ಮಂಗಳವಾರ, ನವೆಂಬರ್ 19, 2019
22 °C

`ನಮ್ಮದು ಕಾಳಿ ನದಿ ನೀರಿನ ಯೋಜನೆ'

Published:
Updated:

ದಾಂಡೇಲಿ: ರಾಜ್ಯ ಬಿಜೆಪಿ ಸರ್ಕಾರದ ಪ್ರಯತ್ನ ಹಳಿಯಾಳ ತಾಲ್ಲೂಕಿನ 59 ಗ್ರಾಮಗಳಿಗೆ ಕಾಳಿ ನದಿಯ ನೀರನ್ನು ಕುಡಿಯಲು ಯೋಗ್ಯವಾಗಿ ಪರಿವರ್ತಿಸಿ ಕುಡಿಯುವ ನೀರಿನ ಯೋಜನೆಯನ್ನು ಅನುಷ್ಠಾನಗೊಳಿಸುವುದೇ ವಿನಃ  ಭೂನೀರಾವರಿಯ ಯೋಜನೆಯಲ್ಲ' ಎಂದು ಕೆನರಾ ಸಂಸದ ಅನಂತಕುಮಾರ ಹೆಗಡೆ ಹೇಳಿದರು.ಬುಧವಾರ ಇಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರದ ಮುಂದೆ ಕಾಳಿ ಭೂನೀರಾವರಿಯ ಯೋಜನೆ ಪ್ರಾಸ್ತಾವನೆಯೇ ಇಲ್ಲ ಎಂದು  ಸ್ಪಷ್ಟಪಡಿಸಿದರು.`ರಾಜ್ಯ ಬಿಜೆಪಿ ಸರ್ಕಾರ ಕಾಳಿ ನದಿಯ ನೀರನ್ನು ಕುಡಿಯುವ ನೀರಿನ ಯೋಜನೆಗೆ ಬಳಸಲು ಯೋಜನೆ ರೂಪಿಸಿ ಅದಕ್ಕೆ ತಾಂತ್ರಿಕ ಯೋಜನೆಯ ರಚನೆಗೆ ಮುಂದಾಗಿದೆ. ಆದರೆ ಅದನ್ನೇ ಶಾಸಕ ಸುನೀಲ ಹೆಗಡೆಯವರು ತಮ್ಮ ಅಜೆಂಡಾ ಮಾಡಿಕೊಂಡರು. ದೇಶಪಾಂಡೆಯವರು ಈ ಪ್ರಾಸ್ತಾವದ ರಾಜಕೀಯ ಲಾಭ ಪಡೆಯುವ ಕನಸು ಆರಂಭಿಸಿಕೊಂಡರು' ಎಂದು ಅವರು ಪ್ರತಿಪಕ್ಷದವರ ಮೇಲೆ ಹರಿಹಾಯ್ದರು.`ಬಿಜೆಪಿ ಸರ್ಕಾರ 35 ಕೋಟಿ ರೂಪಾಯಿ ಅನುದಾನವನ್ನು ದಾಂಡೇಲಿ ನಗರಸಭೆಗೆ ನೀಡಿದ್ದರಿಂದ ನಗರದ ಅಭಿವೃದ್ಧಿ ಕಾರ್ಯಗಳು ಪೂರ್ಣಗೊಂಡಿವೆ. ನಾವು ಕೆಲಸ ಮಾಡಿದ್ದೇವೆ. ನಮಗೆ ಇನ್ನೊಂದು ಅವಕಾಶ ಕೊಡಿ' ಎಂಬ ಘೋಷವಾಕ್ಯದೊಂದಿಗೆ ಪಕ್ಷ ಇಂದು ಜನರ ಮತಯಾಚಿಸುತ್ತಿದೆ. ಜಿಲ್ಲೆಯ ಆರೂ ಕ್ಷೇತ್ರಗಳನ್ನು ಈ ಬಾರಿ ನಾವು ಗೆಲ್ಲುತ್ತೇವೆ' ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ನಗರ ಘಟಕದ ಅಧ್ಯಕ್ಷ ಎಂ.ಸಿ.ಹೆಗಡೆ, ಕಾರ್ಯದರ್ಶಿ ಸುಧಾಕರ ರೆಡ್ಡಿ, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಅಬ್ದುಲ್ ವಹಾಬ್, ಯುವ ಮುಖಂಡ ಪ್ರಶಾಂತ ಬಸೂತೇಕರ, ಮಾಜಿ ಅಧ್ಯಕ್ಷ ರೋಷನ್ ನೇತ್ರಾವಳಿ, ಜಿಲ್ಲಾ ಉಪಾಧ್ಯಕ್ಷ ಅಶೋಕ ಪಾಟೀಲ, ಜಿಲ್ಲಾ ಮಹಿಳಾ ಮೋರ್ಚಾ ಉಪಾಧ್ಯಕ್ಷೆ ಸಾವಿತ್ರಿ ಬಡಿಗೇರ, ನಗರಸಭಾ ಸದಸ್ಯ ರವಿಸುತಾರ, ರಾಜ್ಯ ಮಹಿಳಾ ಮೋರ್ಚಾ ಉಪಾಧ್ಯಕ್ಷೆ ಶಾರದಾ ಪರಶುರಾಮ, ಸುಜಾತಾ ಜಾಧವ ಹಾಗೂ ಸುಜಾತಾ ಅಡಗೂಣಕರ ಉಪಸ್ಥಿತರಿದ್ದರು.

ಪ್ರತಿಕ್ರಿಯಿಸಿ (+)