ಮಂಗಳವಾರ, ಜೂನ್ 15, 2021
25 °C

ನಮೋಶಿ, ಅಪ್ಪ, ಪಾಟೀಲ ಕಣದಲ್ಲಿ

ಪ್ರಜಾವಾಣಿ ವಾರ್ತೆ/ ಶಿವರಂಜನ್ ಸತ್ಯಂಪೇಟೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಇಲ್ಲಿನ ಪ್ರತಿಷ್ಠಿತ ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆ (ಎಚ್‌ಕೆಇ)ಯ ಆಡಳಿತ ಮಂಡಳಿಗೆ ಮಾರ್ಚ್ 18ರಂದು ಚುನಾವಣೆ ನಡೆಯುವ ಹಿನ್ನೆಲೆಯಲ್ಲಿ ಅಧ್ಯಕ್ಷ ಸ್ಥಾನಕ್ಕಾಗಿ ಸಂಸ್ಥೆಯ ಹಾಲಿ ಅಧ್ಯಕ್ಷ ಶಶೀಲ ಜಿ. ನಮೋಶಿ, ಉಪಾಧ್ಯಕ್ಷ ಡಾ. ಸೂರ್ಯಕಾಂತ ಪಾಟೀಲ, ಮಾಜಿ ಅಧ್ಯಕ್ಷ ಬಸವರಾಜಪ್ಪ ಅಪ್ಪ ಸ್ಪರ್ಧೆಯಲ್ಲಿರುವುದರಿಂದ ಚುನಾವಣಾ ಕಣ ರಂಗೇರಿದೆ.ಈಗಾಗಲೇ ಚುನಾವಣೆ ತಾಲೀಮು ಶುರುವಾಗಿರುವುದರಿಂದ ಮೂರು ಅಭ್ಯರ್ಥಿಗಳು ತಮ್ಮ ಪ್ಯಾನಲ್‌ನೊಂದಿಗೆ ಹಗಲಿರುಳು ಮತದಾರರ ಭೇಟಿಯಲ್ಲಿ ತೊಡಗಿದ್ದಾರೆ. ಅಲ್ಲಲ್ಲಿ ಖಾಸಗಿ ಸಭೆ, ಸಮಾರಂಭ ಮತ್ತು ಔತಣಕೂಟ ಏರ್ಪಡಿಸುವುದರಲ್ಲಿ ನಿರತರಾಗಿದ್ದಾರೆ.ಈ ಮೊದಲು ಕೇವಲ 918 ಮತದಾರರಿದ್ದ ಈ ಸಂಸ್ಥೆಯಲ್ಲಿ ಈಗಿರುವ ಸದಸ್ಯರ ಕುಟುಂಬದವರಿಗೆ ಮತ್ತೊಂದು ಸದಸ್ಯತ್ವ ನೀಡಬೇಕೆಂಬ ಮಹತ್ವದ ನಿರ್ಧಾರದಿಂದಾಗಿ ಇದೀಗ ಒಟ್ಟು 1,825 ಸದಸ್ಯ ಬಲ ಹೊಂದಿದೆ. ಗುಲ್ಬರ್ಗದಲ್ಲಿ 1,600 ಮತದಾರರಿದ್ದು, ರಾಯಚೂರು ಹಾಗೂ ಬೀದರ್ ಜಿಲ್ಲೆ ಸೇರಿ 225 ಸದಸ್ಯರು ಇದ್ದಾರೆ.ಶಶೀಲ ಜಿ. ನಮೋಶಿ

ತಮ್ಮ ಮೂರು ವರ್ಷದ ಅವಧಿಯಲ್ಲಿ ಸುಮಾರು 50ರಿಂದ 60 ಕೋಟಿ ಹಣ ಖರ್ಚು ಮಾಡಿ ಸಂಸ್ಥೆಯನ್ನು ಸಾಕಷ್ಟು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯಲಾಗಿದೆ. ಬಸವೇಶ್ವರ ಆಸ್ಪತ್ರೆ ಮತ್ತು ಪಿಡಿಎ ಎಂಜಿನಿಯರಿಂಗ್ ಕಾಲೇಜನ್ನು ಆಧುನೀಕರಣಗೊಳಿಸಲಾಗಿದೆ. ಒಟ್ಟಾರೆಯಾಗಿ ಸಂಸ್ಥೆಯ ಉನ್ನತೀಕರಣ ಮಾಡಲಾಗಿದೆ. ನಾನು ಮಾಡಿದ ಕೆಲಸಗಳ ಬಗ್ಗೆ ಸದಸ್ಯರಿಗೆ ಚೆನ್ನಾಗಿ ಮನವರಿಕೆಯಾಗಿದ್ದು, ಚುನಾವಣೆಯಲ್ಲಿ ನನ್ನ ಗೆಲುವು ಖಚಿತ ಎಂಬ ಆತ್ಮವಿಶ್ವಾಸದಿಂದ ಮತದಾರರ ಓಲೈಕೆಯಲ್ಲಿ ತೊಡಗಿದ್ದಾರೆ.ಡಾ. ಪಾಟೀಲ

ಮೂರು ವರ್ಷ ಉಪಾಧ್ಯಕ್ಷನಾಗಿ ಸೇವೆ ಸಲ್ಲಿಸಿರುವ ಅನುಭವ, ಸಂಸ್ಥೆಯನ್ನು ಇನ್ನಷ್ಟು ಎತ್ತರಕ್ಕೆ ಬೆಳೆಸುವ ಇರಾದೆಯೊಂದಿಗೆ ಮತದಾರರನ್ನು ಭೇಟಿಯಾಗುತ್ತಿದ್ದಾರೆ. ಸಂಸ್ಥೆಯ ಮಾಜಿ ಅಧ್ಯಕ್ಷರಾದ ಡಾ. ಬಿ.ಜಿ. ಜವಳಿ, ಭೀಮಳ್ಳಿ ಮತ್ತು ಉದ್ಯಮಿ ಬಿ.ಜಿ. ಪಾಟೀಲ ಅವರು ಇವರ ಪ್ಯಾನಲ್‌ನಲ್ಲಿರುವುದರಿಂದ ಆನೆ ಬಲ ಪಡೆದು ಪ್ರಚಾರದಲ್ಲಿ ಧುಮುಕಿದ್ದಾರೆ.ಬಸವರಾಜಪ್ಪ ಅಪ್ಪ

ತಮ್ಮದೆ ಆದ ನಿಷ್ಠಾವಂತ ಸದಸ್ಯರೊಂದಿಗೆ ಚುನಾವಣೆಗೆ ಇಳಿದಿದ್ದು, ಪ್ರಾಮಾಣಿಕ ಮತ್ತು ಪಾರದರ್ಶಕ ಆಡಳಿತ ನೀಡುವೆ ಎಂಬ ಭರವಸೆಯೊಂದಿಗೆ ಮತದಾರರ ಮನವೊಲಿಕೆಗೆ ಮುಂದಾಗಿದ್ದಾರೆ.ಹಿಂದೊಮ್ಮೆ ತಾವು ಅಧ್ಯಕ್ಷರಾಗಿದ್ದ ಅವಧಿಯಲ್ಲಿ (1985-87) ತಾವು ಮಾಡಿದ ಕಟ್ಟಡ ಕಾಮಗಾರಿ ಕೆಲಸ, ಕೂಡಿಟ್ಟ 9.50 ಕೋಟಿ ಠೇವಣಿ ಹಣ ಹಾಗೂ ಸಂಸ್ಥೆಯ ಶ್ರೇಯೋಭಿವೃದ್ಧಿಗಾಗಿ ಕೈಗೊಳ್ಳುವ ನಿರೀಕ್ಷಿತ ಕೆಲಸಗಳ ಪಟ್ಟಿ ಹೊಂದಿರುವ ಪ್ರಣಾಳಿಕೆ ಬಗ್ಗೆ ಸದಸ್ಯರಿಗೆ ವಿವರಿಸುಸುತ್ತ ಮತಯಾಚನೆಯಲ್ಲಿ ತೊಡಗಿದ್ದಾರೆ.ಆರೋಪ-ಪ್ರತ್ಯಾರೋಪ

ಹಾಲಿ ಅಧ್ಯಕ್ಷ ಶಶೀಲ ನಮೋಶಿ ಅಭಿವೃದ್ಧಿ ಮಾಡಿದ್ದೇನೆ ಎಂದು ಹೇಳುತ್ತಿದ್ದರೆ, ಡಾ. ಸೂರ್ಯಕಾಂತ ಪಾಟೀಲ ಮತ್ತವರ ಗುಂಪು, ನಮೋಶಿ ಏನೂ ಮಾಡಿಲ್ಲ. ಇದ್ದುದಕ್ಕೆ ಸುಣ್ಣ, ಬಣ್ಣ ಬಳಿದು ಫೋಸು ನೀಡುತ್ತಿದ್ದಾರೆ ಎಂದು ಪ್ರಬಲವಾಗಿ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಇವರೆಲ್ಲರೂ ಏನೂ ಮಾಡಿಲ್ಲ. ನನಗೆ ಮತ್ತೊಂದು ಬಾರಿ ಅವಕಾಶ ಕೊಟ್ಟರೆ ಸಂಸ್ಥೆಯನ್ನು ಕಟ್ಟುನಿಟ್ಟಿನ ಜೊತೆಗೆ ಅಚ್ಟುಕಟ್ಟಾಗಿ ಬೆಳೆಸುತ್ತೇನೆ ಎಂದು ಬಸವರಾಜಪ್ಪ ಅಪ್ಪ ಹೇಳುತ್ತಿದ್ದಾರೆ.ಮತದಾರನ ಅನಿಸಿಕೆ


ಸಂಸ್ಥೆಯ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಈ ಮೂವರಲ್ಲಿ ಯಾರೂ ಫೇರ್ ಇಲ್ಲ. ಸಂಸ್ಥೆಯನ್ನು ಉಳಿಸುವುದರ ಜೊತೆಗೆ ತಾವು ಬೆಳೆಯಬೇಕು. ಈವರೆಗೆ ನಾನು ಯಾರಿಗೆ ವೋಟು ಹಾಕಿದ್ದೇನೋ ಅವರೆಲ್ಲರೂ ಗೆದ್ದಿದ್ದಾರೆ. ಈ ಬಾರಿ ಯಾರಿಗೆ ವೋಟು ಹಾಕಬೇಕೆಂದು ಇನ್ನೂ ನಿರ್ಧಾರ ಮಾಡಿಲ್ಲ ಎಂದು ತಮ್ಮ ಹೆಸರು ಹೇಳಲಿಚ್ಚಿಸದ ಸದಸ್ಯರೊಬ್ಬರು `ಪ್ರಜಾವಾಣಿ~ಗೆ ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.