ಮಂಗಳವಾರ, ಜೂನ್ 15, 2021
22 °C

ನಮ್ಮಮೆಟ್ರೊಗೆ ಮೊದಲ ಬಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮಹಾತ್ಮ ಗಾಂಧಿ ರಸ್ತೆಯ `ನಮ್ಮ ಮೆಟ್ರೊ~ ನಿಲ್ದಾಣದಲ್ಲಿ ರೈಲಿಗೆ ಸಿಕ್ಕು ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸೋಮವಾರ ರಾತ್ರಿ ನಡೆದಿದೆ.ವಿಷ್ಣು ಶರಣ್ (17) ಮೃತ ವಿದ್ಯಾರ್ಥಿ. ನಗರದ ಮ್ಯೂಸಿಯಂ ರಸ್ತೆಯ ಸೇಂಟ್ ಜೋಸೆಫ್ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿಯಾಗಿದ್ದ ಈತ ಜಯನಗರ ಎರಡನೇ ಬ್ಲಾಕ್‌ನ ನಿವಾಸಿ ಸತ್ಯನಾರಾಯಣ ಎಂಬುವರ ಮಗ. ಮಹಾತ್ಮ ಗಾಂಧಿ ರಸ್ತೆಯಿಂದ ಬೈಯ್ಯಪ್ಪನಹಳ್ಳಿ ಕಡೆಗೆ ಹೊರಟಿದ್ದ ಮೆಟ್ರೊ ರೈಲಿಗೆ ಹಾರಿ ಈತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.ಈತ ಸುಮಾರು ಏಳೂವರೆ ಗಂಟೆಗೆ ನಿಲ್ದಾಣದಲ್ಲಿ ಪ್ಲಾಟ್‌ಫಾರ್ಮ್ ಟಿಕೇಟ್ ಖರೀದಿಸಿದ್ದಾನೆ. ರೈಲು ಬರುತ್ತಿದ್ದಂತೆಯೇ ರೈಲಿಗೆ ಹಾರಿ ಪ್ರಾಣ ಬಿಟ್ಟಿದ್ದಾನೆ. ಆತ್ಮಹತ್ಯೆಯ ಉದ್ದೇಶದಿಂದಲೇ ರೈಲಿಗೆ ಸಿಲುಕಿರುವ ಬಗ್ಗೆ ಪ್ರತ್ಯಕ್ಷದರ್ಶಿಗಳಿಂದ ತಿಳಿದುಬಂದಿದೆ ಎಂದು ಪೊಲೀಸರು ಹೇಳಿದ್ದಾರೆ.`ರಾತ್ರಿ ಸುಮಾರು ಎಂಟೂವರೆಯ ವೇಳೆಗೆ ಬೈಯ್ಯಪ್ಪನಹಳ್ಳಿಗೆ ಹೋಗಲು ನಿಲ್ದಾಣದಲ್ಲಿ ನಿಂತಿದ್ದೆ. ರೈಲು ನಿಲ್ದಾಣಕ್ಕೆ ಬರುತ್ತಿದ್ದಂತೇ ಯುವಕ ಟ್ರ್ಯಾಕ್‌ಗೆ ಹಾರಿದ, ರೈಲಿನ ಎಮರ್ಜೆನ್ಸಿ ಬ್ರೇಕ್ ಹಾಕಿದರೂ ಮುಂದಿನ ಚಕ್ರಕ್ಕೆ ಸಿಲುಕಿ ನೋಡು ನೋಡುತ್ತಿದ್ದಂತೇ ಪ್ರಾಣ ಬಿಟ್ಟ~ ಎಂದು ಪ್ರತ್ಯಕ್ಷದರ್ಶಿ ಸುರೇಶ್‌ಬಾಬು `ಪ್ರಜಾವಾಣಿ~ಗೆ ತಿಳಿಸಿದರು.ಪ್ರತಿಭಾವಂತ ವಿದ್ಯಾರ್ಥಿ: ಸಾವನ್ನಪ್ಪಿರುವ ವಿಷ್ಣು ಪ್ರತಿಭಾವಂತ ವಿದ್ಯಾರ್ಥಿ ಎಂದು ತಿಳಿದುಬಂದಿದೆ. `ಹತ್ತನೇ ತರಗತಿಯಲ್ಲಿ ಶೇಕಡಾ 90 ರಷ್ಟು ಅಂಕ ಪಡೆದಿದ್ದ ಆತ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದ. ಸೋಮವಾರ ರಾತ್ರಿ ಏಳು ಗಂಟೆಗೆ ಮನೆ ಬಿಟ್ಟ ಆತ ವಿಲ್ಸನ್ ಗಾರ್ಡನ್‌ನಲ್ಲಿ ಟ್ಯೂಷನ್‌ಗೆ ಹೋಗಿರಬಹುದೆಂದು ತಿಳಿದುಕೊಂಡಿದ್ದೆವು.ಆದರೆ ಚಾನೆಲ್‌ಗಳ ಮೂಲಕ ಸುದ್ದಿ ತಿಳಿದು ಆಘಾತವಾಗಿದೆ. ಅವನು ಆತ್ಮಹತ್ಯೆ ಮಾಡಿಕೊಳ್ಳುವಂತಹ ಯಾವ ಘಟನೆಗಳೂ ಮನೆಯಲ್ಲಿ ನಡೆದಿರಲಿಲ್ಲ~ ಎಂದು ಮೃತನ ಚಿಕ್ಕಪ್ಪ ಎಸ್.ವಿ.ಸತ್ಯನಾರಾಯಣ ತಮ್ಮ ನೋವು ತೋಡಿಕೊಂಡರು.ಸುರಕ್ಷತಾ ಕ್ರಮಗಳಿಲ್ಲ: ಘಟನೆಯ ಬೆನ್ನಲ್ಲೇ `ನಮ್ಮ ಮೆಟ್ರೊ~ ನಿಲ್ದಾಣದ ಸುರಕ್ಷತಾ ಕ್ರಮಗಳ ಬಗ್ಗೆ ಪ್ರಯಾಣಿಕರು ಅಸಮಾಧಾನ ವ್ಯಕ್ತ ಪಡಿಸಿದ್ದಾರೆ. `ಯುವಕ ಏಕಾಏಕಿ ಟ್ರ್ಯಾಕ್ ಮೇಲೆ ಹಾರಿದ್ದನ್ನು ನೋಡಿ ಏನು ಮಾಡಬೇಕೋ ತಿಳಿಯಲಿಲ್ಲ. ಪ್ರಯಾಣಿಕರಲ್ಲಿ ಒಬ್ಬ ವೈದ್ಯರು ಯುವಕನ ರಕ್ಷಣೆಗೆ ಮುಂದಾದರೂ ಮೆಟ್ರೊ ಅಧಿಕಾರಿಗಳು ಅದಕ್ಕೆ ಅವಕಾಶ ನೀಡಲಿಲ್ಲ. ಸಾಮಾನ್ಯ ಆಟೊರಿಕ್ಷಾದಲ್ಲಿಯೂ ಒಂದು ಪ್ರಥಮ ಚಿಕಿತ್ಸಾ ಪೆಟ್ಟಿಗೆ ಇರುತ್ತದೆ. ಆದರೆ ಮೆಟ್ರೊ ನಿಲ್ದಾಣದಲ್ಲಿ ಯಾವುದೇ ಪ್ರಥಮ ಚಿಕಿತ್ಸಾ ಪೆಟ್ಟಿಗೆಗಳಿಲ್ಲ. ಯುವಕ ಸಾಯುವುದನ್ನು ಮೆಟ್ರೊ ಅಧಿಕಾರಿಗಳು ನೋಡುತ್ತಾ ನಿಂತಿದ್ದರು. ಸುರಕ್ಷತಾ ಕ್ರಮಗಳನ್ನು ಮೆಟ್ರೊ ಅನುಸರಿಸಿದ್ದರೆ ಘಟನೆ ನಡೆಯುತ್ತಿರಲಿಲ್ಲ~ ಎಂದು ಪ್ರತ್ಯಕ್ಷದರ್ಶಿ ಹೇಮಾ ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.