ನಮ್ಮನ್ನು ರಕ್ಷಿಸಿ: ಪೇಜಾವರ ಶ್ರೀಗೆ ಮೊರೆ

7

ನಮ್ಮನ್ನು ರಕ್ಷಿಸಿ: ಪೇಜಾವರ ಶ್ರೀಗೆ ಮೊರೆ

Published:
Updated:

ಪಡುಬಿದ್ರಿ: ‘ನಮ್ಮ ಐದು ಎಕರೆ ಕೃಷಿ ಭೂಮಿಯಲ್ಲಿ 200 ಬಾಳೆಗಿಡಗಳು ಇವೆ. ಆದರೆ ಯುಪಿಸಿಎಲ್‌ನಿಂದಾಗಿ ಕಳೆದ ಮೂರು ವರ್ಷಗಳಿಂದ ಒಂದೇ ಒಂದು ಬಾಳೆಗಿಡದಲ್ಲಿ ಕೊನೆ ಆಗಿಲ್ಲ. ತಾವು ಗೇಣಿದ ಪಡೆದ 15 ಎಕರೆ ಭೂಮಿಯಲ್ಲಿ ಈ ಹಿಂದೆ 300 ಚೀಲ ಭತ್ತ ಆಗುತ್ತಿತ್ತು. ಆದರೆ ಈಗಿನ ಪರಿಸ್ಥಿತಿಯಲ್ಲಿ ಒಂದು ಚೀಲ ಭತ್ತ ಆಗುವುದು ಕಷ್ಟ ಆಗಿದೆ ಎಂದು ಕೃಷಿಕ ಪೂವಪ್ಪ ಪೂಜಾರಿ ಅಳಲು ತೋಡಿಕೊಳ್ಳುವಾಗ ಎಂಥವರ ಮನ ಕರಗುವಂತಿತ್ತು.  ಕಲ್ಲಿದ್ದಲು ಆಧಾರಿತ ಯುಪಿಸಿಎಲ್ ಯೋಜನೆಯಿಂದ ಸಮಸ್ಯೆಗೊಳಗಾಗುತ್ತಿರುವ ಪ್ರದೇಶಕ್ಕೆ ಪೇಜಾವರ ಮಠದ ವಿಶ್ವೇಶ ತೀರ್ಥ ಸ್ವಾಮೀಜಿ ಜಿಲ್ಲಾ ರೈತ ಸಂಘದ ಪ್ರತಿನಿಧಿಗಳೊಂದಿಗೆ ಬುಧವಾರ ಭೇಟಿ ನೀಡಿದ ವೇಳೆ ಸ್ಥಳೀಯರು ತಮ್ಮ ಅಳಲು ತೋಡಿಕೊಂಡರು. ಈ ಯೋಜನೆಯಿಂದ ನಮ್ಮನ್ನು ರಕ್ಷಿಸಿ ಎಂದು ಕೆಲವರು ಸ್ವಾಮೀಜಿಯ ಕಾಲಿಗೆ ಎರಗಿದರು. ಯೋಜನಾ ಪ್ರದೇಶದ ಸನಿಹದಲ್ಲಿರುವ ಪಾದೆಬೆಟ್ಟು, ಸಾಂತೂರಿನಲ್ಲಿರುವ ಹಾರುಬೂದಿ ಸಂಗ್ರಹಣಾ ಘಟಕಕ್ಕೆ ಭೇಟಿ ನೀಡಿದರು.ಈ ಸಂದರ್ಭ ಈ ಎರಡೂ ಗ್ರಾಮದಲ್ಲಿ ಯುಪಿಸಿಎಲ್ ಯೋಜನೆಯಿಂದ ಆಗುತ್ತಿರುವ ಸಮಸ್ಯೆ ಬಗ್ಗೆ ಕಣ್ಣಾರೆ ಕಂಡರು. ಅಲ್ಲಿ ಸೇರಿದ್ದ ಮಹಿಳೆಯರು ಅಳುತ್ತಲೇ ದಿನನಿತ್ಯ ತಾವು ಪಡುತ್ತಿರುವ ಸಮಸ್ಯೆ ಹೇಳಿಕೊಂಡರು.‘ಯೋಜನೆಯಿಂದ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಉಂಟಾಗಿದೆ. ಕೃಷಿಯಲ್ಲಿ ಇಳುವರಿ ಕುಸಿತ ಆಗಿದೆ. ಜಾನುವಾರುಗಳ ಆರೋಗ್ಯದಲ್ಲೂ ಏರುಪೇರಾಗುತ್ತಿದೆ ಎಂದು ಸ್ಥಳೀಯರು ದೂರಿದರು. ಮಹಿಳೆಯೊಬ್ಬಳು ಈ ಸಂದರ್ಭ ಶ್ರೀಗಳ ಕಾಲಿಗೆ ಬಿದ್ದು, ‘ತಮ್ಮನ್ನು ಬದುಕಿಸಿ, ನಮಗೆ ಎದುರಾಗಿರುವ ಗಂಭೀರ ಸಮಸ್ಯೆ ಪರಿಹರಿಸಲು ಯಾರಿಂದಲೂ ಸಾಧ್ಯವಿಲ್ಲ. ನೀವಾದರೂ ಈ ಬಗ್ಗೆ ಸಂಬಂಧಪಟ್ಟವರಿಗೆ ಹೇಳಿ’ ಎಂದು ವಿನಂತಿಸಿದರು.‘ನಮ್ಮನ್ನು ಬಲವಂತವಾಗಿ ಒಕ್ಕಲೆಬ್ಬಿಸಲು ಕಂಪೆನಿ ತಂತ್ರ ನಡೆಸುತ್ತಿದೆ. ಮನೆಯಲ್ಲಿ ಯಾರೂ ಇಲ್ಲದ ಸಂದರ್ಭ ನಮ್ಮ ಜಾಗ, ಕೃಷಿ ಭೂಮಿ ಅಳತೆ ಮಾಡುತ್ತಾರೆ. ಮಲ್ಲಿಗೆ, ತೆಂಗು, ಭತ್ತ ಬೆಳೆಗಳೆಲ್ಲಾ ನಾಶವಾಗಿದೆ. ಕುಡಿಯುವ ನೀರು ಕಲುಷಿತಗೊಂಡಿದೆ. ಕೆಲ ಕಡೆ ನಮ್ಮ ಜಾಗವನ್ನು ಬಲಾತ್ಕಾರವಾಗಿ ಪಡೆದಿದ್ದುಮ ಪರಿಹಾರವಿನ್ನೂ ಸಿಕ್ಕಿಲ್ಲ ಎಂದು ಮಹಿಳೆಯರು ದೂರಿದರು.ಜಿಲ್ಲಾ ರೈತ ಸಂಘ ಅಧ್ಯಕ್ಷ ವಿಜಯಕುಮಾರ್ ಹೆಗ್ಡೆ, ಮೊಗವೀರ ಮುಂದಾಳು ಜನಾರ್ದನ ತಿಂಗಳಾಯ, ರೈತ ಸಂಘದ ಸ್ಥಳೀಯ ಮುಖಂಡರಾದ ವಿಶುಕುಮಾರ್ ಶೆಟ್ಟಿ, ಪ್ರಕಾಶ್ ಶೆಟ್ಟಿ, ವಿಶ್ಚನಾಥ್ ಶೆಟ್ಟಿ, ಪೂವಪ್ಪ ಪೂಜಾರಿ, ಅಶೋಕ್ ಪೂಜಾರಿ, ಸುಧಾಕರ ಶೆಟ್ಟಿ, ಶಶಿಧರ ಶೆಟ್ಟಿ, ನೀಲಯ್ಯ ಫಲಿಮಾರು, ನಿತಿನ್ ಶೆಟ್ಟಿ ಮುದರಂಗಡಿ ಇದ್ದರು. ಬಂಡೆ ಸ್ಫೋಟಕ್ಕೆ ತಡೆ: ಯುಪಿಸಿಎಲ್ ಯೋಜನೆಯ ಹಾರುಬೂದಿ ಪ್ರದೇಶದಲ್ಲಿ ಬಂಡೆಕಲ್ಲುಗಳನ್ನು ಸ್ಫೋಟಿಸುವುದನ್ನು ಸ್ಥಳೀಯರು ತಡೆಹಿಡಿದರು.ಯೋಜನಾ ಪ್ರದೇಶದ ಹಾರುಬೂದಿ ಸಂಗ್ರಹಣಾ ಘಟಕಕ್ಕೆ ಪೇಜಾವರ ಶ್ರೀ ಹಾಗೂ ರೈತ ಸಂಘದ ಪ್ರತಿನಿಧಿಗಳು ಭೇಟಿ ನೀಡಿ ವಾಪಸಾಗುತ್ತಿದ್ದಂತೆಯೇ ಹಾರು ಬೂದಿ ವಿಸ್ತರಣೆ ಮಾಡಲು ಬಂಡೆಕಲ್ಲುಗಳನ್ನು ಸ್ಫೋಟಿಸಲಾಗುತ್ತಿತ್ತು. ಇದರಿಂದ ಸಮೀಪದಲ್ಲಿರುವ ಮನೆಗಳಿಗೆ ಹಾನಿಯಾಗುತ್ತಿರುವುದನ್ನು ಮನಗಂಡ ಸ್ಥಳೀಯ ರೈತ ಸಂಘದ ಪ್ರತಿನಿಧಿಗಳು ಅಲ್ಲಿಗೆ ತೆರಳಿ ಬಂಡೆ ಸ್ಫೋಟಿಸುವುದನ್ನು ತಡೆ ಹಿಡಿದು ಅಲ್ಲಿದ್ದ ಕಾರ್ಮಿಕರನ್ನು ಹಿಂದಕ್ಕೆ ಕಳುಹಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry