ಮಂಗಳವಾರ, ನವೆಂಬರ್ 19, 2019
26 °C

ನಮಗಷ್ಟೇ ಟಿಕೆಟ್: ಹೊರಗಿನವರಿಗೆ ಇಲ್ಲ

Published:
Updated:

ತುಮಕೂರು: ತುಮಕೂರು ನಗರ ಕ್ಷೇತ್ರದಲ್ಲಿ ಉಳಿದ ಮೂರು ಪ್ರಮುಖ ಪಕ್ಷಗಳ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವುದಕ್ಕೆ ಮುನ್ನವೇ  ಆಖಾಡಕ್ಕಿಳಿದು ಪ್ರಚಾರ ನಡೆಸುತ್ತಿದ್ದರೆ ಜೆಡಿಎಸ್‌ನಲ್ಲಿ ಗೊಂದಲ ಮುಂದುವರೆದಿದೆ.ಈಚೆಗಷ್ಟೇ ನಡೆದ ನಗರಸಭೆ ಚುನಾವಣೆಯಲ್ಲಿ ಅತಿ ಹೆಚ್ಚು ಸ್ಥಾನ ಗೆದ್ದು ಬೀಗುತ್ತಿದ್ದ ಪಕ್ಷಕ್ಕೀಗ ಈ ಗೆಲುವೇ ಮುಳುವಾಗ ತೊಡಗಿದೆ. ನಗರಸಭೆ ಫಲಿತಾಂಶದ ಹಿನ್ನೆಲೆಯಲ್ಲೆ ಉತ್ತಮ ಭವಿಷ್ಯವಿದೆ ಎಂದು ಕಂಡುಕೊಂಡ ಆಕಾಂಕ್ಷಿಗಳು ಟಿಕೆಟ್‌ಗಾಗಿ ತೀವ್ರ ಲಾಬಿ ನಡೆಸುತ್ತಿದ್ದ ನಡುವೆಯೇ ಕಾಂಗ್ರೆಸ್‌ನ ಮುಖಂಡರೊಬ್ಬರಿಗೆ ಟಿಕೆಟ್ ಕೊಡಲು ತೆರೆಮರೆಯಲ್ಲಿ ನಡೆಯುತ್ತಿರುವ ಯತ್ನ ಪಕ್ಷದ ಟಿಕೆಟ್ ಆಕಾಂಕ್ಷಿಗಳಲ್ಲಿ ಆತಂಕ ಹುಟ್ಟಿಸಿದೆ.ಟಿಕೆಟ್ ಗಿಟ್ಟಿಸಿಕೊಳ್ಳುವುದಕ್ಕೆ ಇಷ್ಟು ದಿನ ತಮ್ಮಳಗೆ ತೀವ್ರ ಪೈಪೋಟಿ ಸ್ಪರ್ಧೆ ನಡೆಸುತ್ತಿದ್ದ ಐದಾರಕ್ಕೂ ಹೆಚ್ಚು ಆಕಾಂಕ್ಷಿಗಳು ಇದೀಗ ಒಂದಾಗಿದ್ದು ಹೊರಗಿನವರಿಗೆ ಟಿಕೆಟ್ ನೀಡುವ ಪಕ್ಷದ ವಿರುದ್ಧ ಬಂಡಾಯ ಸಾರಲು ಮುಂದಾಗಿದ್ದಾರೆ.`ಟಿಕೆಟ್ ಕೊಟ್ಟರೆ ನಮಗೆ ಕೊಡಿ, ಇಲ್ಲವೇ ಪಕ್ಷ ನಿಲ್ಲಿಸುವ ಅಭ್ಯರ್ಥಿ ಪರ ಕೆಲಸ ಮಾಡಲು ಒಲ್ಲೆವು' ಎಂಬ ಸಂದೇಶವನ್ನು ಈ ಆಕಾಂಕ್ಷಿಗಳು ಪಕ್ಷದ ಮುಖಂಡರಿಗೆ ರವಾನಿಸಿದ್ದಾರೆ ಎನ್ನಲಾಗಿದೆ. ಇದರ ನಡುವೆಯೂ ಸೋಮವಾರ ಜಂಟಿ ಪತ್ರಿಕಾಗೋಷ್ಠಿ ನಡೆಸಿದ ಪಕ್ಷದ ಆಕಾಂಕ್ಷಿಗಳಾದ ಕೆ.ಬಿ.ಬೋರೇಗೌಡ, ಬೆಳ್ಳಿ ಲೋಕೇಶ್, ನರಸೇಗೌಡ, ಟಿ.ಜಿ.ನರಸಿಂಹರಾಜು, ಪುಟ್ಟೀರಪ್ಪ, ಯಾವುದೇ ಕಾರಣಕ್ಕೂ ಟಿಕೆಟ್ ನಮ್ಮಳಗೆ ಒಬ್ಬರಿಗೆ ಸಿಗಲಿದೆ ಹೊರತು ಹೊರಗಿನಿಂದ ಬಂದವರಿಗೆ ಕೊಡುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಕ್ಷೇತ್ರದಿಂದ ಸ್ಪರ್ಧೆ ಬಯಸಿ ಇಪ್ಪತ್ತು ಮುಖಂಡರು ಅರ್ಜಿ ಸಲ್ಲಿಸಿದ್ದೇವೆ. ನಮ್ಮಲ್ಲಿ ಯಾರಿಗೇ ಟಿಕೆಟ್ ಕೊಟ್ಟರೂ ಒಟ್ಟಿಗೆ ಕೆಲಸ ಮಾಡಿ ಅಭ್ಯರ್ಥಿ ಗೆಲುವಿಗೆ ಕೆಲಸ ಮಾಡುತ್ತೇವೆ. ಕಾಂಗ್ರೆಸ್‌ನ ಮುಖಂಡರೊಬ್ಬರಿಗೆ ಟಿಕೆಟ್ ಕೊಡಲಾಗುತ್ತದೆ ಎಂಬುದೆಲ್ಲ ಕೇವಲ ವದಂತಿ. ಮತದಾರರು ಮತ್ತು ಜೆಡಿಎಸ್ ಕಾರ್ಯಕರ್ತರನ್ನು ಗೊಂದಲಕ್ಕೀಡು ಮಾಡಲು ಈ ರೀತಿ ಪ್ರಚಾರ ಮಾಡಲಾಗುತ್ತಿದೆ ಎಂದು ಟಿಕೆಟ್‌ನ ಪ್ರಬಲ ಆಕಾಂಕ್ಷಿಗಳಲ್ಲಿ ಒಬ್ಬರಾದ ಬೆಳ್ಳಿಲೋಕೇಶ್ ಸ್ಪಷ್ಟಪಡಿಸಿದರು.ಕಾಂಗ್ರೆಸ್ ಮುಖಂಡರೊಬ್ಬರಿಗೆ ಪಕ್ಷದ ಟಿಕೆಟ್ ನೀಡಲಾಗಿದೆಯಂತಲ್ಲಾ? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಪಕ್ಷದ ಸದಸ್ಯರಲ್ಲದವರಿಗೆ ಟಿಕೆಟ್ ನೀಡಲು ಹೇಗೆ ಸಾಧ್ಯ? ಪಕ್ಷಕ್ಕೆ ಯಾರೇ ಬಂದರೂ ಅವರನ್ನು ಸ್ವಾಗತಿಸುತ್ತೇವೆ. ಟಿಕೆಟ್ ಮಾತ್ರ ನಮ್ಮಳಗೆ ಒಬ್ಬರಿಗೆ ಸಿಗಲಿದೆ ಎಂದರು.ಪಕ್ಷಕ್ಕೆ ಗೆಲ್ಲುವ ಅವಕಾಶವಿದೆ. ಹೀಗಾಗಿ ಗೊಂದಲಕ್ಕೆ ಕಾರಣವಾಗದೇ ಗೆಲ್ಲುವ ಅಭ್ಯರ್ಥಿಗೆ ಟಿಕೆಟ್ ನೀಡಲು ಪಕ್ಷದ ನಾಯಕರು ಚಿಂತನೆ ನಡೆಸುತ್ತಿದ್ದಾರೆ. ಈಗಾಗಲೇ ಅರ್ಜಿ ಸಲ್ಲಿಸಿರುವ ಒಬ್ಬರಿಗೆ ಟಿಕೆಟ್  ನೀಡುವುದಾಗಿ ತಿಳಿಸಿದ್ದಾರೆ ಎಂದು ಪಕ್ಷದ ಮುಖಂಡ ಪುಟ್ಟೀರಪ್ಪ ತಿಳಿಸಿದರು.ಟಿಕೆಟ್‌ಗಾಗಿ ಇನ್ನಿಲ್ಲದಂತೆ ಯತ್ನಿಸುತ್ತಿರುವ ಕೆ.ಬಿ.ಬೋರೇಗೌಡ ಮಾತನಾಡಿ, ನಮ್ಮಲ್ಲಿ ಯಾರಿಗೆ ಟಿಕೆಟ್ ನೀಡಿದರೂ ಅವರ ಪರವಾಗಿ ಕೆಲಸ ಮಾಡಲಿದ್ದೇವೆ ಎಂದರು. ಈ ಮಾತಿಗೆ ಮತ್ತೊಬ್ಬ ಪ್ರಬಲ ಆಕಾಂಕ್ಷಿ ನರಸೇಗೌಡ ದ್ವನಿಗೂಡಿಸಿದರು.ಭಾನುವಾರ ರಾತ್ರಿ ಪಕ್ಷದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿಯಾಗಿದ್ದು, ನಮ್ಮ ಅಭಿಪ್ರಾಯ ತಿಳಿಸಿದ್ದೇವೆ. ಈಗಾಗಲೇ ಅರ್ಜಿ ಸಲ್ಲಿಸಿದವರಿಗೆ ಹೊರತು ಬೇರೆಯವರಿಗೆ ಟಿಕೆಟ್ ನೀಡುವುದಿಲ್ಲ ಎಂದು ಭರವಸೆ ನೀಡಿದ್ದಾರೆ ಎಂದರು.ಟಿಕೆಟ್‌ಗೆ ಅರ್ಜಿ ಸಲ್ಲಿಸಿರುವವರಲ್ಲಿ ಪಕ್ಷದ ಅಧ್ಯಕ್ಷ ಡಾ. ಎಂ.ಆರ್.ಹುಲಿನಾಯ್ಕರ್, ಜಿಲ್ಲಾ ಪಂಚಾಯಿತಿ ಸದಸ್ಯ ಕೃಷ್ಣಪ್ಪ, ಪಕ್ಷದ ನಗರ ಘಟಕದ ಅಧ್ಯಕ್ಷ ವಿಜಯಪ್ರಕಾಶ್ ಮಿರ್ಜಿ, ರವಿ ಜಹಾಂಗೀರ್ ಮತ್ತಿತರರು ಸೇರಿದ್ದಾರೆ.ಆದರೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ರವಿ ಜಹಾಂಗೀರ್ ಹೇಳಿರುವುದರಿಂದ ಅವರಿಗೆ ಟಿಕೆಟ್ ನೀಡುವುದಿಲ್ಲ ಎಂದೂ ತಿಳಿಸಿದರು.

ಸೋಲಿಸುತ್ತೇವೆ: ಟಿಕೆಟ್ ಲಾಬಿ ನಡೆಸುತ್ತಿರುವ ಕಾಂಗ್ರೆಸ್‌ನ ಮುಖಂಡರೊಬ್ಬರಿಗೆ ಪಕ್ಷ ಮಣೆ ಹಾಕಿದ್ದೇ ಆದ್ದಲ್ಲಿ ಅವರನ್ನು ಚುನಾವಣೆಯಲ್ಲಿ ಸೋಲಿಸುವುದೇ ನಮ್ಮ ಗುರಿ ಎಂದು ಪಕ್ಷದ ಮುಖಂಡ ಜಿ.ಜಿ.ನರಸಿಂಹರಾಜು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಪ್ರತಿಕ್ರಿಯಿಸಿ (+)