ನನ್ನ ವಿರುದ್ಧ ಷಡ್ಯಂತ್ರ: ಶಾಸಕ ಸುಧಾಕರ್

7

ನನ್ನ ವಿರುದ್ಧ ಷಡ್ಯಂತ್ರ: ಶಾಸಕ ಸುಧಾಕರ್

Published:
Updated:

ಚಿಂತಾಮಣಿ: ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ಇತ್ತೀಚೆಗೆ ನಡೆದ ಚುನಾವಣೆ ನಂತರ ಕಾಂಗ್ರೆಸ್‌ನಲ್ಲಿ ಮೂಡಿರುವ ಬಿರುಕು, ಶೀತಲಸಮರ ಇನ್ನೂ ಕೊನೆಗೊಂಡಿಲ್ಲ. ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ವೈಷಮ್ಯ ಇನ್ನೂ ತೀವ್ರಗೊಂಡಿದೆ. ಕಾಂಗ್ರೆಸ್ ನಾಯಕರೇ ತಮ್ಮ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಶಾಸಕ ಡಾ. ಎಂ.ಸಿ.ಸುಧಾಕರ್ ಕಿಡಿಕಾರಿದ್ದಾರೆ.`ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದ ಕೂಡಲೆ ಕೆಲ ನಾಯಕರು ನನ್ನ ಮತ್ತು ಕುಟುಂಬದ ಮೇಲೆ ಇಲ್ಲಸಲ್ಲದ ಆರೋಪ ಮಾಡುವುದನ್ನು ಮುಂದುವರೆಸಿದ್ದಾರೆ. ಶಾಸಕ ವಿ.ಮುನಿಯಪ್ಪ, ವಿಧಾನಸಭೆ ಮಾಜಿ ಸ್ಪೀಕರ್ ರಮೇಶಕುಮಾರ್, ವಿಧಾನ ಪರಿಷತ್ ಸದಸ್ಯ ನಜೀರ್ ಅಹಮದ್ ಅವರು ವಿನಾಕಾರಣ ಟೀಕೆ ಮಾಡುತ್ತಿದ್ದಾರೆ. ಅನಗತ್ಯ ಆರೋಪಗಳ ಮೂಲಕ ಕಿರಿಕಿರಿ ಉಂಟು ಮಾಡುತ್ತಿದ್ದಾರೆ' ಎಂದು  ಅವರು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.`ನಗರದಲ್ಲಿ ನಮ್ಮ ಮನೆತನದ ವತಿಯಿಂದ ಶಿಕ್ಷಣ ಸಂಸ್ಥೆ, ಕಲ್ಯಾಣ ಮಂಟಪ, ದೇವಸ್ಥಾನ ನಿರ್ವಹಣೆ ಮಾಡಲಾಗುತ್ತಿದೆಯೇ ಹೊರತು ಅವು ಸ್ವಂತದ ಅಸ್ತಿಯಲ್ಲ. ಅವುಗಳಿಂದ ಬರುವ ಆದಾಯವನ್ನು ಸ್ವಂತಕ್ಕೆ ಬಳಸುತ್ತಿಲ್ಲ. ಹಲವಾರು ಸದಸ್ಯರ ಸಲಹೆ, ಸೂಚನೆ ಮತ್ತು ಮಾರ್ಗದರ್ಶನದೊಂದಿಗೆ ಸಾಮಾಜಿಕ ಕಾರ್ಯಗಳಿಗೆ ಬಳಸಿಕೊಳ್ಳಲಾಗಿದೆ. ಅವುಗಳ ನಿರ್ವಹಣೆ ಮತ್ತು ಅಭಿವೃದ್ಧಿಗಾಗಿ ಶಾಶ್ವತವಾಗಿ ಆದಾಯ ಬರುವ ಯೋಜನೆಗಳನ್ನು ರೂಪಿಸಿಕೊಳ್ಳಲಾಗಿದೆ' ಎಂದು ಸ್ಪಷ್ಟಪಡಿಸಿದರು.`ಶಾಸಕ ವಿ.ಮುನಿಯಪ್ಪ ಗಣಿ ಸಚಿವರಾಗಿದ್ದಾಗ ಜನಾರ್ದನ ರೆಡ್ಡಿ ಜತೆ ಸೇರಿ ಮಾಡಿದ ಅವ್ಯವಹಾರಗಳ ಆರೋಪಗಳ ಪಟ್ಟಿಯೇ ಇದೆ.  ಅವರಿಂದ ಸರ್ಕಾರದ ಬೊಕ್ಕಸ ಲೂಟಿಯಾಗಿದೆ  ಎಂಬ ದೂರನ್ನು ಲೋಕಾಯುಕ್ತರು ಎಫ್‌ಐಆರ್ ರೂಪದಲ್ಲಿ ದಾಖಲಿಸಿಕೊಂಡಿದ್ದಾರೆ. ಅದರ ಪ್ರಕಾರ, ಜನಾರ್ದನರೆಡ್ಡಿ ಮೊದಲ ಆರೋಪಿ ಮತ್ತು ವಿ.ಮುನಿಯಪ್ಪ ಮೂರನೇ ಆರೋಪಿ. ಮುನಿಯಪ್ಪ ಸಚಿವರಾಗಿದ್ದಾಗ ಚಿಲಕಲನೇರ್ಪು ಸುತ್ತಮುತ್ತಲ ಮರಳು ದಂಧೆಯಲ್ಲಿ ತೊಡಗಿ ಸಂಪತ್ತಿನ ಲೂಟಿಗೆ ನೇರವಾಗಿ ಕಾರಣರಾದವರು. ಈಗ ಹತಾಶರಾಗಿ ತಮ್ಮ ವೈಫಲ್ಯಗಳನ್ನು ಮರೆಮಾಚಲು ನನ್ನ ಮತ್ತು ಕುಟುಂಬದವರ ವಿರುದ್ಧ ಆರೋಪಗಳನ್ನು ಮಾಡುತ್ತಿದ್ದಾರೆ' ಎಂದು ಟೀಕಿಸಿದರು. ಆರೋಪಗಳಿಗೆ ಸಂಬಂಧಿಸಿದಂತೆ ದಾಖಲೆಗಳನ್ನು ಪ್ರದರ್ಶಿಸಿದರು.`ವಿಧಾನಸಭೆ ಮಾಜಿ ಸ್ಪೀಕರ್ ರಮೇಶಕುಮಾರ್ ನಗರದ ಒಕ್ಕಲಿಗರ ಸಂಘದ ಬಗ್ಗೆ ಆರೋಪಿಸಿದ್ದಾರೆ. ಶ್ರಿನಿವಾಸಪುರದಂತೆ ರೆಡ್ಡಿಗಳಲ್ಲಿ ವಿಷದ ಬೀಜ ಬಿತ್ತುವ ರಾಜಕೀಯ ಮತ್ತು ಅಪರಾಧಿ ರಾಜಕಾರಣ ಮಾಡಿಲ್ಲ. ನೂರಾರು ಎಕರೆ ಅರಣ್ಯ ಭೂಮಿಯನ್ನು ಕಬಳಿಸಿಲ್ಲ. ಅರಣ್ಯ ಜಮೀನಿನ ಒತ್ತುವರಿ ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಎಚ್.ಡಿ.ಕುಮಾರಸ್ವಾಮಿ ಮತ್ತು ಬಿ.ಎಸ್.ಯಡಿಯೂರಪ್ಪ ಅವರನ್ನು ಯಾರು, ಎಷ್ಟು ಬಾರಿ ಭೇಟಿ ಮಾಡಿದ್ದಾರೆ ಎಂಬುದನ್ನು ಬಹಿರಂಗಪಡಿಸಲಿ' ಎಂದು ಸವಾಲು ಹಾಕಿದರು.`ಅರಣ್ಯ ಇಲಾಖೆಯ ಚಿಂತಾಮಣಿ ಎ.ಸಿ.ಎಫ್ ತನಿಖೆ ನಡೆಸುತ್ತಿದ್ದಾಗ ಪ್ರಾಣ ಬೆದರಿಕೆ ಹಾಕಿದ್ದು ಯಾರು? ಶ್ರಿನಿವಾಸಪುರದಲ್ಲಿ ರಮೇಶ್‌ಕುಮಾರ್ ಸಂಬಂಧಿಕರ ಹೆಸರಿನಲ್ಲಿ ನಡೆಸುತ್ತಿರುವ ಪಾಲಿಟೆಕ್ನಿಕ್, ಬಿಇಡಿ ಕಾಲೇಜು ಜಮೀನು ಯಾರದ್ದು ಎಂಬುದರ ಬಗ್ಗೆ ದಾಖಲೆ ನೀಡಲಿ. ತಾವು ಸೋತಾಗ ಕೇಂದ್ರ ಸಚಿವ ಕೆ.ಎಚ್.ಮುನಿಯಪ್ಪ ಬಗ್ಗೆ ಏನೆಲ್ಲ ಮಾತನಾಡಿದ್ದಾರೆ ಎಂಬುದು ಗೊತ್ತಿದೆ. ಹೇಳುವುದು ಒಂದು, ಮಾಡುವುದು ಇನ್ನೊಂದು' ಎಂದು ಕಟುವಾಗಿ ಟೀಕಿಸಿದರು.`ಚುನಾವಣೆ ಸಮಯದಲ್ಲಿ ರಹಸ್ಯವಾಗಿ ನಜೀರ್ ಅಹಮದ್ ಅವರು ಆರ್.ಟಿ.ನಗರದ ಸರ್ವೀಸ್ ಅಪಾರ್ಟ್‌ಮೆಂಟ್‌ನಲ್ಲಿ ಭೇಟಿ ಮಾಡಿದ್ದನ್ನು ಮರೆತಿದ್ದಾರೆ. ಜನರು ಚುನಾವಣೆಯಲ್ಲಿ ಆಯ್ಕೆ ಮಾಡಿದ್ದರಿಂದ ರಾಜಕೀಯದಲ್ಲಿ ಇದ್ದೇವೆ. ಶಾಸಕ ವಿ.ಮುನಿಯಪ್ಪ ಪುತ್ರ ಚಿಲಕಲನೇರ್ಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿದ್ದಾರೆ. ಆದರೆ ಅವರು ಎಲ್ಲಿ ವಾಸವಿದ್ದಾರೆ ಎಂಬುದನ್ನು ಹೇಳಲಿ' ಎಂದು ಸವಾಲು ಹಾಕಿದರು.ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ವಿ.ಸುಬ್ಬಾರೆಡ್ಡಿ, ಎಪಿಎಂಸಿ ಮಾಜಿ ಅಧ್ಯಕ್ಷ ವೆಂಕಟಶಿವಾರೆಡ್ಡಿ, ತಾಲ್ಲೂಕು ಪಂಚಾಯಿತಿ ಸದಸ್ಯ ಸ್ಕೂಲ್ ಸುಬ್ಬಾರೆಡ್ಡಿ, ಟಿಎಪಿಸಿಎಂಎಸ್‌ನ ಅಧ್ಯಕ್ಷ ಚಂದ್ರಪ್ಪ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry