ಶುಕ್ರವಾರ, ನವೆಂಬರ್ 15, 2019
21 °C

ನನಸಾಗದ ರೈತರ ಕನಸು

Published:
Updated:

ಬೇಲೂರು: ರಾಜ್ಯದ ಬಹುತೇಕ ಜಲಾಶಯಗಳು ತುಂಬುವ ಹಂತ ತಲುಪಿದ್ದರೂ ಇಲ್ಲಿನ ಯಗಚಿ ಜಲಾಶಯಕ್ಕೆ ಶೇಕಡ 50ರಷ್ಟು ನೀರು ಹರಿದು ಬಂದಿಲ್ಲ. ಯಗಚಿ ಜಲಾನಯನ ವ್ಯಾಪ್ತಿಯಲ್ಲಿನ ಮಳೆ ಕೊರತೆ ಇದಕ್ಕೆ ಕಾರಣವಾಗಿದೆ. ಅಣೆಕಟ್ಟೆಗೆ ಇಲ್ಲಿಯವರೆಗೆ ಕೇವಲ 10 ಅಡಿ ಮಾತ್ರ ನೀರು ಹರಿದು ಬಂದಿದೆ.ಪಟ್ಟಣಕ್ಕೆ ಸಮೀಪದ ಚಿಕ್ಕಬ್ಯಾಡಿಗೆರೆ ಬಳಿ ಯಗಚಿ ನದಿಗೆ ನಿರ್ಮಿಸಿರುವ ಯಗಚಿ ಜಲಾಶಯದಲ್ಲಿ 2001-2002ನೇ ಸಾಲಿನಿಂದ ನೀರು ನಿಲ್ಲಿಸಲು ಆರಂಭಿಸಲಾಯಿತಾದರೂ ಮೊದಲ ಬಾರಿಗೆ ಅಣೆಕಟ್ಟೆ ತುಂಬಿದ್ದು, 2004ರಲ್ಲಿ. ಅಲ್ಲಿಂದ 2011ರವರೆಗೆ ಸತತವಾಗಿ ಭರ್ತಿಯಾದ ಅಣೆಕಟ್ಟೆ 2012ರಲ್ಲಿನ ಭೀಕರ ಬರಗಾಲದಿಂದಾಗಿ ಜಲಾಶಯ ಭರ್ತಿಯಾಗಲಿಲ್ಲ. ರಾಜ್ಯದ ಸಣ್ಣ ಹಾಗೂ ದೊಡ್ಡ ಅಣೆಕಟ್ಟೆಗಳಿಗೆ ಈ ವರ್ಷ ಹೆಚ್ಚು ನೀರು ಹರಿದು ಬಂದು ಬಹುತೇಕ ತುಂಬುವ ಹಂತ ತಲುಪಿವೆ. ಕೇವಲ 3.6 ಟಿ.ಎಂ.ಸಿ. ಸಾಮರ್ಥ್ಯದ ಯಗಚಿ ಅಣೆಕಟ್ಟೆಗೆ ಈ ವರ್ಷ ನೀರು ಹರಿದು ಬರುತ್ತಿಲ್ಲ. ಯಗಚಿ ಜಲಾನಯನ ಪ್ರದೇಶಗಳಾದ ಚಿಕ್ಕಮಗಳೂರು, ಗೆಂಡೇಹಳ್ಳಿ, ಆಲ್ದೂರು ಭಾಗದಲ್ಲಿ ಮಳೆ ಕಡಿಮೆಯಾಗಿರುವುದೇ ಜಲಾಶಯಕ್ಕೆ ನೀರು ಹರಿದು ಬಾರದಿರಲು ಕಾರಣವಾಗಿದೆ ಎಂದು ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಪುಟ್ಟೇಗೌಡ `ಪ್ರಜಾವಾಣಿ'ಗೆ ತಿಳಿಸಿದರು.964.603 ಮೀಟರ್ ಗರಿಷ್ಠ ಸಾಮರ್ಥ್ಯದ ಯಗಚಿ ಜಲಾಶಯದಲ್ಲಿ ಈಗ 960.60 ಮೀಟರ್ ನೀರಿದೆ. ಅಣೆಕಟ್ಟೆಗೆ 250 ಕ್ಯೂಸೆಕ್ ನೀರಿನ ಒಳ ಹರಿವಿದ್ದರೆ, 25 ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ. ಈ ವರ್ಷ ಜಲಾಶಯಕ್ಕೆ ಒಂದೇ ಒಂದು ದಿನ ಗರಿಷ್ಠ 1350 ಕ್ಯೂಸೆಕ್ ನೀರು ಹರಿದು ಬಂದಿದ್ದು, ಬಿಟ್ಟರೆ ಉಳಿದ ದಿನಗಳಲ್ಲಿ 100 ರಿಂದ 600 ಕ್ಯೂಸೆಕ್ ಒಳ ಹರಿವು ಮೀರಿಲ್ಲ. ಇಲ್ಲಿಯವರೆಗೆ ಅಣೆಕಟ್ಟೆಗೆ ಕೇವಲ 1.1 ಟಿ.ಎಂ.ಸಿ. ನೀರು ಹರಿದು ಬಂದಿದೆ. 2012ರಲ್ಲಿ 2.75 ಟಿ.ಎಂ.ಸಿ. ನೀರು ಬಂದಿತ್ತು. ಯಗಚಿ ಜಲಾಶಯಕ್ಕೆ ಮೂರು ವರ್ಷಗಳ ಹಿಂದೆ 13,500 ಕ್ಯೂಸೆಕ್ ನೀರು ಹರಿದು ಬಂದಿದ್ದು, ದಾಖಲೆಯಾಗಿದೆ.ಪ್ರಸ್ತುತ ಅಣೆಕಟ್ಟೆಯಲ್ಲಿ 1.78 ಟಿ.ಎಂ.ಸಿ. ನೀರು ಸಂಗ್ರಹಗೊಂಡಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 963 ಮೀಟರ್ ನೀರಿತ್ತು. 2012ರಲ್ಲಿನ ಬರಗಾಲದಿಂದಾಗಿ ಅಣೆಕಟ್ಟೆಯಲ್ಲಿ ನೀರಿನ ಸಂಗ್ರಹ ಕ್ರೆಸ್ಟ್‌ಗೇಟ್‌ಗಿಂತ ಕೆಳಮಟ್ಟದಲ್ಲಿ ಅಂದರೆ 957.6 ಮೀಟರ್‌ವರೆಗೆ ನೀರಿನ ಸಂಗ್ರಹ ಕುಸಿದಿತ್ತು.ಯಗಚಿ ಅಣೆಕಟ್ಟೆಯಿಂದ ಬೇಲೂರು, ಆಲೂರು ಮತ್ತು ಹಾಸನ ತಾಲ್ಲೂಕಿನ 37 ಸಾವಿರ ಎಕರೆ ಜಮೀನಿಗೆ ನೀರು ನೀಡಬೇಕಾಗಿದೆ. ಕಳೆದ 8 ವರ್ಷಗಳಿಂದ  ಸತತವಾಗಿ ಜಲಾಶಯ ತುಂಬಿದ್ದರೂ ಪೂರ್ಣ ಪ್ರಮಾಣದ ನೀರನ್ನು 37 ಸಾವಿರ ಎಕರೆಗೆ ಬಳಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ಕಂದಲಿ ಸಮೀಪ ಮೇಲ್ಗಾಲುವೆ ಕಾರ್ಯ ಪೂರ್ಣಗೊಳ್ಳದಿದ್ದುದೇ ಇದಕ್ಕೆ ಕಾರಣವಾಗಿತ್ತು. ಈಗ ಈ ಮೇಲ್ಗಾಲುವೆ ಕಾರ್ಯ ಪೂರ್ಣಗೊಂಡಿದ್ದು, ಈ ವರ್ಷದಿಂದ ಪೂರ್ಣ ಪ್ರಮಾಣದ ನೀರನ್ನು ಬಳಕೆ ಮಾಡಿಕೊಳ್ಳುವ ಸಾಧ್ಯತೆ ಇದೆ. ಆದರೆ ಅಣೆಕಟ್ಟೆ ಶೇಕಡ 50ರಷ್ಟು ತುಂಬದಿರುವುದು ಆತಂಕಕ್ಕೆ ಕಾರಣವಾಗಿದೆ. ಜಲಾಶಯಕ್ಕೆ ಇನ್ನೂ 13 ಅಡಿ ನೀರು ಬರಬೇಕಾಗಿದೆ. ಯಗಚಿ ಜಲಾನಯನ ವ್ಯಾಪ್ತಿಯಲ್ಲಿ ಆಗಸ್ಟ್ ಮತ್ತು ಸೆಪ್ಪೆಂಬರ್ ತಿಂಗಳಿನಲ್ಲಿ ಮಳೆ ಬರುವುದರಿಂದ ಈ ವರ್ಷ ಅಣೆಕಟ್ಟೆ ತುಂಬುವ ಆಶಾಭಾವನೆ ಯಗಚಿ ಅಧಿಕಾರಿಗಳು ಮತ್ತು ರೈತರದ್ದಾಗಿದೆ.

 

ಪ್ರತಿಕ್ರಿಯಿಸಿ (+)