ನಮಿತಾ ಯೋಗಭಂಗಿ ಧನ್ಯವಾಯಿತು ಅಂಗಿ!

ಮಂಗಳವಾರ, ಜೂಲೈ 23, 2019
20 °C

ನಮಿತಾ ಯೋಗಭಂಗಿ ಧನ್ಯವಾಯಿತು ಅಂಗಿ!

Published:
Updated:

ಗೋಷ್ಠಿ ನಿಗದಿಯಾಗಿದ್ದ ಹೋಟೆಲ್‌ನಲ್ಲೇ ನಮಿತಾ ತಂಗುತ್ತಾರೆಂಬ ಸುದ್ದಿ ಇತ್ತು. ಆದರೆ, ಅಲ್ಲಿದ್ದದ್ದು ಬಿಳಿ ಟಿ-ಶರ್ಟ್ ತೊಟ್ಟಿದ್ದ ಹುಡುಗರು. `ಅವರು ಎಲ್ಲೋ ಇದಾರೆ~ ಎಂದು ತಾರಮ್ಮಯ್ಯ ಮಾಡಿದರು. ಆ ಹುಡುಗರು ತೊಟ್ಟಿದ್ದ ಶರ್ಟ್ ಮೇಲಿನ ಚಿತ್ರದಲ್ಲಿ ನಮಿತಾ ನಗುತ್ತಿದ್ದರು. ನಮಿತಾ ಗೈರುಹಾಜರಿ ಪೋಷಕ ನಟಿಯರಿಗೆ ವರದಾನ.ಯಾಕೆಂದರೆ, ಕ್ಯಾಮೆರಾ ಕಣ್ಣುಗಳು ಅವರ ಮೇಲೆ ಕೇಂದ್ರಿತವಾದವು. ಅವರ ಪುಳಕವನ್ನು ದೂರದಿಂದಲೇ ನೋಡುತ್ತಾ ಓಡಾಡಿಕೊಂಡಿದ್ದ ನಿರ್ದೇಶಕ ಎಂ.ಜಯಸಿಂಹ ರೆಡ್ಡಿ ಅವರಿಗೆ ಆಡಲು ಕೆಲವೇ ಕೆಲವು ಮಾತುಗಳಿದ್ದದ್ದು.`ನಮಿತಾ ಐ ಲವ್ ಯೂ~ ಚಿತ್ರಕ್ಕೆ ಈ ವಾರ ಬಿಡುಗಡೆಯ ಭಾಗ್ಯ. ತೆಲುಗಿನಲ್ಲಿ `ಲವ್ ಕಾಲೇಜ್~ ಎಂಬ ಚಿತ್ರವನ್ನೂ ಇದೇ ನಿರ್ದೇಶಕರು ಚಿತ್ರೀಕರಿಸುತ್ತಿರುವ ಸುದ್ದಿ ಮಾಧ್ಯಮದಲ್ಲಿ ಪ್ರಕಟಗೊಂಡಿತ್ತು. ಹಾಗಾಗಿ `ನಮಿತಾ ಐ ಲವ್ ಯೂ~ ಡಬಿಂಗ್ ಸಿನಿಮಾ ಇರಬಹುದೇ ಎಂಬ ಅನುಮಾನ ಹೊಗೆಯಾಡುತ್ತಿತ್ತು. ತಮ್ಮದು ಡಬಿಂಗ್ ಚಿತ್ರವಲ್ಲ ಎಂಬುದನ್ನು ಖಚಿತಪಡಿಸಲೆಂದೇ ಜಯಸಿಂಹ ರೆಡ್ಡಿ ವಾರ್ತಾ ಇಲಾಖೆ ಕೊಟ್ಟ `ಕ್ಲೀನ್ ಚೀಟಿ~ ತೋರಿಸಿದರು. ತಮ್ಮ ಚಿತ್ರಕ್ಕೆ ಸಿಕ್ಕಿರುವ `ಎ~ ಸರ್ಟಿಫಿಕೇಟ್‌ನ ಕಾಪಿ ಪ್ರತಿಯನ್ನೂ ಹಂಚಿದರು. ಸೆನ್ಸಾರ್ ಮಂಡಳಿ ಐದು ಕಟ್ಸ್ ಸೂಚಿಸಿದೆ.ಕಥೆ, ಚಿತ್ರಕಥೆ, ಸಂಗೀತ ನಿರ್ದೇಶನ, ಸಂಭಾಷಣೆ ಎಲ್ಲ ಹೊಣೆಯನ್ನೂ ಜಯಸಿಂಹ ರೆಡ್ಡಿಯವರೇ ಹೊತ್ತಿದ್ದಾರೆ. ಕನ್ನಡ ಬರದೇ ಇದ್ದರೂ ಅವರು ಸಂಭಾಷಣೆ ಬರೆದಿರುವುದನ್ನು ಕನ್ನಡದ ಪ್ರೇಕ್ಷಕ ಮೆಚ್ಚಿಕೊಳ್ಳಲೇಬೇಕು. ತಮ್ಮ ಚಿತ್ರಕ್ಕೆ ಕೆಲಸ ಮಾಡಿರುವ ಯಾವೊಬ್ಬ ತಂತ್ರಜ್ಞರೂ ಸುದ್ದಿಗೋಷ್ಠಿಯಲ್ಲಿ ಇರಲಿಲ್ಲ. ಹೋಗಲಿ, ಕ್ಯಾಮೆರಾ ಎದುರು ಬಾಗಿ ಬಳುಕಿದ ಪೋಷಕ ನಟಿಯರಿಗೂ ಮಾತನಾಡುವ ಅವಕಾಶ ಸಿಗಲಿಲ್ಲ. ಮೊದಲು ಈ ಸಿನಿಮಾ ಹೇಗೆ ಓಡುತ್ತದೋ ಎಂಬುದನ್ನು ನೋಡಿಕೊಂಡು ತೆಲುಗಿನ `ಲವ್ ಕಾಲೇಜ್~ ಪೂರ್ಣಗೊಳಿಸುವುದು ನಿರ್ದೇಶಕರ ಉದ್ದೇಶ. ಚಿತ್ರಕ್ಕೆ ಬಂಡವಾಳ ಹೂಡಿರುವ ಎಂ.ರವಿತೇಜ ರೆಡ್ಡಿ ಕೂಡ ಮಾತನಾಡಲು ಅಲ್ಲಿರಲಿಲ್ಲ.ನಮಿತಾ ಸಿಕ್ಕಿಯಾರು ಎಂದುಕೊಂಡು ಕಣ್ಣುಬಿಟ್ಟುಕೊಂಡು ಬಂದಿದ್ದ ಕ್ಯಾಮೆರಾಗಳಿಗೆ ಟಿ-ಶರ್ಟ್ ಮೇಲಿನ ನಮಿತಾ ನಗೆಯಷ್ಟೇ ಸಿಕ್ಕಿದ್ದು. ಇಷ್ಟಕ್ಕೂ ಚಿತ್ರದ ಪ್ರಚಾರಕ್ಕೆ ನಾಯಕಿಯರು ಬರದೇ ಇರುವುದು ನಿರ್ಮಾಪಕರಿಗೆ ಈಗೀಗ ಅಭ್ಯಾಸವಾಗುತ್ತಿದೆಯಲ್ಲವೇ? `ಅಂದಹಾಗೆ, ಈ ಚಿತ್ರದ ನಾಯಕಿ ನಮಿತಾ ಅಲ್ಲ. ಅವರು ಯೋಗ ಟೀಚರ್ ಅಷ್ಟೆ. ಅವರ ಯೋಗಾಸನ ನೋಡಬಯಸುವ ಅಭಿಮಾನಿಗಳು ಬೆಂಗಳೂರಿನ ಭೂಮಿಕಾ ಚಿತ್ರಮಂದಿರಕ್ಕೆ ಹೋಗಬಹುದು~ ಎಂಬ ಮಾತು ಗುಂಪಿನಿಂದ ತೇಲಿಬಂತು. ಅದನ್ನು ಕೇಳಿಸಿಕೊಂಡ ನಿರ್ದೇಶಕರಿಗೆ ತುಸು ಕಸಿವಿಸಿಯಾಯಿತು!

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry