ನನ್ನ ಕೃತಿಗಳ ಉದ್ದೇಶ ಸತ್ಯಾನ್ವೇಷಣೆ

7

ನನ್ನ ಕೃತಿಗಳ ಉದ್ದೇಶ ಸತ್ಯಾನ್ವೇಷಣೆ

Published:
Updated:

ಬೆಂಗಳೂರು: `ಮೌಲ್ಯ ಮತ್ತು ಧರ್ಮ ಸಂಘರ್ಷಕ್ಕಿಂತ ಸತ್ಯಾನ್ವೇಷಣೆಯ ವಿಚಾರವೇ ನನ್ನನ್ನು ಹೆಚ್ಚು ಬಾಧಿಸಿದ್ದು, ನನ್ನ ಕೃತಿಗಳ ಮೂಲ ಉದ್ದೇಶವೇ ಸತ್ಯಾನ್ವೇಷಣೆ~ ಎಂದು ಸಾಹಿತಿ ಎಸ್.ಎಲ್.ಭೈರಪ್ಪ ಪ್ರತಿಪಾದಿಸಿದರು.ಸುಂದರ ಸಾಹಿತ್ಯ ಪ್ರಕಾಶನವು ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಶುಕ್ರವಾರ ಆಯೋಜಿಸಿದ್ದ ಸಾಹಿತಿ ಡಾ.ಎಸ್.ಎಲ್.ಭೈರಪ್ಪ ಅವರ ಕಾದಂಬರಿಗಳಲ್ಲಿ `ಧರ್ಮ ಮತ್ತು ಸಂಸ್ಕೃತಿ~ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.`ಸಾಹಿತ್ಯ ರಚನೆಯ ವಿಚಾರದಲ್ಲಿ ಶ್ರೇಷ್ಠ ಮತ್ತು ಕನಿಷ್ಠ ಎಂಬ ಭಾವನೆ ನನ್ನಲ್ಲಿ ಇಲ್ಲ. ಈವರೆಗೆ ರಚಿಸಿದ ಎಲ್ಲ ಕೃತಿಗಳ ಮೂಲ ಉದ್ದೇಶ ಸತ್ಯವನ್ನು ಹುಡುಕುವುದೇ ಆಗಿದೆ. ಮೌಲ್ಯವನ್ನು ಅರಸದೇ ರಚಿಸುವ ಕೃತಿಗಳು ಗಂಭೀರವಲ್ಲದ ಸಾಹಿತ್ಯಕ್ಕೆ ಸೇರ್ಪಡೆಯಾಗುತ್ತವೆ~ ಎಂದು ಹೇಳಿದರು. `ಧರ್ಮ ಎಂಬುದು ಅಧ್ಯಾತ್ಮದ ಪರಿಕಲ್ಪನೆ. ಇದಕ್ಕೆ ಪರ್ಯಾಯ ಪದ ಹುಡುಕಲಾರದೆ ಆಂಗ್ಲರು ಧರ್ಮವನ್ನು ಮತಗಳೆಂದೇ ಪ್ರತಿಪಾದಿಸಿದರು. ಅದು ಇಂದಿಗೂ ಚಾಲ್ತಿಯಲ್ಲಿದೆ. ಭಾರತದಲ್ಲಿ ಹುಟ್ಟಿ ಬೆಳೆದ ಬಹುತೇಕ ಧರ್ಮಗಳ ಪ್ರಮುಖ ಅಂಶ `ಅಧ್ಯಾತ್ಮ~ದ ನಿಲುವನ್ನು ಹೊಂದಿತ್ತೇ ವಿನಃ ಪ್ರಚಾರದ ಗೀಳಿಗೆ ಬೀಳಲಿಲ್ಲ~ ಎಂದರು.` ಜ್ಞಾನದ ವಿವಿಧ ಶಾಖೆಗಳನ್ನು ಹೊಂದಿರುವ ತತ್ವಜ್ಞಾನವು ಧರ್ಮದ ಮೂಲ ತಿರುಳು. ಆಯಾ ಸಂಸ್ಕೃತಿಯು ಧರ್ಮದ ಆಧಾರದ ಮೇಲೆ ರೂಪುಗೊಂಡಿರುತ್ತದೆ. ಇವೆಲ್ಲವನ್ನೂ ಒಳಗೊಂಡಿರುವ ಪ್ರಸ್ತುತ ಮೌಲ್ಯ ಹಾಗೂ ಪರಂಪರಾಗತ ಮೌಲ್ಯಗಳ ನಡುವಿನ ಸಂಘರ್ಷವು ಉತ್ತಮ ಲೇಖಕನನ್ನು ಹೆಚ್ಚು ಬಾಧಿಸುತ್ತದೆ~ ಎಂದರು.ವಿಮರ್ಶಕ ಪ್ರೊ.ಜಿ.ಬಿ.ಹರೀಶ್, `ಭಾರತದ ಸಂಸ್ಕೃತಿಯನ್ನು ಅರ್ಥೈಸಿಕೊಳ್ಳಲು ಭೈರಪ್ಪ ಸಾಹಿತ್ಯದ ಮೂಲಕ ದೇಸೀಯ ದೃಷ್ಟಿಕೋನ ನೀಡಿದರು. ಪಾಶ್ಚಿಮಾತ್ಯ ಇತಿಹಾಸಕಾರರ ಅಭಿಪ್ರಾಯಗಳೇ ಹೆಚ್ಚಾಗಿ ಹೇರಲ್ಪಟ್ಟ ಇತಿಹಾಸಕ್ಕೆ ತಮ್ಮ ಸಾಹಿತ್ಯ ರಚನೆಯ ಮೂಲಕ ಹೊಸ ವ್ಯಾಖ್ಯಾನ ನೀಡಿದರು~ ಎಂದರು.`ಪುಸ್ತಕಗಳನ್ನು ಸರಿಯಾಗಿ ಓದದೇ ವಿಮರ್ಶೆ ನಡೆಸುವ ದೊಡ್ಡ ಗುಂಪೇ ಇದೆ. ಈ ಗುಂಪು ಭೈರಪ್ಪ ಅವರ `ಆವರಣ~ ಕಾದಂಬರಿಯ ಆವರಣ ಮಾತ್ರ ಗ್ರಹಿಸಿ, ಹೂರಣವನ್ನು ಸಂಪೂರ್ಣವಾಗಿ ನಿರ್ಲಕ್ಷಿಸುವ ಮೂಲಕ ಬೌದ್ಧಿಕ ಜಗತ್ತಿಗೆ ಅಪಚಾರವೆಸಗಿದೆ~ ಎಂದು ದೂರಿದರು.ನಿಘಂಟು ತಜ್ಞ ಪ್ರೊ.ಜಿ. ವೆಂಕಟಸುಬ್ಬಯ್ಯ, ವಿಮರ್ಶಕ ಪ್ರೊ.ಎಸ್.ರಾಮಸ್ವಾಮಿ, ಕವಿ ಪ್ರೊ.ಎಚ್.ಎಸ್.ವೆಂಕಟೇಶಮೂರ್ತಿ, ಪ್ರಕಾಶನದ ಗೌರಿ ಸುಂದರ್ ಇತರರು ಉಪಸ್ಥಿತರಿದ್ದರು.

ಪುಸ್ತಕದ ಬೆಲೆ - 250 ರೂಪಾಯಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry