಸಾವಿರಕ್ಕೆ ಹೆಚ್ಚಿಸಲಾಗಿತ್ತು.  ನಂತರ ಫಲಾನುಭವಿಗಳ ಪಟ್ಟಿಯನ್ನು ಕೇಂದ್ರ ಸರ್ಕಾರದ ವಸತಿ ಇಲಾಖೆಗೆ ಕಳುಹಿಸಲಾಗಿತ್ತು.ಆಗಲೇ ಪಟ್ಟಿಗೆ ಅನುಮೋದನೆ ನೀಡಿದ್ದ ಇಲಾಖೆ ರೂ 2.87 ಕೋಟಿಯನ್ನು ನೇರವಾಗಿ ಪಾಲಿಕೆ ಖಾತೆಗೆ ಜಮಾ ಮಾಡಿತ್ತು. ಸಹಾಯಧನದ ಹಣ ಸಂದಾಯವಾಗುತ್ತಲೇ ಫಲಾನುಭವಿಗಳಿಗೆ ಸಾಲ ನೀಡುವಂತೆ ಯೋಜನೆ ಅನುಷ್ಠಾನದ ಹೊಣೆ ಹೊತ್ತಿದ್ದ ಪಾಲಿಕೆ ಜಂಟಿ ಆಯುಕ್ತರು, ಫೆಬ್ರುವರಿ 24,2011ರಂದು ಬ್ಯಾಂಕ್ ಅಧಿಕಾರಿಗಳ ಸಭೆ ನಡೆಸಿ ಸೂಚನೆ ನೀಡಿದ್ದರು.ಈ ಹಂತದಲ್ಲಿ ಆಗಿರುವ ಆಡಳಿತಾತ್ಮಕ ವಿಳಂಬದಿಂದಾಗಿ ಯೋಜನೆಯ ಹಣ ವಾಪಸ್ ಹೋಗಿದ್ದು, ಬಡವರ ಮನೆ ಕನಸು ನನಸಾಗಲಿಲ್ಲ ಎಂದು ಆನಂದ ಅದವಾನಿ ದೂರುತ್ತಾರೆ.ಆಡಳಿತ ಲೋಪವೇ ಕಾರಣ...


ಆಡಳಿತದ ಲೋಪದಿಂದ ಹಣ ವಾಪಸ್ ಹೋಗಿದೆ. ಇದಕ್ಕೆ ಜನಪ್ರತಿನಿಧಿಗಳು ಹೊಣೆಯಲ್ಲ. ಪಾಲಿಕೆ ಆಯುಕ್ತರೊಂದಿಗೆ ಆ ಬಗ್ಗೆ ಸೋಮವಾರ ಚರ್ಚೆ ನಡೆಸಿದ್ದೇನೆ. ಹಣ ವಾಪಸ್ ತರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು.

ಚಂದ್ರಕಾಂತ ಬೆಲ್ಲದ, ಶಾಸಕ, ಧಾರವಾಡತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಿ...

ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆ ಹಾಗೂ ಬಡವರ ಬಗ್ಗೆ ಬ್ಯಾಂಕ್ ಅಧಿಕಾರಿಗಳಿಗೆ ಇರುವ ನಿಷ್ಕಾಳಜಿಯೇ ಹಣ ವಾಪಸ್ ಹೋಗಲು ಕಾರಣ. ನಿಗದಿತ ಅವಧಿಯಲ್ಲಿ ಯೋಜನೆ ಜಾರಿ ಸಾಧ್ಯವಾಗದಿದ್ದಲ್ಲಿ ನಮ್ಮ ಗಮನಕ್ಕೆ ತರಬೇಕಿತ್ತು. ಫಲಾನುಭವಿಗಳ ಮನವೊಲಿಸಿ ಯೋಜನೆ ಚುರುಕುಗೊಳಿಸಲು  ಪ್ರಯತ್ನಿಸುತ್ತಿದ್ದೆವು.

 

ಈ ಬಗ್ಗೆ ಮೇಯರ್ ಅವರೊಂದಿಗೆ ಚರ್ಚಿಸಿದ್ದೇನೆ. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಿ. ಯೋಜನೆಯ ಹಣ ವಾಪಸ್ ನೀಡುವಂತೆ ರಾಜೀವ್‌ಗಾಂಧಿ ವಸತಿ ನಿಗಮಕ್ಕೆ ಮನವಿ ಮಾಡಲಾಗುವುದು.

ವೀರಭದ್ರಪ್ಪ ಹಾಲಹರವಿ, ಶಾಸಕ, ಹುಬ್ಬಳ್ಳಿ ಪಶ್ಚಿಮಶೀಘ್ರ ಹೊಸ ಪಟ್ಟಿ ಬಿಡುಗಡೆ


ಫಲಾನುಭವಿಗಳು, ಪಾಲಿಕೆ ಅಧಿಕಾರಿಗಳು ಹಾಗೂ ಬ್ಯಾಂಕ್ ಸಿಬ್ಬಂದಿ ನಡುವಿನ ಸಂವಹನ ಕೊರತೆಯಿಂದ ಹಣ ಹಿಂದಕ್ಕೆ ಹೋಗಿದೆ. ನಮ್ಮ ಮನೆ ಯೋಜನೆಗೆ ಈಗ ಹೊಸ ಮಾರ್ಗಸೂಚಿ ರೂಪಿಸಲಾಗಿದೆ. ಸರ್ಕಾರ ನೀಡುವ ಸಹಾಯಧನದ ಮೊತ್ತವನ್ನು 50 ರಿಂದ 75 ಸಾವಿರಕ್ಕೆ ಹೆಚ್ಚಿಸಲಾಗಿದೆ.

 

ಪುನಃ ಹಣ ಬಿಡುಗಡೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಪಾಲಿಕೆಯಿಂದ ಪತ್ರ ಬರೆಯಲಾಗಿದೆ. ಹಳೆಯ ಫಲಾನುಭವಿಗಳನ್ನೇ ಪರಿಗಣಿಸಿ ಶೀಘ್ರ ಹೊಸ ಪಟ್ಟಿಯನ್ನು ಪತ್ರಿಕೆಗಳಿಗೆ ಬಿಡುಗಡೆ ಮಾಡಲಾಗುವುದು.

ಡಾ.ಪಾಂಡುರಂಗ ಪಾಟೀಲ, ಮೇಯರ್ಬಿಜೆಪಿ ಆಡಳಿತದ ಹೊಣೆಗೇಡಿತನ...

ಆಶ್ರಯ ಸಮಿತಿ ಅಧ್ಯಕ್ಷರು ಶಾಸಕರೇ ಆಗಿದ್ದಾರೆ. ಯೋಜನೆಯಡಿ ಬಿಡುಗಡೆಯಾದ ಹಣ ವಾಪಸ್ ಹೋಗಿರುವುದು ಅವರ ಗಮನಕ್ಕೆ ಬಂದಿಲ್ಲ ಎಂದರೆ ಇದು ಅವರ ಹೊಣೆಗೇಡಿತನಕ್ಕೆ ಸಾಕ್ಷಿ. ಪಾಲಿಕೆಯಲ್ಲಿ ಬಿಜೆಪಿ ಆಡಳಿತವಿದೆ. ಯೋಜನೆಯ ವ್ಯಾಪ್ತಿ ಇರುವ ಮೂವರು ಶಾಸಕರು ಬಿಜೆಪಿಯವರೇ ಆಗಿದ್ದಾರೆ.ಹಾಗಿದ್ದರೂ ಫಲಾನುಭವಿಗಳಿಗೆ ಯೋಜನೆಯನ್ನು ತಲುಪಿಸಲು ಸಾಧ್ಯವಾಗಿಲ್ಲ. ಹಂತ ಹಂತವಾಗಿ ಅರ್ಜಿ ಸಲ್ಲಿಸಿದ ಐದು ಸಾವಿರ ಫಲಾನುಭವಿಗಳಿಗೂ ಯೋಜನೆಯಡಿ ಅವಕಾಶ ಮಾಡಿಕೊಟ್ಟಿದ್ದರೆ ರೂ 25 ಕೋಟಿ ರೂಪಾಯಿ ಕೇಂದ್ರದಿಂದ  ಬಿಡುಗಡೆಯಾಗುತ್ತಿತ್ತು. ಆಡಳಿತ ನಿರ್ಲಕ್ಷ್ಯದಿಂದ ಒಂದು ಉತ್ತಮ ಯೋಜನೆಯನ್ನು ಪಾಲಿಕೆ ಕಳೆದುಕೊಂಡಿದೆ.

ಎಫ್.ಎಚ್.ಜಕ್ಕಪ್ಪನವರ, ಕೆಪಿಸಿಸಿ ಸದಸ್ಯರಾಜ್ಯದಲ್ಲಿ ಯೋಜನೆ ಯಶಸ್ವಿಯಾಗಿಲ್ಲ

ಯೋಜನೆಯಡಿ ಸಾಲ ನೀಡಲು ಬ್ಯಾಂಕ್‌ನವರು ಮುಂದೆ ಬರುವುದಿಲ್ಲ. 8ರಿಂದ 10 ಬಾರಿ ಬ್ಯಾಂಕ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದರೂ ದಾಖಲೆಗಳ ಸಮಸ್ಯೆಯಿಂದಾಗಿ ಸಾಲ ನೀಡಲಿಲ್ಲ. ಇದರಿಂದ ಸಹಾಯಧನ ಹಾಗೆಯೇ ಉಳಿಯಿತು. ನಮ್ಮ ಮನೆ ಯೋಜನೆ ಹುಬ್ಬಳ್ಳಿ-ಧಾರವಾಡವೇ ಅಲ್ಲ ರಾಜ್ಯದಲ್ಲಿಯೇ ಯಶಸ್ವಿಯಾಗಿಲ್ಲ.ಯೋಜನೆಯ ನಿಯಮಾವಳಿಯಲ್ಲಿ ಕೆಲವು ಬದಲಾವಣೆ ತರಲು ಬಿಡುಗಡೆ ಮಾಡಿದ್ದ ಹಣವನ್ನು ಕೇಂದ್ರ ಸರ್ಕಾರ ಹಿಂದಕ್ಕೆ ಪಡೆದುಕೊಂಡಿದೆ. ಪತ್ರ ಬರೆದು ಹಣ ತರಿಸಲು ಕ್ರಮ ಕೈಗೊಳ್ಳಲಾಗುವುದು.

ವೈ.ಎಸ್.ಪಾಟೀಲ್, ಆಯುಕ್ತರು, ಪಾಲಿಕೆ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry