ನನ್ನ ನಿರ್ದೇಶನದಲ್ಲಿ ನಾನೇ ನಟಿಸುವುದಿಲ್ಲ...

7

ನನ್ನ ನಿರ್ದೇಶನದಲ್ಲಿ ನಾನೇ ನಟಿಸುವುದಿಲ್ಲ...

Published:
Updated:
ನನ್ನ ನಿರ್ದೇಶನದಲ್ಲಿ ನಾನೇ ನಟಿಸುವುದಿಲ್ಲ...

`ಬಂದೇ ಬರತಾವ ಕಾಲ~, `ಅಮೃತವಾಹಿನಿ~, `ಕಾಲದ ಕಡಲು~ ಸೇರಿದಂತೆ ಹತ್ತಾರು ಧಾರಾವಾಹಿಗಳನ್ನು ನಿರ್ದೇಶಿಸಿರುವ ಕಲಾಗಂಗೋತ್ರಿ ಮಂಜು ಅಲಿಯಾಸ್ ಡಿ.ಎಸ್. ಮಂಜುನಾಥ ಕಿರುತೆರೆಯ ಹಿರಿಯ ಅನುಭವಿ. ದೂರದರ್ಶನದ `ಕಥಾಸರಿತ~ ವಿಭಾಗಕ್ಕೆ ಕನ್ನಡದ ಪ್ರಮುಖ ಕಥೆಗಳನ್ನು ನಿರ್ದೇಶಿಸಿ ಹೆಸರು ಮಾಡಿರುವ ಮಂಜು, ಶಾಂತರಸರ `ಮಲ್ಕಮ್ಮ~ ಸಣ್ಣಕಥೆ ಆಧಾರಿತ ಚಿತ್ರಕ್ಕೆ ರಾಷ್ಟ್ರಮಟ್ಟದ ಪುರಸ್ಕಾರ ಪಡೆದಿದ್ದಾರೆ. ಕಲಾಗಂಗೋತ್ರಿ ಎಂಬ ಬೆಂಗಳೂರಿನ ಪ್ರತಿಷ್ಠಿತ ರಂಗತಂಡಕ್ಕೆ ತಮ್ಮನ್ನು ಸಮರ್ಪಿಸಿಕೊಂಡ ಪ್ರತಿಫಲ ಎಂಬಂತೆ ಅವರ ಹೆಸರಿನ ಜತೆ `ಕಲಾಗಂಗೋತ್ರಿ~ ಎಂಬ ಬಿರುದು ಸಕಾರಣವಾಗಿಯೇ ತಗಲುಹಾಕಿಕೊಂಡಿದೆ. ಧಾರಾವಾಹಿ ಇರಲಿ, ಸಾಕ್ಷ್ಯಚಿತ್ರ ಇರಲಿ, ತುಂಬ ಪರಿಶ್ರಮದ ಕುಸುರಿ ಕೆಲಸದಿಂದಾಗಿ ಉತ್ತಮ ಕಲಾಕೃತಿ ಕಟ್ಟಿಕೊಡುವಲ್ಲಿ ಮಂಜು ಹೆಸರಾಗಿದ್ದಾರೆ.

ಟೀವಿ ಧಾರಾವಾಹಿ ಕ್ಷೇತ್ರದಲ್ಲಿ ನಿಮ್ಮನ್ನ ಸಾಮಾನ್ಯವಾಗಿ ತಾಂತ್ರಿಕ ನಿರ್ದೇಶಕರು ಅಂತಾ ಕರೀತಾರೆ. ಅಂದ್ರೆ ಬರೀ ತಾಂತ್ರಿಕ ಪರಿಣತಿಯೇ?

ಹಾಗಲ್ಲ. ಎಲ್ಲ ವಿಭಾಗಗಳನ್ನು ತಿಳಿದುಕೊಂಡವನನ್ನು ಟೆಕ್ನಿಕಲ್ ಡೈರೆಕ್ಟರ್ ಅಂತಾರೆ. ಯಾವುದನ್ನು ಹೇಗೆ ಹೇಳಬೇಕು ಅನ್ನುವುದು ಮುಖ್ಯ. ಮಾತಿಗೆ ಪ್ರಾಮುಖ್ಯ ಕೊಡುವ ಕಡೆ ಮಾತಿಗೆ. ಮತ್ತೆ ಕೆಲವೆಡೆ ದೃಶ್ಯಗಳಿಗೇ ಹೆಚ್ಚು ಒತ್ತು ಇರುತ್ತದೆ. `ಗುಪ್ತಗಾಮಿನಿ~ ಧಾರಾವಾಹಿಯಲ್ಲಿ ಒಮ್ಮೆ ಲೇಖಕರು ನಾಲ್ಕು ಪುಟ ಸಂಭಾಷಣೆ ಬರೆದುಕೊಟ್ಟಿದ್ದರು. ಅದರಲ್ಲಿ ಒಂದೂವರೆ ಪುಟದ ಸಂಭಾಷಣೆಯನ್ನು ಮಾತ್ರ ಪಾತ್ರಧಾರಿಗಳಿಂದ ಹೇಳಿಸಿ, ಉಳಿದ ಎರಡೂವರೆ ಪುಟದಷ್ಟು ಸಂಭಾಷಣೆಯನ್ನು ದೃಶ್ಯದ ಮೂಲಕವೇ ತುಂಬಿಕೊಟ್ಟಿದ್ದೆ. ಇದರಿಂದ ಲೇಖಕರಿಗೆ ಬೇಸರವೇನೂ ಆಗಲಿಲ್ಲ, ಸಂತೋಷವೇ ಆಗಿತ್ತು. ಯಾವಾವುದಕ್ಕೆ ಎಷ್ಟು ಆದ್ಯತೆ ಕೊಡಬೇಕು ಎಂದು ಗೊತ್ತಿರುವವರನ್ನು ಟೆಕ್ನಿಕಲಿ ಸೌಂಡ್ ಅಥವಾ ಟೆಕ್ನಿಕಲ್ ಡೈರೆಕ್ಟರ್ ಅಂತಾರೆ. ಮತ್ತೊಂದು ಕಾರಣವೆಂದರೆ ನಾನು ಸಿನಿಮಾ, ಟೀವಿ, ಸಾಕ್ಷ್ಯಚಿತ್ರಗಳಲ್ಲಿ ಸಂಕಲನಕಾರನಾಗಿ ನನ್ನ ಕೆಲಸ ಆರಂಭಿಸಿದೆ. ಸಂಕಲನ ಗೊತ್ತಿರುವುದರಿಂದ ದುಂದುಗಾರಿಕೆ ತಪ್ಪಿಸಿ, ಟ್ರಿಮ್ ಆಗಿ ಧಾರಾವಾಹಿಯನ್ನು ಮಾಡಲು ಸಾಧ್ಯ.

ಸಾಹಿತಿಗಳು ನಿರ್ದೇಶಕರಾಗ್ತಾರಲ್ಲ. ಟೆಕ್ನಿಕಲಿ ಸೌಂಡ್ ಇಲ್ಲದ ಅವರು ಹೇಗೆ ನಿಭಾಯಿಸ್ತಾರೆ?

ಸಾಹಿತಿಗಳು ನಿರ್ದೇಶಕರಾದರೆ ಏನೂ ತೊಂದರೆ ಇಲ್ಲ. ಬರೆಯುವಾಗಲೇ ದೃಶ್ಯದ ಕಲ್ಪನೆ ಕಣ್ಣಮುಂದೆ ಬರಬೇಕು. ಕ್ಯಾಮೆರಾಮನ್ ಅನ್ನು ಹೆಚ್ಚಾಗಿ ಅವಲಂಬಿಸಬೇಕಾಗುತ್ತೆ.

ಟೆಕ್ನಿಕಲ್ ಡೈರೆಕ್ಟರ್‌ಗೂ ಕೂಡ ಸಾಹಿತ್ಯದ ಸಾಹಚರ್ಯ ಅನಿವಾರ್ಯ. ಓದು ಕಡಿಮೆ ಇರುವ, ಆದರೆ ತಾಂತ್ರಿಕವಾಗಿ ಪಕ್ಕಾ ಇರುವಂತಹವರು ನಿರ್ದೇಶಕರಾದರೆ, ಸಾಹಿತ್ಯದ ತಿಳಿವಳಿಕೆ ಇರುವವರನ್ನು ಜತೆಯಲ್ಲಿಟ್ಟುಕೊಂಡಿರ‌್ತಾರೆ. ನಾನು ಸಾಹಿತಿಗಳೊಂದಿಗೆ ಒಡನಾಡಿದವನು, ಜತೆಗೆ ರಂಗಭೂಮಿ ಹಿನ್ನೆಲೆಯಿಂದ ಬಂದವನು. ನನ್ನ ಅಧ್ಯಯನಶೀಲತೆ ಕನ್ನಡದ ಹೆಸರಾಂತ ಕಥೆಗಳನ್ನು ಚಿತ್ರೀಕರಿಸಲು ಸಹಾಯಕವಾಯಿತು.

ಸಿನಿಮಾದಲ್ಲಿ ತಂತ್ರಜ್ಞರಾಗಿ ಕೆಲಸ ಆರಂಭಿಸಿದವರು ನೀವು. ಆದರೆ ಇತ್ತೀಚೆಗೆ ಧಾರಾವಾಹಿ, ಸಾಕ್ಷ್ಯಚಿತ್ರಗಳಿಗೆ ಹೆಚ್ಚು ತೊಡಗಿಸಿಕೊಂಡಿರಿ. ಕಾರಣ ಏನು?

ಟೀವಿ ರೇಂಜ್ ಜಾಸ್ತಿ. ಅಂದರೆ ಮನೆ ಮನೆಯಲ್ಲೂ ಜಾಣರ ಪೆಟ್ಟಿಗೆಗಳಿರುವುದರಿಂದ ಹೆಚ್ಚು ವೀಕ್ಷಕರನ್ನು ಧಾರಾವಾಹಿಗಳು ತಲುಪುತ್ತವೆ. ಸಿನಿಮಾದಿಂದ ಟೀವಿಗೆ ಬರಲು ಇಲ್ಲಿ ಲಭ್ಯವಾದ ಅವಕಾಶಗಳೇ ಕಾರಣ.

ಆದರೂ ಟೀವಿ ಡೈರೆಕ್ಟರ್‌ಗೆ ದೊಡ್ಡ ಹೆಸರು ಇಲ್ಲ...

ಸಿನಿಮಾಗಳಂತೆ ಟೀವಿ ಧಾರಾವಾಹಿಯ ಸರಿತಪ್ಪುಗಳನ್ನು ಬರೆಯುವವರು ಯಾರೂ ಇಲ್ಲ. ಟೀವಿ ಧಾರಾವಾಹಿಗಳು ಪ್ರಸಾರವಾಗುವ ಸಮಯದಲ್ಲಿ ವಿಮರ್ಶಕರು ಮನೆಯಲ್ಲಿ ಕುಳಿತು ವೀಕ್ಷಿಸಬೇಕು. ಹಾಗೆ ಕುಳಿತುಕೊಳ್ಳಲು ಸಮಯವಾಗಲಿ, ವ್ಯವಧಾನವಾಗಲಿ ಯಾರಿಗೂ ಇಲ್ಲ. ಹಾಗಾಗಿ ಹೆಚ್ಚಿನ ಪ್ರಚಾರ ಇಲ್ಲ. ಧಾರಾವಾಹಿ ಏನಿದ್ದರೂ ಮೌಖಿಕ ಪ್ರಚಾರವನ್ನೇ ಹೆಚ್ಚು ಅವಲಂಬಿಸಿರುತ್ತೆ. ಸಿನಿಮಾದಲ್ಲಿ ಹಾಡು, ಫೈಟಿಂಗ್ ದೃಶ್ಯಗಳನ್ನು ಸಂಬಂಧಪಟ್ಟವರು ನೋಡಿಕೊಳ್ತಾರೆ. ಆದರೆ ಧಾರಾವಾಹಿಗಳಲ್ಲಿ ಎಲ್ಲವನ್ನೂ ನಿರ್ದೇಶಕನೇ ನೋಡಿಕೊಳ್ಳಬೇಕು. ತುಂಬ ಪರಿಶ್ರಮದ ಕೆಲಸ ಇದು. ಜತೆಗೆ, ನಿರ್ದೇಶಕರು ಯಾರೂ ಸರಿಯಾಗಿ ತಮ್ಮನ್ನು ಪ್ರೊಜೆಕ್ಟ್ ಮಾಡಿಕೊಳ್ತಿಲ್ಲ! ದೊಡ್ಡ ಹೆಸರಿನ ಕೆಲವರು ಆ್ಯಕ್ಟ್ ಮಾಡಿ ತಮ್ಮನ್ನು ಪ್ರೊಜೆಕ್ಟ್ ಮಾಡಿಕೊಳ್ತಾರೆ...

ಕಲಾಗಂಗೋತ್ರಿ ರಂಗ ತಂಡದಲ್ಲಿ ನಟ, ನೇಪಥ್ಯ ಎರಡೂ ವಿಭಾಗದಲ್ಲಿ ನೀವು ಹೆಸರು ಮಾಡಿದವರು. ಹಾಗೆಯೇ ಧಾರಾವಾಹಿಯಲ್ಲೂ ಪಾತ್ರ ಮಾಡಬಹುದಿತ್ತಲ್ಲ?

ನನ್ನ ನಿರ್ದೇಶನದ ಧಾರಾವಾಹಿಯಲ್ಲಿ ನಾನೇ ಅಭಿನಯಿಸಿದರೆ, ನನ್ನ ತಪ್ಪುಗಳು ಗೊತ್ತಾಗೋದಿಲ್ಲ. ನಿರ್ದೇಶಕ ಅನ್ನುವ ಕಾರಣಕ್ಕೆ ಯಾರೂ ನನ್ನ ತಪ್ಪುಗಳನ್ನು ಎತ್ತಿ ಹೇಳುವುದಿಲ್ಲ. ಧಾರಾವಾಹಿ ಪ್ರಸಾರ ಆದಮೇಲೆ ತಪ್ಪು ಗೊತ್ತಾಗುತ್ತೆ. ಆದರೆ ಅಷ್ಟೊತ್ತಿಗೆ ಎಲ್ಲವೂ ಮುಗಿದಿರುತ್ತೆ. ಏನೂ ಮಾಡುವ ಹಾಗಿರುವುದಿಲ್ಲ. ಹಾಗಾಗಿ ನನ್ನ ನಿರ್ದೇಶನದ ಧಾರಾವಾಹಿಯಲ್ಲಿ ನಾನೇ ಆ್ಯಕ್ಟ್ ಮಾಡುವ ಸಾಹಸಕ್ಕೆ ಕೈಹಾಕುವುದಿಲ್ಲ!

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry