`ನನ್ನ ಹಾಡು ಚೆಂದ, ನನ್ನ ವೇಷ ಅಂದ...'

7
ತಾಲ್ಲೂಕುಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆ

`ನನ್ನ ಹಾಡು ಚೆಂದ, ನನ್ನ ವೇಷ ಅಂದ...'

Published:
Updated:

ಚಿಕ್ಕಬಳ್ಳಾಪುರ: ಗಾಂಧೀಜಿ, ಜವಾಹರಲಾಲ್ ನೆಹರೂ ಮುಂತಾದ ಮಹನೀಯರು ಒಂದೆಡೆಯಿದ್ದರೆ, ಮತ್ತೊಂದೆಡೆ ರಾಕ್ಷಸರ ಪಡೆಯೇ ಇತ್ತು. ಇವರೆಲ್ಲರ ಮೇಲೆ ನಿಗಾ ವಹಿಸಲು ಯಮ ಕಿಂಕರರು ಇದ್ದರು. ಇವರ ಆರ್ಭಟ-ದರ್ಬಾರು ಒಂದೆಡೆ ರಾಜಾರೋಷವಾಗಿ ನಡೆಯುತ್ತಿದ್ದರೆ, ಮತ್ತೊಂದೆಡೆ ಸಾಂಸ್ಕೃತಿಕ ಕಲೆಗಳ ದ್ಯೋತಕವಾಗಿ ನೃತ್ಯ, ಕೋಲಾಟ, ಹಾಡು ಮುಂತಾದವು ಸರಾಗವಾಗಿ ನಡೆಯುತ್ತಿದ್ದವು. ಈ ಎಲ್ಲದರ ನಡುವೆ ಕೆಲ ಗುಂಪುಗಳು ಅತ್ತ-ಇತ್ತ ಗಡಿಬಿಡಿಯಲ್ಲಿ ತಿರುಗಾಡುತ್ತಿದ್ದವು.ಸದಾ ಕಾಲ ಶಾಂತವಾಗಿರುತ್ತಿದ್ದ ನಗರದ ಸರ್ಕಾರಿ ಜ್ಯೂನಿಯರ್ ಕಾಲೇಜಿನ ಸರ್ಕಾರಿ ಪ್ರೌಢಶಾಲೆ ಆವರಣವು ಶನಿವಾರ ಬೇರೆ ಸ್ವರೂಪ ಪಡೆದುಕೊಂಡಿತ್ತು. ಸಮವಸ್ತ್ರ ತೊಟ್ಟ ಮಕ್ಕಳು ಶಿಸ್ತಾಗಿ ಕಾಣಿಸುತ್ತಿದ್ದರು. ಶಿಕ್ಷಕರು ತೀವ್ರ ನಿಗಾ ವಹಿಸಿದ್ದರೂ ಮಕ್ಕಳು ತಮ್ಮ ಪಾಡಿಗೆ ತಾವು ತುಂಟಾಟದಲ್ಲಿ ತೊಡಗಿಕೊಂಡಿದ್ದರು. ಶಿಕ್ಷಕರು ಕೆಂಗಣ್ಣು ಬೀರಿದಾಗ ಮಕ್ಕಳು ಸ್ವಲ್ಪ ಕಾಲ ಸುಮ್ಮನಿರುತ್ತಿದ್ದರು. ಶಿಕ್ಷಕರು ಅತ್ತ ಮುಖ ತಿರುಗಿಸಿದ್ದೆ ತಡ, ಮಕ್ಕಳು ಮತ್ತೆ ಹರಟೆ ಹೊಡೆಯುತ್ತಿದ್ದರು. ಕೀಟಲೆಯಲ್ಲಿ ತೊಡಗಿಕೊಳ್ಳುತ್ತಿದ್ದರು.

ತಾಲ್ಲೂಕಿನ ನೂರಾರು ಶಾಲೆ ಮಕ್ಕಳು ಒಂದು ಕಡೆ ಸೇರಿದಾಗ ಕಾಣುವ ಸಂಭ್ರಮ ಮತ್ತು ಸಂತೋಷ ಎಲ್ಲವೂ ಅಲ್ಲಿತ್ತು.ಅಪರಿಚಿತರಂತೆ ಇದ್ದ ಬೇರೆ ಬೇರೆ ಶಾಲೆ ಮಕ್ಕಳು ಪರಸ್ಪರ ಪರಿಚಯ ಮಾಡಿಕೊಳ್ಳಲು ಅವಕಾಶ ಮಾಡಿಕೊಟ್ಟಿದ್ದು ತಾಲ್ಲೂಕು ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆ. ತಾಲ್ಲೂಕಿನ ವಿವಿಧ ಶಾಲೆಗಳಿಂದ ಆಗಮಿಸಿದ್ದ ಮಕ್ಕಳು ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದು ಅಷ್ಟೇ ಅಲ್ಲ, ಹಲವು ವರ್ಷಗಳ ಸ್ನೇಹಿತರು ಎಂಬಂತೆ ತಮ್ಮ ಕತೆಗಳನ್ನು ಹಂಚಿಕೊಂಡರು. ಸ್ಪರ್ಧೆಯಲ್ಲಿ ಬಹುಮಾನ ಗೆಲ್ಲುವ ಕುರಿತು ವಿಶ್ವಾಸ ವ್ಯಕ್ತಪಡಿಸಿದರು.`ತಾಲ್ಲೂಕು ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಕಿರಿಯ ಪ್ರಾಥಮಿಕ, ಪ್ರಾಥಮಿಕ, ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆ ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ. ತಾಲ್ಲೂಕಿನ ವಿವಿಧ ಶಾಲೆಗಳಿಂದ ಒಟ್ಟು 1800 ಮಕ್ಕಳು ಪಾಲ್ಗೊಂಡಿದ್ದಾರೆ. ಅವರೊಂದಿಗೆ ಶಿಕ್ಷಕರು ಕೂಡ ಆಗಮಿಸಿದ್ದಾರೆ. ವಿವಿಧ ವಿಭಾಗಗಳಲ್ಲಿ ನಡೆಯುವ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಗಳಿಸಿದವರು ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಗೆ ಆಯ್ಕೆಯಾಗುತ್ತಾರೆ. ಒಂದೊಂದು ವಿಭಾಗದ ಸ್ಪರ್ಧೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಭಾಗವಹಿಸಿದ್ದಾರೆ' ಎಂದು ಶಿಕ್ಷಣ ಸಂಯೋಜನಾಧಿಕಾರಿ ಶಿವಕುಮಾರಸ್ವಾಮಿ `ಪ್ರಜಾವಾಣಿ'ಗೆ ತಿಳಿಸಿದರು.`ಮಕ್ಕಳಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲಾಗುತ್ತಿದೆ. ಶಿಕ್ಷಕರೊಂದಿಗೆ ಬಂದಿರುವ ಮಕ್ಕಳಿಗೆ ಸಕಲ ವ್ಯವಸ್ಥೆ ಮಾಡಲಾಗಿದೆ. ಒಂದೊಂದು ಕೊಠಡಿಯಲ್ಲಿ ಒಂದೊಂದು ಸ್ಪರ್ಧೆ ನಡೆಸಲಾಗುತ್ತಿದೆ. ತೀರ್ಪುಗಾರರು ನೀಡುವ ತೀರ್ಪು ಆಧರಿಸಿ ಮುಂದಿನ ಹಂತದ ಸ್ಪರ್ಧೆಗೆ ವಿಜೇತರು ಆಯ್ಕೆಯಾಗುತ್ತಾರೆ' ಎಂದು ಶಿಕ್ಷಕ ಮಾರುತಿ ತಿಳಿಸಿದರು.ಶಾಸಕ ಕೆ.ಪಿ.ಬಚ್ಚೇಗೌಡ ಪ್ರತಿಭಾ ಕಾರಂಜಿ ಸ್ಪರ್ಧೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷೆ ಭಾರತಿ ಎನ್.ಮೂರ್ತಿ, ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿ ಚಂದ್ರಶೇಖರ್ ಬಾಬು, ಕ್ಷೇತ್ರ ಶಿಕ್ಷಣಾಧಿಕಾರಿ ರಘುನಾಥರೆಡ್ಡಿ, ಶಿಕ್ಷಕರಾದ ವೆಂಕಟೇಶ್, ಅರಸು, ಕೆ.ಎಲ್.ಶ್ರೀನಿವಾಸ್, ಹನುಮಂತಪ್ಪ ಮತ್ತಿತರರು ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry