ನನ್ನ ನಿನ್ನ ನಡುವೆ

7

ನನ್ನ ನಿನ್ನ ನಡುವೆ

Published:
Updated:

ಕವಿತೆ

ನನ್ನ ನಿನ್ನ ನಡುವೆ

ಹೀಗಾಗಬಾರದು ಸಖಿ ಹೀಗಾಗಬಾರದು

ನೀ ಸತ್ತರೆ ಸುಡುತ್ತಾರೆ

ನಾ ಸತ್ತರೆ ಹೂಳುತ್ತಾರೆ

ಕುಂಭ ಹೊತ್ತ ಮಗನೋ ಮೊಮ್ಮಗನೋ

ನಿನ್ನ ಪ್ರದಕ್ಷಿಣೆ ಹಾಕುತ್ತಿರುವಂತೆಯೇ

ಬೆಂಕಿಯ ನಾಲಗೆ ಬೂದಿಮಾಡುತ್ತಾ

ನೂರು ವರುಷಗಳ ನಿನ್ನ ವಸಂತವನ್ನು

ಒಂದು ಸಾಯಂಕಾಲ

ನಿನ್ನ ಉಸಿರ ಉಬ್ಬಸ

ರಂಗೋಲಿ ಬೆರಳುಗಳು

ಮುತ್ತುಗಳ ಬೈತಿಟ್ಟುಕೊಂಡ ತುಟಿ

ಮತ್ತೇ, ನಾನೇ ಕೈಯಾರೆ ತೊಡಸಿದ ಮೂಗುತಿ

ನನ್ನ ನಿನ್ನ ನಡುವೆ ಎದ್ದ ಅಯೋಧ್ಯೆ

ಎಲ್ಲಾ ಎಲ್ಲಾ ಭಸ್ಮವಾಗುತ್ತವೆ

ಒಂದು ದಿನ ಸಾಯಂಕಾಲ

ಆ ಹೊತ್ತು ನಾನೆಲ್ಲಿರುತ್ತೇನೋ

ನಿನಗಿಂತ ಮುಂಚೆ ಮಣ್ಣಲ್ಲಿ ಮಣ್ಣಾಗಿ

ಬೇರೆಲ್ಲೋ ಕಾದಿರುತ್ತೇನೊ...

ಹೇಗೆ ಹೇಳಲಿ?

ಸತ್ತು ತೆವಳುವ ಎರೆಹುಳವು

ನಾನು ಭೂಮಿಯಲಿ

ಸುಟ್ಟು ಹುಟ್ಟುವ ಚಿನ್ನದ ಚಿಟ್ಟೆ

ನೀನು ಗಾಳಿಯಲಿ

ನಡುಮನೆಯಲಿ ಹೆಣ ಇಟ್ಟುಕೊಂಡು ಕೂತ

ನಮ್ಮೂರಿನ ಬರ್ಬರ ಬಿಸಿಲ ಮಧ್ಯಾಹ್ನಗಳಲಿ

ಹೀಗಾಗಬಾರದು

ನೀನು ಗಂಡನೊಂದಿಗೆ

ಹಾಸಿಗೆ ಹಂಚಿಕೊಳ್ಳುತ್ತಿರುವ ಸವರಾತ್ರಿಯಲಿ

ನಿನ್ನ ಯೋನಿಜರು ಕಳೆಬರ ಹೊತ್ತು ನಡೆಯುವ

ನಿನ್ನ ವಿವಶದ ಘಳಿಗೆಗಳಲ್ಲಿ

ನಾ ಹೊರಗಿನವನು; ಪ್ರವೇಶವಿಲ್ಲದವನು

ಹೀಗಾಗಬಾರದು ಸಖಿ ಹೀಗಾಗಬಾರದು

ನನ್ನ ನಿನ್ನ ನಡುವೆ ಹೀಗಾಗಬಾರದು

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry