ನಭದಲ್ಲಿ ಸಾರಂಗ ನರ್ತನ

7

ನಭದಲ್ಲಿ ಸಾರಂಗ ನರ್ತನ

Published:
Updated:
ನಭದಲ್ಲಿ ಸಾರಂಗ ನರ್ತನ

`ಸ್ಥಿರ ರೆಕ್ಕೆ ಇಲ್ಲದ ಹೆಲಿಕಾಪ್ಟರ್ ಓಡಿಸುವುದೇ ಒಂದು ಸಾಹಸ. ಅದರಲ್ಲೂ ಹೆಲಿಕಾಪ್ಟರ್ ಬಳಸಿ ಸಾಹಸ ಮಾಡುವುದು ಅದಕ್ಕಿಂತಲೂ ದೊಡ್ಡ ಸಾಹಸ. ಈ ಅಪಾಯಕಾರಿ ಸಾಹಸವನ್ನೇ ನಾವು ಇಲ್ಲಿ ಸಂಭ್ರಮಿಸುತ್ತಿದ್ದೇವೆ' ಎಂದು `ಸಾರಂಗ್' ತಂಡದ ನಾಯಕ ವಿಂಗ್ ಕಮಾಂಡರ್ ಆರ್. ಸಿ. ಪಾಠಕ್ ಹೆಮ್ಮೆಯಿಂದ ಹೇಳಿದರು.ಯಲಹಂಕದಲ್ಲಿ ನಡೆಯುತ್ತಿರುವ ಏರೋ ಇಂಡಿಯಾ 2013 ಪ್ರದರ್ಶನದಲ್ಲಿ ಉಸಿರು ಬಿಗಿಹಿಡಿಯುವಂತೆ ಆಗಸದಲ್ಲಿ ಸಾಹಸ ಪ್ರದರ್ಶಿಸುವ `ಸಾರಂಗ್' ತಂಡ ಸಾಕಷ್ಟು ಉತ್ಸಾಹದಿಂದ ಪುಟಿದೇಳುತ್ತಿತ್ತು. ಕೇಸರಿ ಬಣ್ಣದ ಡೋಂಗ್ರಿ ಧರಿಸಿ, ಏವಿಯೇಟರ್ ತಂಪು ಕನ್ನಡಕ ತೊಟ್ಟು ಹೆಮ್ಮೆಯಿಂದ ಬೀಗುತ್ತಿದ್ದ ಈ ತಂಡದವರು `ಮೆಟ್ರೊ'ದೊಂದಿಗೆ ಕೆಲ ಸಂಗತಿಗಳನ್ನು ಹಂಚಿಕೊಂಡರು.*ಕಳೆದ ಹತ್ತು ವರ್ಷಗಳಿಂದ `ಸಾರಂಗ್' ತನ್ನ ಸಾಹಸಗಳನ್ನು ಪ್ರದರ್ಶಿಸುತ್ತಾ ಬಂದಿದೆ. ಭಾರತೀಯ ವಾಯುಸೇನೆ ಹಾಗೂ ಎಚ್‌ಎಎಲ್‌ನ ರಾಯಭಾರಿಗಳಾಗಿರುವ ನಾವು ಅದರ ಸೇವೆಗಾಗಿ ದೇಶ ವಿದೇಶಗಳಲ್ಲಿ ಇಂಥ ಸಾಹಸಗಳನ್ನು ಪ್ರದರ್ಶಿಸುತ್ತಾ ಬಂದಿದ್ದೇವೆ. ಎಚ್‌ಎಎಲ್ ದೇಸಿಯಾಗಿ ಅಭಿವೃದ್ಧಿಪಡಿಸಿರುವ 5.5 ಟನ್ ಸಾಮರ್ಥ್ಯದ 801ಕಿಲೋ ವ್ಯಾಟ್‌ನ `ಧ್ರುವ' ಹೆಲಿಕಾಪ್ಟರ್ ಇದು. 14 ಪೈಲಟ್‌ಗಳು ಹಾಗೂ ಐವರು ಎಂಜಿನಿಯರ್‌ಗಳನ್ನೊಳಗೊಂಡ `ಸಾರಂಗ್' ತಂಡ ಬೀಡುಬಿಟ್ಟಿರುವುದು ತಮಿಳುನಾಡಿನ ಕೊಯಮತ್ತೂರಿನ ಬಳಿಯ ಸೂಲೂರಿನಲ್ಲಿ.*ಭಾರತದ ಕೆಲವು ನಗರಗಳು ಸೇರಿದಂತೆ ಬರ್ಲಿನ್, ಐರೋಪ್ಯ ರಾಷ್ಟ್ರಗಳನ್ನು ಒಳಗೊಂಡಿಂತೆ ಪ್ರದರ್ಶನ ನೀಡಿರುವ `ಸಾರಂಗ್' ಯಶಸ್ಸಿನ ಗುಟ್ಟು ತಂಡದ ಸದಸ್ಯರ ಪರಸ್ಪರ ಹೊಂದಾಣಿಕೆ ಹಾಗೂ ನಿತ್ಯ ಗಂಟೆಗಟ್ಟಲೆ ಅಭ್ಯಾಸದಲ್ಲಿದೆ. ಪ್ರತಿ ಪ್ರದರ್ಶನಕ್ಕೂ ಮುನ್ನ 40-50 ಬಾರಿ ಅಭ್ಯಾಸ ನಡೆಸುವ ತಂಡ ಸಾಹಸಗಳ ಕುರಿತು ಮುಕ್ತ ಚರ್ಚೆ, ಸಾಧಕ-ಬಾಧಕಗಳ ಕುರಿತು ಚಿಂತನೆ ನಡೆಸುತ್ತದೆ.

4ಪ್ರತಿ ಬಾರಿಯೂ ಅರ್ಧ ಗಂಟೆ ಕಾಲ ನೀಡುವ ಪ್ರದರ್ಶನದಲ್ಲಿ 7-8 ಸಾಹಸಗಳಿರುತ್ತವೆ. ಅದರಲ್ಲಿ ಎಲ್ಲರ ಅಚ್ಚುಮೆಚ್ಚು `ಸಾರಂಗ್ ಸ್ಪ್ಲಿಟ್'.ಹತ್ತು ವರ್ಷಗಳ ಇತಿಹಾಸವಿರುವ `ಸಾರಂಗ್' ತಂಡದಲ್ಲಿನ ಸದಸ್ಯರು ಕಾಲಕಾಲಕ್ಕೆ ಬದಲಾಗುತ್ತಿರುತ್ತಾರೆ. ಇದೀಗ ಇರುವವರಲ್ಲಿ 4 ವರ್ಷ ಅನುಭವವಿರುವವರೇ ಹೆಚ್ಚು. ಆಗಸದಲ್ಲಿ ಮಾಡಬಹುದಾದ ಸಾಹಸ ಕುರಿತು ನೆಲದ ಮೇಲೆ ರೂಪರೇಷೆಗಳನ್ನು ಹೆಣೆಯುವ ತಂಡ ಅದಕ್ಕಾಗಿ ಹೆಲಿಕಾಪ್ಟರ್ ಬದಲು ಸಿಮ್ಯುಲೇಟರ್‌ಗಳನ್ನು ಬಳಸಿ ಮೊದಲು ಸಾಹಸಗಳನ್ನು ನಡೆಸುತ್ತದೆ. ಹೊಸ ಸಾಹಸಗಳು ಸುರಕ್ಷಿತ ಹಾಗೂ ಪ್ರದರ್ಶನ ಯೋಗ್ಯ ಎಂದು ಸಾಬೀತಾದಲ್ಲಿ ಅದನ್ನು ಹೆಲಿಕಾಪ್ಟರ್ ಬಳಸಿ ನಡೆಸಲಾಗುತ್ತದೆ.*`ಫ್ಲೈಯಿಂಗ್ ಬುಲ್ಸ್ ಸ್ಥಿರ ರೆಕ್ಕೆಗಳನ್ನು ಹೊಂದಿರುತ್ತವೆ. ಹೀಗಾಗಿ ಇದನ್ನು ಬಳಸಿ ನಡೆಸುವ ಸಾಹಸಗಳು ಸುಲಭ. ಆದರೆ ಹೆಲಿಕಾಪ್ಟರ್‌ನಲ್ಲಿ ಇದೇ ಸಾಹಸ ಕೊಂಚ ಕಷ್ಟ. ಆದರೆ `ಸಾರಂಗ್' ತಂಡದ ಭಾಗವಾಗಬೇಕೆಂದು ಬಂದವರೇ ನಮ್ಮಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ ನಮ್ಮ ನಡುವಿನ ಸ್ನೇಹಬಂಧ ಹೆಚ್ಚು ಗಟ್ಟಿಯಾಗಿದೆ. ಹೀಗಾಗಿ ಎಂಥದ್ದೇ ಸಾಹಸಗಳಿಗೂ ಕೈಹಾಕಲು ಹಿಂದೆ ಮುಂದೆ ನೋಡೆವು'*`ತಂಡದ ಯಶಸ್ಸು ಹೆಲಿಕಾಪ್ಟರ್‌ನ ಆರೋಗ್ಯದಲ್ಲಿರುತ್ತದೆ. ಹೆಲಿಕಾಪ್ಟರ್‌ನ್ನು ಸುಃಸ್ಥಿತಿಯಲ್ಲಿಡಲು ಮುಂಜಾನೆ 5ಗಂಟೆಗೆ ಎದ್ದು ಅಗತ್ಯವಿರುವ ಎಲ್ಲಾ ಭಾಗಗಳನ್ನೂ ಕೂಲಂಕಷ ಪರಿಶೀಲಿಸಲಾಗುತ್ತದೆ. ಪ್ರತಿ ಪ್ರದರ್ಶನಕ್ಕೂ ಒಂದೊಂದು ಹೆಲಿಕಾಪ್ಟರ್‌ಗೆ 500 ಕೆ.ಜಿ. ಇಂಧನದ ಅಗತ್ಯವಿರುತ್ತದೆ. ಇದು ಅರ್ಧ ಗಂಟೆಗಳ ಸಾಹಸಕ್ಕೆ ಸಾಕು. `ಸಾರಂಗ್' ತಂಡದಲ್ಲಿ ಈಗ ಬಳಸಲಾಗುತ್ತಿರುವ ಧ್ರುವ ಹೆಲಿಕಾಪ್ಟರ್ ಈ ಹಿಂದಿನದ್ದಕ್ಕಿಂತ ಉತ್ತಮವಾದ ಎಂಜಿನ್ ಹೊಂದಿದೆ. ಹೀಗಾಗಿ ಪೈಲಟ್‌ಗಳು ಇದರ ಮೇಲೆ ಸುಲಭವಾಗಿ ಹಿಡಿತ ಸಾಧಿಸಿ ಬೇಕಾದಂತೆ ಸಾಹಸ ನಡೆಸಬಹುದು' ಎಂದು `ಸಾರಂಗ್' ತಂಡದ ಎಂಜಿನಿಯರ್ ಭರತ್ ಬಜಾಜ್ ತಿಳಿಸುತ್ತಾರೆ.

ಕನ್ನಡಿಗನ ಸಾಹಸ

`ಸಾರಂಗ್' ತಂಡದಲ್ಲಿ ಇರುವ ಏಕೈಕ ಕನ್ನಡಿಗ ಪೊನ್ನಪ್ಪ. ಕೊಡಗಿನ ಶ್ರೀಮಂಗಲದವರಾದ ಇವರು ಬಾಲ್ಯದಿಂದಲೂ ಪೈಲಟ್ ಆಗಬೇಕೆಂಬ ಕನಸಿನ ಸಾಕಾರಕ್ಕೆಂದೇ ಬೀದರ್‌ನ ಸೈನಿಕ್ ಶಾಲೆ ಸೇರಿಕೊಂಡ ಪೊನ್ನಪ್ಪ ನಂತರ ಪುಣೆಯಲ್ಲಿರುವ ನ್ಯಾಷನಲ್ ಡಿಫೆನ್ಸ್ ಅಕಾಡೆಮಿಗೆ ದಾಖಲಾದರು.ಹನ್ನೊಂದು ವರ್ಷಗಳ ಹಿಂದೆ ಆರಂಭದಲ್ಲಿ `ಚೇತಕ್' ಹೆಲಿಕಾಪ್ಟರ್‌ನ ಪೈಲಟ್ ಆಗಿದ್ದ ಸ್ಕ್ವಾಡ್ರನ್ ಲೀಡರ್ ಪಿ.ಆರ್. ಪೊನ್ನಪ್ಪ ಅವರು `ಸಾರಂಗ್'ನ ಬೆನ್ನು ಹತ್ತಿದ್ದು ಹತ್ತು ವರ್ಷಗಳ ಹಿಂದೆ. ಇದೇ ಏರ್ ಶೋಗೆ ಬಂದಿದ್ದ ಪೊನ್ನಪ್ಪ ಅವರಿಗೆ ಅದೇಕೋ `ಸಾರಂಗ್' ಮೇಲೆ ವಿಪರೀತ ಮನಸ್ಸಾಯಿತು. ಒಂದು ವಾರ ಪರೀಕ್ಷೆಯನ್ನೂ ಎದುರಿಸಿದ ಅವರು ಕನಿಷ್ಠ 50 ಹಾರಾಟಗಳನ್ನು ನೀಡಿ ತಂಡ ಸೇರಿಕೊಂಡ ಪೊನ್ನಪ್ಪ ಅವರು ಮೊದಲು ಸಿಮ್ಯುಲೇಟರ್‌ನಲ್ಲಿನ ಅಭ್ಯಾಸದ  ನಂತರ ಕೋ ಪೈಲಟ್ ಆಗಿ ಕೆಲವು ಪ್ರದರ್ಶನಗಳಲ್ಲಿ ಪಾಲ್ಗೊಂಡರು.ನಂತರ ಇವರ ಸಾಮರ್ಥ್ಯ ಹಾಗೂ ಕೌಶಲ್ಯದಿಂದಾಗಿ ಇದೀಗ `ಸಾರಂಗ್' ನಡೆಸುವ ಸಾಹಸದಲ್ಲಿ ಭಾಗಿಯಾಗುವ ಅವಕಾಶ ಸಿಕ್ಕಿತು. `ಭಾರತೀಯ ವಾಯುಸೇನೆಯ ರಾಯಭಾರಿ ಆಗಿದ್ದು ನನಗೆ ಅತೀವ ಸಂತಸ. ಕನಸು ಸಾಕಾರಗೊಂಡಿದೆ. ಪ್ರತಿ ಪ್ರದರ್ಶನದಲ್ಲೂ ನನ್ನ ಸಾಮರ್ಥ್ಯವನ್ನು ಉತ್ತಮಪಡಿಸುವುದು ನನ್ನ ಮುಂದಿರುವ ಗುರಿ' ಎನ್ನುತ್ತಾರೆ ಅವರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry