ನನ್ನನ್ನು ವಜಾ ಮಾಡಿಲ್ಲ: ಗಣೇಶ್ ಕಾರ್ಣಿಕ್ ಸ್ಪಷ್ಟನೆ

7

ನನ್ನನ್ನು ವಜಾ ಮಾಡಿಲ್ಲ: ಗಣೇಶ್ ಕಾರ್ಣಿಕ್ ಸ್ಪಷ್ಟನೆ

Published:
Updated:

ಮಂಗಳೂರು: `ರಾಜ್ಯದ ಅನಿವಾಸಿ ಭಾರತೀಯ ಸಮಿತಿಯ ಉಪಾಧ್ಯಕ್ಷ ಸ್ಥಾನದಿಂದ ನನ್ನನ್ನು ವಜಾ ಮಾಡಿಲ್ಲ. ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರ ಮಾತಿಗೆ ಗೌರವ ಕೊಟ್ಟು ನಾನಾಗಿಯೆ ಸಮಿತಿಯಿಂದ ಹೊರಬಂದಿದ್ದೇನೆ' ಎಂದು ಗಣೇಶ್ ಕಾರ್ಣಿಕ್ ತಿಳಿಸಿದರು.ಇಲ್ಲಿನ ಬಿಜೆಪಿ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, `ಸಾಮಾನ್ಯವಾಗಿ ಯಾವುದೇ ಸಮಿತಿಗಳ ಅವಧಿ ಮೂರು ವರ್ಷಕ್ಕೆ ಸೀಮಿತ. ಕಳೆದ  ಅಕ್ಟೋಬರ್‌ಗೆ ನನ್ನ ಕಾರ್ಯಾವಧಿ ಪೂರ್ಣಗೊಳ್ಳಬೇಕಿತ್ತು. ಮೊದಲ ಬಾರಿ ಶಾಸಕನಾಗಿ ಆಯ್ಕೆಯಾದ ನನ್ನನ್ನು ಸಂಪುಟ ದರ್ಜೆ ಸ್ಥಾನಮಾನ ಹೊಂದಿರುವ ಸಮಿತಿಯ ಉಪಾಧ್ಯಕ್ಷನನ್ನಾಗಿ ನೇಮಿಸಿ ಹೊರದೇಶದಲ್ಲಿ ನೆಲೆಸಿರುವ ಕನ್ನಡಿಗರ ಜತೆ ಸಂಬಂಧ ಬೆಳೆಸಲು ಅನುವು ಮಾಡಿಕೊಟ್ಟಿದ್ದಕ್ಕಾಗಿ ಬಿಜೆಪಿಗೆ ಚಿರಋಣಿ' ಎಂದರು.`ಸಮಿತಿ ನೇತೃತ್ವದಲ್ಲಿ ವಿಶ್ವ ಬಂಡವಾಳ ಹೂಡಿಕೆ ಸಮಾವೇಶ, ಗಲ್ಫ್ ಕನ್ನಡ ವೇದಿಕೆ ಸ್ಥಾಪನೆ, ಬಹರೇನ್ ಕನ್ನಡ ಭವನಕ್ಕೆ ರಾಜ್ಯ ಸರ್ಕಾರದಿಂದ ರೂ 1 ಕೋಟಿ ಅನುದಾನ ಬಿಡುಗಡೆ, ಬೆಂಗಳೂರಿನಲ್ಲಿ ಅಮೆರಿಕ ಕನ್ನಡೋತ್ಸವ ಮೊದಲಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ವಿದೇಶಕ್ಕೆ ತೆರಳುವ ಉದ್ಯೋಗಾಕಾಂಕ್ಷಿಗಳ ನೆರವಿಗಾಗಿ ವಲಸೆ ಸಂಪನ್ಮೂಲ ಕೇಂದ್ರಗಳ ಸ್ಥಾಪನೆ ಹಾಗೂ ಕೊಲ್ಲಿ ರಾಷ್ಟ್ರಗಳಲ್ಲಿ ಕರ್ನಾಟಕ ಬಿಜಿನೆಸ್ ಫೋರಂ ಸ್ಥಾಪನೆ ಬಗ್ಗೆ ಚಿಂತನೆ ನಡೆಸಲಾಗಿದೆ.ಜರ್ಮನಿಯ ಹ್ೂಬರ್ಗ್, ಹೈಡೆಲ್ ಬರ್ಗ್, ಮ್ಯೂನಿಚ್ ವಿಶ್ವವಿದ್ಯಾಲಯಗಳಲ್ಲಿ ಹಾಗೂ ವಿಯೆನ್ನಾ ವಿವಿಯಲ್ಲಿ ಕನ್ನಡ ಭಾಷೆ ಮತ್ತು ಸಂಸ್ಕೃತಿ ಅಭಿವೃದ್ಧಿಗಾಗಿ ತಲಾ ರೂ 1 ಕೋಟಿ ಅನುದಾನ ನೀಡಲಾಗಿದೆ. ವಿದೇಶಗಳಲ್ಲಿ ಉನ್ನತ ಹುದ್ದೆಯಲ್ಲಿರುವ ತಂತ್ರಜ್ಞರು, ವಿಜ್ಞಾನಿಗಳ ಜತೆ ಸಂವಾದ ಹಮ್ಮಿಕೊಳ್ಳಲಾಗಿದ್ದು, ಇದರಿಂದ ರಾಜ್ಯದ ಜನತೆಗೂ ಭವಿಷ್ಯದಲ್ಲಿ ಪ್ರಯೋಜನವಾಗಲಿದೆ. ಕೊಲ್ಲಿ ರಾಷ್ಟ್ರಗಳ ಕನ್ನಡಿಗರಿಗೆ ಸಮಸ್ಯೆ ಎದುರಾದಾಗ ಬಗೆಹರಿಸಿದ ತೃಪ್ತಿ ಇದೆ' ಎಂದರು.ಸುದ್ದಿಗೋಷ್ಠಿಯಲ್ಲಿ ರಾಜ್ಯ ಮೀನುಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ನಿತಿನ್ ಕುಮಾರ್, ಬಿಜೆಪಿ ಮುಖಂಡರಾದ ಶ್ರೀಕರ ಪ್ರಭು ಹಾಗೂ ರಾಜಗೋಪಾಲ ರೈ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry