ನನ್ನ ಬೆಸ್ಟ್ ಮೇಕಿಂಗ್

7

ನನ್ನ ಬೆಸ್ಟ್ ಮೇಕಿಂಗ್

Published:
Updated:
ನನ್ನ ಬೆಸ್ಟ್ ಮೇಕಿಂಗ್

`ಮೇಕಿಂಗ್ ದೃಷ್ಟಿಯಿಂದ ಇದು ಕನ್ನಡದ ದಿ ಬೆಸ್ಟ್ ಸಿನಿಮಾ~- ಶಶಾಂಕ್ ತುಸುವೂ ಅನುಮಾನವಿಲ್ಲದೆ ತಮ್ಮ `ಜರಾಸಂಧ~ ಚಿತ್ರದ ಬಗ್ಗೆ ಹೀಗೆ ಹೇಳಿಕೊಳ್ಳುತ್ತಾರೆ. ವಿಜಯ್ ದೇಹಾಕಾರವನ್ನು ದೊಡ್ಡದಾಗಿ ತೋರಿಸುವ ಚಿತ್ರದ ಪೋಸ್ಟರ್ ಆಕ್ಷನ್‌ಪ್ರಿಯರಲ್ಲಿ ಈಗಾಗಲೇ ಒಂದಿಷ್ಟು ಕುತೂಹಲ ಹುಟ್ಟುಹಾಕಿದ್ದು, ಈ ವಾರ ಚಿತ್ರ ತೆರೆಕಂಡಿದೆ.

ನಿಮ್ಮ ಚಿತ್ರವನ್ನು ಯಾಕೆ ನೋಡಬೇಕು ಎಂಬ ಪ್ರಶ್ನೆಗೆ, ನಿರ್ದೇಶಕ ಶಶಾಂಕ್ ಕೊಡುವ ಮೊದಲ ವಿವರಣೆ ಇವಿಷ್ಟು: `ಯಃಕಶ್ಚಿತ್ ಹುಡುಗಿಯ ಪ್ರೀತಿಗೋ, ದ್ವೇಷಕ್ಕೋ ಆಕ್ಷನ್ ಸನ್ನಿವೇಶಗಳನ್ನು ಮೂಡಿಸದೆ ಸಮಕಾಲೀನ ಸಮಸ್ಯೆಯೊಂದನ್ನು ಹಿನ್ನೆಲೆಯಲ್ಲಿಟ್ಟುಕೊಂಡ ಸಿನಿಮಾ ಇದು. `ಅಂತ~, `ಚಕ್ರವ್ಯೂಹ~ ಹಾಗೂ `ಓಂ~ ಚಿತ್ರಗಳ ವಿಭಾಗಕ್ಕೆ ಇದನ್ನು ಸೇರಿಸಬಹುದು. ತಮಿಳಿನ ಶಂಕರ್ ನಿರ್ದೇಶನದ ಚಿತ್ರಗಳ ಜಾಯಮಾನಕ್ಕೂ ಸಮೀಕರಿಸುವಂಥ ವಸ್ತು. ದುಡ್ಡಿನ ಹಿಂದೆ ಬಿದ್ದು ಲಜ್ಜೆಗೆಟ್ಟಿರುವ ಜನರನ್ನು ನನ್ನ ಸಿನಿಮಾ ಖಂಡಿಸುತ್ತದೆ. ಈ ಎಲ್ಲಾ ಕಾರಣಕ್ಕೆ ಎಲ್ಲಾ ವರ್ಗದವರೂ ವಯೋಮಾನದವರೂ `ಜರಾಸಂಧ~ನನ್ನು ನೋಡಬೇಕು~.

`ಜರಾಸಂಧ~ ಚಿತ್ರದಲ್ಲಿ ವಿಜಯ್ `ಮಿಸ್ಟರ್ ಇಂಡಿಯಾ~ ಆಕಾಂಕ್ಷಿಯಾದ `ಬಾಡಿ ಬಿಲ್ಡರ್~. ವಿದ್ಯಾವಂತ. ಸಮಕಾಲೀನ ಜಗತ್ತಿನ ವರ್ತನೆಯ ಸಂಪೂರ್ಣ ಪರಿಚಯವಿರುವ ಮುಗ್ಧತೆಯಿಲ್ಲದ ಪಾತ್ರವಿದು. ನಾಯಕಿ ಪ್ರಣೀತಾ ಮಾಡೆಲ್.  ಪೊಲೀಸ್ ಅಧಿಕಾರಿಯಾಗಿ ಮುಖ್ಯ ಪಾತ್ರದಲ್ಲಿ ದೇವರಾಜ್ ನಟಿಸಿದ್ದು, ನಾಯಕನ ತಾಯಿಯಾಗಿ ರೂಪಾದೇವಿ ಬಣ್ಣಹಚ್ಚಿದ್ದಾರೆ.

ಚಿತ್ರದಲ್ಲಿರುವ ಹೊಡೆದಾಟದ ದೃಶ್ಯಗಳು, ಹಾಡಿನ ಚಿತ್ರೀಕರಣ ಎಲ್ಲವೂ ಸ್ಟೈಲಿಷ್ ಆಗಿದೆ ಎನ್ನುವ ಶಶಾಂಕ್‌ಗೆ ತಮ್ಮ ಸಿನಿಮಾ ಅಂತ್ಯದ ಬಗ್ಗೆ ಅತೀವ ಆತ್ಮವಿಶ್ವಾಸವಿದೆ. ಚಿತ್ರದ ನಡೆ ಊಹಾತೀತವಾಗಿದ್ದು, ಮುಂದೇನಾಗಲಿದೆ ಎಂಬ ಕುತೂಹಲ ಕೊನೆಯವರೆಗೂ ಉಳಿಯುವಂತೆ ಚಿತ್ರಕತೆ ರೂಪಿಸಿದ್ದೇನೆ ಅಂತಾರೆ.

ಇದುವರೆಗೆ ಪ್ರೇಮಕಥೆಗಳ ಚುಂಗು ಹಿಡಿದಿದ್ದ ಶಶಾಂಕ್ ಆಕ್ಷನ್ ಚಿತ್ರದ ಶಿಲ್ಪಿಯಾಗಿ ಹೇಗೆ ಕೆಲಸ ಮಾಡಿದ್ದಾರೆಂಬುದು ಕುತೂಹಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry