ನಭಕ್ಕೆ ನೆಗೆಯಿತು ಪುಷ್ಪಕ ವಿಮಾನ

7

ನಭಕ್ಕೆ ನೆಗೆಯಿತು ಪುಷ್ಪಕ ವಿಮಾನ

Published:
Updated:
ನಭಕ್ಕೆ ನೆಗೆಯಿತು ಪುಷ್ಪಕ ವಿಮಾನ

ಯಲಹಂಕ ವಾಯುನೆಲೆ: ಭಾರತೀಯ ಭೂಸೇನೆಯ ವೈಮಾನಿಕ ಪಡೆಗೆ ಅದೊಂದು ಹೃದಯಸ್ಪರ್ಶಿ ಕ್ಷಣ. ಪಡೆಗೆ ಸೇರ್ಪಡೆಯಾದ ಮೊದಲ ಚಿಕ್ಕ ವಿಮಾನ ಹಾಗೂ ಐವತ್ತು ವರ್ಷಗಳಷ್ಟು ಹಳೆಯದಾದ ‘ಪುಷ್ಪಕ’ ವಿಮಾನವು ಪುನಃ ರೆಕ್ಕೆ ಕಟ್ಟಿ ಆಕಾಶಕ್ಕೆ ನೆಗೆದ ಅಪೂರ್ವ ಕ್ಷಣಕ್ಕೆ ಭಾನುವಾರ ಯಲಹಂಕ ವಾಯುನೆಲೆ ಸಾಕ್ಷಿಯಾಯಿತು.ಬ್ರಿಗೇಡಿಯರ್ ಎ.ಎಸ್. ಸಿಧು ಹಾಗೂ ಸಹ-ಪೈಲಟ್ ಅರವಿಂದ್ ಸೈನಿ ಅವರು ಮಧ್ಯಾಹ್ನ 1.30ರ ಸುಮಾರಿಗೆ ‘ಪುಷ್ಪಕ’ ವಿಮಾನವನ್ನು ಹಾರಿಸಿದರು. ಇದಕ್ಕೆ ಭೂಸೇನೆಯ ಎರಡು ಹೆಲಿಕಾಪ್ಟರ್‌ಗಳು ಗೌರವ ಹಾರಾಟ ನೀಡಿದವು.ಈ ವರ್ಷ ರಜತ ವರ್ಷಾಚರಣೆ ಸಂದರ್ಭದಲ್ಲಿರುವ ಭಾರತೀಯ ಭೂಸೇನೆಯ ವೈಮಾನಿಕ ಪಡೆಯ ಸಂಭ್ರಮಕ್ಕೆ ಮೆರುಗು ನೀಡಲು ‘ಪುಷ್ಪಕ’ ವಿಮಾನವು ದೇಶದ ಪ್ರದಕ್ಷಿಣೆ ಹಾಕಲಿದೆ. ದೇಶದ ಗಡಿಗುಂಟ ಸುಮಾರು 10 ಸಾವಿರ ಕಿ.ಮೀ ಅಂತರವನ್ನು ಈ ಪುಟ್ಟ ವಿಮಾನವು ಕೇವಲ 28 ದಿನಗಳಲ್ಲಿ ಪೂರೈಸಲಿದೆ. ಬೆಂಗಳೂರಿನಿಂದ ಹೊರಟ ದಂಡಯಾತ್ರೆಯು ಫೆ.13 ರಂದು ಮಹಾರಾಷ್ಟ್ರದ ನಾಸಿಕ್‌ನಲ್ಲಿ ಸಮಾಪ್ತಿಯಾಗಲಿದೆ ಎಂದು ಪ್ರಯಾಣ ಆರಂಭಿಸುವ ಮೊದಲು ಸಿಧು ಹೇಳಿದರು.ಪುಷ್ಪಕ ವಿಮಾನ 1961ರಲ್ಲಿ ತಯಾರಾದದ್ದು. ಆಗ ಅದನ್ನು ವಾಯುಪಡೆಗೆ ಸೇರಿಸಲಾಗಿತ್ತು. 1965 ಹಾಗೂ 1971ರ ಪಾಕಿಸ್ತಾನ ಯುದ್ಧದಲ್ಲಿ ಇದನ್ನು ಬಳಸಲಾಗಿತ್ತು. ಮುಖ್ಯವಾಗಿ ಇದನ್ನು ಗಡಿ ವೀಕ್ಷಣೆಗಾಗಿ ಉಪಯೋಗಿಸಲಾಗಿತ್ತು.ಭೂಸೇನೆಗೂ ತನ್ನದೇ ಆದ ವೈಮಾನಿಕ ಪಡೆಯ ಅವಶ್ಯಕತೆ ಇದೆ ಎಂದು ಕೇಂದ್ರ ಸರ್ಕಾರವು 1986ರಲ್ಲಿ ಭೂಸೇನಾ ವೈಮಾನಿಕ ಪಡೆ ಸ್ಥಾಪಿಸಿತು. ಆ ಸಂದರ್ಭದಲ್ಲಿ ಪುಷ್ಪಕ ವಿಮಾನ ಹೊಸ ಪಡೆಗೆ ಸೇರ್ಪಡೆಯಾಯಿತು.ಐವತ್ತು ವರ್ಷಗಳಷ್ಟು ಹಳೆಯದಾದ ಈ ಪುಟ್ಟ ವಿಮಾನವು ಇಂದಿಗೂ ಕಾರ್ಯಚಟುವಟಿಕೆಯಿಂದ ಇರುವುದು ಹೆಗ್ಗಳಿಕೆಗೆ ಪಾತ್ರವಾಗಿದೆ.2013ರಲ್ಲಿ ಮತ್ತೆ ಭೇಟಿ

ಯಲಹಂಕ ವಾಯುನೆಲೆ:
‘ಇದೊಂದು ಅದ್ಭುತ ಪ್ರದರ್ಶನ. ವಿಮಾನಗಳನ್ನು ಇಷ್ಟು ಹತ್ತಿರದಿಂದ ನೋಡಿದ್ದು ಇದೇ ಮೊದಲು. ಅವುಗಳ ಕಸರತ್ತುಗಳನ್ನು ನೋಡಿದರೆ ರೋಮಾಂಚನವಾಗುತ್ತದೆ. ‘ಏರೊ ಇಂಡಿಯಾ ಪ್ರದರ್ಶನ’ವು  ನಮ್ಮ ಬೆಂಗಳೂರಿಗೆ ಗರಿಮೆ ಮೂಡಿಸಿದೆ’ ಎಂದು ಯಲಹಂಕ ವಾಯುನೆಲೆಯಲ್ಲಿ ಭಾನುವಾರ ಸೇರಿದ್ದ ಪ್ರೇಕ್ಷಕರ ಒಕ್ಕೊರಲಿನ ಅಭಿಪ್ರಾಯವಿದು.ಮುಂದಿನ ‘ಏರೊ ಇಂಡಿಯಾ’ ಪ್ರದರ್ಶನವು ಇದೇ ವಾಯುನೆಲೆಯಲ್ಲಿ 2013ರ ಫೆ 6ರಿಂದ 10ರವರೆಗೆ ನಡೆಯಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry