ಶನಿವಾರ, ಜೂನ್ 19, 2021
21 °C
ಸಂದರ್ಶನ

ನಮ್ಮ ಪೊರಕೆ ಭ್ರಷ್ಟರನ್ನು ಗುಡಿಸಿ ಹಾಕಲಿದೆ: ಬಾಲಕೃಷ್ಣನ್‌

ಪ್ರವೀಣ ಕುಲಕರ್ಣಿ / ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ದೇಶದಲ್ಲಿ ಬದಲಾವಣೆ ಗಾಳಿ ಬಲವಾಗಿ ಬೀಸತೊಡಗಿದೆ. ಅದು ಬಿರುಗಾಳಿಯಾಗಿ ಪರಿಣಮಿಸಿ ಕಡು ಭ್ರಷ್ಟರನ್ನೂ ಅವರನ್ನೆಲ್ಲ ಪೋಷಿಸಿದ ಪಕ್ಷಗಳನ್ನೂ ಹೇಳ ಹೆಸರಿಲ್ಲದಂತೆ ಎತ್ತಿ ಹಾಕುವ ದಿನಗಳು ಬಂದೇ ಬರುತ್ತವೆ’

–ಬೆಂಗಳೂರು ಸೆಂಟ್ರಲ್‌ ಕ್ಷೇತ್ರದಲ್ಲಿ ಆಮ್‌ ಆದ್ಮಿ ಪಕ್ಷದ (ಎಎಪಿ) ಅಭ್ಯರ್ಥಿ­ಯಾಗಿರುವ ಇನ್ಫೊಸಿಸ್‌ನ ಮುಖ್ಯ ಹಣ­ಕಾಸು ಅಧಿಕಾರಿಯಾಗಿದ್ದ (ಸಿಎಫ್‌`ಒ) ವೆಲ್ಲೋರ್‌ ಬಾಲಕೃಷ್ಣನ್‌ ಅವರ ದೃಢ­ವಾದ ನಂಬಿಕೆ ಇದು.ಮೂಲತಃ ತಮಿಳುನಾಡು ರಾಜ್ಯದ ವೆಲ್ಲೋರ್‌ನ ಬಾಲಕೃಷ್ಣನ್‌, ಕಾಲೇಜು ಶಿಕ್ಷಣ ಪಡೆದದ್ದು ಚೆನ್ನೈನಲ್ಲಿ. ಸಿ.ಎ. ಮತ್ತು ಸಿ.ಎಸ್‌. ಕೋರ್ಸ್‌ಗಳನ್ನು ಬೆಂಗಳೂರಿ­ನಲ್ಲಿ ಪೂರೈಸಿದ ಅವರು, ಕೆಲ­ಕಾಲ ಲಿಪ್ಟನ್‌ ಇಂಡಿಯಾದಲ್ಲಿ ಹಣ­ಕಾಸು ಅಧಿಕಾರಿಯಾಗಿದ್ದರು. 1991­ರಲ್ಲಿ ಇನ್ಫೊಸಿಸ್‌ ಸೇರಿದ ಬಾಲಕೃಷ್ಣನ್‌, ಕಳೆದ ವರ್ಷಾಂತ್ಯದಲ್ಲಿ ಸ್ವಂತ ಉದ್ದಿಮೆ ಸ್ಥಾಪಿಸುವ ಉದ್ದೇಶ­ದಿಂದ ಸಿಎಫ್‌ಒ ಹುದ್ದೆಗೆ ರಾಜೀನಾಮೆ ನೀಡಿದ್ದರು. ಸದ್ಯ ‘ಮೈಕ್ರೊಗ್ರಾಮ್‌’ ಎಂಬ ಹಣಕಾಸು ಸಂಸ್ಥೆ ನಡೆಸುತ್ತಿದ್ದಾರೆ.ಕಾರ್ಪೊರೇಟ್‌ ಕ್ಷೇತ್ರದ ಉತ್ತುಂಗ­ದಿಂದ ರಾಜಕೀಯದ ಕಣಿವೆಗೆ ನೆಗೆದಿರುವ ಅವರು, ಶುಕ್ರವಾರ ‘ಪ್ರಜಾವಾಣಿ’ಗೆ ವಿಶೇಷ ಸಂದರ್ಶನ ನೀಡಿದರು. ಅದರ ಆಯ್ದಭಾಗ ಇಲ್ಲಿದೆ:* ಕಾರ್ಪೊರೇಟ್ ಸಂಸ್ಥೆಯ ಹವಾ­ನಿಯಂ­ತ್ರಿತ ಕೊಠಡಿಯಲ್ಲಿ ಕುಳಿತು ಲೆಕ್ಕದ ಪುಸ್ತಕ ನೋಡುವ ಅಧಿಕಾರಿ ನೀವು. ನಿಮಗೇಕೆ ರಾಜಕೀಯದ ಉಸಾಬರಿ?

ವ್ಯವಸ್ಥೆಯಿಂದ ಆಚೆಗಿದ್ದು, ಅದನ್ನು ಟೀಕಿಸುತ್ತಾ ಕೂರುವುದರಲ್ಲಿ ಏನು ಪ್ರಯೋಜನ? ವ್ಯವಸ್ಥೆಯ ಭಾಗವಾಗದೆ ಬಯಸಿದ ಬದಲಾವಣೆಯನ್ನು ತರಲು ಸಾಧ್ಯವಿಲ್ಲ. ಎಲ್ಲ ಲೆಕ್ಕಾಚಾರವನ್ನು ಮಾಡಿಯೇ ರಾಜಕೀಯಕ್ಕೆ ಬಂದಿದ್ದೇನೆ. ದೇಶದಲ್ಲಿ ಒಂದು ಕ್ರಾಂತಿಕಾರಕ ಬದಲಾ­ವಣೆ ತರಬೇಕು ಎನ್ನುವುದು ಎಲ್ಲರ ತುಡಿತವಾಗಿದೆ. ಎಂಜಿನಿಯರ್‌­ಗಳು, ವೃತ್ತಿ­ಪರರು, ಸರ್ಕಾರಿ ಅಧಿಕಾರಿಗಳು ಸೇರಿ­ದಂತೆ ದೇಶಕ್ಕೆ ದುಡಿಯುವ ಒಳ್ಳೆಯ ಜನ ರಾಜಕೀಯಕ್ಕೆ ಬರುತ್ತಿರುವುದು ಆ ಬದಲಾವಣೆ ಗಾಳಿ ಬೀಸುತ್ತಿರುವ ಸಂಕೇತವಾಗಿದೆ.*ಆಮ್‌ ಆದ್ಮಿ ಪಕ್ಷ ವನ್ನೇ ಆಯ್ದು­ಕೊಂಡಿದ್ದು ಏಕೆ? ಆ ಪಕ್ಷ ದೇಶಕ್ಕೆ ಬೇಕಾದ ಬದಲಾವಣೆ ಕೊಟ್ಟೀತೆ?

ದೇಶದ ಮುಖ್ಯವಾಹಿನಿ ಪಕ್ಷಗಳೆ­ಲ್ಲವೂ ಭ್ರಷ್ಟಾಚಾರದಿಂದ ಹೊರತಾಗಿಲ್ಲ. ನಮಗೆ ಬೇಕಾದ ಬದಲಾವಣೆಯನ್ನು ಅವುಗಳಿಂದ ಕೊಡುವುದು ಸಾಧ್ಯವೂ ಇಲ್ಲ. ಭ್ರಷ್ಟಾಚಾರ ಮುಕ್ತವಾದ ಸ್ವಚ್ಛ ಆಡಳಿತ ನನ್ನ ಅಭಿಲಾಷೆ. ಇದನ್ನೇ ಧ್ಯೇಯ ಮಾಡಿಕೊಂಡ ಎಎಪಿ ಸಹಜ­ವಾಗಿಯೇ ನನ್ನನ್ನು ಆಕರ್ಷಿಸಿದೆ.ಉದ್ಯಮಿಗಳು, ನೌಕರರು, ರೈತರು ಸೇರಿ­ದಂತೆ ದೇಶದ ಎಲ್ಲ ವರ್ಗಗಳ ಜನ ಮಿತಿಮೀರಿದ ಭ್ರಷ್ಟಾಚಾರದಿಂದ ರೋಸಿ ದ್ದಾರೆ. ಅದರ ಫಲವಾಗಿಯೇ ಎಎಪಿ ಹುಟ್ಟಿ­ಕೊಂಡಿದೆ. ನಮ್ಮ ಪೊರಕೆ ಭ್ರಷ್ಟ­ರನ್ನೂ ಅವರ ಪಕ್ಷಗಳನ್ನೂ ಗುಡಿಸಿ ಹಾಕಲಿದೆ.*ಇನ್ನೂ ರಾಜಕೀಯದ ‘ಅ, ಆ, ಇ, ಈ’ ಕಲಿತಿಲ್ಲ. ಆಗಲೇ ಚುನಾವಣಾ ಕಣಕ್ಕೆ ಇಳಿಯುವುದೇ?

ಹೌದು, ನಾನು ಕಾರ್ಪೋರೇಟ್ ಕ್ಷೇತ್ರ­ದಿಂದ ಬಂದಿದ್ದೇನೆ. ರಾಜಕೀಯದ ಅನುಭವ ಇಲ್ಲದಿರುವುದು ನನ್ನ ಹೆಚ್ಚು­ಗಾರಿಕೆ ಎಂದೇ ಭಾವಿಸಿದ್ದೇನೆ. ರಾಜಕೀ­ಯ­ದಲ್ಲಿ ಇದ್ದವರ ಭ್ರಷ್ಟ ಸಾಧನೆ ಹೊರೆ ನನ್ನ ಮೇಲಿಲ್ಲ. ಸಿಎಫ್‌ಒ ಆಗಿ ಮೊದಲ ದಿನ ಕಚೇರಿಗೆ ಹೋದಾಗಲೂ ನನಗೆ ಅನುಭವ ಇರಲಿಲ್ಲ. ಕೆಲಸದ ವಾತಾವರ­ಣದಲ್ಲಿ ಹೊಸತನ ತರಲು ಅದು ಅಡ್ಡಿ­ಯಾಗಲಿಲ್ಲ. ಅನುಭವಕ್ಕಿಂತ ಸಾಧಿಸುವ ಛಲ ಮುಖ್ಯ. ಕೆಲಸ ಮಾಡುತ್ತಾ ಹೋದಂತೆ ಅನುಭವ ಸಿಕ್ಕೇ ಸಿಗುತ್ತದೆ.*ನೀವು ಭ್ರಷ್ಟ ಎಂದು ಕರೆಯುವ ಕಾಂಗ್ರೆಸ್‌ ಪಕ್ಷಕ್ಕೆ ನಿಮ್ಮ ಮಾಜಿ ಸಹೋದ್ಯೋಗಿ ನಂದನ್‌ ನೀಲೇಕಣಿ ಸೇರಿದ್ದೇಕೆ? ಅವರ ವಿರುದ್ಧ ಪ್ರಚಾರ ನಡೆಸುವಿರಾ?

ಮೊದಲ ಪ್ರಶ್ನೆಗೆ ಉತ್ತರಿಸಲು ಅವರೇ ಹೆಚ್ಚು ಸಮರ್ಥರು. ಆದರೆ ಸಂಸತ್‌ಗೆ ಸದಸ್ಯರಾಗಲು ಅವರೂ ಅರ್ಹರು. ಯಶಸ್ಸು ಸಿಗಲೆಂದು ಹಾರೈ­ಸು­ತ್ತೇನೆ. ಅವರ ಪರ ಇಲ್ಲವೆ ವಿರುದ್ಧ ಪ್ರಚಾರಕ್ಕೆ ಹೋಗುವುದಿಲ್ಲ. ನನ್ನ ಕ್ಷೇತ್ರದಲ್ಲೇ ಬೇಕಾದಷ್ಟು ಕೆಲಸ ಇದೆ. ಅವರ ಕ್ಷೇತ್ರಕ್ಕೆ ಹೋಗಲು ಸಮಯವಿಲ್ಲ.*ಉದ್ಯಮದ ವೃತ್ತಿಗೂ ರಾಜಕೀಯ ಪ್ರವೃತ್ತಿಗೂ ಏನು ವ್ಯತ್ಯಾಸ?

ಓಹೋ ಭೂಮಿ–ಆಕಾಶದಷ್ಟು ಅಂತರ. ಕಾರ್ಪೊರೇಟ್ ಸಂಸ್ಥೆಯಲ್ಲಿ ಕೆಲಸ ಮಾಡುವಾಗ ಸಂಬಂಧಿತ ಎಲ್ಲ ವ್ಯಕ್ತಿಗಳ ಅರಿವು ಇರುತ್ತದೆ. ನಮ್ಮ ಷೇರುದಾರರು, ನೌಕರರು, ಗ್ರಾಹಕರು ಯಾರು, ಅವರ ನಿರೀಕ್ಷೆಗಳು ಏನು, ನಮ್ಮ ಹೊಣೆಗಾರಿಕೆ ಎಂತಹದ್ದು... ಪ್ರತಿಯೊಂದೂ ಗೊತ್ತಿರುತ್ತದೆ. ರಾಜ­ಕೀಯ ವಿಭಿನ್ನವಾದ ಜಗತ್ತು. ಅಲ್ಲಿ ಸಂಬಂಧಿತ ವ್ಯಕ್ತಿಗಳು ಅವ್ಯಕ್ತವಾಗಿ ಇರುತ್ತಾರೆ. ಪ್ರಜಾಪ್ರಭುತ್ವ ವ್ಯವಸ್ಥೆ­ಯಲ್ಲಿ ಅರ್ಧದಷ್ಟು ಜನ ನಮ್ಮನ್ನು ಇಷ್ಟ­ಪಟ್ಟರೆ, ಉಳಿದರ್ಧಷ್ಟು ಜನ ವಿನಾ­ಕಾರಣ ವಿರೋಧಿಸುತ್ತಾರೆ. ನಾವು ಸರಿ­ಯಾ­ದುದನ್ನೇ ಮಾಡುತ್ತಿದ್ದೇವೆ ಎನ್ನು­ವುದನ್ನು ಮನವರಿಕೆ ಮಾಡಿ­ಕೊಟ್ಟು ಮುಂದುವರಿಯಲು ಹೋರಾ­ಡುತ್ತಲೇ ಹೋಗಬೇಕು.*ಬೆಂಗಳೂರು ಸೆಂಟ್ರಲ್‌ ಕ್ಷೇತ್ರದ ಮತದಾರರಿಗೆ ನಿಮ್ಮ ವಾಗ್ದಾನ ಏನು?

ಬೆಂಗಳೂರಿನ ಸಮಸ್ಯೆಗಳು ನಗರ­ದುದ್ದಕ್ಕೂ ಸಾಮಾನ್ಯ­ವಾಗಿವೆ. ತ್ಯಾಜ್ಯದ ವಿಲೇವಾರಿ, ಸಂಚಾರ ದಟ್ಟಣೆ, ಶುದ್ಧ ಕುಡಿಯುವ ನೀರಿನ ಕೊರತೆ, ಹಾಳಾದ ರಸ್ತೆ, ವಿದ್ಯುತ್‌ ಅಭಾವ ಎಲ್ಲೆಡೆ ಇರುವ ಮುಖ್ಯ ಸಮಸ್ಯೆಗಳು. ಸಾಮೂಹಿಕ ಹೊಣೆಗಾರಿಕೆ ಮೂಲಕ ಇವುಗಳನ್ನೆಲ್ಲ ಬಗೆಹರಿಸುವ ಅಪೇಕ್ಷೆ ಇದೆ. ಭ್ರಷ್ಟಾ­ಚಾರ ಮುಕ್ತ ಆಡಳಿತ ನಮ್ಮ ಮುಖ್ಯ ಆದ್ಯತೆಯಾಗಿದೆ. ಅದೊಂದು ಸರಿಯಾ­ದರೆ ಉಳಿದೆಲ್ಲವೂ ಸರಿದಾರಿಗೆ ಬರುತ್ತದೆ.*ಚುನಾವಣೆಯಲ್ಲಿ ಗೆಲ್ಲುತ್ತೀರಾ? ಸೋತರೆ ಭವಿಷ್ಯದ ಹೆಜ್ಜೆ ಏನು?

ಯಾವ ಅಭ್ಯರ್ಥಿಯೂ ನಾನು ಸೋಲುತ್ತೇನೆ ಎಂದುಕೊಂಡು ಚುನಾ­ವಣೆಗೆ ನಿಲ್ಲುವುದಿಲ್ಲ. ಒಳ್ಳೆಯ ಜನ ಸಂಸತ್ತನ್ನು ಪ್ರವೇಶಿಸಬೇಕು, ಬದಲಾ­ವಣೆ ತರಬೇಕು ಎಂಬ ಉದ್ದೇಶ ನನ್ನ ಸ್ಪರ್ಧೆಯ ಹಿಂದಿದೆ. ಸೋತರೂ ನಾನು ವಿರಮಿಸುವುದಿಲ್ಲ. ನನ್ನ ರಾಜಕೀಯ ಜೀವನ ಮುಂದುವ­ರಿಯಲಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.