ಸೋಮವಾರ, ಮಾರ್ಚ್ 1, 2021
31 °C

ನನ್ನನ್ನೂ ತೃತೀಯ ಲಿಂಗಿ ಎಂದಾಗ!

ಕೆ. ಓಂಕಾರ ಮೂರ್ತಿ Updated:

ಅಕ್ಷರ ಗಾತ್ರ : | |

ನನ್ನನ್ನೂ ತೃತೀಯ ಲಿಂಗಿ ಎಂದಾಗ!

ಮೈಸೂರು: ಪುಣೆ ನಗರಿಯ ರಸ್ತೆಯೊಂದರಲ್ಲಿ ಸಿನಿಮಾದ ಶೂಟಿಂಗ್‌ ನಡೆಯುತ್ತಿತ್ತು. ನಾನು ತೃತೀಯ ಲಿಂಗಿ ಪಾತ್ರ ನಿಭಾಯಿಸುತ್ತಿದ್ದೆ. ಅಲ್ಲಿಗೆ ಬಂದ ಸ್ಥಳೀಯ ತೃತೀಯ ಲಿಂಗಿಗಳು ನನ್ನನ್ನು ಬಿಗಿದಪ್ಪಿಕೊಂಡರು. ‘ನಮ್ಮ ಸಮು ದಾಯದವರೂ ಚೆನ್ನಾಗಿ ಅಭಿನಯಿ ಸುತ್ತಾರೆ’ ಎಂದು ಕೊಂಡಾಡಿದರು. ‘ಯಾವ ಏರಿಯಾ’ ಎಂದು ಪ್ರಶ್ನಿಸಿದರು!–ಹೀಗೆಂದು ‘ಪ್ರಜಾವಾಣಿ’ ಜೊತೆ ‘ನಾನು ಅವನಲ್ಲ ಅವಳು’ ಸಿನಿಮಾದ ಶೂಟಿಂಗ್‌ ಕ್ಷಣವನ್ನು ನೆನಪಿಸಿಕೊಂಡಿದ್ದು ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ನಟ ಸಂಚಾರಿ ವಿಜಯ್‌.ವಿಜಯ್‌ ಅವರು 62ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳ ವಿಭಾಗದಲ್ಲಿ ಶ್ರೇಷ್ಠ ನಟ ಪ್ರಶಸ್ತಿಗೆ ಭಾಜನರಾದವರು. ಲೈಂಗಿಕ ಅಲ್ಪಸಂಖ್ಯಾತರು (ತೃತೀಯ ಲಿಂಗಿಗಳು) ಕುರಿತಾದ ಚಿತ್ರದಲ್ಲಿನ ಭಾವಪೂರ್ಣ ಅಭಿನಯಕ್ಕಾಗಿ ಈ ಗೌರವ ಒಲಿದಿದೆ.ಕೇರಳ, ಗೋವಾ, ಕೋಲ್ಕತ್ತ ಸೇರಿದಂತೆ ವಿವಿಧ ಸಿನಿಮೋತ್ಸವಗಳಲ್ಲಿ ಪ್ರದರ್ಶನಗೊಂಡು ಮೆಚ್ಚುಗೆ ಪಡೆದಿ ರುವ ಈ ಚಿತ್ರ ಇದೇ ಮೊದಲ ಬಾರಿಗೆ ಅರಮನೆಗಳ ನಗರಿಯಲ್ಲಿ ಆಯೋಜಿಸಿ ರುವ ‘ಬೆಂಗಳೂರು ಅಂತರರಾಷ್ಟ್ರೀಯ ಸಿನಿಮೋತ್ಸವ’ದಲ್ಲಿ ಪ್ರದರ್ಶನಗೊಳ್ಳ ಲಿದೆ. ಮಾಲ್‌ ಆಫ್‌ ಮೈಸೂರಿನ ಐನಾಕ್ಸ್‌ ಚಿತ್ರಮಂದಿರದಲ್ಲಿ ಶನಿವಾರ ರಾತ್ರಿ 7.45ಕ್ಕೆ ಈ ಸಿನಿಮಾದ ಪ್ರದರ್ಶನವಿದೆ.ಸಿನಿಮಾಕ್ಕೆ ಸಿಕ್ಕ ಯಶಸ್ಸು, ಪ್ರಶಸ್ತಿ ಪಡೆದ ಸಂಭ್ರಮ, ತೃತೀಯ ಲಿಂಗಿ ಪಾತ್ರಕ್ಕೆ ಸಜ್ಜಾಗಿದ್ದು, ಸಿನಿಮೋತ್ಸವ ಕುರಿತು ಸಂಚಾರಿ ವಿಜಯ್‌ ಅವರು ಪತ್ರಿಕೆಯೊಂದಿಗೆ ಮಾತನಾಡಿದ್ದಾರೆ. ಅವರೊಂದಿಗಿನ ಸಂದರ್ಶನದ ಪೂರ್ಣ ಪಾಠ ಇಲ್ಲಿದೆ.

* ‘ನಾನು ಅವನಲ್ಲ ಅವಳು’ ಸಿನಿಮಾದಲ್ಲಿ ತೃತೀಯ ಲಿಂಗಿ ಪಾತ್ರಕ್ಕೆ ನೀವು ಆಯ್ಕೆಯಾದ ಹಿನ್ನೆಲೆ?

ಕೈಯಲ್ಲಿ ಯಾವುದೇ ಸಿನಿಮಾ ಇಲ್ಲದ ನಾನು ಸುಮ್ಮನೆ ಅಲೆದಾಡುತ್ತಿದ್ದೆ. ಇಂಥ ಸಮಯದಲ್ಲಿ ಬಂದು ನನ್ನನ್ನು ಬಿಗಿದಪ್ಪಿಕೊಂಡಿದ್ದು ತೃತೀಯ ಲಿಂಗಿ ಪಾತ್ರ. ರಂಗಭೂಮಿ ಹಿನ್ನೆಲೆಯ ನನ್ನ ಮೇಲೆ ನಿರ್ದೇಶಕ ಲಿಂಗದೇವರು ಭರ ವಸೆ ಇಟ್ಟಿದ್ದರು. ತಡವಾಗಿಯಾದರೂ ಬಹಳ ದಿನ ನೆನಪಿನಲ್ಲಿ ಇಟ್ಟುಕೊಳ್ಳು ವಂಥ ಅದ್ಭುತ ಪಾತ್ರವೇ ಲಭಿಸಿತು. ಇದು ನನ್ನ ಜೀವನದ ಮಹತ್ವದ ತಿರುವು.* ತೃತೀಯ ಲಿಂಗಿ ಪಾತ್ರಕ್ಕೆ ನಿಮ್ಮ ತಯಾರಿ ಹೇಗಿತ್ತು?

ಟ್ರಾಫಿಕ್‌ ಸಿಗ್ನಲ್‌ಗಳಲ್ಲಿ ನಿಂತು ತೃತೀಯ ಲಿಂಗಿಗಳ ವರ್ತನೆಯನ್ನು ಕಣ್ತುಂಬಿಕೊಳ್ಳುತ್ತಿದ್ದೆ. ಅವರ ಹಾವಭಾವ ಗಮನಿಸುತ್ತಿದ್ದೆ. ಬೆಂಗಳೂರು ಸೇರಿದಂತೆ ವಿವಿಧ ನಗರಿಗಳಲ್ಲಿ ತೃತೀಯ ಲಿಂಗಿಗಳ ವಾಸಸ್ಥಳಕ್ಕೆ ಹೋಗಿ ಅವರೊಂದಿಗೆ ಮಾತನಾಡುತ್ತಿದ್ದೆ. ಅವರ ಜೀವನಶೈಲಿ ತಿಳಿದುಕೊಂಡೆ. ಮನೆಗೆ ಬಂದು ಅವರಂತೆ ವರ್ತಿಸಲು ಪ್ರಯತ್ನಿಸುತ್ತಿದ್ದೆ. * ಸಿನಿಮೋತ್ಸವದಲ್ಲಿ ಮೈಸೂರಿನಲ್ಲೂ ‘ನಾನು ಅವನಲ್ಲ ಅವಳು’ ಚಿತ್ರ ಪ್ರದರ್ಶನಗೊಳ್ಳುತ್ತಿದೆ. ಈ ಬಗ್ಗೆ?

ಮತ್ತಷ್ಟು ಪ್ರೇಕ್ಷಕರನ್ನು ತಲುಪಲು ಅವಕಾಶ ಲಭಿಸಿದೆ. ವಿವಿಧ ದೇಶಗಳ ಅದ್ಭುತ ಸಿನಿಮಾಗಳು ಪ್ರದರ್ಶನ ಗೊಳ್ಳುತ್ತಿವೆ. ಅಂಥವರ ಸಾಲಿನಲ್ಲಿ ನಾನು ನಟಿಸಿರುವ ಸಿನಿಮಾ ಇರುವುದು ಖಂಡಿತ ರೋಮಾಂಚನ ಉಂಟು ಮಾಡಿದೆ. ಸಿನಿಮಾದ ‘ಡಿವಿಡಿ’ ಕೂಡ ಸಿಗುತ್ತಿಲ್ಲ ಎಂದು ಹೆಚ್ಚಿನವರು ಕರೆ ಮಾಡುತ್ತಿದ್ದಾರೆ.  ಈಗ ಸಿನಿಮೋತ್ಸವ ಮೂಲಕ ಆ ಕೊರತೆ ಸ್ವಲ್ಪವಾದರೂ ನೀಗಬಹುದು. ಅದರಲ್ಲೂ ‘ಸಿನಿಮಾ ಸಂಸ್ಕೃತಿ’ಯ ತವರು ಎನಿಸಿರುವ ಮೈಸೂರಿನಲ್ಲಿ ಪ್ರದರ್ಶನ ಇಟ್ಟುಕೊಂಡಿ ರುವುದು ಸಂತೋಷದ ವಿಚಾರ.* ಈ ಸಿನಿಮಾದಲ್ಲಿನ ನಟನೆಗೆ ರಾಷ್ಟ್ರೀಯ ಪ್ರಶಸ್ತಿ ಸಿಗಬಹುದು ಎಂಬ ನಿರೀಕ್ಷೆ ಇತ್ತಾ?

ನಾನು ಯಾವತ್ತೂ ರಾಜ್ಯದಾಚೆಗೆ ಯೋಚಿಸಿಯೇ ಇರಲಿಲ್ಲ. ಸಿನಿಮಾದಲ್ಲಿ ನಟಿಸಲು ಪುಟ್ಟ ಅವಕಾಶಕ್ಕಾಗಿ ಕಾಯುತ್ತಿದ್ದವನಿಗೆ ಇಂಥ ನಿರೀಕ್ಷೆ ಇರುವುದಾದರೂ ಹೇಗೆ? ತೃತೀಯ ಲಿಂಗಿ ಪಾತ್ರ ಕೊಟ್ಟಾಗಲೇ ನನಗೆ ಭಯವಾಗಿತ್ತು. ಅದನ್ನು ಪ್ರೇಕ್ಷಕರು ಯಾವ ರೀತಿ ಸ್ವೀಕರಿಸುತ್ತಾರೆ ಎಂಬ ಆತಂಕವಿತ್ತು. ಹೀಗಾಗಿ, ಖಂಡಿತ ಪ್ರಶಸ್ತಿಯ ಕನಸು ಇಟ್ಟುಕೊಂಡವನಲ್ಲ.* ಪ್ರಶಸ್ತಿ ಲಭಿಸಿದೆ ಎಂದು ಗೊತ್ತಾದಾಗ ವ್ಯಕ್ತವಾದ ಪ್ರತಿಕ್ರಿಯೆ?

ಮೊದಲು ಗೊಂದಲಕ್ಕೆ ಒಳಗಾದೆ. ಏಕೆಂದರೆ ದಕ್ಷಿಣ ಭಾರತದಲ್ಲಿ ವಿಜಯ್‌ ಎಂಬ ಹೆಸರಿನ ಹಲವು ಮಂದಿ ಇದ್ದಾರೆ. ಕರ್ನಾಟಕದಲ್ಲೂ ಇದ್ದಾರೆ. ಹೀಗಾಗಿ,  ಪ್ರಶಸ್ತಿ ಲಭಿಸಿರುವುದು ಯಾರಿಗೆ ಎಂದು ಖಚಿತಪಡಿಸಿಕೊಳ್ಳಲು ಹೆಚ್ಚು ಸಮಯ ತೆಗೆದುಕೊಂಡೆ. ಸಿನಿಮಾ ರಂಗದ ದಿಗ್ಗಜರು ಕರೆ ಮಾಡಿ ನನಗೆ ಅಭಿ ನಂದನೆ ಸಲ್ಲಿಸಿದ್ದು ಪ್ರಶಸ್ತಿಗಿಂತ ದೊಡ್ಡ ಖುಷಿ ನೀಡಿತು.* ಕನ್ನಡ ಚಿತ್ರರಂಗದಲ್ಲೀಗ ನಿಮ್ಮ ಮೇಲಿನ ನಿರೀಕ್ಷೆ ಹೆಚ್ಚಾಗಿದೆ. ಮುಂದಿನ ಗುರಿ?

ಸವಾಲಿನ ಪಾತ್ರಗಳನ್ನು ನಾನು ಎದುರು ನೋಡುತ್ತಿದ್ದೇನೆ. ಪ್ರಯೋಗಕ್ಕೆ ಮುಂದಾಗುವ ನಿರ್ದೇಶಕರೊಂದಿಗೆ ಕೆಲಸ ಮಾಡಬೇಕೆಂಬ ಆಸೆ ಇದೆ.‘ನಾನು ಅವನಲ್ಲ ಅವಳು’ ಕುರಿತು...

ಬಿ.ಎಸ್‌. ಲಿಂಗದೇವರು ನಿರ್ದೇಶನದ ಈ ಸಿನಿಮಾಕ್ಕೆ ಸ್ಫೂರ್ತಿ ‘ಲಿವಿಂಗ್‌ ಸ್ಮೈಲ್‌ ವಿದ್ಯಾ’ ಎಂಬ ಆತ್ಮಕಥೆ. ಹುಡುಗಿ ಆಗಬೇಕೆನ್ನುವ ಹಂಬಲ ಹೊಂದಿದ ಹುಡುಗನೊಬ್ಬ ತನ್ನ ಕುಟುಂಬದಿಂದ ಬೇರೆಯಾಗಿ ತೃತೀಯ ಲಿಂಗಿಗಳೊಂದಿಗೆ ಬದುಕು ಕಂಡುಕೊಳ್ಳುವುದು ಚಿತ್ರದ ತಿರುಳು.

ಸಂಚಾರಿ ವಿಜಯ್‌, ಸುಮಿತ್ರಾ, ಕುನಾಲ್‌ ಪಾಣೇಕರ್‌, ಸುಂದರ್‌ ಅಭಿನಯಿಸಿದ್ದಾರೆ. 115 ನಿಮಿಷಗಳ ಈ ಸಿನಿಮಾದ ನಿರ್ಮಾಪಕ ರವಿ ಆರ್‌. ಗರಣಿ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.