ಭಾನುವಾರ, ಅಕ್ಟೋಬರ್ 20, 2019
22 °C

ನಮ್ಮಿಂದ ತಪ್ಪಾಗಿದೆ, ಕ್ಷಮಿಸಿ: ಈಶ್ವರಪ್ಪ

Published:
Updated:

ಬೆಂಗಳೂರು:  `ನಾವೆಲ್ಲ ಒಂದಾಗಿದ್ದೇವೆ. ಪಕ್ಷದಲ್ಲಿನ ಗೊಂದಲ ಬಗೆಹರಿದಿದೆ~ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ ಅವರು ಮಂತ್ರಾಲಯದಲ್ಲಿ ನಿವೇದಿಸಿಕೊಂಡರೆ, `ಯಾವುದೇ ಒಡಕಿಗೆ ಅವಕಾಶ ಕೊಡದೆ, ಭಿನ್ನಾಭಿಪ್ರಾಯಗಳನ್ನೆಲ್ಲ ಸರಿಪಡಿಸಿಕೊಂಡು ಎಲ್ಲರೂ ಒಟ್ಟಾಗಿ ಕಾರ್ಯಕರ್ತರು ಹಾಗೂ ರಾಜ್ಯದ ಜನತೆ ಬಯಸುವ ರೀತಿಯಲ್ಲಿ ಅಭಿವೃದ್ಧಿ ಕೆಲಸ ಮಾಡುತ್ತೇವೆ~ ಎಂದು ಮಾಜಿ ಮುಖ್ಯಮಂತ್ರಿ ಬಿಎಸ್.ಯಡಿಯೂರಪ್ಪ ಶಿವಮೊಗ್ಗದಲ್ಲಿ ಗುರುವಾರ ಹೇಳುವುದರೊಂದಿಗೆ ರಾಜ್ಯ ಬಿಜೆಪಿಯಲ್ಲಿನ ಬಿಕ್ಕಟ್ಟು ಸದ್ಯಕ್ಕೆ ಬಗೆಹರಿದಂತೆ ಕಂಡುಬಂದಿದೆ.ರಾಯಚೂರು ವರದಿ: `ನಮ್ಮಿಂದ ತಪ್ಪಾಗಿದ್ದು, ರಾಜ್ಯದ ಜನತೆ ಹಾಗೂ ಪಕ್ಷದ ಕಾರ್ಯಕರ್ತರು ಕ್ಷಮಿಸಬೇಕು~ ಎಂದು ಭಾರತೀಯ ಜನತಾ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್. ಈಶ್ವರಪ್ಪ ಹೇಳಿದರು.

ಮಂತ್ರಾಲಯ ರಾಘವೇಂದ್ರಸ್ವಾಮಿ ಮಠಕ್ಕೆ ಗುರುವಾರ ಭೇಟಿ ನೀಡಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.`ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯರು ಬುಧವಾರ ಬುದ್ಧಿವಾದ ಹೇಳಿದ್ದಾರೆ. ಮಾರ್ಗದರ್ಶನ ಮಾಡಿದ್ದಾರೆ. ಪಕ್ಷದ ಹಿರಿಯರಾದ ನಾವೇ ತಪ್ಪು ಮಾಡಿದ್ದೆವು. ಈಗ ಆ ತಪ್ಪು ತಿದ್ದಿಕೊಂಡಿದ್ದೇವೆ. ಅಲ್ಲಿ ಬುದ್ಧಿವಾದ ಹೇಳಿಸಿಕೊಂಡ ಬಳಿಕ ರಾಯರ ದರ್ಶನಕ್ಕೆ ಬಂದಿದ್ದೇನೆ. ನಮ್ಮಿಂದ ತಪ್ಪು ನಡೆದು ಹೋಗಿದೆ. ಈ ರಾಜ್ಯದ ಜನತೆ ಮತ್ತು ಕಾರ್ಯಕರ್ತರು ಕ್ಷಮಿಸಬೇಕು ಎಂದು ಕೇಳಿಕೊಳ್ಳುತ್ತೇವೆ~ ಎಂದು ಹೇಳಿದರು.`ಈ ರಾಜ್ಯದಲ್ಲಿ ಭಾರತೀಯ ಜನತಾ ಪಕ್ಷ ಸದೃಢವಾಗಿದೆ. ಪಕ್ಷದ ಕಾರ್ಯಕರ್ತರೂ ಅಷ್ಟೇ ಸದೃಢವಾಗಿದ್ದಾರೆ. ನಮ್ಮಂಥ ನಾಯಕರಲ್ಲಿಯೇ ಕೆಲ ಗೊಂದಲಗಳಿದ್ದವು. ಅವು ನಿನ್ನೆಯವರೆಗೂ ಇದ್ದವು. ಈಗ ಇಲ್ಲ~ ಎಂದು ತಿಳಿಸಿದರು.`ಯಡಿಯೂರಪ್ಪ, ಮುಖ್ಯಮಂತ್ರಿ ಸದಾನಂದಗೌಡ ಹಾಗೂ ನಾನು ಒಗ್ಗಟ್ಟಾಗಿದ್ದೇವೆ. ಮುಂಬರುವ ದಿನಗಳಲ್ಲಿ ಇಂಥ ತಪ್ಪು ನಡೆಯುವುದಕ್ಕೆ ಆಸ್ಪದ ನೀಡುವುದಿಲ್ಲ. ರಾಜ್ಯವ್ಯಾಪಿಯಾಗಿ ಮೂವರು ಪ್ರವಾಸ ಕೈಗೊಳ್ಳುತ್ತೇವೆ. ಇನ್ನು ಮೂರು ದಿನಗಳ ನಂತರ ಪಕ್ಷದ ರಾಜ್ಯ ಕಾರ್ಯಕಾರಿಣಿ ಸಭೆ ನಡೆಯಲಿದೆ. ಆ ಸಭೆಯಲ್ಲಿ ರಾಜ್ಯ ಪ್ರವಾಸದ ಬಗ್ಗೆ ಸ್ಪಷ್ಟ ಚಿತ್ರಣ ಗೊತ್ತಾಗಲಿದೆ~ ಎಂದರು.ಶಿವಮೊಗ್ಗ ವರದಿ: `ಪಕ್ಷದಲ್ಲಿನ ಬಿಕ್ಕಟ್ಟು ಬಗೆಹರಿದಿದೆ. ಯಾವುದೇ ಒಡಕಿಗೆ ಅವಕಾಶ ಕೊಡದೆ, ಸಹಜವಾದ ಭಿನ್ನಾಭಿಪ್ರಾಯ ಸರಿಪಡಿಸಿಕೊಂಡು ಎಲ್ಲರೂ ಒಟ್ಟಾಗಿ, ಒಂದಾಗಿ ಕಾರ್ಯಕರ್ತರು ಹಾಗೂ ರಾಜ್ಯದ ಜನತೆ ಬಯಸುವ ರೀತಿಯಲ್ಲಿ ಅಭಿವೃದ್ಧಿ ಕೆಲಸ ಮಾಡುತ್ತೇವೆ. ಈ ಬಗ್ಗೆ ಪ್ರಮುಖರ ಜತೆ ಮಾತುಕತೆ ನಡೆದಿದೆ~ ಎಂದು ಬಿ.ಎಸ್. ಯಡಿಯೂರಪ್ಪ ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.ಪಕ್ಷದಲ್ಲಿ ಸ್ಥಾನಮಾನ ನೀಡುವಂತೆ ತಾವು ಯಾವುದೇ ಗಡುವು ನೀಡಿಲ್ಲ; ಮುಂದೆಯೂ ನೀಡುವುದಿಲ್ಲ ಎಂದು  ಸ್ಪಷ್ಟಪಡಿಸಿದರು.ಹಾಗಾದರೆ ಸಾಮೂಹಿಕ ನಾಯಕತ್ವವನ್ನು ಒಪ್ಪಿಕೊಳ್ಳುತ್ತೀರಾ? ಎಂಬ ಪ್ರಶ್ನೆಗೆ `ನೀವು ಹೇಗೆ ಬೇಕಾದರೂ ಅರ್ಥೈಸಿಕೊಳ್ಳಬಹುದು~ ಎಂದರು. ಈ ವಿಚಾರದಲ್ಲಿ ಹೈಕಮಾಂಡ್ ಸೂಕ್ತ ಸಂದರ್ಭದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಬಿಕ್ಕಟ್ಟು ಬಗೆಹರಿದಿದ್ದಕ್ಕೆ ಯಾವುದೇ ರಾಜೀ ಸೂತ್ರ ಇಲ್ಲ ಎಂದು ಸ್ಪಷ್ಟಪಡಿಸಿದ ಅವರು, ಒಟ್ಟಾಗಿ ಕೆಲಸ ಮಾಡಬೇಕು ಎಂಬ ಒಮ್ಮತದ ತೀರ್ಮಾನವಾಗಿದೆ. ಯಾವುದೇ ಸ್ಥಾನಮಾನದ ಬಗ್ಗೆ ಚರ್ಚೆ ನಡೆಯಲಿಲ್ಲ ಎಂದು ಹೇಳಿದರು.`ಕಾಂಗ್ರೆಸ್ ಪಕ್ಷವನ್ನು ಮುಂದಿನ ಚುನಾವಣೆಯಲ್ಲಿ ನೆಲ ಕಚ್ಚುವಂತೆ ಮಾಡುವುದೇ ಸದ್ಯಕ್ಕೆ ನಮ್ಮೆಲ್ಲರ ಗುರಿ. ಈ ಕುರಿತು ನಾಯಕರೆಲ್ಲರೂ ಸಂಕಲ್ಪ ಮಾಡಿದ್ದೇವೆ~ ಎಂದರು.ಸಿದ್ದರಾಮಯ್ಯ ಹಿಂದುಳಿದ ವರ್ಗದ ಉತ್ತಮ ನಾಯಕರು. ಆದರೆ, ಅವರಿಗೆ ಕಾಂಗ್ರೆಸ್‌ನಲ್ಲಿ ಸೂಕ್ತ ಸ್ಥಾನಮಾನ ಇಲ್ಲ. ಅವರ ಈಗಿನ ಸ್ಥಿತಿ ನೋಡಿದರೆ ಪಕ್ಷದಿಂದ ಒಂದು ಹೆಜ್ಜೆ ಹಿಂದಕ್ಕೆ ಇಟ್ಟಿದ್ದಾರೆ ಎನ್ನಿಸುತ್ತದೆ ಎಂದೂ ಯಡಿಯೂರಪ್ಪ ವಿಶ್ಲೇಷಿಸಿದರು.

Post Comments (+)