ಭಾನುವಾರ, ಜೂನ್ 20, 2021
25 °C
ಬೆಳದಿಂಗಳು

ನಮ್ಮ ಕಾಲದಲ್ಲೇ ನಮ್ಮನ್ನು ಕಂಡುಕೊಳ್ಳೋಣ

– ಸೃಜನಾನಂದ Updated:

ಅಕ್ಷರ ಗಾತ್ರ : | |

ಈ ಕಾಲದ ದೊಡ್ಡ ದುರಂತವೆಂದರೆ ನಮ್ಮ ಯುವಕರಿಗೆ ಆದರ್ಶವಾಗಬಲ್ಲವರು ಯಾರೂ ಇಲ್ಲ. ಇಂಥದ್ದೊಂದು ಹೇಳಿಕೆಯನ್ನು ಕನಿಷ್ಠ ವಾರಕ್ಕೆ ಐದಾರು ಬಾರಿಯಾದರೂ ನಾವು ಕೇಳುತ್ತಿರುತ್ತೇವೆ. ಮತ್ತೆ ಮತ್ತೆ ಕೇಳಿಸಿಕೊಳ್ಳುವ ಮಾತುಗಳನ್ನು ಕೆಲ ಕಾಲದ ನಂತರ ಎಲ್ಲರೂ ನಿಜವೆಂದು ನಂಬುವುದಕ್ಕೆ ಆರಂಭಿಸುತ್ತಾರೆ. ಈ ವಿಷಯಕ್ಕೆ ಸಂಬಂಧಿಸಿದಂತೆ ನಾವೊಂದು ಪ್ರಶ್ನೆ ಕೇಳಿಕೊಳ್ಳೋಣ. ಚರಿತ್ರೆಯ ಯಾವ ಕಾಲಘಟ್ಟದಲ್ಲಿ ಆ ಕಾಲದ ಯುವಕರಿಗೆ ಆದರ್ಶಪ್ರಾಯರಾಗಿರುವ ವ್ಯಕ್ತಿಗಳೇ ತುಂಬಿಕೊಂಡಿದ್ದರು?ಬುದ್ಧನಿಗೆ ಆತನ ಕಾಲದಲ್ಲಿ ಆದರ್ಶಪ್ರಾಯರಾಗಿದ್ದ ಯಾರಿದ್ದರು? ಈ ಪ್ರಶ್ನೆಯನ್ನು ನಮ್ಮ ಇತಿಹಾಸ ಪುರುಷರೆಲ್ಲರಿಗೂ ಅನ್ವಯಿಸಿ ನೋಡಿದರೂ ನಮಗೆ ಸಿಗುವ ಉತ್ತರ ನೇತ್ಯಾತ್ಮಕವೇ. ಅರ್ಥಾತ್ ಈ ಮಹಾನುಭಾವರೆಲ್ಲಾ ತಮ್ಮದೇ ಆದ ಹಾದಿಯನ್ನು ತುಳಿದಿದ್ದರಿಂದ ನಮಗೀಗ ಆದರ್ಶಪ್ರಾಯರಾಗಿ ಕಾಣಿಸುತ್ತಿದ್ದಾರೆ. ನಾವು ಇಂದು ಮಾಡಬೇಕಾಗಿರುವುದು ನಮಗೆ ಆದರ್ಶಪ್ರಾಯರಾಗಿ ಕಾಣಿಸುತ್ತಿರುವ ಇತಿಹಾಸ ಪುರುಷರಂತೆಯೇ ನಮ್ಮದೇ ಆದ ಮಾರ್ಗವನ್ನು ಕಂಡುಕೊಳ್ಳುವುದು. ಹಾಗೆಂದು ನಾವು ಚರಿತ್ರೆಯನ್ನು ಮರೆತುಬಿಡಬೇಕು. ಇಲ್ಲಿಯ ತನಕದ ಎಲ್ಲಾ ಮಹಾನುಭಾವರ ಚಿಂತನೆಗಳನ್ನು ಹೂತು ಹಾಕಿಬಿಡಬೇಕು ಎಂದರ್ಥವಲ್ಲ. ಅವುಗಳನ್ನು ಬಳಸಿಕೊಂಡೇ ನಮ್ಮದನ್ನು ಕಟ್ಟಿಕೊಳ್ಳಬೇಕು.ವಕೀಲ ವೃತ್ತಿಗಾಗಿ ಆಫ್ರಿಕಾಕ್ಕೆ ತೆರಳಿದ ಗಾಂಧಿ ತಮ್ಮ ಹಾದಿಯನ್ನು ಕಂಡುಕೊಂಡದ್ದು ಇದಕ್ಕೆ ಅತ್ಯುತ್ತಮ ಉದಾಹರಣೆ. ರೈಲಿನ ಮೊದಲ ದರ್ಜೆಯ ಬೋಗಿಯಿಂದ ಕೆಳಕ್ಕೆ ತಳ್ಳಿಸಿಕೊಂಡ ಕ್ಷಣದಲ್ಲಿ ಗಾಂಧಿಗೆ ತಾನು ಯಾರು ಎಂಬುದು ಅರಿವಾಯಿತು. ಈ ಅರಿವೇ ಅವರನ್ನು ಮಹಾತ್ಮನ ಪಟ್ಟಕ್ಕೂ ಏರಿಸಿತು.ಮೊದಲ ದರ್ಜೆ ಟಿಕೆಟ್ ಖರೀದಿಸುವಷ್ಟು ಹಣವಿದ್ದರೂ ಅದರಲ್ಲಿ ಕುಳಿತುಕೊಳ್ಳಲು ತಾನು ಅರ್ಹನಾಗಲಿಲ್ಲ ಎಂದು ದುಃಖಿಸಿ ಮುಂದಿನ ರೈಲಿನ ಯಾವುದಾದರೊಂದು ಬೋಗಿಯಲ್ಲಿ ಕುಳಿತು ಆಫ್ರಿಕಾದಲ್ಲಿ ತಮ್ಮ ವಕೀಲಿಕೆಯನ್ನು ಅವರು ಮುಂದುವರಿಸಬಹುದಿತ್ತು. ಆದರೆ ಅವರು ಈ ಅಸಮಾನತೆ ಯಾಕೆ ಎಂಬ ಪ್ರಶ್ನೆಯನ್ನು ಕೇಳಿಕೊಂಡರು. ಸಮಾಜದಲ್ಲಿ ಸಮಾನತೆ ಮೂಡಿಸುವುದಕ್ಕೆ ತನ್ನ ಕಾಲ ಮತ್ತು ದೇಶದಲ್ಲಿ ತಾನು ಏನು ಮಾಡಲು ಸಾಧ್ಯ ಎಂಬುದರ ಕುರಿತು ತನ್ನೊಳಗೇ ಮಂಥನ ನಡೆಸಿದರು. ಈ ಮಂಥನದ ಕ್ರಿಯೆಯಲ್ಲಿ ಇಡೀ ಗೀತೆಯಿಂದ ತೊಡಗಿ ಕ್ರಿಸ್ತನ ಬದುಕಿನ ತನಕದ ಎಲ್ಲವೂ ಅವರಿಗೆ ದಾರಿಗಳನ್ನು ತೆರೆದವು. ಮುಂದೆನಾಯಿತು ಎಂಬುದು ಇತಿಹಾಸದ ಪುಟಗಳಲ್ಲಿ ಅಚ್ಚಳಿಯದೇ ಉಳಿದಿದೆ.ಗಾಂಧಿ ತಮ್ಮ ಬದುಕನ್ನು ವ್ಯಯಿಸಿ ಒಂದು ಮಾರ್ಗವನ್ನು ರೂಪಿಸಿದ್ದಾರೆ. ನಾವದರಲ್ಲಿ ನಡೆದರೆ ಸಾಕು ಎಂದುಕೊಂಡು ಹೊರಟವರು ಗಾಂಧಿಯ ವೇಷದ ವಿದೂಷಕರಾಗಿಬಿಡುತ್ತಾರೆ. ಅಂಥ ಅನೇಕ ಉದಾಹರಣೆಗಳು ನಮ್ಮ ಕಾಲದಲ್ಲಿಯೇ ಇವೆ. ನಾವು ಮಾಡಬೇಕಿರುವುದು ನಮ್ಮದೇ ಆದ ಗಾಂಧಿ ಮಾರ್ಗವನ್ನು ಹುಡುಕಿಕೊಳ್ಳುವುದು. ಇದಕ್ಕೊಂದು ಅತ್ಯುತ್ತಮ ಉದಾಹರಣೆ ಎಂದರೆ ನೆಲ್ಸನ್ ಮಂಡೇಲ. ಆಫ್ರಿಕಾದ ವಿಮೋಚನೆಗಾಗಿ ಈತ ಅನುಸರಿಸಿದ್ದೂ ಗಾಂಧಿ ಮಾರ್ಗವೇ. ಆದರೆ ಇದು ಗಾಂಧಿ ತಾತ್ವಿಕತೆಯ ಕುರುಡು ಅನುಕರಣೆಯಲ್ಲ. ತನ್ನ ಕಾಲ ಮತ್ತು ದೇಶದಲ್ಲಿ ಗಾಂಧಿ ಮಾರ್ಗವನ್ನು ಪುನರ್ ನಿರ್ಮಿಸಿದ್ದರಿಂದ ಮಂಡೇಲಾಗೆ ಯಶಸ್ಸು ದೊರೆಯಿತು. ಆದ್ದರಿಂದ ಆತನೂ ಮಹಾತ್ಮನಾದ.ಇದನ್ನು ಗಾಂಧಿಯಂಥವರ ಉದಾಹರಣೆಯಲ್ಲಷ್ಟೇ ಗ್ರಹಿಸಬೇಕೆಂದೇನೂ ಇಲ್ಲ. ಇದನ್ನು ಬಿಲ್‌ಗೇಟ್ಸ್, ಸ್ಟೀವ್ ಜಾಬ್ಸ್ ಮತ್ತು ನಾರಾಯಣಮೂರ್ತಿಯವರಂಥ ಉದಾಹರಣೆಗಳ ಮೂಲಕವೂ ಅರ್ಥ ಮಾಡಿಕೊಳ್ಳಬಹುದು. ಮಾಹಿತಿ ತಂತ್ರಜ್ಞಾನ ಜಗತ್ತಿನಲ್ಲಿ ತಮ್ಮದೇ ಆದ ಹಾದಿಗಳನ್ನು ತುಳಿದು ಯಶಸ್ವಿಯಾದ ಇವರಾರೂ ಆದರ್ಶಪ್ರಾಯರಾದವರನ್ನು ಹುಡುಕುತ್ತಾ ಹೊರಡಲಿಲ್ಲ.ತಮ್ಮ ಆದರ್ಶಗಳನ್ನು ತಾವೇ ಕಂಡುಕೊಂಡು ಅದರ ಹಾದಿಯಲ್ಲಿ ನಡೆದರಷ್ಟೇ. ಬಿಲ್‌ಗೇಟ್ಸ್, ಸ್ಟೀವ್ ಜಾಬ್ಸ್ ಅಥವಾ ನಾರಾಯಣಮೂರ್ತಿ ಈ ಮೂವರೂ ‘ಆವಿಷ್ಕಾರ’ಗಳನ್ನು ನಡೆಸಿದವರಲ್ಲ. ತಮ್ಮ ಕಾಲಕ್ಕೆ ಅಗತ್ಯವಿರುವ ಮಾಹಿತಿ ತಂತ್ರಜ್ಞಾನದ ಉತ್ಪನ್ನಗಳು ಯಾವುದು ಎಂಬುದನ್ನು ಅರಿತು ಅವುಗಳನ್ನು ಮಾರುಕಟ್ಟೆಗೆ ತಂದರಷ್ಟೇ. ಈ ಆಯ್ಕೆಗಳಿಗೆ ಐತಿಹಾಸಿಕ ಹಿನ್ನೆಲೆಗಳಿರಲಿಲ್ಲ. ಅದಕ್ಕಿದ್ದದ್ದು ಕಾಲದ ಅಗತ್ಯಗಳಷ್ಟೇ. ನಾವು ನಮ್ಮ ಕಾಲದಲ್ಲಿ ನಮ್ಮನ್ನು ಕಂಡುಕೊಂಡರೆ ಆದರ್ಶದ ಹುಡುಕಾಟ ಕೊನೆಗೊಳ್ಳುತ್ತದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.