ಬುಧವಾರ, ಮೇ 18, 2022
25 °C
ಗ್ರಾಮಾಯಣ

`ನಮ್ಮ ಕಷ್ಟ ಎಲ್ಲರಿಗೂ ಗೊತ್ತೈತಿ'

ಪ್ರಜಾವಾಣಿ ವಾರ್ತೆ/ನಾರಾಯಣರಾವ ಕುಲಕರ್ಣಿ Updated:

ಅಕ್ಷರ ಗಾತ್ರ : | |

ಕುಷ್ಟಗಿ: `ಈ ರೋಡಿನ ಮ್ಯಾಲ ಹೊಂಟ್ರ ದನಾ-ಕರ ಅಷ್ಟ ಅಲ್ರಿ, ಮನಸ್ಯಾರ ಕಾಲಾಗೂ ರಕ್ತ ಬರತೈತಿ. ಐದಾರು ವರ್ಸದಿಂದ ಇಷ್ಟ.... ತೊಂದ್ರಿ ಅನುಭವಿಸಕ್ಹತ್ತೀವಿ. ಸಮಸ್ಯೆ ಎಷ್ಟೈತೆಂತ ಗೆದ್ದ ಎಮ್ಮೆಲ್ಲೆಗೂ ಗೊತ್ತೈತಿ, ಸೋತ ಎಮ್ಮೆಲ್ಲೆಗೂ ಗೊತ್ತಿತ್ತು. ಆದ್ರ ನಮ್ಮ ಕಷ್ಟನ ಯಾರೂ ಬಗಿಹರಿಸಿಲ್ಲ ನೋಡ್ರಿ...'

ತಾಲ್ಲೂಕಿನ ದೋಟಿಹಾಳ ರಸ್ತೆ ಅಥವಾ ರಾಷ್ಟ್ರೀಯ ಹೆದ್ದಾರಿ ಮಾರ್ಗದ ನಡುವಿನ ಕೆ.ಬೋದೂರು (ಬಿಜಕಲ್ ಗ್ರಾ.ಪಂ. ವ್ಯಾಪ್ತಿಯ) ಗ್ರಾಮದ ಹದಗೆಟ್ಟ ರಸ್ತೆ ಕುರಿತು ನಿತ್ಯದ ಸಮಸ್ಯೆಯನ್ನು ರೈತರಾದ ಪರಸಪ್ಪ ಗೋನಾಳ ನಿರೂಪಿಸಿದ ರೀತಿ ಇದು.ಬಿಜಕಲ್ ಅಥವಾ ಹೆದ್ದಾರಿ ಎರಡೂ ಬದಿಯಿಂದ ಬೋದೂರು ಮಾರ್ಗವಾಗಿ ಬಂದವರಿಗೆಲ್ಲ ರಸ್ತೆಯ ದು:ಸ್ಥಿತಿಯ ಅನುಭವವಾಗುತ್ತದೆ. ಟಾರು ಎಂದೋ ಕಿತ್ತುಹೋಗಿದೆ. ರಸ್ತೆ ಹೊಟ್ಟೆಯೊಳಗಿದ್ದ ಸಣ್ಣ, ಹಿಡಿಗಾತ್ರದ ಕಲ್ಲುಗಳೆಲ್ಲ ಮೇಲೆ ಬಂದಿವೆ. ಆಯ ತಪ್ಪಿದರೆ ಕಾಲು ಉಳುಕುವುದು ಖಾತರಿ. ಎಡವಿ ಬಿದ್ದರೆ ಕೈಕಾಲು ಮುರಿಯುತ್ತವೆ. ಬೆರಳುಗಳು ಒಡೆಯುತ್ತವೆ. ಇನ್ನು ರಾತ್ರಿ ವೇಳೆ ಈ ಊರಿಗೆ ಬರುವುದು ಅಷ್ಟೊಂದು ಸುಲಭದ ಮಾತಲ್ಲ.ಎತ್ತಿನಗಾಡಿ, ರಂಟೆ, ಕುಂಟೆ ಹೊತ್ತು ಹೋಗಿ ಬರುವ ಎತ್ತುಗಳ ಕಾಲುಗಳಲ್ಲಿಯೂ ರಕ್ತ ಇಳಿಯುತ್ತಿರುತ್ತದೆ. ವಾರಕ್ಕೊಮ್ಮೆ ಪಾದಕ್ಕೆ ನಾಲು ಕಟ್ಟಿಸದಿದ್ದರೆ ಅವು ಮೇಲೇಳುವುದಿಲ್ಲ. ಒಟ್ಟಿನಲ್ಲಿ ದನ-ಕರುಗಳ ಸ್ಥಿತಿ ಅಯೋಮಯ. ಇದು ನಿತ್ಯದ ಸಂಗತಿ. ದ್ವಿಚಕ್ರ, ತ್ರಿಚಕ್ರ ಇತರೆ ವಾಹನಗಳಲ್ಲಿ ಪ್ರಯಾಣಿಸುವವರು ಅನುಭವಿಸುವ ಯಾತನೆ ಹೇಳತೀರದಷ್ಟು ಎನ್ನುತ್ತಾನೆ ವಿದ್ಯಾರ್ಥಿ ಮುತ್ತಣ್ಣ ಚಹ್ವಾಣ.ರಸ್ತೆ ಸುಧಾರಣೆಗೆ ಗಮನ ಹರಿಸುವಂತೆ ಹಿಂದಿನ ಶಾಸಕ, ಹಾಲಿ ಜಿ.ಪಂ. ಸದಸ್ಯೆ ಮತ್ತು ಅಧಿಕಾರಿಗಳಿಗೆ ಹೇಳಿದರೆ ಒಬ್ಬರೂ ಲಕ್ಷ್ಯ ವಹಿಸಲಿಲ್ಲ ಎಂಬ ಅಸಮಾಧಾನ ಜನರದ್ದು. `2003ರಲ್ಲಿ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಲ್ಲಿ ನಿರ್ಮಾಣಗೊಂಡ ಈ ರಸ್ತೆ ಕೆಲ ವರ್ಷಗಳಲ್ಲೇ ಹಾಳಾಗಿದೆ. ಅದರ ನಂತರ ಒಂದು ಬುಟ್ಟಿ ಮಣ್ಣು ಹಾಕಿಲ್ಲ. ಆದರೆ, ಸದರಿ ರಸ್ತೆಯ ದುರಸ್ತಿ ಹೆಸರಿನಲ್ಲಿ ಎಂಜಿನಿಯರ್‌ರು ಮತ್ತು ಚುನಾಯಿತ ಪ್ರತಿನಿಧಿಗಳು ರೂ. 12 ಲಕ್ಷ  ಗುಳುಂ ಮಾಡಿದ್ದಾರೆ' ಎಂಬ ಆರೋಪ ದಲಿತ ಮುಖಂಡ ಶರಣಪ್ಪ ಬೋದೂರು ಅವರದು.ನೀರಿಲ್ಲ: `ಕೆ.ಬೋದೂರು ಮತ್ತು ತಾಂಡಾದಲ್ಲಿ ನೀರಿನ ಸೌಲಭ್ಯವಿದೆ. ಆದರೆ ಇದರ ನಡುವಿರುವ ಸುಮಾರು 50 ಮನೆಗಳ ಜನವಸತಿ ಪ್ರದೇಶಕ್ಕೆ ಕುಡಿಯುವ ನೀರಿನ ಸೌಲಭ್ಯವಿಲ್ಲ. ಜನ ತೋಟಪಟ್ಟಿಗಳಿಗೆ ಅಲೆದಾಡುವುದು ಸಾಮಾನ್ಯ ಸಂಗತಿ' ಎಂದು ಅಲ್ಲಿಯ ನಿವಾಸಿ ಶರಣಪ್ಪ ಗೊರೆಬಾಳ ಗೋಳು ತೋಡಿಕೊಂಡರು. ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ ಇದ್ದರೂ ಶಿಕ್ಷಣ ಇಲಾಖೆ ಗ್ರಾಮಸ್ಥರ ಬೇಡಿಕೆಗೆ ಸ್ಪಂದಿಸಿಲ್ಲ. ಶಾಲೆಗೆ ಹೊಂದಿಕೊಂಡಂತೆ ಕೊಳಚೆ ಮಡುಗಟ್ಟಿ ಮಕ್ಕಳ ಆರೋಗ್ಯದ ಮೇಲೆ ದುಷ್ಟರಿಣಾಮ ಬೀರುತ್ತದೆ ಎಂಬುದು ಜನರ ದೂರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.