ಶನಿವಾರ, ಅಕ್ಟೋಬರ್ 19, 2019
28 °C

ನನ್ನ ಕಥೆ: ಬಿಂದಾಸ್ ಆಗಿ ಬದುಕೋಣ

Published:
Updated:
ನನ್ನ ಕಥೆ:  ಬಿಂದಾಸ್ ಆಗಿ ಬದುಕೋಣ

ನಂ ಹುಟ್ಟೂರು ಹೊಳೆನರಸೀಪುರ. ಓದಿದ್ದು ಓದುತ್ತಾ ಇರೋದೆಲ್ಲಾ ಬೆಂಗಳೂರಲ್ಲೇ. ಕಾಲೇಜು ದಿನಗಳಲ್ಲಿ ಸಖತ್ ತರಲೆ, ಮುಂಗೋಪಿ ನಾನು. ಈಗಲೂ ಏನು ಕಡಿಮೆ ಇಲ್ಲ ಅನ್ನಿ. ಆಗಂತೂ ತುಂಬಾ ನಟೋರಿಯಸ್ ಆಗಿದ್ದೆ. ಕಾಲೇಜಿನ ಡ್ರೆಸ್‌ಕೋಡು, ಮೊಬೈಲ್ ನಿಷೇಧ ಇವನ್ನೆಲ್ಲಾ ನಾನು ನನ್ನ ಗೆಳತಿಯರು ತುಂಬಾ ವಿರೋಧಿಸ್ತಾ ಇದ್ವಿ. ಮಾತೆತ್ತಿದರೆ ಸ್ಟ್ರೈಕು ಅಂತ ಹೊರಟು ಬಿಡುತ್ತಿದ್ವಿ. ಮೇಷ್ಟ್ರು ಪಾಠ ಮಾಡುವಾಗಲೇ ತಿಂಡಿ ತಿಂತಾ ಇದ್ವಿ. ಆಬ್ಸೆಂಟ್ ಮೈಂಡ್ ಅಂದ್ರೆ ಆಬ್ಸೆಂಟ್ ಮೈಂಡ್. ಆದ್ರೆ ಪರೀಕ್ಷೇಲಿ ಮಾತ್ರ ಬೇಕಾದಷ್ಟು ಮಾರ್ಕ್ಸ್ ತಗೊಳ್ತಿದ್ವಿ. ಸುಭಾಷ್‌ಚಂದ್ರ ಬೋಸ್ ನಮ್ಮ ಹೀರೊ! ಹುಡುಗಿಯರನ್ನು ಯಾರಾದರೂ ರೇಗಿಸಿದರೆ ಜಗಳ ಕಾಯ್ತಿದ್ವಿ. ಮನೆವರೆಗೂ ದೂರು ಬರೋದು ಹಾಗಿತ್ತು ನಮ್ಮ ಜಗಳ.ಪಿಯು ಓದುವಾಗಲೇ ಗಾಂಭೀರ್ಯತೆ ಬಂದಿದ್ದು. ಸಿಇಟಿ ಪಾಸ್ ಆಗಬೇಕಿತ್ತಲ್ಲಾ! ವೈದ್ಯಳಾಗಬೇಕು ಅನ್ನೋದು ದೊಡ್ಡ ಕನಸು. ಆದರೆ ಆಗಲಿಲ್ಲ. ಎಂಜಿನಿಯರಿಂಗ್ ಓದುತ್ತಾ ಇದ್ದೇನೆ. ಐದನೇ ಸೆಮಿಸ್ಟರ್ ಈಗ. ಚಿಕ್ಕವಳಿದ್ದಾಗಿನಿಂದಲೂ ನೃತ್ಯ, ನಟನೆಯತ್ತಲೇ ಒಲವು. ಬೇಜಾನ್ ಬೀದಿ ನಾಟಕಗಳನ್ನು ಮಾಡಿದ್ದೆ. ಏಕಲವ್ಯನ ಪಾತ್ರ ಮಾಡುತ್ತಿದ್ದೆ. ಕೊರವಂಜಿ ವೇಷ ತೊಟ್ಟಿದ್ದಕ್ಕೆ ಮೊದಲ ಬಹುಮಾನ ಬಂದಿತ್ತು. ಜತೆಗೆ ಆ್ಯಂಕರಿಂಗ್ ಅಂತ ಓಡಾಡಿಕೊಂಡಿದ್ದೆ. ಇವೇ ನನ್ನನ್ನು ಕಿರುತೆರೆಗೆ ಕರೆತಂದವು. ನಂಗೆ ರಿಸ್ಕ್ ತಗೊಳ್ಳೋದು ಅಂದ್ರೆ ಇಷ್ಟ. ಹಾಗಾಗಿಯೇ ಓದು ಅಭಿನಯ ಎರಡೂ ದೋಣಿಗಳ ಮೇಲೆ ನನ್ನ ಪಯಣ ಸಾಗ್ತಾ ಇದೆ.ಮೊದಲೆಲ್ಲಾ ನಟರೋ ನಟಿಯರೋ ಬಂದಾಗ ಹುಬ್ಬೇರಿಸಿ ನೋಡುತ್ತಿದ್ದೆವು. ಈಗ ಜನ ನನ್ನನ್ನು ನಟಿ ಅಂತ ಗುರುತಿಸುತ್ತಾರೆ. ಅದು ದೊಡ್ಡ ಖುಷಿ.ನನ್ನ ಕೈಯಲ್ಲಿ ಯಾವಾಗ ನೋಡಿದರೂ ಒಂದು ಪುಸ್ತಕ ಇರುತ್ತೆ. ಓದುವ ದೊಡ್ಡ ಹುಚ್ಚು ನನಗೆ. ಶೇರ್ಲಾಕ್ ಹೋಮ್ಸ ನಿಂದ ಹಿಡಿದು ವೈದೇಹಿವರೆಗೆ ಎಲ್ಲರ ಕೃತಿಗಳನ್ನು ಬಿಡದೆ ಓದುತ್ತೇನೆ. ಪೂರ್ಣಚಂದ್ರ ತೇಜಸ್ವಿ ನನ್ನ ಸಾರ್ವಕಾಲಿಕ ಲೇಖಕ. ಎಸ್.ಎಲ್. ಭೈರಪ್ಪ, ಬೇಂದ್ರೆ, ಕಾರಂತ ನನ್ನ ಮೆಚ್ಚಿನ ಲೇಖಕರು. ಅಲ್ಲದೆ ಭಾವಗೀತೆಗಳನ್ನು ಕೂಡ ಕೇಳ್ತಾ ಇರ‌್ತೇನೆ. ಸಿ.ಅಶ್ವತ್ಥ್ ನನ್ನ ಮೆಚ್ಚಿನ ಹಾಡುಗಾರ. ಗಾಯಕ ರಾಜು ಅನಂತಸ್ವಾಮಿ ಅವರ ಜತೆ ಕನಿಷ್ಠ ನಾಟಕದಲ್ಲಾದರೂ ಅಭಿನಯಿಸಬೇಕು ಅಂತ ಆಸೆ ಇತ್ತು. ಆದರೆ ನಾನು ಕಿರುತೆರೆಗೆ ಕಾಲಿಡುವಷ್ಟರಲ್ಲಿ ಅವರು ಇಲ್ಲವಾದರು.

 

ಆಗಾಗ ಫ್ರಿಜ್ಜು, ಮಿಕ್ಸರ್‌ಗಳನ್ನೆಲ್ಲಾ ಬಿಚ್ಚಿಕೊಂಡು ಕುಳಿತಿರ್ತೇನೆ. ಬೈಕ್ ಓಡಿಸುವ ಹುಚ್ಚು ನನಗೆ. ಬಜಾಜ್ ಚೇತಕ್‌ನಿಂದ ಹಿಡಿದು ಈಗ ರಸ್ತೆಗೆ ಕಾಲಿಟ್ಟಿರುವ ಎಲ್ಲ ಬೈಕ್‌ಗಳ ರುಚಿಯನ್ನೂ ನೋಡಿದ್ದೇನೆ. ನೂರು ನೂರಿಪ್ಪತ್ತು ಕಿಲೋ ಮೀಟರ್ ವೇಗದಲ್ಲಿ ಬೈಕ್ ಓಡಿಸುವಾಗ ಸಿಗುವ ಮಜವೇ ಬೇರೆ. ಹೊತ್ತಿಲ್ಲದ ಹೊತ್ತಲ್ಲಿ ಮಡಿಕೇರಿ, ನಂದಿ ಬೆಟ್ಟ ಅಂತ ಹೊರಟದ್ದೂ ಇದೆ. ಸ್ನೇಹಿತರಿಗೆ ಬೈಕ್ ಓಡಿಸುವಾಗ ಆದ ಕೆಟ್ಟ ಅನುಭವಗಳು ಜೋರಾಗಿ ಸವಾರಿ ಮಾಡುವುದಕ್ಕೆ ಬ್ರೇಕ್ ಹಾಕಿದವು. ಆದ್ರೂ ಮನಸ್ಸು ಜೋರಾಗಿ ಓಡಿಸುವತ್ತಲೇ ವಾಲುತ್ತಿರುತ್ತದೆ!ನಂದೊಂದು ಮಾತು. ಯುವಜನರು ಮಸ್ತ್ ಮಜಾ ಮಾಡಬೇಕು. ಆದರೆ ಹತ್ತು ವರ್ಷದ ನಂತರ ಅಪ್ಪ ಅಮ್ಮನೋ ಮೇಷ್ಟ್ರೋ ಬಂದು ನಿನ್ನ ಸಾಧನೆ ಏನು ಅಂತ ಕೇಳಿದರೆ ಉತ್ತರಿಸುವ ಹಾಗೆ ಇರಬೇಕು. ಎಂಜಿನಿಯರಿಂಗು ಮೆಡಿಕಲ್ಲು ಅಂತಲೇ ಕೂರಬಾರದು. ಯಾವುದೇ ಕ್ಷೇತ್ರದಲ್ಲಿ ಮಿಂಚುವ ಗುಣ ಬೆಳೆಸಿಕೊಳ್ಳಬೇಕು.ನಂಗೆ ನಾನ್‌ವೆಜ್ ಅಂದ್ರೆ ತುಂಬಾ ಇಷ್ಟ. ಅದರಲೂ ಸೀಫುಡ್ ಅಂದ್ರೆ ಮೈಯಲ್ಲಾ ಬಾಯಿ ಆಗಿಬಿಡುತ್ತೆ. ಆಗಾಗ ಅಡುಗೆ ಕೂಡ ಮಾಡ್ತೀನಿ. ಪ್ರಾಣಿಗಳು ಅಂದ್ರೆ ಪಂಚಪ್ರಾಣ. ಆದರೆ ಬೆಕ್ಕು ಕಂಡರೆ ವಿಪರೀತ ಭಯ. ಕಾರಣ ಮಾತ್ರ ಗೊತ್ತಿಲ್ಲ!ದೇಶ ಸುತ್ತೋದು ನನ್ನ ಇನ್ನೊಂದು ಹವ್ಯಾಸ. ನಮ್ಮಪ್ಪ ಮಂಜುನಾಥ್ ಈಗಾಗಲೇ ರಾಜ್ಯದ ಎಲ್ಲಾ ಊರುಗಳನ್ನೂ ತೋರಿಸಿದ್ದಾರೆ. ಇನ್ನಾದರೂ ನಮ್ಮಪ್ಪ ಅಮ್ಮನಿಗೆ ವಿದೇಶ ತೋರಿಸಬೇಕು ಅನ್ನುವ ಆಸೆ. ಊಟ ಬೇಕಾದ್ರೂ ಬಿಡ್ತೀನಿ ಆದ್ರೆ ಸಿನಿಮಾ ನೋಡೋದು ಬಿಡಲ್ಲ. ಸಿನಿಮಾ ಅಂದ್ರೆ ನಮ್ಮನೇಲಿ ಯಾರೂ ಬರಲ್ಲ. ಎಷ್ಟೋ ದಿವಸ ಒಬ್ಬಳೇ ಹೋಗಿ ಸಿನಿಮಾ ನೋಡಿದ್ದೂ ಇದೆ. ರಾಜಣ್ಣ, ವಿಷ್ಣು, ಅಂಬರೀಷ್ ಮಾಮ ಅವರ ನಟನೆ ಸೂಪರ್.

 

ಟಾಮ್‌ಕ್ರೂಸ್ ನನ್ನ ನೆಚ್ಚಿನ ಹಾಲಿವುಡ್ ನಟ. ಕಾನೂರು ಹೆಗ್ಗಡತಿ ಸಿನಿಮಾ ನೋಡೋಕೂ ಮೊದಲೇ ಕಾದಂಬರಿಯನ್ನು ಓದಿದ್ದೆ. ಹಾಗಾಗಿ ಅದನ್ನು ಒಂದು ಅಧ್ಯಯನದಂತೆ ನೋಡುವುದು ಸಾಧ್ಯವಾಯಿತು. ಸದಭಿರುಚಿಯ ಚಿತ್ರಗಳನ್ನು ನೋಡುವ ಮೊದಲೇ ಅವುಗಳ ಕೃತಿಗಳನ್ನೂ ಓದಿಕೊಂಡರೆ ಅದರಿಂದ ಸಿಗುವ ಆನಂದವೇ ಬೇರೆ.ಕಲಾವಿದರಂತೂ ಸಾಹಿತ್ಯವನ್ನು ಓದಲೇ ಬೇಕು. ಯಾರೋ ಡೈಲಾಗ್ ಹೇಳಿಕೊಡುವುದೇ ಬೇರೆ. ನಾವೇ ಡೈಲಾಗ್‌ಗಳನ್ನು ಅನುಭವಿಸಿ ಹೇಳುವುದೇ ಬೇರೆ. ಸಾಹಿತ್ಯ ಓದಿಕೊಂಡರೆ ಸಂಭಾಷಣೆಗಳ ಮೇಲೆ ಹಿಡಿತ ಬರುತ್ತೆ. ಮಾಸ್ಟರ್ ಹಿರಣ್ಣಯ್ಯ, ಬಿ.ಜಯಶ್ರೀ, ಅಚ್ಯುತ್‌ಕುಮಾರ್ ಅವರಂತಹ ನಟರಿಗೆ ಓದಿನ ಹಿನ್ನೆಲೆ ಇರುವುದರಿಂದಲೇ ಅವರು ಎಂತಹ ಪಾತ್ರಗಳಿಗೂ ಜೀವ ತುಂಬಬಲ್ಲರು.ನನಗೆ ಕಷ್ಟ ಅಂತ ಬಂದದ್ದು ಅಪ್ಪ ಕೆಲಸ ಕಳೆದುಕೊಂಡಾಗ. ಎಲ್ಲಿ ಓದೋದು ಬಿಡಿಸಿ ಬಿಡ್ತಾರೋ ಅನ್ನುವ ಭಯ ಇತ್ತು. ಆದರೆ ನಮ್ಮ ಶಾಲೆಯ ಹೆಡ್‌ಮಿಸ್ ಕಾಳಜಿ ವಹಿಸಿದರು. ಅವರಿಗೆ ಎಷ್ಟು ಥ್ಯಾಂಕ್ಸ್ ಹೇಳಿದರೂ ಸಾಲದು. ಆಮೇಲೆ ನನ್ನ ಕಾಲಮೇಲೆ ನಿಂತೆ. ಲೈಟ್‌ಬಿಲ್ ಕಟ್ಟುವುದರಿಂದ ಹಿಡಿದು ಎಲ್ಲವನ್ನೂ ನಿರ್ವಹಿಸುವುದನ್ನು ಕಲಿತೆ. ನಮ್ಮಪ್ಪ ಆಗಾಗ ಹೇಳ್ತಾ ಇರ್ತಾರೆ. ನೀನು ಮಗಳಲ್ಲ. ನಮ್ಮ ಮನೆ ಹಿರಿಮಗ ಇದ್ದಹಾಗೆ ಅಂತ. ಇದಕ್ಕಿಂತ ದೊಡ್ಡ ಖುಷಿ ಇನ್ನಾವುದೂ ಇಲ್ಲ ಅಲ್ಲವೆ?ಬೃಂದಾವನ ಧಾರಾವಾಹಿಯಲ್ಲಿ ಪುಟ್ಟ ಅವಕಾಶ ಸಿಕ್ತು. ರಾಜೇಂದ್ರ ಸಿಂಗ್ ಅದರ ನಿರ್ದೇಶಕರು. ನನ್ನ ಅಭಿನಯ, ಹಾವಭಾವ ನೋಡಿ ನನ್ನ ಪಾತ್ರವನ್ನೇ ದೊಡ್ಡದಾಗಿ ಬೆಳೆಸಿದರು. 40-45 ಎಪಿಸೋಡ್‌ನಷ್ಟು ದೊಡ್ಡ ಪಾತ್ರವಾಗಿ ಅದು ಬೆಳೆಯಿತು. ಆಮೇಲೆ ಹೇಮಂತ್ ಹೆಗಡೆ ಅವರ `ಎಲ್ಲರಂತಲ್ಲ ನಮ್ಮ ರಾಜಿ~ ಧಾರಾವಾಹಿಯಲ್ಲಿ ಮುಖ್ಯಪಾತ್ರ ವಹಿಸಿದೆ. ಅಷ್ಟರಲ್ಲಿ ಶಾಸ್ತ್ರೀಯ ಸಂಗೀತವನ್ನೂ ಕಲಿತೆ. ಆಮೇಲೆ ಸಾಕಷ್ಟು ಆಫರ್‌ಗಳು ಬಂದವು. ಆದರೆ ಚಿ.ಸೌ.ಸಾವಿತ್ರಿಯ ಪಾತ್ರ ಆಕಸ್ಮಿಕವಾಗಿ ಸಿಕ್ಕಿತು. ಆಡಿಷನ್‌ಗೆ ಹೋದಾಗ ಯಾವ ಪಾತ್ರ ಮಾಡಬೇಕು ಅನ್ನವುದು ಕೂಡ ಗೊತ್ತಿರಲಿಲ್ಲ. ಲಂಗ, ಬ್ಲೌಸ್ ತೊಟ್ಟು ಹೋಗಿದ್ದೆ. ಡೈಲಾಗ್ ಹೇಳಿ ಬಂದೆ. ಎರಡೇ ದಿನದಲ್ಲಿ ಶೂಟಿಂಗ್ ಆರಂಭವಾಗಿತ್ತು.

ಆಗಲೇ ನನಗೆ ಗೊತ್ತಾದದ್ದು ಅದರಲ್ಲಿ ನನ್ನದು ಮುಖ್ಯ ಪಾತ್ರ ಎಂದು. ಶ್ರುತಿ, ರಾಧಮ್ಮ, ಜೈಜಗದೀಶ್ ಅವರಂತಹ ಹಿರಿಯ ಕಲಾವಿದರ ಜತೆ ನಟಿಸುವುದು ನನ್ನ ಪಾಲಿನ ಭಾಗ್ಯ.

ಸಿನಿಮಾ ಚಾನ್ಸ್ ಸಿಕ್ಕರೆ ಖಂಡಿತಾ ಹೋಗ್ತೇನೆ. ಅದರಲ್ಲಿ ಯಾವುದೇ ಅನುಮಾನ ಇಲ್ಲ.ಆದರೆ ಎಂಥ ಪಾತ್ರಗಳು ಸಿಗುತ್ತವೆ ಅನ್ನೋದು ಮುಖ್ಯ. ಬರೀ ಮೈ ತೋರಿಸುವ ಸಿನಿಮಾಗಳಾದರೆ ಬಿಲ್‌ಕುಲ್ ಒಪ್ಪುವುದಿಲ್ಲ. ಅಭಿನಯಕ್ಕೆ ಹೆಚ್ಚು ಒತ್ತುಇರಬೇಕು. ಆಗ ಮಾತ್ರ ತೃಪ್ತಿ ಸಿಗುತ್ತೆ.  ನನ್ನದು ಸಿಂಪಲ್ ಬದುಕು. ವೃತ್ತಿಯಲ್ಲಿ ಮುಂದೆ ಬರೋದು, ಪ್ರವೃತ್ತಿಯಲ್ಲಿ ಮುಂದೆ ಬರೋದು ಬೇರೆ ವಿಚಾರ. ಆದರೆ ಮೊದಲು ಮನುಷ್ಯಳಾಗುವತ್ತಲೇ ಗಮನ. ಅದು ಒಂದು ಇದ್ದರೆ ಇನ್ನೆಲ್ಲವೂ ಸಲೀಸು ಅಲ್ಲವೇ?

Post Comments (+)