ಬುಧವಾರ, ಮಾರ್ಚ್ 3, 2021
26 °C
ಬದುಕು ಬನಿ

ನಮ್ಮ ಬದುಕಿಗೆ ನಾವೇ ರೂವಾರಿ

ಎಚ್‌.ಅನಿತಾ Updated:

ಅಕ್ಷರ ಗಾತ್ರ : | |

ನಮ್ಮ ಬದುಕಿಗೆ ನಾವೇ ರೂವಾರಿ

ಭೈರಸಂದ್ರಪಾಳ್ಯ ನನ್ನ ಸ್ವಂತ ಊರು. ರಾಜಾಜಿನಗರದಲ್ಲಿರುವ ಸರ್‌.ಎಂ. ವಿಶ್ವೇಶ್ವರಯ್ಯ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಸಂಕೀರ್ಣದಲ್ಲಿ ವಾಹನಗಳ ನಿಲುಗಡೆ ವ್ಯವಸ್ಥೆ ನಿರ್ವಹಣೆ ಹೊಣೆ ಹೊತ್ತಿದ್ದೇನೆ.ಇಲ್ಲಿನ ಮೂಡಲಪಾಳ್ಯದಲ್ಲಿ ಕುಟುಂಬದ ವಾಸ. ಪತ್ನಿ ಮಂಜುಳಾ ಕಂಪೆನಿಯೊಂದರಲ್ಲಿ ಲೆಕ್ಕಿಗಳಾಗಿ ಕೆಲಸ ಮಾಡುತ್ತಾಳೆ. ಮೋಕ್ವಿತಾ, ರಕ್ಷಿತಾ ಎಂಬ ಇಬ್ಬರು ಹೆಣ್ಣುಮಕ್ಕಳಿದ್ದಾರೆ. ನಮ್ಮ ತಂದೆ–ತಾಯಿಗೆ ನಾವು ಒಟ್ಟು ಆರು ಮಂದಿ ಗಂಡು ಮಕ್ಕಳು. ನಮಗೆ ಒಬ್ಬಳು ಸಹೋದರಿ. ವ್ಯವಸಾಯಕ್ಕೆ ಭೂಮಿ ಇರದ ಕಾರಣ ಸೊಪ್ಪಿನ ವ್ಯಾಪಾರ ಮಾಡಿ ನಮ್ಮನ್ನೆಲ್ಲ ಸಾಕಿದರು. ನಾನು ತುಂಬಾ ಚಿಕ್ಕವನಿದ್ದಾಗಲೇ ತಾಯಿ ತೀರಿಕೊಂಡರು. ಅತ್ತಿಗೆಯೇ ನನ್ನನ್ನು ಸಾಕಿ ಬೆಳೆಸಿದರು.ಐದು ವರ್ಷದವನಿದ್ದಾಗಲೇ ಪೋಲಿಯೊಗೆ ತುತ್ತಾಗಿದ್ದರಿಂದ ಬಲಗೈ ಮತ್ತು ಕಾಲಿನ ಸ್ವಾಧೀನ ಸ್ವಲ್ಪ ಮಟ್ಟಿಗೆ ಕಳೆದುಕೊಂಡಿದ್ದೇನೆ. ಆದರೂ ಸ್ವತಂತ್ರವಾಗಿ ಓಡಾಡಲು ಕೆಲಸ ಮಾಡಲು ಯಾವುದೇ ತೊಂದರೆ ಇಲ್ಲ. 6ನೇ ತರಗತಿಯಿಂದ ಎಸ್‌ಎಸ್‌ಎಲ್‌ಸಿವರೆಗೆ ತುಮಕೂರಿನ ಸಿದ್ದಗಂಗಾ ಮಠದಲ್ಲಿ ವಿದ್ಯಾಭ್ಯಾಸ ಮಾಡಿದೆ.ಲಿಂಗರಾಜಪುರದಲ್ಲಿದ್ದ ಅಂಗವಿಕಲರ ಸಂಸ್ಥೆಯೊಂದು ವಿಶೇಷ ಸಾಮರ್ಥ್ಯ ಹೊಂದಿದವರಿಗಾಗಿ ನರ್ಸರಿ ತರಬೇತಿ ಶಿಬಿರ ಏರ್ಪಡಿಸಿತ್ತು. ನಾನೂ ಅದರಲ್ಲಿ ಭಾಗವಹಿಸಿ ತರಬೇತಿ ಪಡೆದುಕೊಂಡೆ. ಇದು ನನಗೆ ಬದುಕಿನ ದಾರಿ ತೋರಿತು. ಶ್ರೀರಮಣ ಮಹರ್ಷಿ ಅಂಧರ ಅಕಾಡೆಮಿಯಲ್ಲಿ ಸುಮಾರು ಮೂರು ವರ್ಷಗಳ ಕಾಲ ತೋಟಗಾರಿಕಾ ಶಿಕ್ಷಕನಾಗಿ ಕೆಲಸ ನಿರ್ವಹಿಸಿದೆ. ತಂಡದಲ್ಲಿದ್ದ ಹದಿನೈದು ವಿದ್ಯಾರ್ಥಿಗಳಲ್ಲಿ ಐದು ಮಂದಿ ಉತ್ತಮ ನೆಲೆ ಕಂಡುಕೊಂಡಿದ್ದಾರೆ.ಬೆಳಿಗ್ಗೆ 9ರಿಂದ ಸಂಜೆ 6.30ರವರೆಗೆ ಇಲ್ಲಿ ಕೆಲಸ ನಿರ್ವಹಿಸುತ್ತೇನೆ. ಆರ್‌ಟಿಒ, ಬೆಂಗಳೂರು ಒನ್‌, ಉಪ ತಹಶೀಲ್ದಾರ್‌ ಕಚೇರಿ, ಬಿಬಿಎಂಪಿ ಕಂದಾಯ, ಆರೋಗ್ಯ ಮತ್ತು ಎಂಜಿನಿಯರ್‌ಗಳ ಕಚೇರಿ, ಆಧಾರ್‌ ಕೇಂದ್ರ, ಕೆ.ಇ.ಬಿ, ಜಿಂದಾಲ್‌ ಆಸ್ಪತ್ರೆ ಇತ್ಯಾದಿ ಒಂದೆಡೆ ಇರುವುದರಿಂದ ನಿತ್ಯವೂ ಸಾವಿರಾರು ಮಂದಿ ಬಂದು ಹೋಗುತ್ತಾರೆ.ಒಬ್ಬನಿಗೇ ನಿರ್ವಹಿಸಲು ಕಷ್ಟ. ಆದಕಾರಣ ವೆಂಕಟೇಶ್‌ ಮತ್ತು ರಾಜು ಎಂಬ ಇಬ್ಬರು ನನ್ನ ಸಹಾಯಕ್ಕೆ ಇದ್ದಾರೆ. ಇಬ್ಬರೂ ಬುದ್ಧಿಮಾಂದ್ಯರು. ಕಡುಬಡವರು. ವೆಂಕಟೇಶ್‌ ಕಳೆದ ಹದಿನೈದು ವರ್ಷಗಳಿಂದ ಇಲ್ಲಿಯೇ ಕೆಲಸ ನಿರ್ವಹಿಸುತ್ತಿದ್ದಾನೆ. ಈತನ ಅಕ್ಕ ಮನೆಗೆಲಸ ಮಾಡುತ್ತಾರೆ. ದುಡಿದ ಹಣವನ್ನು ಪ್ರಾಮಾಣಿಕವಾಗಿ ಅಕ್ಕನ ಕೈಗೆ ಒಪ್ಪಿಸುತ್ತಾನೆ.ರಾಜು ಕೂಡ ನಾನು ಗಂಗಣ್ಣನ ಜತೆ ಇರ್ತೀನಿ ಅಂತ ಹೇಳಿ ಬಂದು ಬಿಡ್ತಾನೆ. ಇಲ್ಲಿಗೆ ಬರುವುದರಿಂದ ಲವಲವಿಕೆಯಿಂದ ಇರುತ್ತಾನೆ. ಏನು ಸಾಧ್ಯವೋ ಅದನ್ನು ಮಾಡಿಕೊಂಡಿರಲಿ ಎಂಬುದು ಅವನ ತಾಯಿಯ ಅನಿಸಿಕೆ. ಇಬ್ಬರಿಗೂ ದಿನಕ್ಕೆ ₹300 ಕೊಟ್ಟು ಕಳುಹಿಸುತ್ತೇನೆ. ಅಂಗವಿಕಲರ ಮಾಸಾಶನ, ಬಸ್‌ ಪಾಸ್‌ ಇತ್ಯಾದಿ ಸೌಲಭ್ಯಗಳನ್ನು ಕೊಡಿಸಿದ್ದೇನೆ. ನಾನೂ ಒಬ್ಬ ಅಂಗವಿಕಲನಾಗಿ ಅಂತಹವರಿಗೆ ಸಹಾಯ ಮಾಡುವುದು ಕರ್ತವ್ಯ ಎಂದುಕೊಂಡಿದ್ದೇನೆ. ನನ್ನ ಬಳಿ ಯಾರೇ ಬರಲಿ, ಸರ್ಕಾರದಿಂದ ನೀಡಲಾಗುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡುತ್ತೇನೆ.‘ನಾನೊಬ್ಬ ಅಂಗವಿಕಲ. ನನ್ನಿಂದ ಏನು ಮಾಡಲು ಸಾಧ್ಯ?’ ಎಂದು ಎಂದೂ ಅಂದುಕೊಳ್ಳಲಿಲ್ಲ. ಒಂದು ನಿಮಿಷ ಕೂಡ ವ್ಯರ್ಥ ಮಾಡದೆ ಒಂದಿಲ್ಲೊಂದು ಕೆಲಸ ಮಾಡುತ್ತಲೇ ಬಂದೆ. ಸದ್ಯ ಈ ಮೂಲಕ ಬದುಕು ಕಟ್ಟಿಕೊಂಡಿದ್ದೇನೆ.  ಅಂಗವಿಕಲರು ತುಂಬ ತೊಂದರೆಯಲ್ಲಿದ್ದಾರೆ. ಅವರಿಗೆ ಸರಿಯಾಗಿ ಮಾರ್ಗದರ್ಶನ ನೀಡುವವರು, ಸಾಧನೆಯ ಹಾದಿ ತೋರುವವರು, ಪ್ರೋತ್ಸಾಹಿಸುವವರು ಇಲ್ಲ. ಕೆಲವು ಸ್ವಯಂ ಸೇವಾ ಸಂಸ್ಥೆಗಳಿದ್ದರೂ ಎಲ್ಲರನ್ನೂ ತಲುಪಲು ಸಾಧ್ಯವಾಗುತ್ತಿಲ್ಲ.ಇನ್ನು ಅಂಗವಿಕಲರಿಗೂ ನನ್ನದೊಂದು ಕಿವಿಮಾತು. ನಮ್ಮ ಬದುಕಿಗೆ ನಾವೇ ರೂವಾರಿಗಳು. ನಮ್ಮ ಜೀವನ ಹೇಗೆ ಸಾಗಬೇಕು ಎನ್ನುವುದನ್ನು ನಾವೇ ನಿರ್ಧರಿಸಬೇಕು. ನಮಗಿರುವ ಸೌಲಭ್ಯಗಳ ಸದುಪಯೋಗ ಮಾಡಿಕೊಳ್ಳಬೇಕು. ನಮ್ಮಿಂದ ಏನೂ ಮಾಡಲು ಸಾಧ್ಯವಿಲ್ಲ ಎನ್ನುವ ಆಲೋಚನೆ ಬಿಟ್ಟು ನಮ್ಮಿಂದ ಯಾವ ಯಾವ ಕೆಲಸಗಳು ಸಾಧ್ಯ ಎನ್ನುವುದನ್ನು ನೋಡಬೇಕು. ಏನಾದರೂ ಒಂದು ಕೆಲಸ ಮಾಡಲೇಬೇಕು. ಸದಾ ಇನ್ನೊಬ್ಬರ ಮೇಲೆ ಅವಲಂಬನೆ ಆಗಿರುವುದು ಒಳ್ಳೆಯದಲ್ಲ.  

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.