`ನಮ್ಮನ್ನು ದೇವರೇ ಕಾಪಾಡಬೇಕು'

7

`ನಮ್ಮನ್ನು ದೇವರೇ ಕಾಪಾಡಬೇಕು'

Published:
Updated:

ಕೋಲ್ಕತ್ತ: `ಈ ಟೆಸ್ಟ್ ಪಂದ್ಯದಲ್ಲಿ ನಮ್ಮನ್ನು ಆ ದೇವರೇ ಕಾಪಾಡಬೇಕು. ಭಾನುವಾರ ಏನಾದರೂ ಪವಾಡ ನಡೆದರೆ ಮಾತ್ರ ಸೋಲಿನಿಂದ ಪಾರಾಗಬಹುದು. ಆದರೆ ಅದು ಕಷ್ಟವಿದೆ'-ಇಂಗ್ಲೆಂಡ್ ವಿರುದ್ಧದ ಪಂದ್ಯದ ನಾಲ್ಕನೇ ದಿನದಾಟದ ಬಳಿಕ ಈ ರೀತಿ ಹೇಳಿದ ವೀರೇಂದ್ರ ಸೆಹ್ವಾಗ್ ಅವರ ದೇಹಭಾಷೆ ಭಾರತ ತಂಡದ ಹತಾಶೆ ಹಾಗೂ ಅಸಹಾಯಕತೆಯನ್ನು ಎತ್ತಿ ತೋರಿಸುತ್ತದೆ.ತಾಳ್ಮೆಯಿಂದ ಆಡಲು ವಿಫಲರಾದ ಬ್ಯಾಟ್ಸ್‌ಮನ್‌ಗಳ ಬಗ್ಗೆ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. `ಈ ಪಿಚ್‌ನಲ್ಲಿ ನೈಜ ಆಟಕ್ಕೆ ಮುಂದಾದರೆ ಯಾವುದೇ ಸಮಸ್ಯೆ ಎದುರಾಗದು. ಈ ಪಿಚ್‌ನಲ್ಲಿ ರನ್ ಗಳಿಸುವುದು ಅಷ್ಟೇನು ಕಷ್ಟವಲ್ಲ. ಇದು ಟೆಸ್ಟ್ ಕ್ರಿಕೆಟ್, ತಾಳ್ಮೆಯಿಂದ ಆಡಬೇಕು. ಅದರಲ್ಲಿ ನಾವೆಲ್ಲರೂ ವಿಫಲರಾಗಿದ್ದೇವೆ' ಎಂದು ವೀರೂ ಒಪ್ಪಿಕೊಂಡರು.ಆಫ್ ಸ್ಪಿನ್ನರ್ ಅಶ್ವಿನ್ ಈ ಪಂದ್ಯದಲ್ಲಿ ಬ್ಯಾಟಿಂಗ್‌ನಲ್ಲಿ ಭಾರತದ ಪರ ಹೆಚ್ಚು ಸ್ಕೋರ್ ಗಳಿಸಿರುವುದು ಮುಜುಗರಕ್ಕೆ ಕಾರಣವಾಗಿದೆಯೇ ಎಂಬುದಕ್ಕೆ ಪ್ರತಿಕ್ರಿಯಿಸಿದ ಅವರು, `ನಾವ್ಯಾಕೆ ಮುಜುಗರಕ್ಕೆ ಒಳಗಾಗಬೇಕು. ಅವರು ಕೂಡ ನಮ್ಮ ತಂಡದ ಅಂಗ. ರನ್ ಗಳಿಸುವ ಕೌಶಲ ಅವರಿಗೂ ಗೊತ್ತಿದೆ' ಎಂದರು.`ನಾವೀಗ ಈ ಪರಿಸ್ಥಿತಿಗೆ ಬಂದು ನಿಂತಿರುವುದು ತುಂಬಾ ನಿರಾಶೆಗೆ ಕಾರಣವಾಗಿದೆ. ನಾವು ಮುಂದಿನ ಪಂದ್ಯಕ್ಕೆ ಕಠಿಣ ಪ್ರಯತ್ನ ಹಾಕಬೇಕಾಗಿದೆ' ಎಂದೂ ಸೆಹ್ವಾಗ್ ನುಡಿದರು.

ಆದರೆ ದ್ರಾವಿಡ್ ಹಾಗೂ ಲಕ್ಷ್ಮಣ್ ಅನುಪಸ್ಥಿತಿ ಕಾಡುತ್ತಿದೆಯೇ ಎಂಬ ಪ್ರಶ್ನೆಗೆ ಅವರು ತಿರುಗೇಟು ನೀಡಿದರು. `ಪೂಜಾರ ದ್ವಿಶತಕ ಹಾಗೂ ಶತಕ ಗಳಿಸಿದಾಗ ದ್ರಾವಿಡ್ ಸ್ಥಾನಕ್ಕೆ ಸೂಕ್ತ ವ್ಯಕ್ತಿ ಎಂದು ನೀವೇ ಬರೆದಿದ್ದೀರಿ. ಮತ್ತಷ್ಟು ಪಂದ್ಯಗಳಲ್ಲಿ ಯಾವ ರೀತಿ ಪ್ರದರ್ಶನ ತೋರುತ್ತಾರೆ ಎಂಬುದರ ಬಗ್ಗೆ ನೀವು ಕಾಯಲಿಲ್ಲ. ಆದರೆ ದ್ರಾವಿಡ್, ಲಕ್ಷ್ಮಣ್ ಅವರ ಕೊರತೆ ಕಾಡುತ್ತಿದೆ ಎಂದು ಈಗ ನೀವೇ ಹೇಳುತ್ತಿದ್ದೀರಿ' ಎಂದರು.ಸತತ ವೈಫಲ್ಯ ಕಾಣುತ್ತಿರುವ ಯುವರಾಜ್ ಸಿಂಗ್ ಹಾಗೂ ವಿರಾಟ್ ಕೊಹ್ಲಿ ಅವರನ್ನು ವೀರೂ ಸಮರ್ಥಿಸಿಕೊಂಡರು. `ಈ ಆಟಗಾರರು ಪ್ರತಿಭಾವಂತರು. ಯುವಿ ವರ್ಷದ ನಂತರ ಆಡುತ್ತಿದ್ದಾರೆ. ಕೊಹ್ಲಿ ವರ್ಷದ ಐಸಿಸಿ ಆಟಗಾರರ ಪ್ರಶಸ್ತಿಗೆ ಪಾತ್ರರಾಗಿದ್ದಾರೆ' ಎಂದು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry