ನನ್ನ ಕುಟುಂಬವೇ ನನ್ನ ಉಡುಗೊರೆ

7

ನನ್ನ ಕುಟುಂಬವೇ ನನ್ನ ಉಡುಗೊರೆ

Published:
Updated:
ನನ್ನ ಕುಟುಂಬವೇ ನನ್ನ ಉಡುಗೊರೆ

ನನ್ನ ಕುಟುಂಬವೇ ನನ್ನ ಪಾಲಿನ ಅತಿ ದೊಡ್ಡ ಉಡುಗೊರೆಯಾಗಿದೆ. ನನ್ನ ಪತ್ನಿ ಜಯಾ, ಅವಳು ನೀಡಿರುವ ಅತ್ಯಮೂಲ್ಯ ಕೊಡುಗೆಗಳಾದ ಅಭಿಷೇಕ್ ಮತ್ತು ಶ್ವೇತಾ, ಇದೀಗ ಕುಟುಂಬಕ್ಕೆ ಸೇರಿರುವ ಬಹುರಾನಿ ಐಶ್ವರ್ಯ, ಮತ್ತು ಪುಟ್ಟ ದೇವತೆ ಆರಾಧ್ಯ... ಇವರೆಲ್ಲರೂ ದೇವರು ನನಗೆ ನೀಡಿರುವ ಅತಿದೊಡ್ಡ ಕೊಡುಗೆಯಾಗಿದೆ. ಈ ಕುಟುಂಬದ ಪ್ರೀತಿ ಮತ್ತು ವಾತ್ಸಲ್ಯವೇ ನನ್ನ ಪ್ರೀತಿಯ ಕೊಡುಗೆಯಾಗಿದೆ ಎಂದು ಬಿಗ್‌ಬಿ ಅಮಿತಾಬ್ ಬಚ್ಚನ್ ಹೇಳಿದ್ದಾರೆ.ತಮ್ಮ ಜನ್ಮದಿನದ ಮುನ್ನಾದಿನ ತಮ್ಮ ಮನೆಯಲ್ಲಿ ಸುದ್ದಿ ಸಂಸ್ಥೆಗೆ ನೀಡಿರುವ ಸಂದರ್ಶನದಲ್ಲಿ ತಮ್ಮ ಕುಟುಂಬದ ಬಗೆಗಿನ ಅಕ್ಕರಾಸ್ಥೆಯನ್ನು ಬಿಗ್‌ಬಿ ಬಿಚ್ಚಿಟ್ಟಿದ್ದಾರೆ.

ನನ್ನ ಅಪ್ಪ ಹರಿವಂಶರಾಯ್ ಬಚ್ಚನ್ ಹಾಗೂ ತೇಜಿ ಬಚ್ಚನ್ ಇಬ್ಬರೂ ಬದುಕುವ ಪರಿಯನ್ನು ಹೇಳಿಕೊಟ್ಟರು. ಬದುಕಿನ ಏರಿಳಿತಗಳನ್ನು ಸ್ವೀಕರಿಸುವ ಬಗೆ ತಿಳಿಸಿಕೊಟ್ಟರು. ನನ್ನೆಲ್ಲ ಸಂಘರ್ಷಗಳಲ್ಲಿಯೂ ಜಯಾ ಜೊತೆಯಾದರು. ಇದೆಲ್ಲವೂ ಕೊಡುಗೆಯೇ ಅಲ್ಲವೇ? ಎಂದು ಭಾವುಕರಾಗಿ ಮಾತನಾಡಿದ್ದಾರೆ ಅಮಿತಾಬ್.ಅ.11ರಂದು 70ಕ್ಕೆ ಕಾಲಿರಿಸಲಿರುವ ಬಿಗ್‌ಬಿ ಅವರ ಜನ್ಮದಿನವನ್ನು ಈ ಸಲ ಜೋರಾಗಿ ಆಚರಿಸಬೇಕು ಎಂದು ಜಯಾ ಬಚ್ಚನ್ ತೀರ್ಮಾನಿಸಿದ್ದಾಗಿದೆ. ಹುಟ್ಟುಹಬ್ಬಕ್ಕೆಂದೇ ಪುಸ್ತಕ ಬಿಡುಗಡೆ, ಕಲಾ ಪ್ರದರ್ಶನ, ಪೋಸ್ಟರ್ ಬಿಡುಗಡೆ ಮುಂತಾದವನ್ನೆಲ್ಲ ಹಮ್ಮಿಕೊಳ್ಳಲಾಗಿದೆ. ಆಚರಣೆಯನ್ನು ಬುಧವಾರ ಸಂಜೆಯಿಂದಲೇ ಆರಂಭಿಸುವ ಸೂಚನೆಯನ್ನು ಈ ಮೊದಲೇ ಜಯಾ ನೀಡಿದ್ದರು.ಆದರೆ ಇದೆಲ್ಲಕ್ಕೂ ಅಮಿತಾಬ್ ಮಾತ್ರ ಪ್ರೀತಿತುಂಬಿದ ನೋಟದಿಂದ ಮುಗುಳ್ನಗುತ್ತ ಹೇಳುತ್ತಾರೆ...

ನನಗೆ ಹುಟ್ಟು ಹಬ್ಬ ಆಚರಣೆ ಎಂದರೆ ಕುಟುಂಬದೊಡನೆ ಸಂತಸವಾಗಿ ಸಮಯ ಕಳೆಯುವುದೇ ಇಷ್ಟ. ಇಷ್ಟು ದಿನಗಳ ವರೆಗೂ ನನ್ನ ಮಾತನ್ನು ಪಾಲಿಸಿಕೊಂಡು ಬರಲಾಗಿದೆ. ಅ.11 ಬಂದರೆ ಚಿತ್ರರಂಗದಿಂದ ದೂರ ಓಡುವ ಕಾಲವೊಂದಿತ್ತು. ಆದರೆ ನಾನು, ನನ್ನ ಖುಷಿ ಎಂದರೆ ಕೇವಲ ನನ್ನ ಭಾವನೆಗಳು ಮಾತ್ರ ಅಲ್ಲವಲ್ಲ...ನನ್ನೊಂದಿಗೆ ನನ್ನ ಪತ್ನಿಯ ಭಾವನೆಗಳನ್ನೂ ಗೌರವಿಸಲೇಬೇಕಲ್ಲ. ಜಯಾಳ ಸಂತೋಷಕ್ಕಾಗಿ ಈ 70 ವರ್ಷಗಳ ಸಂಭ್ರಮವನ್ನು ಹಂಚಿಕೊಳ್ಳಲು ಒಪ್ಪಿಕೊಂಡಿದ್ದೇನೆ.

ಎಲ್ಲವನ್ನೂ ಜಯಾ ಮಾತ್ರ ನಿಭಾಯಿಸುತ್ತಿದ್ದಾರೆ. ನನಗೆ ಇದು ಇನ್ನೊಂದು ಸಾಮಾನ್ಯ ವರ್ಷ. ಮತ್ತೊಂದು ವರ್ಷ ಉರುಳಿ ಹೋಯಿತಲ್ಲ ಎಂಬ ಭಾವ.~ ಎನ್ನುತ್ತಾರೆ ಬಿಗ್ ಬಿ.ಈ ಸಲ ಜಯಾ, ಅಭಿ, ಐಶ್ವರ್ಯ, ಶ್ವೇತಾ ಎಲ್ಲ ಸೇರಿ ಏನೇನೋ ಆಚರಣೆಗಳನ್ನು ಹಮ್ಮಿಕೊಂಡಿದ್ದಾರೆ. ಯಾರೂ ಏನೂ ಹೇಳುತ್ತಿಲ್ಲ. ಎಲ್ಲರೂ ಮುಗುಮ್ಮಾಗಿದ್ದಾರೆ. ಬಾಯಿ ಬಿಡುತ್ತಿಲ್ಲ ಎನ್ನುವ ಬಿಗ್ ಬಿಗೆ ಮೊಮ್ಮಕ್ಕಳೊಂದಿಗೆ ಆಡುವುದೆಂದರೆ ಅತಿ ಪ್ರೀತಿಯಂತೆ.ನನ್ನ ಅಭಿಮಾನಿಗಳ ಪ್ರೀತಿ ನೋಡಿದಾಗ ಮೂಕನಾಗುತ್ತೇನೆ. ಮನೆಮುಂದೆ ಬಂದವರೊಂದಿಗೆ ಚಿತ್ರ ತೆಗೆಸಿಕೊಳ್ಳುವುದು, ಹಸ್ತಾಕ್ಷರ ನೀಡುವುದು ಸಾಧ್ಯವಿದ್ದಾಗಲೆಲ್ಲ ಮಾಡುತ್ತೇನೆ. ಬಹುತೇಕ ಅಭಿಮಾನಿಗಳು ನನ್ನ ಆರೋಗ್ಯಕ್ಕಾಗಿ ಪ್ರಾರ್ಥಿಸುತ್ತಾರೆ. ಅವರ ನಿರ್ಮಲ ಪ್ರೀತಿ ಕಂಡು ದೇವರಿಗೊಮ್ಮೆ ಧನ್ಯವಾದ ಅರ್ಪಿಸುತ್ತೇನೆ ಎನ್ನುತ್ತಾರೆ ಬಚ್ಚನ್.ನಾಲ್ಕು ದಶಕಗಳಲ್ಲಿ 180 ಚಿತ್ರಗಳಲ್ಲಿ ನಟಿಸಿರುವ ಬಚ್ಚನ್‌ಗೆ ತಮ್ಮ ವಯಸ್ಸು ಕೆಲಸದಲ್ಲಿ ತೊಡಕೆಂದು ಕಂಡಿಲ್ಲವಂತೆ. ಈಗಲೂ ಹೆಚ್ಚು ಕೆಲಸ ಮಾಡುತ್ತಿದ್ದೇನೆ. ಅಥವಾ ಇದು ಇಳಿವಯಸ್ಸು. ವಯಸ್ಸಿಗೆ ಮೀರಿದ ಕೆಲಸ ಮಾಡುತ್ತಿದ್ದೇನೆ ಎಂದೇನು ಎನಿಸುತ್ತಿಲ್ಲ. ನಾನು, ನನ್ನ ದಿನನಿತ್ಯದ ಜೀವನವನ್ನು ಗೌರವಿಸುವುದು ಕಲಿತಿದ್ದೇನೆ.ಜಿಮ್‌ಗೆ ಹೋಗುವುದು, ಆಸ್ಪತ್ರೆಗೆ ಹೋಗುವುದು, ಇವೆಲ್ಲದರ ನಡುವೆಯೂ ನಾನೊಪ್ಪಿಕೊಂಡ ಕೆಲಸವನ್ನು ಗೌರವದಿಂದ ಮುಗಿಸಿಕೊಡುವುದು ನನ್ನ ಜವಾಬ್ದಾರಿ ಎಂದುಕೊಂಡಿದ್ದೇನೆ.ಪ್ರತಿದಿನವೂ ಬೆಳಿಗ್ಗೆ ಎದ್ದಾಗ ಆ ದಿನದ ಕೆಲಸಗಳನ್ನು ಮುಗಿಸಲೆಂದೇ ಈ ಬೆಳಗು ದಕ್ಕಿದೆ ಎಂದುಕೊಳ್ಳುತ್ತೇನೆ. ಈ ಭಾವನೆಯೇ ನನ್ನ ಜೀವನದಲ್ಲಿ ಶಿಸ್ತು ಮೂಡಿಸಿದೆ. ನನ್ನೆಲ್ಲ ಕೆಲಸಗಳನ್ನೂ ಪ್ರೀತಿಸುತ್ತೇನೆ. ಶ್ರದ್ಧೆ, ಆಸಕ್ತಿಯಿಂದಲೇ ಕೆಲಸವನ್ನು ನಿಭಾಯಿಸುತ್ತೇನೆ ಎನ್ನುತ್ತಾರೆ ಅಮಿತಾಬ್.ಚಿತ್ರೋದ್ಯಮ ಹಾಗೂ ಬಚ್ಚನ್ ಅಭಿಮಾನಿಗಳು ಅವರ ಹುಟ್ಟುಹಬ್ಬದ ಸಂಭ್ರಮಾಚಾರಣೆಯನ್ನೇ ಎದುರು ನೋಡುತ್ತಿದ್ದು, ಇವೊತ್ತು ಅವಕ್ಕೆಲ್ಲ ಉತ್ತರ ದೊರೆಯಲಿವೆ.  

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry