ನನ್ನ ಅಂದಕ್ಕೆ ಸಾಟಿ ಇಲ್ಲ...!

7

ನನ್ನ ಅಂದಕ್ಕೆ ಸಾಟಿ ಇಲ್ಲ...!

Published:
Updated:

ಚಿಕ್ಕಬಳ್ಳಾಪುರ: `ನಿನಗಿಂತ ನಾನೇ ಚೆಂದ, ಆಕಾಶನೀಲಿ ಬಣ್ಣದಲ್ಲಿ ನಾನೇ ಅಂದ~ ಎಂದು ಹೂವೊಂದು ಮಿಟುಕಿಸುತ್ತ ಜಂಬ ಕೊಚ್ಚಿ ಕೊಂಡರೆ, ಮತ್ತೊಂದು ಹೂ, `ಶ್ವೇತಬಣ್ಣದ ನನ್ನ ಚೆಲುವಿಗೆ ಯಾರೂ ಸಾಟಿಯಿಲ್ಲ~ ಎಂದು ವಯ್ಯಾರ ದಿಂದ ಹೇಳುತ್ತದೆ. `ನಾವು ಹಸಿರೆಲೆಗಳಷ್ಟೇ ಅಲ್ಲ, ಬಣ್ಣಬಣ್ಣದ ಚಿತ್ತಾರದ ಸಂಕೇತಗಳು~ ಎಂದು ಎಲೆಗಳು ಹೂಗಳಿಗೆ ಸವಾಲು ಹಾಕಿದರೆ, `ಯಾರೂ ಏನೇ ಹೇಳಲಿ-ಕೇಳಲಿ, ನನ್ನ ಕಡುಗೆಂಪಿನ ಸೌಂದರ್ಯ ವರ್ಣಿಸಲು ಪದಗಳೇ ಸಿಗುವುದಿಲ್ಲ~ ಎಂದು ರೋಜಾ ಹೂ ಮುಗುಳ್ನಗುತ್ತದೆ.ಹೂಗಳ ತುಂಟಾಟ, ವಯ್ಯಾರ, ಸೌಂದರ್ಯ, ಅಚ್ಚರಿಯ ಬಣ್ಣಗಳನ್ನು ನೋಡಬೇಕಿದ್ದರೆ, ಶುಕ್ರವಾರದಿಂದ ಮೂರು ದಿನಗಳ ಕಾಲ ನಡೆ ಯುವ ಫಲಪುಷ್ಪ ಪ್ರದರ್ಶನ ಮತ್ತು ತೋಟ ಗಾರಿಕೆ ಮೇಳಕ್ಕೆ ಭೇಟಿ ನೀಡಬೇಕು. ನಂದಿ ಕ್ರಾಸ್‌ನ ಪಿ.ಆರ್.ಎಸ್.ತೋಟಗಾರಿಕೆ ಕ್ಷೇತ್ರದಲ್ಲಿ ಜಿಲ್ಲಾ ಡಳಿತದ ಸಹಯೋಗದಲ್ಲಿ ನಂದಿ ಉದ್ಯಾನ ಕಲಾ ಸಂಘವು ಈ ಮೇಳವನ್ನು ಆಯೋಜಿಸಿದ್ದು, ಬಗೆಬಗೆಯ ಬಣ್ಣದ ಹೂಗಳು ಅನಾವರಣ ಗೊಳ್ಳಲಿವೆ.

ವಿವಿಧ ವರ್ಣಗಳ ಪುಟ್ಟ ಮತ್ತು ಬೃಹದಾಕಾರಾದ ಎಲೆಗಳು ಆಕರ್ಷಿಸಲಿವೆ.ಚಿಕ್ಕಬಳ್ಳಾಪುರ ಜಿಲ್ಲೆಯಾಗಿ ನಾಲ್ಕು ವರ್ಷ ಪೂರೈಸಿದ್ದು, ಜಿಲ್ಲಾಮಟ್ಟದಲ್ಲಿ ಇದೇ ಪ್ರಪ್ರಥಮ ಬಾರಿಗೆ ಫಲಪುಷ್ಪ ಪ್ರದರ್ಶನ ಮತ್ತು ತೋಟಗಾರಿಕೆ ಮೇಳ ಆಯೋಜಿಸಲಾಗಿದೆ. ಹೂ, ಹಣ್ಣು ಮತ್ತು ತರಕಾರಿಗಳ ಸಂಗಮ ಮೇಳದಲ್ಲಿ ಆಗಲಿದ್ದು, ತರಕಾರಿಗಳಲ್ಲಿ ಪ್ರಸಿದ್ಧ ವ್ಯಕ್ತಿಗಳ ಚಿತ್ರಣ ಕೆತ್ತನೆಯಷ್ಟೇ ಅಲ್ಲ, ವಿವಿಧ ಪ್ರಾಣಿ, ಪಕ್ಷಿಗಳು ಮತ್ತು ಹೂವಿನ ಆಕೃತಿಗಳು ಪ್ರದರ್ಶನವಾಗಲಿದೆ. ಲಾಲ್‌ಬಾಗ್ ಸೇರಿದಂತೆ ಪ್ರಮುಖ ಉದ್ಯಾನಗಳಲ್ಲಿ ಮಾತ್ರವೇ ಕಾಣಸಿಗುವ ಹೂಗಳು ಸಹ ಪ್ರದರ್ಶನಗೊಳ್ಳಲಿವೆ.`ಜಿಲ್ಲೆಯಲ್ಲಿನ ಪುಷ್ಪೋದ್ಯಮ ಮತ್ತು ತೋಟಗಾರಿಕೆ ಕ್ಷೇತ್ರಕ್ಕೆ ಉತ್ತೇಜನ ನೀಡುವ ಮತ್ತು ರೈತರಿಗೆ ಉಪಯುಕ್ತ ಮಾರ್ಗದರ್ಶನ ತೋರುವ ಉದ್ದೇಶದಿಂದ ಫಲಪುಷ್ಪ ಪ್ರದರ್ಶನ ಆಯೋಜಿಸಲಾಗುತ್ತಿದೆ. ಫಲಪುಷ್ಪಗಳನ್ನು ಪ್ರದರ್ಶಿಸಿದರೆ ಸಾಲದು, ಅವುಗಳ ಉಪಯುಕ್ತತೆ ಮತ್ತು ಮಾಹಿತಿ ರೈತ ಸಮುದಾಯಕ್ಕೆ ತಲುಪಬೇಕು ಎಂಬ ಗುರಿಯೊಂದಿಗೆ ಈ ಮೇಳ ಏರ್ಪಡಿಸಲಾಗುತ್ತಿದೆ. ಜಿಲ್ಲಾಮಟ್ಟದಲ್ಲಿ ಇದು ರೈತರಿಗೆ ಅತ್ಯಂತ ಉಪಯುಕ್ತ ಮೇಳವಾಗಲಿದೆ~ ನಂದಿ ಉದ್ಯಾನ ಕಲಾ ಸಂಘದ ಅಧ್ಯಕ್ಷ ಮತ್ತು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಬಿ.ಎಸ್.ಶೇಖರಪ್ಪ ತಿಳಿಸಿದರು.`ಹೂ, ಮಾವು, ದ್ರಾಕ್ಷಿ ಮುಂತಾದವುಗಳಿಗೆ ಪ್ರಸಿದ್ಧವಾಗಿರುವ ಜಿಲ್ಲೆಯು ಇನ್ನೂ ವೈವಿಧ್ಯಮಯದಿಂದ ಕೂಡಿದೆ. ಅಪರೂಪದ ಹೂ ಮತ್ತು ಸಸಿಗಳನ್ನು ಹೊಂದಿದೆ. ಉತ್ತಮ ಮಾರ್ಗದರ್ಶನ ದೊರೆತಲ್ಲಿ, ರೈತರು ಖಂಡಿತವಾಗಿಯೂ ಪುಷ್ಪೋದ್ಯಮ ಮತ್ತು ತೋಟಗಾರಿಕೆ ಕ್ಷೇತ್ರದಲ್ಲಿ ಯಶಸ್ಸು ಗಳಿಸಬಹುದು. ಬಗೆಬಗೆಯ ತಂತ್ರಜ್ಞಾನ ಮತ್ತು ಕೃಷಿ ವಿಧಾನಗಳ ಮೂಲಕ ಯಾವ ರೀತಿಯ ತೋಟಗಾರಿಕೆ ಕ್ಷೇತ್ರವನ್ನು ಅಭಿವೃದ್ಧಿಪಡಿಸಬಹುದು ಎಂಬುದನ್ನು ಮೇಳದಲ್ಲಿ ಸಾದರಪಡಿಸಲಾಗುವುದು~ ಎಂದು ತಿಳಿಸಿದರು.ಜಿಲ್ಲಾಡಳಿತ, ತೋಟಗಾರಿಕೆ ಇಲಾಖೆ, ಕೃಷಿ ಇಲಾಖೆ, ಕೋಲಾರ-ಚಿಕ್ಕಬಳ್ಳಾಪುರ ಹಾಲು ಒಕ್ಕೂಟ, ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಸೇರಿದಂತೆ ವಿವಿಧ ಸಂಘಸಂಸ್ಥೆಗಳು ಮೇಳದಲ್ಲಿ ಪಾಲ್ಗೊಳ್ಳಲಿದ್ದು, ಭಾರಿ  ಸಂಖ್ಯೆಯಲ್ಲಿ ರೈತರು ಭಾಗವಹಿಸುವ ನಿರೀಕ್ಷೆಯಿದೆ.

 

ಮೇಳಕ್ಕೆ ಸಾರಿಗೆ ಸೌಕರ್ಯ

ತಾಲ್ಲೂಕಿನ ನಂದಿ ಕ್ರಾಸ್‌ನ ಪಿ.ಆರ್.ಎಸ್.ತೋಟಗಾರಿಕೆ ಕ್ಷೇತ್ರದಲ್ಲಿ ನಡೆಯುವ ಫಲಪುಷ್ಪ ಪ್ರದರ್ಶನ ಮತ್ತು ತೋಟಗಾರಿಕೆ ಮೇಳಕ್ಕೆ ಭೇಟಿ ನೀಡುವ ರೈತರಿಗೆ ಆರು ತಾಲ್ಲೂಕುಗಳಿಂದ ಸಾರಿಗೆ ಸೌಕರ್ಯ ಕಲ್ಪಿಸಲಾಗಿದೆ.ಮೂರು ದಿನಗಳ ಕಾಲ ಕೆಎಸ್‌ಆರ್‌ಟಿಸಿ ಬಸ್‌ಗಳ ಸೌಕರ್ಯ ಲಭ್ಯವಿದ್ದು, ರೈತರು ಮೇಳಕ್ಕೆ ಭೇಟಿ ನೀಡಬಹುದು. ವಿಶ್ವವಿದ್ಯಾಲಯ ಮಟ್ಟದಲ್ಲಿ ನಡೆಯುವ ಕೃಷಿ ಮೇಳದ ಮಾದರಿಯಲ್ಲೇ ಎಲ್ಲ ರೀತಿಯ ವ್ಯವಸ್ಥೆಯನ್ನು ಮಾಡಲಾಗುವುದು ಎಂದು ಮೇಳದ ಆಯೋಜಕರು ತಿಳಿಸಿದ್ದಾರೆ.

ಮಳಿಗೆ ಮತ್ತು ತರಬೇತಿ

ಜಿಲ್ಲಾ ಮಟ್ಟದ ಫಲಪುಷ್ಪ ಪ್ರದರ್ಶನ ಮತ್ತು ತೋಟಗಾರಿಕೆ ಮೇಳದಲ್ಲಿ ಪಾಲ್ಗೊಳ್ಳಲು ಒಟ್ಟು 60 ಸಂಘಸಂಸ್ಥೆ ಆಯ್ಕೆ ಮಾಡಲಾಗಿದ್ದು, ಆಯಾ ಸಂಘಸಂಸ್ಥೆಗಳು ಪ್ರದರ್ಶನ ಸ್ಥಳದಲ್ಲಿ ಮಳಿಗೆಗಳನ್ನು ಹೊಂದಲಿವೆ.ತೋಟಗಾರಿಕೆ, ಪುಷ್ಪೋದ್ಯಮ, ಕೃಷಿ ಚಟುವಟಿಕೆ ಸೇರಿದಂತೆ ಇನ್ನಿತರ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಉಪಯುಕ್ತ ಮಾಹಿತಿ ಮತ್ತು ವಿಷಯಗಳನ್ನು ಮಳಿಗೆಗಳಲ್ಲಿ ಪ್ರದರ್ಶಿಸಲು ಸಂಘಸಂಸ್ಥೆಗಳ ಪ್ರತಿನಿಧಿಗಳು ಉದ್ದೇಶಿಸಿದ್ದಾರೆ.ಪುಷ್ಪೋದ್ಯಮ ಮತ್ತು ತೋಟಗಾರಿಕೆ ಕ್ಷೇತ್ರದ ಅಭಿವೃದ್ಧಿ ಮತ್ತು ಮಾರ್ಗದರ್ಶನಕ್ಕೆ ಸಂಬಂಧಿಸಿದಂತೆ ರೈತರಿಗಾಗಿ ತರಬೇತಿ ಕಾರ್ಯಾ ಗಾರವೂ ನಡೆಯಲಿದೆ.ವಿವಿಧ ಕೃಷಿ ವಿಶ್ವವಿದ್ಯಾಲಯಗಳ ತಜ್ಞರು ಕಾರ್ಯಾಗಾರದಲ್ಲಿ ಪಾಲ್ಗೊಂಡು ವಿಶೇಷ ಉಪನ್ಯಾಸಗಳನ್ನು ನೀಡಲಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry