ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನನ್ನ ಊರಿನ ತಂಪು, ದೇಶವಿಭಜನೆ ಕೆಂಪು

Last Updated 25 ಆಗಸ್ಟ್ 2012, 19:30 IST
ಅಕ್ಷರ ಗಾತ್ರ

ಭಾರತದ ಪ್ರಖ್ಯಾತ ಪತ್ರಕರ್ತ ಕುಲದೀಪ್ ನಯ್ಯರ್ ಅವರ ಆತ್ಮಕಥೆ `ಬಿಯಾಂಡ್ ದಿ ಲೈನ್ಸ್~. ಅದು ಬಿಚ್ಚಿಡುವ ಹಳೆಯ ಘಟನೆಗಳ ಹೊಸ ವಿವರಗಳಿಂದ ದೇಶದ ಅನೇಕ ವಲಯಗಳಲ್ಲಿ ಚರ್ಚೆಗಳನ್ನು ಹುಟ್ಟುಹಾಕುತ್ತಿದೆ. ಇದು ಒಬ್ಬ ವ್ಯಕ್ತಿಯ ಬದುಕಿನ ಕಥೆಗಿಂತ ಹೆಚ್ಚಾಗಿ ಭಾರತದ ಕಳೆದ ಏಳು ದಶಕಗಳ ಏಳುಬೀಳುಗಳ ಚಾರಿತ್ರಿಕ ನಿರೂಪಣೆ. ಇದು ಸ್ವಂತ ಸಂಗತಿಗಳ ಆಪ್ತ ಕಥನವಲ್ಲ, ದೇಶವನ್ನು ಕುರಿತ ತಪ್ತ ಕಥನ.

ಜನಮಾನಸದಲ್ಲಿ ಇರುವ ತವಕ ತಲ್ಲಣ ತಳಮಳಗಳಿಗೆಲ್ಲ ಕನ್ನಡಿ ಹಿಡಿದಿರುವ ಈ ಪುಸ್ತಕ, ಹಲವು ಭಾರತೀಯ ಭಾಷೆಗಳಿಗೆ ಅನುವಾದಗೊಳ್ಳುತ್ತಿದೆ. ನವಕರ್ನಾಟಕ ಪ್ರಕಾಶನದಿಂದ `ಒಂದು ಜೀವನ ಸಾಲದು~ ಹೆಸರಿನಲ್ಲಿ ಹೊರಬರಲಿರುವ ಈ ಅಪರೂಪದ ಆತ್ಮಕಥೆಯ ಆಯ್ದ ಭಾಗಗಳು ಸಾಪ್ತಾಹಿಕ ಪುರವಣಿಯಲ್ಲಿ ಕೆಲವು ಕಂತುಗಳಲ್ಲಿ ಪ್ರಕಟಗೊಳ್ಳಲಿವೆ. ಇದನ್ನು ಕನ್ನಡಕ್ಕೆ ತಂದಿದ್ದಾರೆ ಆರ್. ಪೂರ್ಣಿಮಾ. 
                                     ------------------

 
ಇದು ನನ್ನ ಜೀವನದ ಕಥೆ- ಇದರಲ್ಲಿ ನನ್ನ ಬಗ್ಗೆಯೇ ಹೆಚ್ಚು ಬರೆದುಕೊಂಡು ನನ್ನ ಮನಸ್ಸನ್ನು ಆವರಿಸಿಕೊಂಡಿರುವ ಘಟನೆಗಳ ಬಗ್ಗೆ ಕಡಿಮೆ ಬರೆಯಬಹುದಿತ್ತು ಎಂದು ಅನ್ನಿಸಿದ್ದುಂಟು. ಆದರೆ ಹಾಗೆ ಮಾಡಬೇಡ ಎಂದು ಎರಡು ವಿಚಾರಗಳು ನನ್ನೊಳಗೇ ಒತ್ತಡ ಹೇರುತ್ತಿದ್ದವು.

ಕುಲದೀಪ್ ನಯ್ಯರ್, ಆತ್ಮಕಥೆ



ಮೊದಲನೆಯದು ಭಾರತ, ಪಾಕಿಸ್ತಾನ ಮತ್ತು ಬಾಂಗ್ಲಾದೇಶಗಳು ಅಸ್ತಿತ್ವಕ್ಕೆ ಬಂದ ದಿನದಿಂದಲೂ ನಾನು ಅವುಗಳನ್ನು ನೋಡುತ್ತ, ಅವುಗಳ ಆಗುಹೋಗುಗಳಿಗೆ ಸ್ಪಂದಿಸುತ್ತ ಇರುವುದರಿಂದ, ನನಗೆ ಇಷ್ಟವಿರಲಿ-ಇಲ್ಲದಿರಲಿ ಸಮಕಾಲೀನ ಇತಿಹಾಸವನ್ನು ಬರೆಯುತ್ತಿದ್ದೇನೆ ಎಂಬ ಪ್ರಜ್ಞೆ.

ಎರಡನೆಯದು, ಸ್ವಯಂ ಪ್ರಚಾರ ಮತ್ತು ಪಾಂಡಿತ್ಯ ಪ್ರದರ್ಶನದ ಆರೋಪಗಳಿಂದ ತಪ್ಪಿಸಿಕೊಳ್ಳಲು ಸ್ವಂತ ವಿಚಾರಗಳನ್ನು ಸಾಧ್ಯವಾದಷ್ಟೂ ಕಡಿಮೆ ಹೇಳಿಕೊಳ್ಳಬೇಕು ಎಂಬ ಎಚ್ಚರ. ನಾನು ಈ ಎರಡಕ್ಕೂ ತಲೆಬಾಗಿದೆ- ಹೀಗಾಗಿ ನನ್ನ ಆತ್ಮಕಥೆಯಲ್ಲಿ ಇತಿಹಾಸದ ಘಟನೆಗಳೇ ಹೆಚ್ಚು ತುಂಬಿಕೊಂಡಿವೆ. 

ಭಾರತ, ಪಾಕಿಸ್ತಾನ ಮತ್ತು ನಂತರ ರಚಿತವಾದ ಬಾಂಗ್ಲಾದೇಶಗಳಲ್ಲಿ ವಿಭಜನೆಗೆ ಮುನ್ನ ಮತ್ತು ನಂತರ ನಡೆದದ್ದೆಲ್ಲವೂ ನನಗೆ ತಿಳಿದಿದೆ ಎಂದು ನಾನು ಹೇಳಿಕೊಳ್ಳುವುದಿಲ್ಲ. ಆದರೆ ನನಗೆ ಏನೆಲ್ಲ ಗೊತ್ತಿದೆಯೋ ಅಷ್ಟನ್ನು ಮುಚ್ಚುಮರೆಯಿಲ್ಲದೆ ಬರೆದಿದ್ದೇನೆ. ನನ್ನ ಆತ್ಮಕಥೆ ಆರಂಭವಾಗುವುದು 1940ರಲ್ಲಿ ಲಾಹೋರ್‌ನಲ್ಲಿ `ಪಾಕಿಸ್ತಾನ ರಚನೆ ನಿರ್ಣಯ~ ಅಂಗೀಕಾರವಾದ ದಿನದಿಂದ.

ಲಾಹೋರ್‌ನಲ್ಲಿ ಆಗ ನಾನು 17 ವರ್ಷದ ಶಾಲಾ ವಿದ್ಯಾರ್ಥಿಯಾಗಿದ್ದೆ. ಆ ದೇಶ ವಿಭಜನೆಯಿಂದ ಹಿಡಿದು ಈ ಮನಮೋಹನ್ ಸಿಂಗ್ ಸರ್ಕಾರದವರೆಗೆ ಹಲವಾರು ಸಂಗತಿಗಳ ಬಗ್ಗೆ, ಬಹಳಷ್ಟು ಆಂತರಿಕ ಮಾಹಿತಿಗಳನ್ನು ಈ ಪುಸ್ತಕ ಒಳಗೊಂಡಿದೆ. ಈ ಮಾಹಿತಿಗಳು ಇಲ್ಲಿ ಬರದಿದ್ದರೆ ಇನ್ನೆಲ್ಲೂ ಲಭ್ಯವಾಗಲು ಸಾಧ್ಯವೇ ಇರಲಿಲ್ಲ!

ಆತ್ಮಕಥೆಯನ್ನು ಎಲ್ಲಿಂದ ಆರಂಭಿಸಬೇಕು ಎಂದು ನಿರ್ಧರಿಸುವುದೇ ಮೊದಲು ನನಗೆ ಕಷ್ಟವಾಯಿತು. ಪಾಕಿಸ್ತಾನದಲ್ಲಿರುವ ನನ್ನ ಹುಟ್ಟಿದೂರು ಸಿಯಾಲ್‌ಕೋಟ್‌ನಿಂದ ಒಬ್ಬ ನಿರಾಶ್ರಿತನಾಗಿ ದೆಹಲಿ ತಲುಪಿದ 1947ರ ಸೆಪ್ಟೆಂಬರ್ 14ರ ಆ ದಿನದಿಂದಲೇ? ಅದಕ್ಕೂ ಹಿಂದಿನಿಂದಲೇ? ಈ ಕುರಿತು ಭಾರತ ಮತ್ತು ಪಾಕಿಸ್ತಾನದಲ್ಲಿರುವ ಕೆಲವು ಸ್ನೇಹಿತರೊಂದಿಗೆ ಚರ್ಚಿಸಿದಾಗ, ಅವರೆಲ್ಲರೂ ನಾನು ವಿಭಜನೆಯನ್ನು ಕುರಿತು ಬರೆಯಬೇಕೆಂದು ಒತ್ತಾಯಿಸಿದರು. ಭಾರತ ಏಕೆ ಮತ್ತು ಹೇಗೆ ವಿಭಜನೆಯಾಯಿತು ಎಂಬುದನ್ನು ನೀವು ಹೇಳಬೇಕು ಎಂದರು. ನಾನು ಆ ಎಲ್ಲವನ್ನೂ ಈ ಪುಸ್ತಕದಲ್ಲಿ ಹೇಳಿಬಿಟ್ಟಿದ್ದೇನೆ.

ನನ್ನ ಕಾಲ ಮುಗಿದುಹೋಯಿತೇ? ನಾನು ಹಾಗೇನೂ ಅಂದುಕೊಳ್ಳುವುದಿಲ್ಲ. ಸಾರ್ಥಕವೆನಿಸುವ ಏನಾದರೂ ಕೆಲಸ ಮಾಡಲು ನನಗಿನ್ನೂ ಸಮಯ ಮಿಕ್ಕಿದೆ ಎಂಬ ಉಲ್ಲಾಸದ ಭಾವನೆಯೇ ನನ್ನನ್ನು ಉಬ್ಬಿಸುತ್ತದೆ. ಆದರೆ ಸಾರ್ಥಕ ಕೆಲಸ ಯಾವುದು ಮತ್ತು ಅದನ್ನು ಮಾಡುವುದು ಹೇಗೆ ಎನ್ನುವುದು ನನಗೆ ಗೊತ್ತಿದ್ದರೆ ಚೆನ್ನಾಗಿತ್ತು!

ಜೀವನದಲ್ಲಿ ಪ್ರತಿಯೊಂದು ಹೊಸ ಆರಂಭವೂ ವಿಶಿಷ್ಟವಾಗಿ ಇರುತ್ತದೆ. ನನ್ನ ವೃತ್ತಿಯ ಆರಂಭವಂತೂ ಪೂರ್ವಯೋಜಿತವಲ್ಲ; ನಾನು ಪತ್ರಿಕೋದ್ಯಮವನ್ನು ಪ್ರವೇಶಿಸಿದ್ದು ತೀರಾ ಆಕಸ್ಮಿಕವಾಗಿ. ನಾನು ಲಾಹೋರ್‌ನಲ್ಲಿ ಕಾನೂನು ವಿಷಯದಲ್ಲಿ ಪದವಿ ಪಡೆದಿದ್ದೆ. ಆದರೆ ಇತಿಹಾಸ ಮಧ್ಯಪ್ರವೇಶ ಮಾಡಿಬಿಟ್ಟಿತು! ನನ್ನ ಹುಟ್ಟಿದೂರು ಸಿಯಾಲ್‌ಕೋಟ್‌ನಲ್ಲಿ ವಕೀಲನಾಗಿ ನೋಂದಣಿ ಮಾಡಿಕೊಳ್ಳುವ ಮುನ್ನ ಭಾರತದ ವಿಭಜನೆ ಆಗಿಹೋಯಿತು.

ದೆಹಲಿಗೆ ಬಂದಿಳಿದ ನಾನು `ಅಂಜಾಮ್~ (ಅಂತ್ಯ) ಎಂಬ ಹೆಸರಿನ ಉರ್ದು ದೈನಿಕದಲ್ಲಿ ಕೆಲಸ ಪಡೆದೆ. ಆದ್ದರಿಂದಲೇ `ಪತ್ರಿಕೋದ್ಯಮವನ್ನು ನಾನು ಆರಂಭದಿಂದ ಪ್ರವೇಶಿಸಲಿಲ್ಲ, `ಅಂತ್ಯ~ದಿಂದ ಪ್ರವೇಶಿಸಿದೆ~ ಎಂದು ಸದಾ ಹೇಳುತ್ತಿರುತ್ತೇನೆ! ವಿಪರ್ಯಾಸವೆಂದರೆ, ಲಾಹೋರ್‌ನಲ್ಲಿ ಒಂದು ಪತ್ರಿಕೋದ್ಯಮ ಡಿಪ್ಲೊಮಾ ಪರೀಕ್ಷೆಯಲ್ಲಿ ನಾನು ನಪಾಸಾಗಿದ್ದೆ. ಅಷ್ಟೇ ಅಲ್ಲ, ಪದವಿಯಲ್ಲಿ ಉರ್ದು ಐಚ್ಛಿಕ ವಿಷಯದಲ್ಲೂ ತೇರ್ಗಡೆಯಾಗಿರಲಿಲ್ಲ. ಆದರೆ ಇದ್ದಕ್ಕಿದ್ದಂತೆ ಒಂದು ದಿನ ನಾನು ಉರ್ದು ಪತ್ರಕರ್ತನಾಗಿಬಿಟ್ಟೆ.

ದೇಶವಿಭಜನೆಯ ನಂತರ, ಭಾರತಕ್ಕೆ ವಲಸೆ ಹೋಗಲೊಪ್ಪದ ಕೆಲವೇ ಕೆಲವು ಹಿಂದು ಕುಟುಂಬಗಳಲ್ಲಿ ನಮ್ಮದೂ ಒಂದಾಗಿತ್ತು. 
 

ಭಾರತದಲ್ಲಿರುವ ಅಪಾರ ಸಂಖ್ಯೆಯ ಮುಸ್ಲಿಮರು ಅಲ್ಲೇ ಉಳಿಯುವುದರಿಂದ, ಹೊಸ ದೇಶವಾದ ಪಾಕಿಸ್ತಾನದಲ್ಲಿರುವ ಸಾಕಷ್ಟು ಹಿಂದುಗಳೂ ಅಲ್ಲೇ ಉಳಿಯುತ್ತಾರೆ ಎಂದು ನಾವು ತಪ್ಪಾಗಿ ಭಾವಿಸಿಕೊಂಡೆವು. ನಮ್ಮ ಕುಟುಂಬದ ಜೀವನಶೈಲಿ ಎಷ್ಟು ಅನುಕೂಲವಾಗಿ ನೆಮ್ಮದಿಯ ಸ್ಥಿತಿಯಲ್ಲಿತ್ತೆಂದರೆ ಅಲ್ಲಿಂದ ಬೇರು ಕಿತ್ತುಕೊಂಡು ಹೋಗಿ ಅತಂತ್ರವಾಗುವುದು ನಮಗೆ ಇಷ್ಟವೇ ಇರಲಿಲ್ಲ.

ನಮಗೆ ಸಾಕಷ್ಟು ಆಸ್ತಿಪಾಸ್ತಿ ಇತ್ತು, ನಮ್ಮ ತಂದೆ ಸಿಯಾಲ್‌ಕೋಟ್‌ನಲ್ಲಿ ವೈದ್ಯರಾಗಿ ಒಳ್ಳೆಯ ಹೆಸರು ಮಾಡಿದ್ದರು.ಟ್ರಂಕ್ ಬಜಾರ್‌ನಲ್ಲಿದ್ದ ನಮ್ಮ ಎರಡಂತಸ್ತಿನ ಮನೆಯ ಆಪ್ತ ನೆನಪುಗಳು ನನ್ನಲ್ಲಿ ಉಳಿದಿವೆ. ನಮ್ಮದು ಒಂದು ಅವಿಭಕ್ತ ಕುಟುಂಬ- ಅದಕ್ಕೆ ನಮ್ಮ ಅಜ್ಜಿಯೇ ಯಜಮಾನಿ. ನಮ್ಮ ಅಜ್ಜ ಇದ್ದರೂ ಇಲ್ಲದಂತಿರುವ ಮನುಷ್ಯ.

ವಿಭಜನೆಯ ಸಮಯಕ್ಕೆ ನನ್ನ ನಿಕಟ ಕುಟುಂಬದಲ್ಲಿ ನನ್ನ ತಂದೆ, ತಾಯಿ ಮತ್ತು ಸೋದರರಾದ ರಾಜಿಂದರ್, ಹರದೀಪ್, ಸುರಿಂದರ್ ಮತ್ತು ಸೋದರಿ ರಾಜ್ ಇಷ್ಟು ಜನ ಇದ್ದೆವು. ನನ್ನ ತಾಯಿ ಪೂರಣ್ ದೇವಿಗೆ ಆಚಾರ ವಿಚಾರಗಳ ಅನುಸರಣೆಯಲ್ಲಿ ವಿಪರೀತ ನಂಬಿಕೆ. ಸಿಖ್ ಧರ್ಮಾನುಯಾಯಿಯಾದ ಅವರು ತಪ್ಪದೆ ಗುರುದ್ವಾರಕ್ಕೆ ಹೋಗುತ್ತಿದ್ದರು. ಆ ದಿನಗಳಲ್ಲಿ ಹಿಂದುಗಳು ಮತ್ತು ಸಿಖ್ಖರ ನಡುವೆ ಮದುವೆ ಸಾಮಾನ್ಯವಾಗಿತ್ತು.

ನನ್ನ ತಂದೆಗೆ ಗುರುಭಕ್ಷ್ ಎಂಬ ಅವರ ಹೆಸರಿನ ಮುಂದೆ `ಸಿಂಗ್~ ಎಂದೂ ಇತ್ತು. ಆದರೆ ಅವರಿಗಾಗಲೀ ನನ್ನ ಅಜ್ಜನಿಗಾಗಲೀ ಸಿಖ್ಖರಿಗೆ ಇರುವಂತೆ ಉದ್ದ ಕೂದಲು ಇರಲಿಲ್ಲ. ನಾವು ಸಿಖ್ ಧರ್ಮ ಮತ್ತು ಹಿಂದು ಧರ್ಮ ಎರಡರ ಪರಂಪರೆಗಳನ್ನೂ ಮೇಳೈಸಿಕೊಂಡಿದ್ದೆವು ಎಂದು ಹೇಳುವುದೇ ಸೂಕ್ತ. ಹುಟ್ಟಿದಾಗ ನನಗಿಟ್ಟ ಹೆಸರು ಕುಲದೀಪ್ ಸಿಂಗ್.

ಆದರೆ ವಿಭಜನೆಯ ನಂತರ ನಾನು `ಸಿಂಗ್~ ಎಂಬುದನ್ನು ಬಿಟ್ಟುಬಿಟ್ಟೆ. ನಾನು ಸಿಖ್ ಅಲ್ಲದಿರುವಾಗ ಜನರು ನನ್ನನ್ನು ಸಿಖ್ ಎಂದು ತಿಳಿಯುವುದು ಬೇಡ ಅಂದುಕೊಂಡೆ. ನಾನು `ಸಹಜ್‌ಧಾರಿ~ (ಅಂದರೆ ತಲೆಗೂದಲು, ಗಡ್ಡ ಕತ್ತರಿಸಿಕೊಂಡರೂ ಸಿಖ್ ಗುರುಗಳು ಮತ್ತು ಗುರು ಗ್ರಂಥ ಸಾಹಿಬ್‌ನಲ್ಲಿ ನಂಬಿಕೆ ಇಟ್ಟವರು) ಎಂದು ಕರೆಸಿಕೊಳ್ಳುವುದೂ ಸರಿಯಲ್ಲವೆನಿಸಿತು. ನಮ್ಮ ಮನೆಯಲ್ಲಿ ನಾವು ಹಿಂದು ಮತ್ತು ಸಿಖ್ ಹಬ್ಬಗಳೆಲ್ಲವನ್ನೂ ಆಚರಿಸುತ್ತಿದ್ದೆವು. ದೀಪಾವಳಿ ಬಹಳ ದೊಡ್ಡ ಹಬ್ಬವಾಗಿತ್ತು. ಹಬ್ಬದ ದಿನ ಸಿಖ್ ಮಹಿಳೆ ನನ್ನ ಅಮ್ಮ ಭಕ್ತಿಯಿಂದ ಲಕ್ಷ್ಮೀ ಪೂಜೆ ಮಾಡುತ್ತಿದ್ದರು.

ಸಿಯಾಲ್‌ಕೋಟ್‌ನಲ್ಲಿ ನಮ್ಮ ಕುಟುಂಬ ತುಂಬ ನೆಮ್ಮದಿಯಿಂದ ಇತ್ತು. ಆದರೆ 1947ರ ಆಗಸ್ಟ್ 12ರಂದು ವಿಭಜನೆಯ ಘೋಷಣೆ ಆದೊಡನೆ ಹೇಗೆ ಬದಲಾಗಿಬಿಟ್ಟಿತು! ಆಗ ನನಗೆ ಇಪ್ಪತ್ನಾಲ್ಕು ವರ್ಷ. ಅಪನಂಬಿಕೆಯ ಹುಲ್ಲಿನ ಬಣವೆಗೆ ಬೆಂಕಿಯ ಕಿಡಿ ಎಸೆದಂತಾಯಿತು. ಇಡೀ ಉಪಖಂಡದಲ್ಲಿ ಕೋಮು ದಳ್ಳುರಿ ಹೊತ್ತಿ ಉರಿಯಿತು. ಆಗಸ್ಟ್ 13ರಂದು ಹೊಸ ಗಡಿಯ ಎರಡೂ ಬದಿಯಲ್ಲಿ ಹೆಚ್ಚುಕಡಿಮೆ ಏಕಕಾಲಕ್ಕೆ ಹಿಂಸಾಕಾಂಡ ಶುರುವಾಯಿತು.

ಮಾರಕಾಸ್ತ್ರಗಳನ್ನು ಹಿಡಿದ ಉದ್ರಿಕ್ತ ಜನರು ನಗರದ ಪೇಟೆಗಳಲ್ಲಿ ಓಡಾಡತೊಡಗಿದೊಡನೆ ರಕ್ತಪಾತವೂ ಆರಂಭವಾಯಿತು. ಬೇರೆ ಕಡೆಗೆ ಹೋಲಿಸಿದರೆ ತಣ್ಣಗಿದ್ದ ಸಿಯಾಲ್‌ಕೋಟ್‌ನ ಆಕಾಶವೂ ಹೊತ್ತಿ ಉರಿಯಿತು. ಆದರೆ ಆ ದಿನ ಅಮ್ಮ ಮೆಲ್ಲನೆ ಬಂದು ನನ್ನ ಕಿವಿಯಲ್ಲಿ ಪಿಸುಗುಟ್ಟಿದರು: ಇತ್ತ ನೋಡು, ಇವೆಲ್ಲ ನಾವು ಬೆಳಗಿಸಿದ ದೀಪಗಳು, ಮಗೂ ಇವತ್ತು ನಿನ್ನ ಹುಟ್ಟಿದ ಹಬ್ಬ! (ಆಗಸ್ಟ್ 14).

ಆಗಸ್ಟ್ 14-15ರ ಮಧ್ಯರಾತ್ರಿ ಭಾರತ ಸ್ವತಂತ್ರ ದೇಶ ಆಗುವುದನ್ನು ನಾನು ವೀಕ್ಷಿಸಲಾಗಲಿಲ್ಲ. ಏಕೆಂದರೆ ಆಗ ನಾನು ಮನೆಯವರ ಜೊತೆ ಸಿಯಾಲ್‌ಕೋಟ್‌ನಲ್ಲಿದ್ದೆ. ರೇಡಿಯೋ ಪಾಕಿಸ್ತಾನ್ ಇಸ್ಲಾಮಿಕ್ ಭಾವನೆಗಳಿದ್ದ ರಾಷ್ಟ್ರೀಯ ಗೀತೆಗಳನ್ನು ಬಿತ್ತರಿಸುತ್ತಿತ್ತು. ಆಲ್ ಇಂಡಿಯಾ ರೇಡಿಯೋಗೆ ನಾನು ತಿರುಗಿಸಿದಾಗ, ಜವಾಹರ ಲಾಲ್ ನೆಹರು ಅವರ ಭಾಷಣದ ಮರುಪ್ರಸಾರ ಆಗುತ್ತಿತ್ತು. ಅವರ ಮಾತುಗಳು ಇನ್ನೂ ನನ್ನ ಕಿವಿಯಲ್ಲಿ ಮೊಳಗುತ್ತಿವೆ.

ನಾವೆಲ್ಲ ಭಾರತಕ್ಕೆ ಹೇಗೆ ಪ್ರಯಾಣ ಮಾಡುವುದು ಎಂದು ಚರ್ಚಿಸುತ್ತಿದ್ದೆವು. ಭಾರತಕ್ಕೆ ಹೋಗಲು ನಿರ್ಧರಿಸಿದ್ದ ಹಿಂದು ಧರ್ಮಕ್ಕೆ ಸೇರಿದ್ದ ಒಬ್ಬ ಸೇನಾ ಮೇಜರ್, ನಮ್ಮಲ್ಲೊಬ್ಬರನ್ನು ತಮ್ಮ ಜೀಪ್‌ನಲ್ಲಿ ಕರೆದೊಯ್ಯಲು ಒಪ್ಪಿಕೊಂಡರು. ಮೇಜರ್ ಸಂಗಡ ನಾನು ಹೋಗಬೇಕು ಎಂಬುದು ಇಡೀ ಕುಟುಂಬದ ಒತ್ತಾಯವಾಗಿತ್ತು.

ಆದರೆ ನನಗೆ ಇಷ್ಟವಿಲ್ಲ ಎಂಬುದು ನನ್ನ ತಂದೆಗೆ ಗೊತ್ತಾದಾಗ, ಯಾರು ಹೋಗಬೇಕು ಎಂಬುದನ್ನು ನಿರ್ಧರಿಸಲು ಚೀಟಿ ಎತ್ತೋಣ ಎಂದರು. ಹಾಗೆ ಮಾಡಲಾಯಿತೋ ತನ್ನಿಂದ ತಾನೆ ಆಯಿತೋ ಒಟ್ಟಿನಲ್ಲಿ ಚೀಟಿ ತೆಗೆದಾಗ ನನ್ನ ಹೆಸರಿತ್ತು!  
ಪಾಕಿಸ್ತಾನದ ಅನೇಕ ರೈಲುಗಳಲ್ಲಿ ಮುಸ್ಲಿಮರಲ್ಲದ ಎಲ್ಲ ಪ್ರಯಾಣಿಕರನ್ನು ಕೊಂದುಹಾಕಿದ್ದರು.

ಹಾಗೆಯೇ ಭಾರತದ ರೈಲುಗಳಲ್ಲಿ ಮುಸ್ಲಿಮರನ್ನು ಕೊಚ್ಚಿಹಾಕಿದ್ದರು. ಆದ್ದರಿಂದ ಎಲ್ಲರೂ ಒಟ್ಟಿಗೆ ಪ್ರಯಾಣ ಮಾಡುವುದು ಬೇಡ, ಒಬ್ಬೊಬ್ಬರಾಗಿ ಹೋಗುವುದು ಎಂದು ತೀರ್ಮಾನಿಸಿದ್ದೆವು. ಸೆಪ್ಟೆಂಬರ್ 13ನೇ ತಾರೀಕು ಬೆಳಿಗ್ಗೆ ಮೇಜರ್ ಅವರ ಜೀಪು ನಮ್ಮ ಮನೆಯ ಮುಂದೆ ಬಂದು ನಿಂತಿತು.

ಅವರ ಕುಟುಂಬ, ಸಾಮಾನು ಸರಂಜಾಮು ಸೇರಿ ಜೀಪು ಭರ್ತಿ ತುಂಬಿಹೋಗಿತ್ತು. ನಾನು ಜೀಪ್ ಹತ್ತುವ ಮುನ್ನ ನನ್ನ ತಾಯಿ ಒಂದು ಕೈಚೀಲ ಹಾಗೂ 120 ರೂಪಾಯಿ ನನ್ನ ಕೈಗಿಟ್ಟರು. ದೆಹಲಿಯಲ್ಲಿ ಅವರ ತಂಗಿ ಇದ್ದರು. `ನಿನ್ನ ಚಿಕ್ಕಮ್ಮನ ಮನೆಗೇ ಹೋಗು~ ಎಂದು ನನಗೆ ಹೇಳುತ್ತಿದ್ದ ಹಾಗೆ ಅವರ ಕಣ್ಣೀರು ಧಾರೆಯಾಗಿ ಹರಿಯಿತು. 

ನಮ್ಮ ಜೀಪು ಹೊರಟಿತು. ಅದೊಂದು ವಲಸೆಯ ಮಹಾಪ್ರವಾಹವೇ ಆಗಿತ್ತು. ಎರಡೂ ಕಡೆಗಳಲ್ಲಿ ಮಾನವ ಕುಲವೇ ಹರಿದಾಡುತ್ತಿದೆ ಎಂಬಂತೆ ತೋರುತ್ತಿತ್ತು. ಅದನ್ನು ಯಾರೂ ನಿರೀಕ್ಷಿಸಿರಲಿಲ್ಲ, ಅದು ಯಾರಿಗೂ ಬೇಕಾಗಿರಲಿಲ್ಲ, ಅದನ್ನು ತಡೆಯಲು ಯಾರಿಗೂ ಸಾಧ್ಯವಿರಲಿಲ್ಲ. ಈ ಅನಿರೀಕ್ಷಿತ ದುರಂತ ಧುತ್ತೆಂದು ಎದುರಾದಾಗ, ವಿಭಜನೆಯ ಪರಿಣಾಮವಾಗಿ ಬಂದ ಭೀಕರ ಸಮಸ್ಯೆಗಳು ಕಣ್ಣಿಗೆ ರಾಚಿದಾಗ, ಮತ್ತು ಸ್ವಾತಂತ್ರ್ಯವು ತಂದ ದುರ್ಭರ ದಿನಗಳನ್ನು ಅನುಭವಿಸುವುದು ಅನಿವಾರ್ಯವಾದಾಗ ಎರಡೂ ದೇಶಗಳೂ ಪರಸ್ಪರ ದೂಷಿಸಲು ಆರಂಭಿಸಿದವು.
 
ಯಾರನ್ನು ದೂಷಿಸಬೇಕಿತ್ತೋ ಅಥವಾ ಯಾರನ್ನು ಹೆಚ್ಚು ದೂಷಿಸಬೇಕಿತ್ತೋ ಒಟ್ಟಿನಲ್ಲಿ ಗಡಿಯ ಎರಡೂ ಕಡೆ ಕೆಲವು ವಾರಗಳ ಉನ್ಮತ್ತತೆ, ಭವಿಷ್ಯದಲ್ಲಿ ಎಷ್ಟೋ ದಶಕಗಳ ಕಾಲ ಎರಡೂ ದೇಶಗಳ ನಡುವಣ ಬಾಂಧವ್ಯ ಮತ್ತಷ್ಟು ಕಹಿಯಾಗಲು ಕಾರಣವಾಯಿತು. ದೇಶ ವಿಭಜನೆಯ ಆಘಾತದಿಂದ ಈಗಾಗಲೇ ಮೂರು ತಲೆಮಾರುಗಳು ನರಳಿವೆ. ನಿಜಕ್ಕೂ ಈ ಕತ್ತಲ ದಾರಿ ಇನ್ನೆಷ್ಟು ದೂರವೋ ಗೊತ್ತಿಲ್ಲ.

ವಿಭಜನೆಯ ನಂತರ ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಜನರು ಸಹಸ್ರ ಸಹಸ್ರ ಸಂಖ್ಯೆಯಲ್ಲಿ ವಲಸೆ ಹೋಗುತ್ತಿದ್ದಾರೆಂಬ ವರದಿಗಳನ್ನು ಮಹಮದ್ ಅಲಿ ಜಿನ್ನಾ ಮೊದಮೊದಲು ನಂಬಲಿಲ್ಲ. ಒಂದು ದಿನ ಜಿನ್ನಾ ಲಾಹೋರ್‌ಗೆ ಬಂದಿದ್ದಾಗ, ಪಾಕಿಸ್ತಾನದ ಪುನರ್ವಸತಿ ಸಚಿವ ಇಫ್ತಿಕಾರ್ ಉದ್ ದಿನ್ ಮತ್ತು `ಪಾಕಿಸ್ತಾನ್ ಟೈಮ್ಸ~ ಪತ್ರಿಕೆಯ ಸಂಪಾದಕ ಮಜರ್ ಅಲಿಖಾನ್ ಇಬ್ಬರೂ ಜಿನ್ನಾ ಅವರನ್ನು ಡಕೋಟ ವಿಮಾನದಲ್ಲಿ ಕೂರಿಸಿಕೊಂಡು ವಿಭಜಿತ ಪಂಜಾಬ್ ಪ್ರದೇಶದ ಮೇಲೆ ವೈಮಾನಿಕ ವೀಕ್ಷಣೆ ಮಾಡಿಸಿದರು.

ಪ್ರವಾಹದ ರೀತಿಯಲ್ಲಿ ಜನರು ಪಾಕಿಸ್ತಾನಕ್ಕೆ ಬರುತ್ತಿರುವುದು, ಹಾಗೆಯೇ ಅದನ್ನು ಬಿಟ್ಟು ಭಾರತಕ್ಕೆ ವಲಸೆ ಹೋಗುತ್ತಿರುವುದು ಎರಡನ್ನೂ ವೀಕ್ಷಿಸಿದ ಜಿನ್ನಾ ತಲೆಯ ಮೇಲೆ ಕೈ ಹೊತ್ತುಕೊಂಡು ಹತಾಶೆಯಿಂದ ಹೇಳಿದರಂತೆ- `ಅಯ್ಯೋ ನಾನು ಎಂಥ ಕೆಲಸ ಮಾಡಿಬಿಟ್ಟೆ?~. ಬಹಳ ವರ್ಷಗಳ ನಂತರ ಈ ವಿವರವನ್ನು ನನಗೆ ಹೇಳಿದವರು ಮಜರ್ ಅಲಿಖಾನ್ ಅವರ ಪತ್ನಿ ತಾಹಿರಾ. 

ನಮ್ಮ ಜೀಪು ಲಾಹೋರ್ ಗಡಿ ದಾಟಿ ಅದರ ಹೊರ ವಲಯವನ್ನು ತಲುಪಿದಾಗ, ಮುಸಿಮ್ಲರ ಮೇಲೆ ದಾಳಿ ನಡೆದಿದೆಯೆಂಬ ವದಂತಿ ಹಿನ್ನೆಲೆಯಲ್ಲಿ ಪ್ರತೀಕಾರ ಕ್ರಮ ತೆಗೆದುಕೊಳ್ಳಲು ಮುಸ್ಲಿಮರು ಗುಂಪಾಗಿ ಕಾಯುತ್ತಿದ್ದರು. ಹತ್ತಿರದ ಹೊಲಗಳಿಂದ ಕೊಳೆತು ಹೋಗಿದ್ದ ಶವಗಳ ದುರ್ನಾತ ಬರುತ್ತಿತ್ತು.
 
`ಅಲ್ಲಾ ಹೋ ಅಕ್ಬರ್, ಯಾ ಅಲಿ, ಪಾಕಿಸ್ತಾನ್ ಜಿಂದಾಬಾದ್~ ಘೋಷಣೆಗಳು ಕೇಳಿಸಿದವು. ನಂತರ ಕೇಳಿಸಿದ್ದು `ಭಾರತ ಮಾತಾ ಕಿ ಜೈ~ ಎಂಬ ಘೋಷಣೆ. ಭಾರತ ಸಿಕ್ಕಿತು! ಪಾಕಿಸ್ತಾನದ ಗಡಿಯ ಕೊನೆ ಅದಾಗಿತ್ತು. ಒಂದು ಬಿದಿರಿನ ಗಳದ ತುದಿಯ ಮೇಲೆ ಭಾರತದ ರಾಷ್ಟ್ರಧ್ವಜ ಹಾರಾಡುತ್ತಿತ್ತು.

ನಂತರ ಅಮೃತಸರದಿಂದ ನಾನು ಪಯಣಿಸಿದ ರೈಲುಗಾಡಿಯ ಎರಡನೆ ದರ್ಜೆ ಬೋಗಿಯಲ್ಲಿದ್ದ ಜನ ನನ್ನ ಬಲ ರಟ್ಟೆಯ ಮೇಲಿದ್ದ ಹಚ್ಚೆಯಿಂದಾಗಿ ನಾನೊಬ್ಬ ಮುಸ್ಲಿಮ್ ಎಂದು ತಪ್ಪಾಗಿ ತಿಳಿದರು. ಬಾಲಚಂದ್ರ ಮತ್ತು ನಕ್ಷತ್ರವಿರುವ ಹಚ್ಚೆ ಹಾಕಿಸಿಕೊಂಡಿದ್ದೆ. ಈ ಹಚ್ಚೆ ನಾನು ಮುಸ್ಲಿಮನೇ ಎಂಬ ಅವರ ಸಂಶಯವನ್ನು ಹೆಚ್ಚಿಸಿತು. ಲೂಧಿಯಾನದಲ್ಲಿ ನನ್ನನ್ನು ರೈಲು ಬೋಗಿಯಿಂದ ಹೊರಗೆಳೆಯಲಾಯಿತು.
 
ರೈಲಿನಲ್ಲಿದ್ದ ಮುಸ್ಲಿಮ್ ವಿರೋಧೀ ಜನ ನನ್ನನ್ನು ಸುತ್ತುವರಿದರು. ಆ ಗುಂಪಿನಲ್ಲಿದ್ದ ಬಾಕು ಮತ್ತು ಕತ್ತಿ ಹಿಡಿದಿದ್ದ ಸಿಖ್ಖರು ಕೋಪದಿಂದ ನೀನು `ಹಿಂದು~ ಎನ್ನುವುದನ್ನು ಸಾಬೀತು ಮಾಡು ಎಂದು ನನಗೆ ಜಬರಿಸಿದರು. ಅವರ ಕಣ್ಣುಗಳು ರಕ್ತ ಕಾರುತ್ತಿದ್ದವು. ಹಿಂದು ಎಂಬುದನ್ನು ಸಾಬೀತು ಮಾಡಲು ನಾನು ನನ್ನ ಪ್ಯಾಂಟನ್ನು ಇನ್ನೇನು ಕೆಳಗೆ ಉದುರಿಸಬೇಕು ಅನ್ನುವಷ್ಟರಲ್ಲಿ ಸಿಯಾಲ್‌ಕೋಟ್‌ನಲ್ಲಿ ನಮ್ಮ ಮನೆ ಹತ್ತಿರದಲ್ಲೇ ಇದ್ದ ವ್ಯಕ್ತಿಯೊಬ್ಬ ನನ್ನ ರಕ್ಷಣೆಗೆ ಓಡೋಡಿ ಬಂದ. `ಇವನು ಡಾಕ್ಟರ್ ಸಾಹೇಬರ ಮಗ~ ಎಂದು ಅವನು ಜೋರಾಗಿ ಕಿರುಚಿದ. ಹೌದು ಎನ್ನುತ್ತಾ ಮತ್ತೊಬ್ಬ ಅವನ ಜೊತೆಗೆ ಸೇರಿಕೊಂಡ. ಅಲ್ಲಿಗೆ ನಾನು ಬಚಾವಾಗಿ ಬದುಕುಳಿದೆ. ಆ ದಿನಗಳಲ್ಲಿ ಯಾರಿಗೂ ಕರುಣೆ ಅನ್ನುವುದೇ ಇರಲಿಲ್ಲ.

ಆದರೂ ಎಲ್ಲರಿಗೆ ತಿಳಿದಂತೆ ಮುಸ್ಲಿಮರು ಹಿಂದುಗಳನ್ನು ರಕ್ಷಿಸಿದ ಹಾಗೆಯೇ ಹಿಂದುಗಳು ಮುಸ್ಲಿಮರನ್ನು ರಕ್ಷಿಸಿದ ನೂರಾರು ನಿದರ್ಶನಗಳಿದ್ದವು. ದೇಶವಿಭಜನೆಯಿಂದಾಗಿ ಹತ್ಯೆಯಾದವರ ಮತ್ತು ವಲಸೆ ಹೋದವರ ಸಂಖ್ಯೆಯ ಬಗ್ಗೆ ನಿಖರ ಮಾಹಿತಿಗಳು ಲಭ್ಯವಿಲ್ಲ. ಆದರೆ ಹತ್ತು ಲಕ್ಷ ಜನರು ಈ ಸಂದರ್ಭದಲ್ಲಿ ಹತ್ಯೆಯಾಗಿದ್ದಾರೆ ಮತ್ತು ಸುಮಾರು ಎರಡು ಕೋಟಿ ಜನರು ಮನೆ ಮಠ ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ ಎಂಬ ಅಂದಾಜನ್ನು ಬಹುಪಾಲು ಒಪ್ಪಿಕೊಳ್ಳಲಾಗಿದೆ.

1947ರ ಸೆ.14ರಂದು ನಾನು ದೆಹಲಿಗೆ ಬಂದಾಗ ನಗರ ಗಲಭೆಗಳಿಂದ ತತ್ತರಿಸಿತ್ತು. ಪಶ್ಚಿಮ ಪಂಜಾಬಿನಿಂದ ಹೇಗೆ ಸಿಖ್ಖರು ಮತ್ತು ಹಿಂದುಗಳು ಭಾರತಕ್ಕೆ ವಲಸೆ ಬರುತ್ತಿದ್ದರೋ ಹಾಗೆಯೇ ಮುಸ್ಲಿಮರು ದೆಹಲಿ ಬಿಟ್ಟು ಓಡಿಹೋಗುತ್ತಿದ್ದರು. ಪಂಜಾಬಿನಲ್ಲಿನ ರಕ್ತಪಾತ ಪ್ರಹಸನದ ಪುನರಾವರ್ತನೆಯನ್ನು ನಾನು ದೆಹಲಿಯಲ್ಲಿ ಕಂಡೆ. ಅಲ್ಲಿ ಹಿಂದು ಮತ್ತು ಸಿಖ್ಖರು ಬಲಿಪಶುಗಳಾಗಿದ್ದರೆ ದೆಹಲಿಯಲ್ಲಿ ಮುಸ್ಲಿಮರು ಬಲಿಪಶುಗಳಾಗಿದ್ದರು. ವಿಭಜನೆಯಿಂದಾಗಿ ಸಿಡಿದ ಕೋಮು ಹತ್ಯೆಗಳನ್ನು ಭಾರತದ ರಾಜಧಾನಿ ದೆಹಲಿಯಲ್ಲಿ ನಾನು ಕಣ್ಣಾರೆ ಕಂಡೆ.

ಸರಿ, ನಾನು ಉರುಳಿಹೋದ ಕಾಲದಲ್ಲೇ ಬದುಕಲು ಸಾಧ್ಯವಿರಲಿಲ್ಲ. ಆದದ್ದು ಆಗಿಹೋಯಿತು. ದುಃಖ ಸಂಕಟಗಳೇನೇ ಇದ್ದರೂ ಜೀವನವನ್ನು ಹೊಸದಾಗಿ ಆರಂಭಿಸಲೇಬೇಕಿತ್ತು. ಮಹಾತ್ಮ ಗಾಂಧಿ ಅವರು ನೆಲೆಸಿದ್ದ ಬಿರ‌್ಲಾ ಮಂದಿರಕ್ಕೆ ಹೋಗಿ ಸ್ವಲ್ಪ ದೂರದಿಂದ ಗಾಂಧಿಯವರನ್ನು ನೋಡಿದೆ. ಇಬ್ಬರು ಯುವತಿಯರ ಹೆಗಲ ಮೇಲೆ ತೋಳು ಹಾಕಿ ಅವರು ಅತ್ತಿಂದಿತ್ತ ನಡೆದಾಡುತ್ತಿದ್ದರು. ಗಾಂಧೀಜಿಯನ್ನು ನಾನು ಪ್ರತ್ಯಕ್ಷವಾಗಿ ನನ್ನ ಕಣ್ಣುಗಳಿಂದಲೇ ನೋಡಿದ್ದೇನೆ ಎಂದು ಮುಂದೆ ಒಂದು ದಿನ ನನ್ನ ಮಕ್ಕಳು, ಮೊಮ್ಮಕ್ಕಳಿಗೆ ಹೇಳುತ್ತೇನೆ ಅಂದುಕೊಂಡೆ.

ನನ್ನ ಗೆಳೆಯರ ಬಗ್ಗೆ ವಿಚಾರಿಸಲು ದೆಹಲಿಯಲ್ಲಿ ಕಮ್ಯುನಿಸ್ಟ್ ಪಕ್ಷದ ಮುಖ್ಯ ಕಚೇರಿಗೆ ಒಂದು ದಿನ ಹೋದೆ. ಅಲ್ಲಿದ್ದ ಪಕ್ಷದ ದೆಹಲಿ ಘಟಕದ ಕಾರ್ಯದರ್ಶಿ ಮಹಮದ್ ಫರೂಕಿ ತುಂಬಾ ಹೊತ್ತು ಮಾತನಾಡಿದರು. ನಿನಗೆ ಉರ್ದು ಭಾಷೆ ಗೊತ್ತಿದೆಯೇ ಎಂದು ಪ್ರಶ್ನಿಸಿದರು. ನಾನು ಪರ್ಷಿಯನ್ ಭಾಷೆಯಲ್ಲಿ ಪದವಿಯನ್ನೇ ಪಡೆದಿದ್ದೆ.

`ಅಂಜಾಮ್~ ಉರ್ದು ದಿನಪತ್ರಿಕೆಗೆ ಉರ್ದು ಮತ್ತು ಇಂಗ್ಲಿಷ್ ಎರಡೂ ತಿಳಿದಿರುವ ಹಿಂದೂ ಹುಡುಗ ಬೇಕೆಂದು ಮಾಲೀಕರಾದ ಮಹಮದ್ ಯಾಸೀನ್ ಹೇಳಿದ್ದರಂತೆ. ಹೀಗೆ ನನ್ನನ್ನ ಪತ್ರಿಕಾವೃತ್ತಿಗೆ ಕರೆತಂದವರು ಫರೂಕಿಯೇ. ಕಚೇರಿಯಲ್ಲಿ ನನ್ನ ಹೆಸರಿದ್ದ ವಿಸಿಟಿಂಗ್ ಕಾರ್ಡುಗಳು ಕೈಗೆ ಬಂದಾಗ ಆಶ್ಚರ್ಯವೇ ಆಯಿತು. ಅದರಲ್ಲಿ ಜಂಟಿ ಸಂಪಾದಕ ಎಂದು ನಮೂದಿಸಲಾಗಿತ್ತು!

`ಅಂಜಾಮ್~ ಪತ್ರಿಕಾಲಯದಲ್ಲಿ ಅಂದು ಕೆಲಸಮಾಡುತ್ತಿದ್ದೆ. 1948ರ ಜ.30- ಎಂದಿನಂತೆ ಚಳಿಗಾಲದ ತಣ್ಣಗಿನ, ಪ್ರಕಾಶಮಾನ ಆದ ಒಂದು ದಿನ. ಕಚೇರಿ ಮೂಲೆಯೊಂದರಲ್ಲಿದ್ದ ಪಿಟಿಐ ಸುದ್ದಿ ಸಂಸ್ಥೆ ಟೆಲಿಪ್ರಿಂಟರ್‌ನಲ್ಲಿ ಗಂಟೆ ಬಾರಿಸಿತು. ಕೂಡಲೇ ಧಾವಿಸಿ ಹೋಗಿ ನೋಡಿದೆ. ಸುದ್ದಿಯ ಫ್ಲ್ಯಾಶ್ ಕಾಣಿಸಿತು - `ಗಾಂಧಿ ಷಾಟ್....~

ಗಾಂಧಿ ಮೇಲೆ ಗುಂಡು ಹಾರಿಸಲಾಗಿದೆ... ನನ್ನ ಸಹೋದ್ಯೋಗಿಯೊಬ್ಬರು ತಕ್ಷಣ ಮೋಟರ್‌ಬೈಕ್‌ನಲ್ಲಿ ನನ್ನನ್ನು ಬಿರ‌್ಲಾ ಮಂದಿರಕ್ಕೆ ಕರೆದುಕೊಂಡು ಹೋದರು. ನೆಹರು, ಪಟೇಲ್ ಮತ್ತು ರಕ್ಷಣಾ ಸಚಿವ ಬಲದೇವ್ ಸಿಂಗ್ ದುಃಖತಪ್ತರಾಗಿ ನಿಂತಿದ್ದರು. ಅವರಿಗೆಲ್ಲ ಇದು ತುಂಬಲಾರದ ನಷ್ಟ. ಮೌಲಾನ ಆಜಾದ್ ಒಂಟಿಯಾಗಿ ಕುಳಿತು ಚಿಂತಾಕ್ರಾಂತರಾಗಿದ್ದರು. ಗಾಂಧಿ ಅವರ ಪಾರ್ಥಿವ ಶರೀರವನ್ನು ಆವರಣದ ಮಧ್ಯ ಎತ್ತರದ ವೇದಿಕೆಯಂಥ ಜಾಗದಲ್ಲಿ ಇಡಲಾಗಿತ್ತು.

ಗವರ್ನರ್ ಜನರಲ್ ಮೌಂಟ್‌ಬ್ಯಾಟನ್ ಬಂದು ನಮನ ಸಲ್ಲಿಸಿದರು. ನೆಹರು ಬಿರ್ಲಾ ಮಂದಿರದ ಆವರಣದ ಗೋಡೆಯ ಮೇಲೆ ಹತ್ತಿ ಕಣ್ಣೀರು ಒರೆಸಿಕೊಂಡು ಗದ್ಗದಿತ ದನಿಯಲ್ಲಿ ಹೇಳಿದರು- `ನಮ್ಮ ಬದುಕಿನಿಂದ ಬೆಳಕು ಹೊರಟು ಹೋಯಿತು. ಬಾಪು ಇನ್ನಿಲ್ಲ. ನಮ್ಮಲ್ಲಿ ಚೈತನ್ಯ ತುಂಬಿ ನಮ್ಮ ಬದುಕನ್ನು ಬೆಚ್ಚಗಿರಿಸಿ ಬೆಳಗಿಸುತ್ತಿದ್ದ ಸೂರ್ಯ ಅಸ್ತಂಗತನಾಗಿದ್ದಾನೆ. ನಾವು ಚಳಿಯಲ್ಲಿ ನಡುಗುತ್ತ ಕತ್ತಲಲ್ಲಿ ಉಳಿಯಬೇಕಾಗಿದೆ~.

ಈ ಮಾತು ಮುಗಿಸುತ್ತಿದ್ದಂತೆ ನೆಹರು ಬಿಕ್ಕಿ ಬಿಕ್ಕಿ ಅತ್ತರು. ನೆರೆದ ಜನಸ್ತೋಮದ ದುಃಖದ ಕಟ್ಟೆಯೊಡೆಯಿತು. ಅಲ್ಲಿ ಕಣ್ಣೀರು ಹಾಕದವರೇ ಇರಲಿಲ್ಲ. ನಾನು ತುಂಬಾ ಭಾವಜೀವಿಯೂ ಪತ್ರಿಕಾವೃತ್ತಿಗೆ ತೀರಾ ಹೊಸಬನೂ ಆಗಿದ್ದೆ. ನಾಚಿಕೆಗೀಚಿಕೆ ಲೆಕ್ಕಿಸದೆ ನಾನೂ ಬಹಳ ಜೋರಾಗಿ ಅತ್ತುಬಿಟ್ಟೆ.
 
 ಮುಂದುವರೆಯುವುದು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT